ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Om Prakash Murder Case: ಕತ್ತು ಸೀಳಿ ಕೊಲ್ಲುವುದು ಹೇಗೆ ಎಂದು ಇಂಟರ್‌ನೆಟ್‌ನಲ್ಲಿ ಸರ್ಚ್‌ ಮಾಡಿದ್ದ ಓಂ ಪ್ರಕಾಶ್‌ ಪತ್ನಿ

ಪಲ್ಲವಿಯ ಫೋನ್ ಅನ್ನು ಪರಿಶೀಲಿಸಿದಾಗ, ಕುತ್ತಿಗೆಯ ಬಳಿಯ ರಕ್ತನಾಳಗಳನ್ನು ಯಾವ ರೀತಿ ಸೀಳಿದರೆ ವ್ಯಕ್ತಿ ಸಾಯಬಹುದು ಎಂಬುದರ ಕುರಿತು ಇಂಟರ್ನೆಟ್‌ನಲ್ಲಿ ಈಕೆ ಹುಡುಕಾಡಿದ್ದು ಕಂಡುಬಂದಿತ್ತು. ಐದು ದಿನಗಳಲ್ಲಿ ಈಕೆ ಇದೇ ರೀತಿಯ ಪ್ರಶ್ನೆಯನ್ನು ಗೂಗಲ್‌ನಲ್ಲಿ ಕೇಳಿದ್ದನ್ನು ಸರ್ಚ್‌ ಹಿಸ್ಟರಿ ತೋರಿಸಿದೆಯಂತೆ.

ಕತ್ತು ಸೀಳುವ ರೀತಿ ಇಂಟರ್‌ನೆಟ್‌ ಸರ್ಚ್‌ ಮಾಡಿದ್ದ ಓಂ ಪ್ರಕಾಶ್‌ ಪತ್ನಿ

ಓಂ ಪ್ರಕಾಶ್‌ ಮತ್ತು ಪತ್ನಿ

ಹರೀಶ್‌ ಕೇರ ಹರೀಶ್‌ ಕೇರ Apr 23, 2025 12:12 PM

ಬೆಂಗಳೂರು: ಕರ್ನಾಟಕದ ಮಾಜಿ ಡಿಜಿಪಿ ಓಂ ಪ್ರಕಾಶ್ (Ex DGP Om Prakash Murder case) ಅವರ ಪತ್ನಿ (wife) ಪಲ್ಲವಿ, ಗಂಡನನ್ನು ಕೊಲ್ಲಲು ಹಲವು ದಿನಗಳಿಂದ ಪ್ಲಾನ್‌ ಮಾಡುತ್ತಿದ್ದಳು ಎಂಬುದು ಆಕೆಯ ಇಂಟರ್‌ನೆಟ್‌ ಸರ್ಚ್‌ ಹಿಸ್ಟರಿಯಿಂದ (Google search history) ಗೊತ್ತಾಗಿದೆ. ಈಕೆ ವ್ಯಕ್ತಿಯನ್ನು ಕೊಲ್ಲುವ ಸುಲಭ ಮಾರ್ಗಗಳಿಗಾಗಿ ಇಂಟರ್ನೆಟ್‌ನಲ್ಲಿ ದಿನಗಟ್ಟಲೆ ಹುಡುಕಾಡಿದ್ದಳು. ಕುತ್ತಿಗೆಯಲ್ಲಿರುವ ರಕ್ತನಾಳಗಳನ್ನು ಮಾರಣಾಂತಿಕಾಗಿ ಸೀಳುವ (slitting throat) ಮೂಲಕ ಈಕೆ ತನ್ನ ಪತಿಯನ್ನು ಕೊಂದಿದ್ದಳು. ಇದಕ್ಕೆ ಮಾಹಿತಿಯನ್ನು ಇಂಟರ್‌ನೆಟ್‌ನಿಂದಲೇ ಪಡೆದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಲ್ಲವಿ (64) ಅವರನ್ನು ಸೋಮವಾರ ಬಂಧಿಸಲಾಗಿದ್ದು, ಅವರ ಮಗ ಕಾರ್ತಿಕೇಶ್ ನೀಡಿದ ದೂರಿನ ಮೇರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಪ್ರಕರಣವನ್ನು ಈಗ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತನಿಖೆ ನಡೆಸುತ್ತಿದೆ. ಪಲ್ಲವಿಯ ಫೋನ್ ಅನ್ನು ಪರಿಶೀಲಿಸಿದಾಗ, ಕುತ್ತಿಗೆಯ ಬಳಿಯ ರಕ್ತನಾಳಗಳನ್ನು ಯಾವ ರೀತಿ ಸೀಳಿದರೆ ವ್ಯಕ್ತಿ ಸಾಯಬಹುದು ಎಂಬುದರ ಕುರಿತು ಇಂಟರ್ನೆಟ್‌ನಲ್ಲಿ ಈಕೆ ಹುಡುಕಾಡಿದ್ದು ಕಂಡುಬಂದಿತ್ತು. ಐದು ದಿನಗಳಲ್ಲಿ ಈಕೆ ಇದೇ ರೀತಿಯ ಪ್ರಶ್ನೆಯನ್ನು ಗೂಗಲ್‌ನಲ್ಲಿ ಕೇಳಿದ್ದನ್ನು ಸರ್ಚ್‌ ಹಿಸ್ಟರಿ ತೋರಿಸಿದೆಯಂತೆ.

ಪಲ್ಲವಿಗೆ ಸ್ಕಿಜೋಫ್ರೇನಿಯಾ ಕಾಯಿಲೆ ಇರುವುದು ಪತ್ತೆಯಾಗಿದೆ. ನಿಗದಿತ ಔಷಧಿಗಳೊಂದಿಗೆ ಆಕೆ ಚಿಕಿತ್ಸೆ ಪಡೆಯುತ್ತಿದ್ದಳು. ಇದಕ್ಕೆ ವ್ಯತಿರಿಕ್ತವಾಗಿ, ಪಲ್ಲವಿ ತನ್ನನ್ನು ಮಾಜಿ ಉನ್ನತ ಪೊಲೀಸ್ ಅಧಿಕಾರಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಸೋಮವಾರ ರಾತ್ರಿ ನ್ಯಾಯಾಲಯದಿಂದ ಜೈಲಿಗೆ ಸ್ಥಳಾಂತರಿಸುವಾಗ, ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ "ಕೌಟುಂಬಿಕ ದೌರ್ಜನ್ಯ" ಎಂಬ ಪದವನ್ನು ಆಕೆ ಪದೇ ಪದೆ ಹೇಳುತ್ತಲೇ ಇದ್ದಳು.

ಬಿಹಾರ ಮೂಲದ 1981ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ 68 ವರ್ಷದ ಮಾಜಿ ಪೊಲೀಸ್ ಮುಖ್ಯಸ್ಥ ಓಂ ಪ್ರಕಾಶ್‌ ಮೃತದೇಹ ಐಷಾರಾಮಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅವರ ಮೂರು ಅಂತಸ್ತಿನ ನಿವಾಸದ ನೆಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಗಳ ಪ್ರಕಾರ, ಪಲ್ಲವಿ, ಓಂ ಪ್ರಕಾಶ್ ಅವರ ಮುಖಕ್ಕೆ ಮೆಣಸಿನ ಪುಡಿ ಎಸೆದಾಗ ಕೌಟುಂಬಿಕ ಜಗಳ ಹಿಂಸಾತ್ಮಕವಾಗಿ ಮಾರ್ಪಟ್ಟಿತ್ತು. ಅವರು ನೋವಿನಿಂದ ನರಳುತ್ತಿದ್ದಂತೆ, ಪಲ್ಲವಿ ಅವರನ್ನು ಹಲವು ಬಾರಿ ಇರಿದಿದ್ದಳು. ಕತ್ತನ್ನು ಸೀಳಿದ್ದಳು. ಪರಿಣಾಮವಾಗಿ ಓಂ ಪ್ರಕಾಶ್‌ ಸ್ಥಳದಲ್ಲೇ ಸಾವನ್ನಪ್ಪಿದರು.

ಘಟನೆಯ ನಂತರ ಪಲ್ಲವಿ ತನ್ನ ಸ್ನೇಹಿತನಿಗೆ ವೀಡಿಯೊ ಕರೆ ಮಾಡಿದ್ದಳು. ಆಗ ಅವಳು "ನಾನು ಆ ದೈತ್ಯನನ್ನು ಕೊಂದಿದ್ದೇನೆ" ಎಂದು ಹೇಳಿದ್ದಾಳೆ.

ಇವರ ಮಗ ಕಾರ್ತಿಕೇಶ್, ತನ್ನ ತಾಯಿ ಕಳೆದ ಒಂದು ವಾರದಿಂದ ತನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಹೇಳಿಕೊಂಡಿದ್ದಾರೆ. ಈ ಬೆದರಿಕೆಯಿಂದಾಗಿ, ತನ್ನ ತಂದೆ ತಾತ್ಕಾಲಿಕವಾಗಿ ಸುರಕ್ಷತೆಗಾಗಿ ತನ್ನ ಸಹೋದರಿಯ ಮನೆಗೆ ತೆರಳಿದ್ದರು. ಘಟನೆಗೆ ಎರಡು ದಿನಗಳ ಮೊದಲು ತನ್ನ ತಂಗಿ ಕೃತಿ ತಮ್ಮ ತಂದೆಯನ್ನು ಭೇಟಿ ಮಾಡಿ ಅವರ ಇಷ್ಟವಿಲ್ಲದಿದ್ದರೂ ಮನೆಗೆ ಮರಳುವಂತೆ ಮನವೊಲಿಸಿದ್ದಳು ಎಂದು ಮಗ ಆರೋಪಿಸಿದ್ದಾರೆ.

ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಕಾರ್ತಿಕೇಶ್ ದೊಮ್ಮಲೂರಿನ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನಲ್ಲಿದ್ದಾಗ, ನೆರೆಹೊರೆಯವರು ಕರೆ ಮಾಡಿ ಅವರ ತಂದೆ ತಮ್ಮ ಮನೆಯ ನೆಲ ಮಹಡಿಯಲ್ಲಿ ನಿಶ್ಚಲವಾಗಿ ಬಿದ್ದಿರುವುದು ಕಂಡುಬಂದಿದೆ ಎಂದು ತಿಳಿಸಿದ್ದರು. ಪಲ್ಲವಿ ಮತ್ತು ಕೃತಿ ಇಬ್ಬರೂ ತಮ್ಮ ತಂದೆಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಇಬ್ಬರೂ ಕೊಲೆಯಲ್ಲಿ ಭಾಗಿಯಾಗಿರಬಹುದು ಎಂಬ ಕಾರ್ತಿಕೇಶ್‌ ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ.

ಪಲ್ಲವಿ ಕೆಲವು ತಿಂಗಳ ಹಿಂದೆ ದೂರು ದಾಖಲಿಸಲು ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಆದರೆ ಅಧಿಕಾರಿಗಳು ಅದನ್ನು ನೋಂದಾಯಿಸಲು ನಿರಾಕರಿಸಿದ್ದರು. ಆಗ ಪಲ್ಲವಿ ಠಾಣೆಯ ಹೊರಗೆ ಧರಣಿ ನಡೆಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Om Prakash Murder Case: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ; ಪತ್ನಿ ಪಲ್ಲವಿ ತಪ್ಪೊಪ್ಪಿಗೆ