Haveri News: ಜೈಲಿಂದ ಬಿಡುಗಡೆಯಾಗಿ ರೋಡ್ ಶೋ; ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಅರೆಸ್ಟ್!
Haveri News: ಬೇಲ್ ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. 7 ಪ್ರಮುಖ ಆರೋಪಿಗಳ ಜಾಮೀನು ರದ್ದತಿಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಹಾವೇರಿ ಎಸ್‌ಪಿ ಅಂಶುಕುಮಾರ್ ಮಾಹಿತಿ ನೀಡಿದ್ದಾರೆ.


ಹಾವೇರಿ: ಜೈಲಿನಿಂದ ಬಿಡುಗಡೆಯಾದ ಬಳಿಕ ರೋಡ್ ಶೋ ನಡೆಸಿದ ಹಿನ್ನೆಲೆಯಲ್ಲಿ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ (Haveri News) ಆರೋಪಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಆರೋಪಿಗಳು ರೋಡ್ ಶೋ ನಡೆಸಿ ಸಂಭ್ರಮಾಚರಣೆ ನಡೆಸಿದ್ದಕ್ಕೆ ಜನಾಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ರೋಡ್ ಶೋ ನಡೆಸಿದ್ದ 7 ಆರೋಪಿಗಳ ಪೈಕಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂದಿಸಿ ಪ್ರಮುಖ 7 ಆರೋಪಿಗಳಿಗೆ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಿಂದ ಇತ್ತೀಚೆಗೆ ಜಾಮೀನು ಮಂಜೂರಾಗಿತ್ತು. ಆದರೆ, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಐವರನ್ನು ಮತ್ತೆ ಬಂಧಿಸಲಾಗಿದೆ.
ಸಂತ್ರಸ್ತೆ ಆರೋಪಿತರನ್ನು ಗುರುತಿಸಲು ವಿಫಲವಾದ ಹಿನ್ನಲೆ ಎ1 ಅಪ್ತಾಬ್ ಚಂದನಕಟ್ಟಿ, ಎ2- ಮದರ್ ಸಾಬ್ ಮಂಡಕ್ಕಿ, ಎ3- ಸಮಿವುಲ್ಲಾ ಲಾಲನವರ, ಎ7- ಮಹಮದ್ ಸಾದಿಕ್ ಅಗಸಿಮನಿ, ಎ8- ಶೊಯಿಬ್ ಮುಲ್ಲಾ, ಎ11- ತೌಸಿಪ್ ಚೋಟಿ, ಎ13- ರಿಯಾಜ್ ಸಾವಿಕೇರಿಗೆ ಜಾಮೀನು ಮಂಜೂರಾಗಿತ್ತು.
2024ರ ಜನವರಿ 8ರಂದು ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿರುವುದಾಗಿ ಹಾನಗಲ್ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಳು. ಅದರೆ, ಪ್ರಕರಣದಲ್ಲಿ ಜೈಲುಪಾಲಾಗಿದ್ದ 19 ಆರೋಪಿಗಳ ಪೈಕಿ 12 ಆರೋಪಿಗಳು 10 ತಿಂಗಳ ಹಿಂದೆಯೇ ಜಾಮೀನು ಪಡೆದಿದ್ದರು. ಆದರೆ ಪ್ರಮುಖ ಆರೋಪಿಗಳ ಜಾಮೀನು ಅರ್ಜಿಗಳನ್ನು ಹಲವು ಬಾರಿ ತಿರಸ್ಕರಿಸಿತ್ತು. ಮೇ 20ರಂದು ಈ 7 ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆಗಳನ್ನು ಉಳಿಸಿಕೊಳ್ಳಲು ವಿಫಲವಾದ ಹಿನ್ನೆಲೆ ಆರೋಪಿಗಳಿಗೆ ಜಾಮೀನು ಸಿಕ್ಕಿರುವುದಾಗಿ ತಿಳಿದುಬಂದಿತ್ತು.
2024ರ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 19 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. 19 ಮಂದಿಯಲ್ಲಿ 12 ಜನರಿಗೆ ನ್ಯಾಯಾಲಯ ಈ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಮೇ 20ರಂದು ಇನ್ನುಳಿದ 7 ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.
ಈ 7 ಆರೋಪಿಗಳು, ಜಾಮೀನು ಪಡೆದ ಬಳಿಕ ಕಾರ್ ಮತ್ತು ಬೈಕ್‌ಗಳಲ್ಲಿ ವಿಜಯೋತ್ಸವ ಮೆರವಣಿಗೆ ಮಾಡಿದ್ದರು. 5 ಕಾರುಗಳಲ್ಲಿ 20ಕ್ಕೂ ಹೆಚ್ಚು ಹಿಂಬಾಲಕರ ಜತೆ ಮೆರವಣಿಗೆ ನಡೆದಿತ್ತು. ಅಕ್ಕಿ ಆಲೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿರುವ ವಿಡಿಯೋಗಳು ವೈರಲ್ ಆಗಿದ್ದರಿಂದ ಆರೋಪಿಗಳನ್ನು ಪೊಲೀಸರು, ಸದ್ಯ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Corona Cases: ಬೆಂಗಳೂರಿನಲ್ಲಿ ಶುರುವಾಯ್ತು ಕೊರೋನಾ ಆತಂಕ; 9 ತಿಂಗಳ ಮಗುವಿಗೆ ಸೋಂಕು!
ಈ ಬಗ್ಗೆ ಹಾವೇರಿ ಎಸ್‌ಪಿ ಅಂಶುಕುಮಾರ್ ಅವರು ಪ್ರತಿಕ್ರಿಯಿಸಿ, ರೋಡ್ ಶೋ ನಡೆಸಿದ್ದರಿಂದ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ 7 ಆರೋಪಿಗಳ ಪೈಕಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ. ಬೇಲ್ ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಿ.ಎನ್.ಎಸ್-2023 ಅಡಿ ಕಲಂ 189/2, 191/2, 281, 351/2 , 351/3 ಸಹ ಕಲಂ 190 ಕೇಸ್ ದಾಖಲಿಸಲಾಗಿದೆ. 7 ಪ್ರಮುಖ ಆರೋಪಿಗಳ ಜಾಮೀನು ರದ್ದತಿಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.