Chikkaballapur News: ಯುವಜನತೆ ದುಶ್ಚಟಗಳಿಗೆ ದಾಸರಾಗದಿದ್ದರೆ ಭವಿಷ್ಯದ ಬದುಕು ಹಸನಾಗುತ್ತದೆ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಪ್ರತಿಯೊಬ್ಬರೂ ಒಂದಲ್ಲ ಒಂದು ವ್ಯಸನಕ್ಕೆ ಒಳಗಾಗಿರುತ್ತಾರೆ. ಬಹುತೇಕರು ಉದ್ಯೋಗದ ಜೊತೆಗೆ ಕ್ರೀಡೆ, ಸಂಗೀತ, ಸಾಹಿತ್ಯ, ವ್ಯಾಯಾಮ ಇನ್ನಿತರ ಸಕಾರಾತ್ಮಕ ವಿಚಾರಗಳಲ್ಲಿ ವ್ಯಸನರಾಗಿರುತ್ತಾರೆ, ಅನಿವಾರ್ಯ ಕಾರಣಗಳಿಂದ ಕೆಲವರು ಕೆಟ್ಟ ವ್ಯಸನಗಳಿಗೆ ದಾಸರಾಗಿರುತ್ತಾರೆ. ಇಂತಹ ವ್ಯಸನ ಗಳಿಗೆ ಒಳಗಾಗದಂತೆ ಜನರಲ್ಲಿ ಅರಿವು ಮೂಡಿಸಲು ಬಹಳ ವರ್ಷಗಳ ಹಿಂದೆಯೇ ಡಾ. ಮಹಾಂತ ಶಿವ ಯೋಗಿ ಸ್ವಾಮಿಗಳು ಮಾಡಿದ ಸಾಮಾಜಿಕ ಪರಿವರ್ತನೆಯ ಕ್ರಮಗಳು ನಮ್ಮೆಲ್ಲರಿಗೆ ಪ್ರೇರಣಾದಾಯಕ ವಾಗಿದೆ.

ಯುವಜನತೆ ದುಶ್ಚಟಗಳಿಗೆ ದಾಸರಾಗದಿದ್ದರೆ ಭವಿಷ್ಯದ ಬದುಕು ಹಸನಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಚಿಕ್ಕಬಳ್ಳಾಪುರ :ಯುವಜನತೆ ದುಶ್ಚಟಗಳಿಗೆ ದಾಸರಾಗದಿದ್ದರೆ ಭವಿಷ್ಯದ ಬದುಕು ಹಸನಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಕೆ.ಐ.ಎ.ಡಿ.ಬಿ, ಕೈಗಾರಿಕಾ ಅಭಿವೃದ್ಧಿ ಪ್ರದೇಶದ ಮೈಕ್ರೊಟೆಕ್ ಮೆಷಿನ್ಸ್ ಲಿಮಿಟೆಡ್ ನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಮೈಕ್ರೊಟೆಕ್ ಮೆಷಿನ್ಸ್ ಲಿಮಿಟೆಡ್, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮ.ನಿ.ಪ್ರ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ಸುಮಾರು ವರ್ಷಗಳಿಂದ ಪುರಾತನ ಕಾಲದ ಸ್ಮಶಾನಕ್ಕಾಗಿ ಹೋರಾಟ ಮಾಡುತ್ತಿರುವ ಗ್ರಾಮಸ್ಥರು
ಪ್ರತಿಯೊಬ್ಬರೂ ಒಂದಲ್ಲ ಒಂದು ವ್ಯಸನಕ್ಕೆ ಒಳಗಾಗಿರುತ್ತಾರೆ. ಬಹುತೇಕರು ಉದ್ಯೋಗದ ಜೊತೆಗೆ ಕ್ರೀಡೆ, ಸಂಗೀತ, ಸಾಹಿತ್ಯ, ವ್ಯಾಯಾಮ ಇನ್ನಿತರ ಸಕಾರಾತ್ಮಕ ವಿಚಾರಗಳಲ್ಲಿ ವ್ಯಸನರಾಗಿರುತ್ತಾರೆ, ಅನಿವಾರ್ಯ ಕಾರಣಗಳಿಂದ ಕೆಲವರು ಕೆಟ್ಟ ವ್ಯಸನಗಳಿಗೆ ದಾಸರಾಗಿರುತ್ತಾರೆ. ಇಂತಹ ವ್ಯಸನ ಗಳಿಗೆ ಒಳಗಾಗದಂತೆ ಜನರಲ್ಲಿ ಅರಿವು ಮೂಡಿಸಲು ಬಹಳ ವರ್ಷಗಳ ಹಿಂದೆಯೇ ಡಾ. ಮಹಾಂತ ಶಿವಯೋಗಿ ಸ್ವಾಮಿಗಳು ಮಾಡಿದ ಸಾಮಾಜಿಕ ಪರಿವರ್ತನೆಯ ಕ್ರಮಗಳು ನಮ್ಮೆಲ್ಲರಿಗೆ ಪ್ರೇರಣ ದಾಯಕವಾಗಿದೆ. ಅವರ ಕೊಡುಗೆ ಅಪಾರವಾದದ್ದು, ಅಂತಹ ಮಹನೀಯರ ವಿಚಾರ ಧಾರೆ ಗಳನ್ನು ನಾವೆಲ್ಲರೂ ಅನುಸರಿಸಿ ಪಾಲಿಸಬೇಕು ಎಂದರು.

ಅನಗತ್ಯವಾಗಿ ಹಾಗೂ ಅತಿಯಾದ ಮೊಬೈಲ್ ಬಳಕೆಯ ವ್ಯಸನಕ್ಕೆ ಬಹುತೇಕರು ಒಳಗಾಗು ತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಅತಿಯಾದ ಮೊಬೈಲ್ ಬಳಕೆ, ಜಂಕ್ ಫುಡ್ ಸೇವನೆ, ಅವೈಜ್ಞಾನಿಕ ಜೀವನ ಕ್ರಮದಿಂದಾಗಿ ಹೃದ್ರೋಗ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಆದ್ದರಿಂದ ಪ್ರತಿಯೊಬ್ಬರು ಉತ್ತಮ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಕ್ರಮವನ್ನು ಪಾಲಿಸಬೇಕು. ಯಾವ ಕೆಲಸವನ್ನು ಮಾಡುತ್ತಿದ್ದೆವೋ ಆ ಕೆಲಸವನ್ನು ಕೌಶಲ್ಯಭರಿತವಾಗಿ ಬದ್ಧತೆಯಿಂದ ನಿರ್ವಹಿಸಲು ಹಾಗೂ ದಕ್ಷತೆಯನ್ನು ಕಾಪಾಡಿಕೊಳ್ಳಲು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ದೇಶದ ಯುವ ಸಮೂಹ ಎಲ್ಲಾ ವೃತ್ತಿಗಳಲ್ಲಿ ಕೌಶಲ್ಯಗಳನ್ನು ಕಲಿತಿದೆ. ಪ್ರಪಂಚ ಇಂದು ಭಾರತದ ಯುವ ಸಮುದಾಯದ ಕೌಶಲ್ಯಭರಿತ ಕಾರ್ಯಗಳನ್ನು ಬಯಸಿದೆ. ಆದ್ದರಿಂದ ಸ್ವಾಸ್ಥ್ಯ ಸಮಾಜ ಮತ್ತು ದೇಶವನ್ನು ನಿರ್ಮಿಸಲು ಸೇನಾನಿಗಳ ರೀತಿ ನಾವೆಲ್ಲರೂ ಸಹ ಶಿಸ್ತುಬದ್ದ ಜೀವನ ಪಾಲಿಸಬೇಕು ಎಂದು ಕಾರ್ಮಿಕರಿಗೆ ಸಲಹೆಗಳನ್ನು ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಅವರು ಮಾತನಾಡಿ, ಮಾನವನ ಜೀವನವು ಬಹು ದೊಡ್ಡದು ಅದನ್ನು ದುಷ್ಟಚಟಗಳಿಗೆ ಅಥವಾ ವ್ಯಸನಗಳಿಗೆ ದಾಸರಾಗಿ ಯಾರೊಬ್ಬರೂ ಜೀವನವನ್ನು ಹಾಳುಮಾಡಿಕೊಳ್ಳಬಾರದು. ಮಾದಕ ಮತ್ತು ಮದ್ಯಪಾನ ಸೇರಿದಂತೆ ಇತರ ಕೆಟ್ಟ ವ್ಯಸನಗಳಿಗೆ ದಾಸರಾಗಲು ಯಾರು ಕಾರಣರಲ್ಲ ನೀವೇ ಕಾರಣರಾಗುವಿರಿ ಎಂದರು.
ಯಾವುದೊ ಕೆಟ್ಟ ಪ್ರಲೋಭನೆಗಳಿಗೆ, ಸಹವಾಸ ದೋಷದಿಂದ ಅನಾರೋಗ್ಯಕರ ಕುತೂಹಲಗಳಿಗೆ ಮನಸು ನೀಡಿ ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಂಡುಬರುತ್ತಿದೆ. ಅದರ ಪರಿಣಾಮವು ವಯಸ್ಸಾದಂತೆ ದೈಹಿಕ ಮತ್ತು ಮಾನಸಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಕೆಲವೊಮ್ಮೆ ಮಾರಣಾಂತಿಕ ಕಾಯಿಲೆಗೂ ಒಳಗಾಗುವುದು ಕಾಣುತ್ತಿದ್ದೇವೆ ಇಂತಹ ಘಟನೆಯನ್ನ ಗಮನಿಸಿದ ಡಾ. ಮಹಾಂತಾ ಶಿವಯೋಗಿ ಅಜ್ಜನವರು. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಬಹು ವರ್ಷಗಳ ಹಿಂದೆಯೇ ಕೈಗೊಂಡ "ಮಹಾಂತ ಜೋಳಿಗೆ ಕಾರ್ಯಕ್ರಮ" ಅತ್ಯಂತ ವಿಶಿಷ್ಟವಾದುದು. ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ನಿಧನ ಹೊಂದಿದ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿ ಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡರು. ಇಂತಹ ಸಾವಿರಾರು ಕುಟುಂಬಗಳು ಕುಡಿತ ಮತ್ತು ಇತರ ದುಷ್ಟಚಟ ಗಳಿಂದ ಹಾಳಾಗಿರುವುದನ್ನು ಅರಿತ ಶಿವಯೋಗಿಗಳು ದುಷ್ಟಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿ ಪಾನ್ ಬೀಡಾ, ಮದ್ಯಪಾನ,ಮಾದಕ ವಸ್ತು, ತಂಬಾಕು ವ್ಯಸನಗಳನ್ನು ತನ್ನ ಜೋಳಿಗೆಗೆ ನೀಡಿ ವ್ಯಸನ ಮುಕ್ತ ರಾಗಲು ಅಭಿಯಾನ ಆರಂಭಿಸಿ ಸ್ವಾಸ್ಥ್ಯ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು.
ಕುಡಿತದ ಚಟದಿಂದ ನಿಧನನಾದ ಯುವಕನ ಕೇರಿಗೆ ಹಾಗೂ ಅಲ್ಲಿನ ಗುಡಿಸಲು ಮನೆಗಳಿಗೆ ತೆರಳಿ ದುಷ್ಟಚಟಗಳ ದುಷ್ಪರಿಣಾಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳುವಳಿಕೆ ನೀಡಿ ಮನಪರಿವರ್ತನೆ ಮಾಡಿದರು.
ವ್ಯಸನಕ್ಕೆ ಒಳಗಾದವರು ತಮ್ಮ ಎಲ್ಲಾ ದುಷ್ಟಚಟಗಳ ವಸ್ತುಗಳನ್ನು ಸ್ವಾಮೀಜಿ ಅವರ ಜೋಳಿಗೆಗೆ ಹಾಕಿ, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು ಅಂತಹ ಅರ್ಥ ಪೂರ್ಣ ಕಾರ್ಯವನ್ನು ಮಾಡಿ ಶಿವಯೋಗಿಗಳು ಸಮಾಜದಲ್ಲಿ ವಿಶಿಷ್ಟ ಪಂಕ್ತಿಯ ಸ್ಥಾನ ಪಡೆದಿದ್ದಾರೆ. ಜಾತಿ-ಮತ,ಪಂಗಡ,ಧರ್ಮ,ಭಾಷೆಗಳ ತಾರತಮ್ಯ ಮಾಡದೇ ೪೨ ವರ್ಷಗಳ ಕಾಲ ದೇಶ ಹಾಗೂ ವಿದೇಶಗಳು ಸೇರಿದಂತೆ ಡಾ.ಮಹಾಂತರು ಜೋಳಿಗೆ ಹಿಡಿದು ಜನರಲ್ಲಿನ ದುಷ್ಟಚಟಗಳ ಭಿಕ್ಷೆ ಬೇಡಿದರು ಆದ್ದರಿಂದ ಮಹಾನ್ ಯೋಗಿಗಳ ಆಗಸ್ಟ್ ೦೧ರ ಜನ್ಮದಿನವನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ರಾಜ್ಯಾದ್ಯಂತ ಸರ್ಕಾರದ ನಿರ್ದೇಶನದಂತೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಮನೋವೈದ್ಯರಾದ ಡಾ.ಜಿ. ಹೇಮಂತ್ ಕುಮಾರ್ ಅವರು ತಂಬಾಕು, ಮಾದಕ ಹಾಗೂ ಮದ್ಯ ವ್ಯಸನದ ದುಷ್ಟಚಟಗಳ ಅಡ್ಡ ಪರಿಣಾಮಗಳ ಬಗ್ಗೆ ಶಕ್ತಿ ಬಿಂದು ಪ್ರದರ್ಶನ (ಠಿಠಿಣ)ನೀಡಿ ಕಾರ್ಮಿಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಯಾವುದೇ ವ್ಯಕ್ತಿಗಳು ವ್ಯಸನಗಳಿಗೆ ಒಳಗಾಗಿ ಅನಾರೋಗ್ಯ ಪೀಡಿತರಾಗಿದ್ದಲ್ಲಿ ಟೆಲಿಮಾನಸ್ ಸಹಾಯವಾಣಿ ೧೪೪೧೬ ನ್ನು ಸಂರ್ಪಕಿಸಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಅಥವಾ ಅಂತಹ ರೋಗಿಗಳು ತಮ್ಮ ಕುಟುಂಬಗಳಲ್ಲಿ ಅಥವಾ ಸುತ್ತ ಮುತ್ತಲ ಸಮಾಜದಲ್ಲಿ ಕಂಡು ಬಂದರೆ ಕರೆ ಮಾಡಿ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು ಎಂದು ಮನವಿ ಮಾಡಿದರು.
ಈ ವೇಳೆ ಆರೋಗ್ಯ ಇಲಾಖೆ ವತಿಯಿಂದ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ನಡೆಸ ಲಾಯಿತು. ಕಾರ್ಯಕ್ರಮದಲ್ಲಿ ಮದ್ಯ, ಮಾದಕ, ತಂಬಾಕು ವಸ್ತುಗಳ ವ್ಯಸನ ಮುಕ್ತಗೊಳಿಸುವ ಅರಿವು ಪ್ರತಿಜ್ಞಾವಿಧಿಯನ್ನು ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಶಿವಕುಮಾರ್ ಬೋಧಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಮನೋವೈದ್ಯರಾದ ಡಾ. ಜಿ. ಹೇಮಂತ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶಭಾನ ಆಜ್ಮಿ, ಮೈಕ್ರೊಟೆಕ್ ಮೆಷಿನ್ಸ್ ಲಿಮಿಟೆಡ್ ನ ಸಾಮಾನ್ಯ ನಿರ್ವಾಹಕ ವಿ.ರಾಜಕುಮಾರ್, ಕಾರ್ಖಾನೆ ನಿರ್ವಾಹಕಿ ಎನ್.ಕವಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಜುಂಜಣ್ಣ, ವಾರ್ತಾ ಸಹಾಯಕ ಮಂಜುನಾಥ್, ಕಾರ್ಮಿಕ ನಿರೀಕ್ಷಕರಾದ ಮಂಜುಳ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.