ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World Cup 2025: 19ನೇ ವಯಸ್ಸಿನಲ್ಲಿಯೇ ಮಹಿಳಾ ಚೆಸ್‌ ವಿಶ್ವಕಪ್‌ ಗೆದ್ದ ಭಾರತದ ದಿವ್ಯಾ ದೇಶ್‌ಮುಖ್‌!

19ನೇ ವಯಸ್ಸಿನ ದಿವ್ಯಾ ದೇಶಮುಖ್ (FIDE) ಮಹಿಳಾ ಚೆಸ್ ವಿಶ್ವಕಪ್‌ ಟೂರ್ನಿಯಲ್ಲಿ ಇತಿಹಾಸವನ್ನು ಬರೆದಿದ್ದಾರೆ. ಕಠಿಣ ಟೈಬ್ರೇಕರ್ ಪಂದ್ಯದಲ್ಲಿ ದಿವ್ಯಾ, ತನ್ನ ಸಹವರ್ತಿ ಕೊನೆರು ಹಂಪಿ ಅವರನ್ನು ಸೋಲಿಸುವ ಮೂಲಕ ಮಹಿಳಾ ಚೆಸ್‌ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಮಹಿಳಾ ಚೆಸ್‌ ವಿಶ್ವಕಪ್‌ ಗೆದ್ದ ಭಾರತದ ದಿವ್ಯಾ ದೇಶ್‌ಮುಖ್‌!

ಮಹಿಳಾ ಚೆಸ್‌ ವಿಶ್ವಕಪ್‌ ಟೂರ್ನಿಯಲ್ಲಿ ದಿವ್ಯಾ ದೇಶ್‌ಮುಖ್‌ ಚಾಂಪಿಯನ್‌.

Profile Ramesh Kote Jul 28, 2025 6:23 PM

ನವದೆಹಲಿ: ಭಾರತದ ಹೊಸ ಚೆಸ್ ಸೆನ್ಸೇಷನ್ ದಿವ್ಯಾ ದೇಶಮುಖ್ (Divya Deshmukh) 19ನೇ ವಯಸ್ಸಿನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ದಿವ್ಯಾ ತಮ್ಮದೇ ದೇಶದ ಹಾಗೂ ಅನುಭವಿ ಕೊನೇರು ಹಂಪಿ ಅವರನ್ನು ಟೈ ಬ್ರೇಕರ್‌ನಲ್ಲಿ ಸೋಲಿಸುವ ಮೂಲಕ (FIDE) ಮಹಿಳಾ ಚೆಸ್‌ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಗೆಲುವಿನೊಂದಿಗೆ 19ನೇ ವಯಸ್ಸಿನ ದಿವ್ಯಾ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ. ಮಾತ್ರವಲ್ಲದೆ ಗ್ರ್ಯಾಂಡ್‌ ಮಾಸ್ಟರ್ ಕೂಡ ಆದರು. ಇದು ಟೂರ್ನಿಯ ಆರಂಭದಲ್ಲಿ ಅಸಾಧ್ಯವೆನಿಸಿತು, ಆದರೆ ಅವರು ಅಂತಿಮವಾಗಿ ಸಾಧನೆಗೆ ಭಾಜನರಾಗಿದ್ದಾರೆ. ಅವರು ಗ್ರ್ಯಾಂಡ್‌ಮಾಸ್ಟರ್ ಆದ ಕೇವಲ ನಾಲ್ಕನೇ ಭಾರತೀಯ ಮಹಿಳೆ ಮತ್ತು ಒಟ್ಟಾರೆಯಾಗಿ 88 ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಶನಿವಾರ ಮತ್ತು ಭಾನುವಾರ ನಡೆದ ಎರಡು ಶಾಸ್ತ್ರೀಯ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡ ನಂತರ ದಿವ್ಯಾ ಟೈ ಬ್ರೇಕರ್ ಗೆದ್ದರು. ಸೋಮವಾರ, ಸಮಯ ನಿಯಂತ್ರಿತ ಟೈಬ್ರೇಕರ್‌ನ ಮೊದಲ ಪಂದ್ಯದಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ದಿವ್ಯಾ ದೇಶಮುಖ್, ಕೊನೆರು ಹಂಪಿಯನ್ನು ಮತ್ತೆ ಡ್ರಾಗೆ ತಳ್ಳಿದರು, ಆದರೆ ಎರಡನೇ ಪಂದ್ಯದಲ್ಲಿ ಕಪ್ಪು ಕಾಯಿಗಳೊಂದಿಗೆ ಆಡಿದ ಅವರು, ಎರಡು ಬಾರಿ ವಿಶ್ವ ಕ್ಷಿಪ್ರ ಚಾಂಪಿಯನ್ ಅನ್ನು ಸೋಲಿಸಿ 2.5-1.5 ಅಂತರದಲ್ಲಿ ಗೆದ್ದರು. ಹಾಗಾದರೆ ದಿವ್ಯಾ ದೇಶಮುಖ್ ಬಗ್ಗೆ ಇಲ್ಲಿ ಇನ್ನಷ್ಟು ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಟೈಬ್ರೇಕರ್‌ಗೆ ಸಾಗಿದ ಕೊನೆರು ಹಂಪಿ vs ದಿವ್ಯಾ ಚೆಸ್‌ ವಿಶ್ವಕಪ್‌ ಫೈನಲ್‌

ಕಳೆದ 3 ವಾರಗಳಿಂದ ಜಾರ್ಜಿಯಾದ ಬಟುಮಿಯಲ್ಲಿ ಮಹಿಳಾ ಚೆಸ್ ವಿಶ್ವಕಪ್ ನಡೆಯುತ್ತಿತ್ತು. ಈ ವಿಶ್ವಕಪ್‌ ಟೂರ್ನಿಯಲ್ಲಿ ದಿವ್ಯಾ ದೇಶಮುಖ್ ಫೈನಲ್ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದರು. ನಂತರ ಅವರ ನಂತರ, ಭಾರತದ ಮೊದಲ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ ಕೂಡ ಫೈನಲ್ ತಲುಪುವ ಮೂಲಕ ಈ ಪ್ರಶಸ್ತಿ ಪಂದ್ಯವನ್ನು ವಿಶೇಷವಾಗಿಸಿದರು. ಇಬ್ಬರು ಆಟಗಾರ್ತಿಯರಲ್ಲಿ ಯಾರು ಗೆದ್ದರೂ ಪ್ರಶಸ್ತಿ ಭಾರತದ ಹೆಸರಿನಲ್ಲಿ ಉಳಿಯುತ್ತದೆ ಎಂದು ಈಗಾಗಲೇ ನಿರ್ಧರಿಸಲಾಗಿತ್ತು. ಫೈನಲ್‌ನಲ್ಲಿ, 19 ವರ್ಷದ ದಿವ್ಯಾ ಅದ್ಭುತ ಪ್ರದರ್ಶನವನ್ನು ತೋರುವ ಮೂಲಕ ಚಾಂಪಿಯನ್‌ ಆಗಿದ್ದಾರೆ.

ವಿಶ್ವ ಚೆಸ್ಟ್‌ ಚಾಂಪಿಯನ್ ದಿವ್ಯಾ ದೇಶಮುಖ್ ಯಾರು?

19 ವರ್ಷದ ದಿವ್ಯಾ ದೇಶಮುಖ್ ಮಹಾರಾಷ್ಟ್ರದ ನಾಗ್ಪುರದವರು. ದಿವ್ಯಾ 2005ರ ಡಿಸೆಂಬರ್ 9 ರಂದು ಜನಿಸಿದ್ದರು. ಅವರು 5 ವರ್ಷದವಳಿದ್ದಾಗ ಚೆಸ್ ಆಡಲು ಪ್ರಾರಂಭಿಸಿದ್ದರು. ದಿವ್ಯಾ ಅವರ ಪೋಷಕರು ವೃತ್ತಿಯಲ್ಲಿ ವೈದ್ಯರು. FIDE ಮಹಿಳಾ ವಿಶ್ವಕಪ್‌ ಟೂರ್ನಿಗೂ ಮುನ್ನ ದಿವ್ಯಾ ಚೆಸ್‌ನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇದಲ್ಲದೆ, ಅವರು ಭಾರತದ ಪರವಾಗಿ ವಿವಿಧ ವಯೋಮಾನದ ಅನೇಕ ದೊಡ್ಡ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ.



ದಿವ್ಯಾ ದೇಶಮುಖ್ ಬಗ್ಗೆ ಆಸಕ್ತಿದಾಯಕ ವಿಷಯಗಳು

ದಿವ್ಯಾ ದೇಶಮುಖ್ ಭಾರತದ ಯುವ ಚೆಸ್ ಮಹಿಳಾ ಗ್ರ್ಯಾಂಡ್ ಮಾಸ್ಟರ್.

ದಿವ್ಯಾ ದೇಶಮುಖ್ ಅವರ ಪೋಷಕರು ಇಬ್ಬರೂ ವೈದ್ಯರು.

ದಿವ್ಯಾ ಐದನೇ ವಯಸ್ಸಿನಲ್ಲಿ ಚೆಸ್ ಪಂದ್ಯಾವಳಿಗಳಲ್ಲಿ ಆಡಲು ಪ್ರಾರಂಭಿಸಿದರು.

ದಿವ್ಯಾ ದೇಶಮುಖ್ 2012 ರಲ್ಲಿ ಐದನೇ ವಯಸ್ಸಿನಲ್ಲಿ ರಾಷ್ಟ್ರೀಯ ಅಂಡರ್-7 ಚಾಂಪಿಯನ್‌ಶಿಪ್ ಗೆದ್ದರು.

ದಿವ್ಯಾ ಡರ್ಬನ್‌ನಲ್ಲಿ ನಡೆದ ಅಂಡರ್-10 ಪಂದ್ಯಾವಳಿಯನ್ನು ಸಹ ಗೆದ್ದಿದ್ದಾರೆ.

ದಿವ್ಯಾ ದೇಶಮುಖ್ 2017 ರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದ್ದ ಅಂಡರ್-12 ಪಂದ್ಯಾವಳಿಯಲ್ಲಿಯೂ ಭಾಗವಹಿಸಿ ಅದನ್ನು ಗೆದ್ದಿದ್ದಾರೆ.

ದಿವ್ಯಾ 2023 ರಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಆಗಿದ್ದಾರೆ.

2024 ರಲ್ಲಿ ದಿವ್ಯಾ ವಿಶ್ವ ಜೂನಿಯರ್ ಬಾಲಕಿಯರ ಅಂಡರ್-20 ಚಾಂಪಿಯನ್‌ಷಿಪ್‌ ಗೆದ್ದಿದ್ದಾರೆ. ಅಲ್ಲದೆ,

ದಿವ್ಯಾ ಮೂರು ಚೆಸ್ ಒಲಿಂಪಿಯಾಡ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.