Student Murder Case: ಬಾಲಕನ ಕಿಡ್ನಾಪ್ ಮಾಡಿ, ಪೊಲೀಸರಿಗೆ ತಿಳಿಸಿದ್ದಕ್ಕೆ ಕೊಂದು ಬೆಂಕಿ ಹಚ್ಚಿದ ದುಷ್ಕರ್ಮಿಗಳು
Kidnap: ಅರಕೆರೆ ಶಾಂತಿನಿಕೇತನ ಲೇಔಟ್ನಿಂದ ನಿಶ್ಚಿತ್ ಎಂಬ ವಿದ್ಯಾರ್ಥಿಯನ್ನು (12) ಅಪಹರಿಸಲಾಗಿದ್ದು, ಐದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದರೆ ಬಾಲಕನ ತಂದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ಅಪಹರಣಕಾರರು ಬಾಲಕನನ್ನು ಕೊಂದು ಬಳಿಕ ಸುಟ್ಟು ಹಾಕಿದ್ದಾರೆ.

ಕೊಲೆಯಾದ ನಿಶ್ಚಿತ್

ಬೆಂಗಳೂರು: ಟ್ಯೂಷನ್‌ಗೆ ತೆರಳಿದ್ದ 12 ವರ್ಷದ ಬಾಲಕನನ್ನು 5 ಲಕ್ಷ ರೂಪಾಯಿ ಹಣಕ್ಕಾಗಿ ಅಪಹರಿಸಿ ಕೊಲೆ (Student kidnap And Murder case) ಮಾಡಿರುವ ಘಟನೆ ಬೆಂಗಳೂರು (Bengaluru crime news) ನಗರ ಜಿಲ್ಲೆ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ. ಹೆತ್ತವರು ಪೊಲೀಸರಿಗೆ ದೂರು ನೀಡಿದ ವಿಚಾರ ತಿಳಿದ ಕಿಡ್ನಾಪರ್‌ಗಳು ಬಾಲಕನನ್ನು ಕೊಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದ ವೇಳೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, 6 ಸುತ್ತು ಫೈರಿಂಗ್ ಮಾಡಿ ಪಾತಕಿಗಳನ್ನು ವಶಕ್ಕೆ ಪಡೆಯಲಾಗಿದೆ.
ಅರಕೆರೆ ಶಾಂತಿನಿಕೇತನ ಲೇಔಟ್ನಿಂದ ನಿಶ್ಚಿತ್ ಎಂಬ ವಿದ್ಯಾರ್ಥಿಯನ್ನು (12) ಅಪಹರಿಸಲಾಗಿದ್ದು, ಐದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದರೆ ಬಾಲಕನ ತಂದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ಅಪಹರಣಕಾರರು ಬಾಲಕನನ್ನು ಕೊಂದು ಬಳಿಕ ಸುಟ್ಟು ಹಾಕಿದ್ದಾರೆ. ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಚಾಲಕನೇ ಕೃತ್ಯದಲ್ಲಿ ಶಾಮೀಲಾಗಿದ್ದಾನೆ ಎನ್ನಲಾಗಿದೆ.
ಅರಕೆರೆ ಪ್ರದೇಶದ ಶಾಂತಿನಿಕೇತನ ಬಡಾವಣೆಯಲ್ಲಿ ನೆಲೆಸಿರುವ ಕಾಲೇಜು ಪ್ರೊಫೆಸರ್ ಕುಟುಂಬದ 7ನೇ ತರಗತಿಯ ವಿದ್ಯಾರ್ಥಿ ನಿಶ್ಚಿತ್ ನಿನ್ನೆ (ಜುಲೈ 30) ರಾತ್ರಿ ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಅಪಹರಿಸಿದ್ದಾರೆ. ನಿಶ್ಚಿತ್ ಕಿಡ್ನಾಪ್ ಆಗುತ್ತಿದ್ದಂತೆ, ಕೆಲವೇ ಹೊತ್ತಿನಲ್ಲಿ ಪೋಷಕರಿಗೆ ಅಪರಿಚಿತ ಸಂಖ್ಯೆಗಳಿಂದ ಕರೆ ಬಂದಿದೆ. ಕಿಡ್ನಾಪರ್ಸ್ ನಿಮಗೆ ನಿಮ್ಮ ಮಗ ಬೇಕಿದ್ದರೆ ಕೂಡಲೇ 5 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಬರುವಂತೆ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಪೊಲೀಸರಿಗೆ ಮಾಹಿತಿ ನೀಡದಂತೆಯೂ ಬೆದರಿಕೆ ಹಾಕಿದ್ದಾರೆ. ಆದರೆ, ಕಾಲೇಜು ಪ್ರೊಫೆಸರ್ ತನ್ನ ಮಗನನ್ನು ಉಳಿಸಿಕೊಡುವಂತೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆಯೇ ಹುಳಿಮಾವು ಪೊಲೀಸರು ಸಿಸಿಟಿವಿ ಫುಟೇಜ್, ಮೊಬೈಲ್ ಲೊಕೇಶನ್ ಟ್ಯ್ರಾಕಿಂಗ್ ಮೂಲಕ ತನಿಖೆಗೆ ಚುರುಕುಗೊಳಿಸಿದ್ದರು. ಬಾಲಕನನ್ನು ಹುಡುಕುವುದಕ್ಕೆ, ನಿರಂತರ ಶೋಧ ಕಾರ್ಯಾಚರಣೆ ನಡೆಸಿದ್ದರು. ಪೋಷಕರು 5 ಲಕ್ಷ ರೂ. ಹಣವನ್ನು ಸಿದ್ಧಪಡಿಸಿ ಕಿಡ್ನಾಪರ್ಸ್‌ಗೆ ಕೊಟ್ಟು ಮಗನನ್ನು ಕರೆದುಕೊಂಡು ಬರಲು ಸಿದ್ಧವಾಗಿದ್ದರು. ಕಿಡ್ನಾಪ್ ಮಾಡಿದ್ದ ಬಗ್ಗೆ ದೂರು ಕೊಟ್ಟ ವಿಚಾರ ಅಪಹರಣಕಾರರಿಗೆತಿಳಿದ ಕೂಡಲೇ ಸಿಕ್ಕಿಬೀಳುವ ಭಯದಿಂದ ಬಾಲಕನ ಕೈಕಟ್ಟಿ ಥಳಿಸಿ ಕೊಲೆ ಮಾಡಿದ್ದಾರೆ. ಬಳಿಕ ರಸ್ತೆ ಬದಿಯ ಕಲ್ಲು ಬಂಡೆಯ ಮೇಲೆ ಅಲ್ಪಸ್ವಲ್ಪ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ.
ಪೊಲೀಸರು ಕಿಡ್ನಾಪರ್ಸ್‌ಗಳ ಫೋನ್ ಟ್ರೇಸ್ ಮಾಡುತ್ತಾ ಲೊಕೇಷನ್‌ಗೆ ಹೋದ ವೇಳೆ ಬನ್ನೇರುಘಟ್ಟದ ಕಗ್ಗಲೀಪುರ ರಸ್ತೆಯಲ್ಲಿರುವ ನಿರ್ಜನ ಪ್ರದೇಶದಲ್ಲಿ ನಿಶ್ಚಿತ್‌ನ ಶವ ಪತ್ತೆಯಾಗಿದೆ. ಬಾಲಕನ ಮೇಲೆ ಬರ್ಬರ ಹಲ್ಲೆ ನಡೆಸಿದ ಪರಿಣಾಮವಾಗಿ ಆತ ಮೃತಪಟ್ಟಿದ್ದಾನೆ. ಜೊತೆಗೆ, ಆತನ ದೇಹಕ್ಕೆ ಬೆಂಕಿ ಹಚ್ಚಿದ್ದು, ಅರೆಬರೆ ಬೆಂದು ಹೋಗಿದೆ. ಘಟನೆ ತಿಳಿದು ಸ್ಥಳಕ್ಕೆ ಇಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್, ಹಾಗೂ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಪತ್ತೆಯಾದ ಸ್ಥಳದಲ್ಲಿ ಕ್ರೂರವಾಗಿ ಕೊಲೆ ಮಾಡಿದ ಗುರುತುಗಳು ಪತ್ತೆಯಾಗಿದೆ.
ಆರೋಪಿಗಳನ್ನು ಬಂಧಿಸಲು ತೆರಳಿದ ವೇಳೆ ಪೊಲೀಸರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ 6 ಸುತ್ತು ಫೈರಿಂಗ್ ಮಾಡಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಎಂಬವರನ್ನು ಬಂಧಿಸಲಾಗಿದೆ. ಇನ್ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ಪಿಎಸ್ಐ ಅರವಿಂದ ಕುಮಾರ್ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Murder Case: ತಾಯಿಯ ಕೊಲೆ ಮಾಡಿ ಶವ ಅರೆಬರೆ ಸುಟ್ಟು ಪಕ್ಕದಲ್ಲೇ ಮಲಗಿದ ಮಗ!