ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart Attack: ಹೃದಯಾಘಾತದ ಸುದ್ದಿಗಳಿಂದಲೇ ಆತಂಕ, ಆಸ್ಪತ್ರೆಗಳಿಗೆ ಧಾವಿಸಿದ ಜನ

Heart Attack: ಬೆಂಗಳೂರಿನ ಜಯದೇವ ಅಸ್ಪತ್ರೆಯಲ್ಲಿ ಮಂಗಳವಾರ ಸಾಮಾನ್ಯ ದಿನಗಳಿಗಿಂತ ಶೇ.20ರಷ್ಟು ಹೆಚ್ಚಿನ ಜನತೆ ಹೃದಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಜನತೆಯಲ್ಲಿ ಹೃದಯಾಘಾತ, ಹೃದಯ ಸ್ತಂಭನ ಆತಂಕ ಆವರಿಸಿದ್ದು ಹೆಚ್ಚಾಗಿ ಯುವಕರು, ಮಧ್ಯವಯಸ್ಕರು ತಪಾಸಣೆಗೆ ಬಂದಿದ್ದರು.

ಹೃದಯಾಘಾತದ ಸುದ್ದಿಗಳಿಂದಲೇ ಆತಂಕ, ಆಸ್ಪತ್ರೆಗಳಿಗೆ ಧಾವಿಸಿದ ಜನ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Jul 2, 2025 7:31 AM

ಬೆಂಗಳೂರು: ಹಾಸನದಲ್ಲಿ ಸಾಲುಸಾಲು ಹೃದಯಸ್ತಂಭನದಿಂದ (Heart Failure) ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಹೃದಯ ತಪಾಸಣೆಗಾಗಿ ಜನರು ದಾಂಗುಡಿ ಇಡುತ್ತಿದ್ದಾರೆ. ಮೂರು ಆಸ್ಪತ್ರೆಗಳಲ್ಲದೆ ಖಾಸಗಿ ಆಸ್ಪತ್ರೆಗಳಿಗೂ ಯುವಕ-ಯುವತಿಯರು, ವೃದ್ಧರು ಹೃದಯ ತಪಾಸಣೆಗೆ (Heart Attack) ಒಳಗಾಗುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ನಿತ್ಯ ಬರುವ ರೋಗಿಗಳಿಗಿಂತಲೂ ಹೆಚ್ಚಿನ ಜನರು ಕಂಡು ಬರುತ್ತಿದ್ದಾರೆ.

ಬೆಂಗಳೂರಿನ ಜಯದೇವದಲ್ಲಿ ಮಂಗಳವಾರ ಸಾಮಾನ್ಯ ದಿನಗಳಿಗಿಂತ ಶೇ.20ರಷ್ಟು ಹೆಚ್ಚಿನವರು ಹೃದಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಜನತೆಯಲ್ಲಿ ಹೃದಯಾಘಾತ, ಹೃದಯ ಸ್ತಂಭನ ಆತಂಕ ಆವರಿಸಿದ್ದು ಹೆಚ್ಚಾಗಿ ಯುವಕರು, ಮಧ್ಯವಯಸ್ಕರು ತಪಾಸಣೆಗೆ ಬಂದಿದ್ದರು. ಪ್ರತಿದಿನ ರೋಗಿಗಳು ಸೇರಿದಂತೆ ಸಾಮಾನ್ಯವಾಗಿ 1200-1300 ಜನ ಇಲ್ಲಿನ ಜಯದೇವ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಮಂಗಳವಾರ ಸುಮಾರು 1700 ಜನ ಹೃದಯ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಮೈಸೂರಿನ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಿಂದ ನೂರಾರು ಮಂದಿ ಆಗಮಿಸಿದ್ದು, ಮುಂಜಾನೆಯೆಯಿಂದಲೇ ಆಸ್ಪತ್ರೆಯ ಓಪಿಡಿ ಫುಲ್ ರಷ್ ಆಗಿತ್ತು. ಆಸ್ಪತ್ರೆ ಆವರಣದಲ್ಲಿ ಜನ ಹೆಚ್ಚಾದ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಣ ಮಾಡಲಾಗದೇ ಆಸ್ಪತ್ರೆ ಸಿಬ್ಬಂದಿ ಬ್ಯಾರಿಕೇಡ್ ಸಿಸ್ಟಮ್‌ ಮಾಡಿದರು. ಸರತಿ ಸಾಲಲ್ಲಿ ನಿಂತಿರುವ ರೋಗಿಗಳಲ್ಲಿ ಯುವಕ, ಯುವತಿಯರ ಸಂಖ್ಯೆ ಹೆಚ್ಚಾಗಿತ್ತು. ಪ್ರತಿನಿತ್ಯ 500ರಷ್ಟು ಬರುತ್ತಿದ್ದ ರೋಗಿಗಳ ಸಂಖ್ಯೆ ದಿಢೀರ್ 1500 ಅಧಿಕವಾಗಿದೆ. ಇವರಲ್ಲಿ ಮೊದಲ ಬಾರಿ ಬಂದಿರುವವರ ಸಂಖ್ಯೆಯೇ ಹೆಚ್ಚಿದೆ.

ಕಲಬುರಗಿಯ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಗೆ 6 ತಿಂಗಳಲ್ಲೇ ರೋಗಿಗಳ ಸಂಖ್ಯೆ ಹೆಚ್ಚಿದೆ. ಓಪಿಡಿಗೆ 600 ಮಂದಿ ಭೇಟಿ ನೀಡಿದ್ದರು. ಸಾಮಾನ್ಯವಾಗಿ 300ರಿಂದ 500 ಮಂದಿ ಭೇಟಿ ನೀಡುತ್ತಿದ್ದರು. ಶೇ.25ರಷ್ಟು ಮಂದಿ ಭೀತಿಯಿಂದ ಬಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ʼಹಾಸನ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಇಪ್ಪತ್ತು ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ಪ್ರಕರಣಗಳ ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಇಂತಹ ಪ್ರಕರಣಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದುʼ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಇದನ್ನೂ ಓದಿ: Heart Attack: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಳದ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ: ಸಿಎಂ