CET 2025: ಜನಿವಾರದಿಂದ ಪರೀಕ್ಷಾ ನಿಯಮಕ್ಕೇನು ತೊಂದರೆ?: ರಾಘವೇಶ್ವರ ಭಾರತೀ ಶ್ರೀ ಅಸಮಾಧಾನ
CET 2025: ಬಟ್ಟೆಯ ಒಳಗೆ ಧರಿಸುವ ಜನಿವಾರದಿಂದ ಪರೀಕ್ಷಾ ನಿಯಮಕ್ಕೆ ಯಾವ ತೊಂದರೆಯೂ ಇಲ್ಲ. ಆದರೆ, ಈ ಘಟನೆಯ ಹಿಂದೆ ಕೇವಲ ದ್ವೇಷದ ಜ್ವಾಲೆ ಕಾಣುತ್ತದೆ. ಸಮಸ್ತ ಹಿಂದೂ ಸಮಾಜ ಇಂತಹ ಕೃತ್ಯಗಳನ್ನು ಖಂಡಿಸಬೇಕು ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಕರೆ ನೀಡಿದ್ದಾರೆ.


ಕಾರವಾರ: ಸಿಇಟಿ ಪರೀಕ್ಷೆಯಲ್ಲಿ (CET row) ಇಬ್ಬರು ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿರುವ ಘಟನೆಗೆ ಬ್ರಾಹ್ಮಣ ಸಮುದಾಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಈ ಬಗ್ಗೆ ಗೋಕರ್ಣದ ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರತಿಕ್ರಿಯಿಸಿದ್ದು, ಬಟ್ಟೆಯ ಒಳಗೆ ಧರಿಸುವ ಜನಿವಾರದಿಂದ (sacred thread) ಪರೀಕ್ಷಾ ನಿಯಮಕ್ಕೆ ಯಾವ ತೊಂದರೆಯೂ ಇಲ್ಲ. ಆದರೆ, ಈ ಘಟನೆಯ ಹಿಂದೆ ಕೇವಲ ದ್ವೇಷದ ಜ್ವಾಲೆ ಕಾಣುತ್ತದೆ. ಪರೀಕ್ಷಾ ಸಮಯ ಮಕ್ಕಳ ಪಾಲಿಗೆ ಮಾನಸಿಕ ಒತ್ತಡದ ಸಮಯ. ಅದರ ನಡುವೆ ಇಂತಹಾ ಕ್ರೌರ್ಯದ ಘಟನೆಗಳು ಅಮಾನವೀಯವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬ್ರಾಹ್ಮಣರು ಜನಿವಾರ ಧರಿಸಿದರೆ, ವೀರಶೈವರು ಲಿಂಗವನ್ನು ಧರಿಸುತ್ತಾರೆ. ಇಂದು ಬ್ರಾಹ್ಮಣ ಜನಾಂಗದ ಮೇಲೆ ಆಗುತ್ತಿರುವ ಕ್ರೌರ್ಯ ನಾಳೆ ಬೇರೆ ಸಮಾಜದ ಮೇಲೂ ಆಗಬಹುದು. ಹಾಗಾಗಿ ಸಮಸ್ತ ಹಿಂದೂ ಸಮಾಜ ಇಂತಹ ಕೃತ್ಯಗಳನ್ನು ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.
ಧಾರ್ಮಿಕತೆಯ ಜತೆಗೆ ರಾಜಿ ಮಾಡಿಕೊಳ್ಳದೇ, ಪರೀಕ್ಷೆಯನ್ನೇ ತಿರಸ್ಕರಿಸಿದ ವಿದ್ಯಾರ್ಥಿಯ ಧೋರಣೆ ಮೆಚ್ಚುವಂತದ್ದು. ಆ ವಿದ್ಯಾರ್ಥಿಯ ಜತೆಗೆ ಶ್ರೀ ರಾಮಚಂದ್ರಾಪುರ ಮಠವಿರಲಿದ್ದು, ಅಗತ್ಯವಾದ ಎಲ್ಲಾ ರೀತಿಯ ಸಹಕಾರವನ್ನು ಮಠದಿಂದ ನೀಡಲಾಗುವುದು ಎಂದು ಸ್ವಾಮೀಜಿ ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | CET 2025: ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದ ಅಧಿಕಾರಿ ಸಸ್ಪೆಂಡ್
ಸಿಇಟಿ ವಂಚಿತ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಆಗ್ರಹ
ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ (CET 2025) ಬ್ರಾಹ್ಮಣ ಸಮುದಾಯದ ಕೆಲವು ವಿದ್ಯಾರ್ಥಿಗಳಿಗೆ ಒಂದೆರಡು ಕಡೆಗಳಲ್ಲಿ ಪವಿತ್ರ ಜನಿವಾರ ತೆಗೆಸಿರುವುದು ಬ್ರಾಹ್ಮಣ ಸಮಾಜಕ್ಕೆ ಆಘಾತ ಉಂಟು ಮಾಡಿದೆ. ಇದು ರಾಜ್ಯದ ಒಂದು ಸಣ್ಣ ಸಮುದಾಯದ ಮೇಲೆ ನಡೆಸಲಾದ ದೌರ್ಜನ್ಯ ಎಂದು ಜನತೆ ಪ್ರತಿಭಟಿಸುತ್ತಿದ್ದಾರೆ. ಹೀಗಾಗಿ ಇದಕ್ಕೆ ಸಂಬಂಧಿಸಿದವರನ್ನು ಸೇವೆಯಿಂದ ಅಮಾನತು ಮಾಡಿ, ವಿಚಾರಣೆ ಕೈಗೊಳ್ಳಬೇಕು. ಹಾಗೆಯೇ ಪರೀಕ್ಷೆಯಿಂದ ವಂಚಿತನಾಗಿರುವ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಬರೆಯಲು ಸೂಕ್ತ ಅವಕಾಶ ಮಾಡಿಕೊಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಮನವಿ ಮಾಡಿದ್ದಾರೆ.
ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅಸಗೋಡು ಜಯಸಿಂಹ ಅವರು, ಇಂತಹ ಘಟನೆಗಳು ಸುಸಂಸ್ಕೃತ ಮತ್ತು ನಾಗರಿಕ ಸಮಾಜದಲ್ಲಿ ನಡೆಯಬಾರದು. ಇದಕ್ಕಾಗಿ ನಾವೆಲ್ಲರೂ ತಲೆ ತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂಬಂಧಿಸಿದವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಹಾಗೂ ಪರೀಕ್ಷೆಯಿಂದ ವಂಚಿತನಾಗಿರುವ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಈಗಾಗಲೇ ತಾವು ಈ ವಿಷಯದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿರುತ್ತೀರಿ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | CET 2025: ಶಿವಮೊಗ್ಗದಲ್ಲಿ ಜನಿವಾರ ವಿವಾದಕ್ಕೆ ಟ್ವಿಸ್ಟ್; ಅಧಿಕಾರಿ ವಿರುದ್ಧ ಕಂಪ್ಲೇಂಟ್, ಈವರೆಗೆ ಏನೇನು ಬೆಳವಣಿಗೆ ಆಗಿದೆ?
ಪ್ರಕರಣದಲ್ಲಿ ವಿಳಂಬ ನೀತಿಗೆ ಅವಕಾಶ ಕೊಡದೆ ಸಾರ್ವಜನಿಕರೆಲ್ಲರಿಗೂ ತಿಳಿದಿರುವ ಈ ವಿಚಾರದಲ್ಲಿ ಸಂಬಂಧಿಸಿದವರ ವಿರುದ್ಧ ಮೊದಲು ಕ್ರಮ ಕೈಗೊಂಡು, ಆನಂತರ ಇಲಾಖಾ ವಿಚಾರಣೆಯನ್ನು ನಡೆಸುವುದು ಸೂಕ್ತ. ಇದರಿಂದ ಇನ್ನು ಮುಂದೆ ಸರ್ಕಾರಿ ನೌಕರರು ಇಂತಹ ವಿಚಾರಗಳಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳುವಂತಾಗುತ್ತದೆ ಎಂದು ತಿಳಿಸಿದ್ದಾರೆ.