ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Gandhi: ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಲಕ್ಷಾಂತರ ಮತಗಳ ಗೋಲ್‌ಮಾಲ್:‌ ರಾಹುಲ್‌ ಗಾಂಧಿ ಗಂಭೀರ ಆರೋಪ

Election Riggning: 2024ರ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಕಲಿ ಮತದಾನ ನಡೆದಿದೆ. ಬೆಂಗಳೂರಿನ ಮಹದೇವಪುರ ಕ್ಷೇತ್ರ ಒಂದರಲ್ಲಿಯೇ 1 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ. ಚುನಾವಣಾ ಆಯೋಗ ಆಡಳಿತಾರೂಢ ಬಿಜೆಪಿಯೊಂದಿಗೆ ಶಾಮೀಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಲಕ್ಷಾಂತರ ಮತಗಳ ಗೋಲ್‌ಮಾಲ್:‌ ರಾಹುಲ್‌ ಗಾಂಧಿ ಆರೋಪ

ರಾಹುಲ್‌ ಗಾಂಧಿ

ಹರೀಶ್‌ ಕೇರ ಹರೀಶ್‌ ಕೇರ Aug 7, 2025 3:24 PM

ನವದೆಹಲಿ: ಕರ್ನಾಟಕ (Karnataka) ಸೇರಿದಂತೆ ಹಲವು ರಾಜ್ಯಗಳ ಲೋಕಸಭೆ- ವಿಧಾನಸಭೆ ಚುನಾವಣೆಯಲ್ಲಿ (Election) ಬಿಜೆಪಿ (BJP) ಹಾಗೂ ಚುನಾವಣಾ ಆಯೋಗ (Election commission) ಸೇರಿ ಭಾರಿ ಪ್ರಮಾಣದ ಮತಕಳವು ನಡೆಸಿವೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಅವರು ವಿವರ ನೀಡಿದ್ದಾರೆ. ಬೆಂಗಳೂರಿನ ಮಹದೇವಪುರ ಕ್ಷೇತ್ರ ಒಂದರಲ್ಲಿಯೇ 1 ಲಕ್ಷ ಮತಗಳನ್ನು ಕಳವು (Election Riggning) ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಕಲಿ ಮತದಾನ ನಡೆದಿದೆ. ಭಾರತದ ಚುನಾವಣಾ ಆಯೋಗ (ಇಸಿಐ) ಆಡಳಿತಾರೂಢ ಬಿಜೆಪಿಯೊಂದಿಗೆ ಶಾಮೀಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದು, ಕರ್ನಾಟಕದ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ನಕಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದು ದೇಶದಲ್ಲಿ ಚುನಾವಣಾ ಪ್ರಕ್ರಿಯೆಗಳ ವಿಶ್ವಾಸಾರ್ಹತೆಯ ಬಗ್ಗೆ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.

ವಿಡಿಯೋ ಸಾಕ್ಷ್ಯ ಮೂಲಕ ದಾಖಲೆಗಳನ್ನು ಪ್ರಸ್ತುತ ಪಡಿಸಿದ ರಾಹುಲ್ ಗಾಂಧಿ, ಮಹಾರಾಷ್ಟ್ರ ಚುನಾವಣೆಯಲ್ಲಿಯೂ ನಕಲಿ ಮತದಾನ ನಡೆದಿದೆ ಎಂದು ಹೇಳಿದರು. ‘ನಾವು ಮಹಾರಾಷ್ಟ್ರದಲ್ಲಿ ಚುನಾವಣೆಯಲ್ಲಿ ಸೋತಿದ್ದೇವೆ. ಮಹಾರಾಷ್ಟ್ರದಲ್ಲಿ 40 ಲಕ್ಷ ಮತದಾರರು ನಿಗೂಢರಾಗಿದ್ದಾರೆ. ಐದು ತಿಂಗಳಲ್ಲಿ ಇಲ್ಲಿ ಅನೇಕ ಮತದಾರರನ್ನು ಸೇರಿಸಲಾಗಿದೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯ ಬಗ್ಗೆ ಉತ್ತರಿಸಬೇಕು. ಮತದಾರರ ಪಟ್ಟಿ ಸರಿಯೋ ತಪ್ಪೋ ಎಂದು ಅವರು ಹೇಳಬೇಕು’ ಎಂದು ಆಗ್ರಹಿಸಿದರು.

ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ ಡೇಟಾವನ್ನು ಏಕೆ ಒದಗಿಸುವುದಿಲ್ಲ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾವು ಆಯೋಗವನ್ನು ಪದೇ ಪದೆ ಡೇಟಾವನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಕೇಳಿದೆವು, ಆದರೆ ಅವರು ಅದನ್ನು ನಮಗೆ ನೀಡಿಲ್ಲ. ಚುನಾವಣಾ ಆಯೋಗವು ನಮಗೆ ಉತ್ತರಿಸಲು ಸಹ ನಿರಾಕರಿಸಿತು’ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮತಕಳ್ಳತನವನ್ನು ಹಿಡಿಯಲು ನಮಗೆ ಬಹಳ ಸಮಯ ಹಿಡಿಯಿತು. ಈ ಮತದಾರರ ಪಟ್ಟಿಯಲ್ಲಿ, ಅನೇಕ ಜನರ ತಂದೆಯ ಹೆಸರಿನ ಮುಂದೆ ಏನೇನೋ ಅರ್ಥವಿಲ್ಲದ್ದು ಬರೆಯಲಾಗಿದೆ. ಮತದಾರರ ಪಟ್ಟಿಯಲ್ಲಿ ಅನೇಕ ಮನೆಗಳ ವಿಳಾಸ ಶೂನ್ಯವಾಗಿದೆ. ನಕಲಿ ಮತದಾರರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಮೂರು ಬಾರಿ ಮತ ಚಲಾಯಿಸಿದ 11 ಸಾವಿರ ಅನುಮಾನಾಸ್ಪದ ಜನರಿದ್ದಾರೆ. ಈ ಜನರು ಎಲ್ಲಿಂದ ಬರುತ್ತಿದ್ದಾರೆ? ಒಂದೇ ವಿಳಾಸದಲ್ಲಿ 46 ಮತದಾರರಿದ್ದಾರೆ ಎಂದು ಹೇಳಿದರು.

ಒಬ್ಬ ವ್ಯಕ್ತಿ ಬಹು ರಾಜ್ಯಗಳಲ್ಲಿ ಬಹು ಮತಗಳನ್ನು ಚಲಾಯಿಸುತ್ತಾನೆ. ಅಂತಹ ಮತದಾರರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿದೆ. ಅಂತಹ 40 ಸಾವಿರಕ್ಕೂ ಹೆಚ್ಚು ಮತದಾರರ ವಿಳಾಸಗಳು ನಕಲಿ ಎಂದು ಕಂಡುಬಂದಿದೆ. ಅನೇಕ ಮತದಾರರು ಏಕಕಾಲದಲ್ಲಿ ಮನೆ ಸಂಖ್ಯೆ -0 ನಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಕರ್ನಾಟಕದಲ್ಲಿ ಒಂದು ಕೋಣೆಯ ಮನೆಯಲ್ಲಿ 80 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಒಂದೇ ವಿಳಾಸದಲ್ಲಿ 10,452 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಮತದಾರರ ಪಟ್ಟಿಯಲ್ಲಿ 4000 ಕ್ಕೂ ಹೆಚ್ಚು ಮತದಾರರ ಹೆಸರಲ್ಲಿ ಛಾಯಾಚಿತ್ರ ಮತ್ತು ಹೆಸರಿನ ಕೊರತೆ ಇದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ, ಆದರೆ, ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಐದು ತಿಂಗಳ ಅಂತರದಲ್ಲಿ ರಾಜ್ಯದಲ್ಲಿ ಲಕ್ಷಾಂತರ ಹೊಸ ಮತದಾರರು ಸೇರ್ಪಡೆಗೊಂಡರು. ಮಹಾರಾಷ್ಟ್ರದಲ್ಲಿ 40 ಲಕ್ಷ ನಕಲಿ ಮತದಾರರಿದ್ದಾರೆ. ಹರಿಯಾಣದಲ್ಲಿ ನಮ್ಮ ಪಕ್ಷ ಕೇವಲ 22 ಸಾವಿರ ಮತಗಳಿಂದ ಸೋತಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮತಗಳ ನಡುವಿನ ವ್ಯತ್ಯಾಸ ಇದು. ಆದರೆ, ಒಂದು ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಪಟ್ಟು ಹೆಚ್ಚು ಮತಗಳನ್ನು ಕದಿಯಲಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊಗಳನ್ನು ಅಪರಾಧದಲ್ಲಿ ಸಾಕ್ಷಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಚುನಾವಣಾ ಆಯೋಗವು ಈ ಡೇಟಾವನ್ನು ನಾಶಮಾಡುವಲ್ಲಿ ನಿರತವಾಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಕೋಟಿ ಹೊಸ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಆದರೆ ಈ ಮತದಾರರು ಕೇವಲ ಐದು ತಿಂಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಇರಲಿಲ್ಲ. ನಮಗೆ ಅನುಮಾನ ಬಂದು ಸಾಕ್ಷ್ಯಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆವು. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದೆವು, ಆದರೆ ಆಯೋಗ 45 ದಿನಗಳಲ್ಲಿ ಅದನ್ನು ನಾಶಪಡಿಸಿದೆ ಎಂದು ಹೇಳಿದೆ ಎಂದು ರಾಹುಲ್‌ ಹೇಳಿದರು.

ನಾಳೆ (ಆಗಸ್ಟ್‌ 8) ಬೆಂಗಳೂರಿನಲ್ಲಿ ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್‌ನಿಂದ ಪ್ರತಿಭಟನಾ ಜಾಥಾ ನಡೆಯಲಿದೆ. ರಾಹುಲ್‌ ಗಾಂಧಿ ಈ ಜಾಥಾದ ನೇತೃತ್ವ ವಹಿಸಲಿದ್ದಾರೆ.

ಇದನ್ನೂ ಓದಿ: Congress Protest: ಮತಗಳ್ಳತನ ವಿರುದ್ಧ ರಾಹುಲ್‌ ಗಾಂಧಿ ನೇತೃತ್ವದ ಪ್ರತಿಭಟನೆ ಆ.8ಕ್ಕೆ ಮುಂದೂಡಿಕೆ