Chakravarthy Sulibele: ಮತಾಂತರ ಮಾಡಲು ಹಿಂದೂಗಳಿಗೆ ಕರೆ ನೀಡಿದ ಚಕ್ರವರ್ತಿ ಸೂಲಿಬೆಲೆ!
Religious conversion: ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು. ಆದರೆ ಹೊಸ ಸರ್ಕಾರ ಬಂದು ಆ ಕಾನೂನು ತೆಗೆದು ಹಾಕಿತು. ಹೀಗಾಗಿ ಹಿಂದೂಗಳು ಮತಾಂತರ ಮಾಡಬೇಕು ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಹಿಂದುಗಳಿಗೆ ಕರೆ ನೀಡಿದ್ದಾರೆ


ಮಂಗಳೂರು: ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾಗುವಂತೆ ಇತ್ತೀಚೆಗೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು (Chakravarthy Sulibele) ಕರೆ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ಚಕ್ರವರ್ತಿ ಸೂಲಿಬೆಲೆ ಸೂಲಿಬೆಲೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು. ಆದರೆ ಹೊಸ ಸರ್ಕಾರ ಬಂದು ಆ ಕಾನೂನು ತೆಗೆದು ಹಾಕಿತು. ಹೀಗಾಗಿ ಹಿಂದೂಗಳು ಮತಾಂತರ ಮಾಡಬೇಕು ಎಂದು ಕರೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಸೂಲಿಬೆಲೆ ಅವರು, ಯಾರಾದರೂ ನಮಗೆ ಮತಾಂತರ ಆಗಬೇಕು ಅಂದರೆ ನಮ್ಮ ಸಮಾಜ ಅವರನ್ನ ಪ್ರೀತಿಯಿಂದ ಸ್ವಾಗತಿಸುತ್ತದೆ. ಇತ್ತೀಚೆಗೆ ಬಜರಂಗದಳದವರು ಸಂಕಲ್ಪ ಮಾಡಿದ್ದಾರೆ. ಹಿಂದೂಗಳ ಸಂಖ್ಯೆ ಜಾಸ್ತಿ ಮಾಡಲು ಏನು ಐಡಿಯಾ ಇದೆ ಎಂದು ಕೇಳಿದಾಗ, ಹೆಚ್ಚು ಮಕ್ಕಳನ್ನು ಮಾಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆದರೆ ನಮ್ಮ ಜನ ಎರಡ್ಮೂರು ಮಕ್ಕಳನ್ನು ಮಾಡ್ತಾರಾ? ನಮ್ಮ ಜನರಿಗೆ ಮಕ್ಕಳನ್ನು ಪಂಚರ್ ಹಾಕಲು ಕಳುಹಿಸಲು ಇಷ್ಟ ಇಲ್ಲ. ಅವರಿಗೆ ನಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಎಂಜಿನಿಯರ್ ಆಗಬೇಕು ಅನ್ನೋದಷ್ಟೇ ಇದೆ. ಹಾಗಾಗಿ ಓದಿಸೋ ಕೆಪಾಸಿಟಿ ಇಲ್ಲದ ಕಾರಣ ಒಂದು ಸಾಕು, ಎರಡು ಸಾಕು ಅಂತಾರೆ. ಹಾಗಾಗಿ ಸರ್ಕಾರ ನಮಗಾಗಿ ಮಾಡಿರೋ ಕಾನೂನುಗಳನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.
ಈ ಸುದ್ದಿಯನ್ನೂ ಓದಿ | CET 2025: ಜನಿವಾರ ವಿವಾದ; ಸುಚಿವ್ರತ್‌ಗೆ ಬಿಕೆಐಟಿಯಲ್ಲಿ ಉಚಿತ ಸೀಟ್ ಎಂದ ಸಚಿವ ಈಶ್ವರ್ ಖಂಡ್ರೆ
ಪೊಲೀಸರಿಗೂ ಹೇಳುತ್ತಿದ್ದೇನೆ. ಇದು ಸರ್ಕಾರ ಕೊಟ್ಟಿರೋ ಕಾನೂನು, ನಮ್ಮದಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಹೊಸ ಸರ್ಕಾರ ಬಂದು ಆ ಕಾನೂನು ತೆಗೆದು ಹಾಕಿತು. ಅಂದರೆ ಅದರ ಅರ್ಥ ನೀವೂ ಮತಾಂತರ ಮಾಡಬಹುದು ಅಂತ. ಸರ್ಕಾರವೇ ಹೇಳಿದೆ, ಮತಾಂತರ ಮಾಡಿ ಅಂತ, ಹಾಗಿದ್ದಾಗ ನಾವು ಮಾಡಬೇಕಲ್ವಾ? ಜಗತ್ತಿನ ಯಾವ ರಾಷ್ಟ್ರದಲ್ಲೂ ಈ ರೀತಿಯ ಪರಿಸ್ಥಿತಿ ಇಲ್ಲ. ಹಾಗಾಗಿ ಮತಾಂತರ ಮಾಡಿ ಎಂದು ಹೇಳಿದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅನ್ಯ ಧರ್ಮೀಯ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ಅವರ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಚೋದನಕಾರಿ ಭಾಷಣ ಮಾಡಿ, ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಶೀದ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಮಾರ್ಚ್ 9 ರಂದು ವಿಎಚ್‌ಪಿ ಆಯೋಜಿಸಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮನಡೆ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡುವಾಗ, ಅನ್ಯ ಧರ್ಮೀಯ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಎಂದು ಸೂಲಿಬೆಲೆ ಕರೆ ನೀಡಿದ್ದರು. ಹೀಗಾಗಿ ಪ್ರಚೋದನಕಾರಿ ಭಾಷಣ ಮಾಡಿ, ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಶೀದ್ ದೂರು ನೀಡಿದ್ದರು. ಅದರಂತೆ ಉಳ್ಳಾಲ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ಸೂಲಿಬೆಲೆ ನೀಡಿದ್ದಾರೆ.