Srivathsa Joshi Column: ಸುವರ್ಚಲೆಯ ಒಗಟಿಗೆ ಉತ್ತರವಾಗಿ ಬಂದು ವರಿಸಿದ ಶ್ವೇತಕೇತು
ಸಪ್ತ ಚಿರಂಜೀವಿಗಳ ಪಟ್ಟಿಯಲ್ಲಿಲ್ಲದವರೂ ಕೆಲವರು ತ್ರೇತಾಯುಗದ ಕಥೆಗಳಲ್ಲೂ ದ್ವಾಪರ ಯುಗದ ಕಥಾನಕಗಳಲ್ಲೂ ಕಾಣಿಸಿಕೊಳ್ಳುವುದಿದೆ. ದ್ವಾಪರಯುಗದ ಪಾತ್ರಗಳೆರಡು ತ್ರೇತಾಯುಗದಲ್ಲಿ ನಡೆಯಿತೆನ್ನಲಾದ ಕಥೆ/ಘಟನೆಯನ್ನು ಸಂಭಾಷಣೆಯಲ್ಲಿ ತರುವುದಿದೆ. ಶಾಪ-ವರಗಳಿಂದಾಗಿ ಒಂದು ಪಾತ್ರವೇ ಇನ್ನೊಂದು ರೂಪದಿಂದ, ಹೆಸರಿನಿಂದ ಮುಂದುವರಿಯುವುದು ಇದೆ. ಹೀಗೆ ಪುರಾಣಕಥೆ ಗಳನ್ನು ಓದುವಾಗ ಮನಸ್ಸಿನಲ್ಲಿ ಗೊಂದಲವಾಗುವ ಸಾಧ್ಯತೆಗಳಿರುತ್ತವೆ.


ತಿಳಿರು ತೋರಣ
srivathsajoshi@yahoo.com
ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ...’ ಎಂದು ಭಗವದ್ಗೀತೆಯ ಶ್ಲೋಕ ವೊಂದರಲ್ಲಿ ಓದಿದಾಗಿಂದ ನನ್ನಲ್ಲೊಂದು ವಿಶೇಷ ಕುತೂಹಲ ಹುಟ್ಟಿತ್ತು. ಗೀತೆಯ ಹತ್ತನೆಯ ಅಧ್ಯಾಯದ ಅಂದರೆ ವಿಭೂತಿಯೋಗದ ಹದಿಮೂರನೆಯ ಶ್ಲೋಕವದು.
ಅರ್ಜುನನು ಶ್ರೀಕೃಷ್ಣನನ್ನು ಕುರಿತು “ನೀನು ಪರಬ್ರಹ್ಮ, ಪರಂಧಾಮ, ಪರಮಪವಿತ್ರ. ನಿನ್ನನ್ನು ಸನಾತನ ದಿವ್ಯಪುರುಷ, ದೇವತೆಗಳಿಗೂ ಆದಿದೇವ, ಜನ್ಮರಹಿತ, ಸರ್ವವ್ಯಾಪಿ, ಆದಿ-ಅಂತ್ಯ ಗಳಿಲ್ಲದವನು ಎಂದೆಲ್ಲ ಬಣ್ಣಿಸುತ್ತಾರೆ. ದೇವಋಷಿಗಳಾದ ನಾರದ, ಅಸಿತ, ದೇವಲ ಮತ್ತು ವ್ಯಾಸ ಮಹರ್ಷಿಗಳೂ ನಿನ್ನ ವಿಷಯದಲ್ಲಿ ಈ ಸತ್ಯವನ್ನು ದೃಢಪಡಿಸಿದ್ದಾರೆ.
ಈಗ ನೀನೇ ನನಗಿದನ್ನು ಹೇಳುತ್ತಿದ್ದೀಯೆ. ಆದರೆ ಯಾವ ದೈವಿಕ ಸಂಪತ್ತುಗಳಿಂದ ನೀನು ಈ ಎಲ್ಲ ಲೋಕಗಳನ್ನು ವ್ಯಾಪಿಸಿರುವೆಯೋ ಅದನ್ನು ನನಗೆ ವಿವರವಾಗಿ ತಿಳಿಸುವೆಯಾ?" ಎಂದು ಕೇಳುವ ಸಂದರ್ಭದಲ್ಲಿ ಬರುವುದು. ಇಲ್ಲಿ ಅರ್ಜುನನು ಪ್ರಸ್ತಾವಿಸಿದ ನಾಲ್ಕು ಋಷಿಗಳ ಪೈಕಿ ನಾರದ ಮತ್ತು ವ್ಯಾಸರ ಬಗ್ಗೆ ನಾವೆಲ್ಲ ಹೆಚ್ಚು ಕೇಳಿದ್ದೇವೆ, ಓದಿದ್ದೇವೆ. ಆದರೆ ಈ ಅಸಿತ ಮತ್ತು ದೇವಲ ಯಾರು? ಎನ್ನುವುದೇ ನನ್ನ ಕುತೂಹಲ ಅಥವಾ ಜಿಜ್ಞಾಸೆ.
ಇದನ್ನೂ ಓದಿ: Srivathsa Joshi Column: ಅಳಿಲಿನ ಬಾಲ ಅಳೆದ ಸೂರ್ಯನೂ, ಚಿತ್ರ ಬರೆದ ಪ್ರಣಮ್ಯಳೂ
ಅದಕ್ಕೆ ಇನ್ನೊಂದು ಕಾರಣವೂ ಇದೆ. ಶಾಂಡಿಲ್ಯ ಗೋತ್ರದ ನಾವು ಸಂಧ್ಯಾವಂದನೆಯ ಅಭಿವಾದನ ಭಾಗದಲ್ಲಿ “ಶಾಂಡಿಲಾಸಿತ ದೇವಲೇತಿ ತ್ರಿಪ್ರವರಾನ್ವಿತ ಶಾಂಡಿಲ್ಯ ಗೋತ್ರೋ ತ್ಪನ್ನೋಧಿಹಂ..." ಎಂದು ನಮ್ಮ ಪರಿಚಯ ಹೇಳಿಕೊಳ್ಳುತ್ತೇವೆ. ಅಂದರೆ ಶಾಂಡಿಲ, ಅಸಿತ ಮತ್ತು ದೇವಲ ಎಂಬ ಮೂವರು ಋಷಿಗಳ ಪ್ರವರ ಅಥವಾ ಪರಂಪರೆ ಇರುವುದು ನಮ್ಮ ಗೋತ್ರಕ್ಕೆ. ಅಂದಹಾಗೆ ಅಗ್ನಿಯು ವೈಶ್ವಾನರನೆಂಬ ಹೆಸರಿನಿಂದ ಉತ್ಪನ್ನನಾದದ್ದೂ ಈ ಗೋತ್ರದಲ್ಲೇ ಅಂತೆ.
ಇರಲಿ, ನನ್ನ ಜಿಜ್ಞಾಸೆಯನ್ನು ಸದ್ಯಕ್ಕೆ ಅಸಿತ ಮತ್ತು ದೇವಲ ಇವರಿಬ್ಬರ ವಿಷಯಕ್ಕಷ್ಟೇ ಸೀಮಿತಗೊಳಿಸುತ್ತೇನೆ. ಯಾರಿವರು? ಅರ್ಜುನ ಪ್ರಸ್ತಾವಿಸಿದ ಅಸಿತ ಮತ್ತು ದೇವಲ ಹಾಗೂ ಶಾಂಡಿಲ್ಯ ಗೋತ್ರದ ಅಸಿತ ಮತ್ತು ದೇವಲ ಅವರವರೇ ಇರಬಹುದೆಂದೇ ನಾನಂದುಕೊಳ್ಳುತ್ತೇನೆ. ಏಕೆಂದರೆ ಪುರಾಣಗಳಲ್ಲಿ ಕೆಲವೊಮ್ಮೆ ಒಂದೇ ಹೆಸರಿನ ಬೇರೆಬೇರೆ ವ್ಯಕ್ತಿ/ಪಾತ್ರಗಳು ಇರುತ್ತವೆ.

ಸಪ್ತ ಚಿರಂಜೀವಿಗಳ ಪಟ್ಟಿಯಲ್ಲಿಲ್ಲದವರೂ ಕೆಲವರು ತ್ರೇತಾಯುಗದ ಕಥೆಗಳಲ್ಲೂ ದ್ವಾಪರ ಯುಗದ ಕಥಾನಕಗಳಲ್ಲೂ ಕಾಣಿಸಿಕೊಳ್ಳುವುದಿದೆ. ದ್ವಾಪರಯುಗದ ಪಾತ್ರಗಳೆರಡು ತ್ರೇತಾಯುಗ ದಲ್ಲಿ ನಡೆಯಿತೆನ್ನಲಾದ ಕಥೆ/ಘಟನೆಯನ್ನು ಸಂಭಾಷಣೆಯಲ್ಲಿ ತರುವುದಿದೆ. ಶಾಪ-ವರಗಳಿಂದಾಗಿ ಒಂದು ಪಾತ್ರವೇ ಇನ್ನೊಂದು ರೂಪದಿಂದ, ಹೆಸರಿನಿಂದ ಮುಂದುವರಿಯುವುದು ಇದೆ. ಹೀಗೆ ಪುರಾಣಕಥೆಗಳನ್ನು ಓದುವಾಗ ಮನಸ್ಸಿನಲ್ಲಿ ಗೊಂದಲವಾಗುವ ಸಾಧ್ಯತೆಗಳಿರುತ್ತವೆ.
ಉದಾಹರಣೆಗೆ, ಇಲ್ಲಿ ನಾನು ತಿಳಿದುಕೊಳ್ಳಲು ಹೊರಟ ಅಸಿತ ಋಷಿಗೇ ದೇವಲ ಅಂತ ಇನ್ನೊಂದು ಹೆಸರು ಎಂದು ಕೆಲವೆಡೆ ಗಮನಿಸಿದೆ. ಆದರೆ ಮೇಲೆ ಹೇಳಿದಂತೆ ನಮ್ಮ ಗೋತ್ರದ್ದು ಶಾಂಡಿಲ, ಅಸಿತ, ದೇವಲ = ತ್ರಿಪ್ರವರ ಅಂತಂದಮೇಲೆ ಅಸಿತ ಬೇರೆ, ದೇವಲ ಬೇರೆ ಎಂದು ನನ್ನ ದೃಢ ನಂಬಿಕೆ. ಅಸಿತ ಮಹರ್ಷಿಯ ಬಗ್ಗೆ ನನ್ನಲ್ಲಿರುವ ಪುರಾಣನಾಮ ಚೂಡಾಮಣಿ ಗ್ರಂಥದಲ್ಲಿ “ಒಬ್ಬ ಪುರಾತನ ಮಹರ್ಷಿ. ಮರೀಚಿ ಮುನಿಯ ವಂಶದಲ್ಲಿ ಜನಿಸಿದವನು.
ಈತನು ಹಿಮವಂತನ ಮಗಳಾದ ಏಕಪರ್ಣೆಯನ್ನು ಮದುವೆಯಾಗಿದ್ದನು. ಈತನ ಸ್ಮರಣೆಯಿಂದ ಸರ್ಪಭೀತಿ ತೊಲಗುವುದು" ಎಂದಷ್ಟೇ ಕೊಟ್ಟಿದ್ದಾರೆ. ಬೇರೆ ಕೆಲವು ಆಕರಗಳಲ್ಲಿ ಅಸಿತ ಮಹರ್ಷಿ ಯು ಭೀಷ್ಮಾಚಾರ್ಯರ ಸಮಕಾಲೀನ. ಶರಶಯ್ಯೆಯಲ್ಲಿದ್ದ ಭೀಷ್ಮರೊಡನೆ ಸಂಭಾಷಿಸಿದ್ದನು.
ಯುಧಿಷ್ಠಿರನು ಏರ್ಪಡಿಸಿದ್ದ ರಾಜಸೂಯ ಯಾಗದಲ್ಲಿ ಭಾಗವಹಿಸಿದ್ದನು ಅಂತೆಲ್ಲ ವಿವರಗಳು ಸಿಗುತ್ತವೆ. ಅಸಿತ ಮಹರ್ಷಿ ಯಮುನೋತ್ರಿಯಲ್ಲಿ ಬಾಳಿದ್ದನು, ಯಮುನಾ ನದಿಯನ್ನು ಮೊತ್ತಮೊದಲಿಗೆ ಗುರುತಿಸಿದನು, ಆದ್ದರಿಂದಲೇ ಯಮುನೆಗೆ ಅಸಿತಾ ಎಂಬ ಹೆಸರು; ದೇವಕಿಯ ಗರ್ಭದಲ್ಲಿ ಕೃಷ್ಣನು ಹುಟ್ಟಿದಾಗ “ಈ ಮಗು ಬೆಳೆದು ದೇವನಾಗುತ್ತಾನೆ" ಎಂದು ಅಸಿತ ಮಹರ್ಷಿಯೇ ಮೊದಲಿಗೆ ಭವಿಷ್ಯ ನುಡಿದಿದ್ದನಂತೆ... ಎಂದು ಮುಂತಾಗಿ ಹತ್ತುಹಲವು ಪ್ರತೀತಿಗಳೂ ಇವೆ.
ಅಸಿತ-ಏಕಪರ್ಣೆಯರ ಹಿರಿಮಗನೇ ದೇವಲ, ಎರಡನೆಯವನು ಧೌಮ್ಯ ಎಂದು ಕೂಡ ಹೇಳುತ್ತವೆ ಕೆಲವು ಪುರಾಣಗಳು. ಒಟ್ಟಿನಲ್ಲಿ ಅಸಿತನ ಬಗೆಗಿನ ಮಾಹಿತಿ ಗೋಜಲುಗೋಜಲಾಗಿದೆ ಎಂದು ನನಗನಿಸಿತು. ಇದಕ್ಕೇ ಇರಬಹುದು ಋಷಿಮೂಲ ನದೀಮೂಲ ಇತ್ಯಾದಿಯನ್ನು ಹುಡುಕ ಬಾರದೆನ್ನುವುದು. ಆದರೂ ಮೂಲ ಸಿಗಬಹುದೇನೋ ಎಂದು ನನಗೊಂದು ಆಸೆ.
ದೇವಲ ಋಷಿಯ ಬಗೆಗಿರುವ ಮಾಹಿತಿಯೂ ಅಷ್ಟೇ. ಇದಮಿತ್ಥಂ ಎನ್ನುವ ಹಾಗಿಲ್ಲ. “ಅಷ್ಟವಸು ಗಳಲ್ಲಿ ಒಬ್ಬನಾದ ಪ್ರತ್ಯೂಷನೆಂಬ ವಸುವಿನ ಮಗ. ಮಹಾಜ್ಞಾನಿ. ಪಾಂಡವರ ಪುರೋಹಿತನಾದ ಧೌಮ್ಯ ಮುನಿ ಈತನ ಒಡಹುಟ್ಟಿದವನು. ದೇವಲನು ಜನಮೇಜಯನ ಸರ್ಪಯಾಗದಲ್ಲಿ ಒಬ್ಬ ಸದಸ್ಯನಾಗಿದ್ದನು. ಜೈಗೀಷವ್ಯ ಮುನಿಯ ತಪಃಪ್ರಭಾವವನ್ನು ಕಂಡು ಆಶ್ಚರ್ಯಪಟ್ಟನು.
ಹೂಹೂ ಎಂಬ ಗಂಧರ್ವನಿಗೆ ಮೊಸಳೆಯಾಗಿ ಹುಟ್ಟುವಂತೆ ಶಾಪವಿತ್ತನು..." ಎಂದು ಮುಂತಾದ ವಿವರಗಳು ಸಿಗುತ್ತವೆ ನನ್ನಲ್ಲಿರುವ ಇನ್ನೊಂದು ಗ್ರಂಥ ಪುರಾಣಭಾರತ ಕೋಶದಲ್ಲಿ. ಅಂತೂ ದೇವಲ-ಧೌಮ್ಯ ಸೋದರರು ಎಂಬ ಮಾಹಿತಿಯಲ್ಲಿ ಏಕರೂಪತೆ ಇದೆ.
ದೇವಲನ ವಿಚಾರವನ್ನು ಸದ್ಯಕ್ಕೊಮ್ಮೆ ಬದಿಗಿಟ್ಟು ಅವನ ಸೋದರ ಧೌಮ್ಯನ ವಿವರಗಳನ್ನು ನೋಡೋಣ. ಧೌಮ್ಯನು ಅಷ್ಟವಸುಗಳಲ್ಲಿ ಒಬ್ಬನಾದ ಪ್ರತ್ಯೂಷನ ಮಗ. ಬ್ರಹ್ಮರ್ಷಿಯಾದ ದೇವಲನ ಸೋದರ. ಈತನೇ ಪಾಂಡವರ ಪುರೋಹಿತ. ಈತನು ಚಕ್ರತೀರ್ಥದ ಬಳಿ ತಪಸ್ಸು ಮಾಡುತ್ತಿದ್ದನು. ಅಂಗಾರ ಪರ್ಣನು ಅರ್ಜುನನಿಗೆ ಧೌಮ್ಯರನ್ನು ಪುರೋಹಿತರನ್ನಾಗಿ ಮಾಡಿಕೊಳ್ಳುವಂತೆ ಸೂಚನೆಯಿತ್ತನು.
ಪಾಂಡವರಲ್ಲಿ ಯುಧಿಷ್ಠಿರನಿಗೆ ಈತನೇ ೂರ್ಯಾಷ್ಟೋತ್ತರವನ್ನು ಉಪದೇಶಿಸಿ ಸೂರ್ಯನಿಂದ ಅಕ್ಷಯಪಾತ್ರೆಯನ್ನು ಕೊಡಿಸಿದನು. ಅರಣ್ಯವಾಸ ಕಾಲದಲ್ಲಿ ಪಾಂಡವರ ಜತೆಗಿದ್ದು ಅವರಿಗೆ ಅನೇಕ ಸತ್ಕಥೆಗಳನ್ನು ಹೇಳಿದುದಲ್ಲದೆ ಅನೇಕ ತೀರ್ಥಗಳ ಮಹಿಮೆಯನ್ನು ವಿವರಿಸಿದನು. ಅಜ್ಞಾತವಾಸ ಕಾಲದಲ್ಲಿ ಪಾಂಡವರ ಅಗ್ನಿಹೋತ್ರಗಳನ್ನು ಕಾಪಾಡಿಕೊಂಡು ಅರಣ್ಯದಲ್ಲೇ ಇದ್ದನು. ಈತನಿಗೆ ಆಪೋದ ಎಂಬ ಇನ್ನೊಂದು ನಾಮಧೇಯವೂ ಇದೆ.
ಧೌಮ್ಯನಿಗೆ ಉಪಮನ್ಯು, ಆರುಣಿ ಮತ್ತು ಬೈದರೆಂಬ ಮೂವರು ಶಿಷ್ಯರಿದ್ದರು. ಒಮ್ಮೆ ಏನಾಯ್ತೆಂದರೆ ಪ್ರವಾಹದಿಂದಾಗಿ ಧೌಮ್ಯನ ಆಶ್ರಮದ ಹತ್ತಿರವಿದ್ದ ಗದ್ದೆಯೊಳಕ್ಕೆ ನೀರು ನುಗ್ಗಿತು. ಅದನ್ನು ತಡೆಯುವುದಕ್ಕೆ ಏನಾದರೂ ಉಪಾಯ ಮಾಡುವಂತೆ ಧೌಮ್ಯನು ಆರುಣಿಯನ್ನು ಕಳುಹಿಸಿದನು. ಆತ ಕಲ್ಲುಬಂಡೆ, ಮರದ ರೆಂಬೆ-ಕೊಂಬೆಗಳನ್ನೆಲ್ಲ ಅಡ್ಡ ಇಟ್ಟರೂ ನೀರು ಹರಿಯುತ್ತಲೇ ಇತ್ತು. ಎಷ್ಟು ಪಾಡು ಪಟ್ಟರೂ ನೀರು ನಿಲ್ಲದಿರಲು ಕೊನೆಗೆ ನೀರಿನ ಪ್ರವಾಹಕ್ಕೆ ಅಡ್ಡವಾಗಿ ತಾನೇ ಮಲಗಿದನು. ಬಹಳ ಹೊತ್ತಿನವರೆಗೂ ಆರುಣಿಯು ಬಾರದಿರಲಾಗಿ ಧೌಮ್ಯನು ಇತರ ಶಿಷ್ಯರೊಡನೆ ಗದ್ದೆಯ ಬಳಿ ಹೋಗಿ ಕರೆದನು.
ಆಗ ಆರುಣಿಯು ನೀರನ್ನು ಭೇದಿಸಿಕೊಂಡು ಎದ್ದು ಬಂದುದರಿಂದ ಅವನಿಗೆ ಉದ್ದಾಲಕ ಎಂಬ ಹೆಸರು ಬಂತು. ಉದ್ದಾಲಕನು ಕುಶಿಕ ಪುತ್ರಿಯನ್ನು ಮದುವೆಯಾಗಿ ಶ್ವೇತಕೇತು, ನಚಿಕೇತರೆಂಬ ಪುತ್ರರನ್ನೂ, ಸುಜಾತೆಯೆಂಬ ಕನ್ಯೆಯನ್ನೂ ಪಡೆದನು. ಆ ಕಾಲದ ಕ್ರಮದಂತೆ ಒಮ್ಮೆ ಅಪುತ್ರನಾದ ಒಬ್ಬ ಬ್ರಾಹ್ಮಣನು ಸಂತಾನಾರ್ಥವಾಗಿ ಉದ್ದಾಲಕನ ಮಡದಿಯನ್ನು ತನಗೆ ಕೊಡುವಂತೆ ಕೇಳಿದನು. ಅದನ್ನು ಕೇಳಿ ಸಿಟ್ಟುಗೊಂಡ ಶ್ವೇತಕೇತುವು ಸ್ತ್ರೀಯರು ಸಂತಾನಕ್ಕಾಗಿ ಪರಪುರುಷ ರನ್ನು ಆಶ್ರಯಿಸುವ ಕ್ರಮವನ್ನು ನಿಲ್ಲಿಸಿದನು.
ಸ್ತ್ರೀ-ಪುರುಷರ ನಡೆವಳಿಗಳು, ಮರ್ಯಾದೆಯ ಜೀವನಕ್ರಮ ಹೇಗಿರಬೇಕೆಂದು ಒಂದು ಸಂವಿಧಾನ ಬರೆದನು. ಉದ್ದಾಲಕನಿಗೆ ಸುಜಾತೆ ಎಂಬ ಮಗಳಿದ್ದಳಷ್ಟೆ? ಅವಳನ್ನು ಕಹೋಳಮುನಿಗೆ ಲಗ್ನ ಮಾಡಿ ಕೊಡಲಾಗಿತ್ತು. ಸುಜಾತೆ ಗರ್ಭವತಿಯಾಗಿದ್ದ ಸಮಯದಲ್ಲಿ ಒಮ್ಮೆ ಕಹೋಳಮುನಿಯು ವೇದಪಠನ ಮಾಡುತ್ತಿದ್ದಾಗ ಏಳೆಂಟು ಕಡೆ ತಪ್ಪು ಉಚ್ಚಾರಗಳಿಂದಾಗಿ ಅಪಸ್ವರವಾಯಿತು.
ಸುಜಾತೆಯ ಗರ್ಭದಲ್ಲಿದ್ದ ಶಿಶು ಅದನ್ನು ಕೇಳಿ ನಕ್ಕಿತು. ಇದರಿಂದ ಕಹೋಳನು ಸಿಟ್ಟುಗೊಂಡು ಗರ್ಭಸ್ಥ ಶಿಶುವಿಗೆ ಅಷ್ಟಾವಕ್ರನಾಗುವಂತೆ ಶಾಪವಿತ್ತನು. ಕಹೋಳನು ಜನಕರಾಜನ ಯಜ್ಞದಲ್ಲಿ ವಾದ ಮಾಡಿ ಸೋತು ಜಲಾಧಿವಾಸವನ್ನು ಅನುಭವಿಸುತ್ತಿರಲಾಗಿ, ಅಷ್ಟಾವಕ್ರನು ತನ್ನ ತಾಯಿ ಯಿಂದ ಆ ಸುದ್ದಿಯನ್ನು ತಿಳಿದು ಜನಕರಾಜನಲ್ಲಿಗೆ ಹೋಗಿ ಆತನನ್ನೂ ವರುಣಪುತ್ರನಾದ ಬಂದಿಯನ್ನೂ ವಾದದಲ್ಲಿ ಸೋಲಿಸಿ, ತನ್ನ ತಂದೆಯನ್ನು ಬಿಡಿಸಿ ತಂದನು. ಮುಂದೆ ತನ್ನ ತಂದೆಯ ಸೂಚನೆಯಂತೆ ಮಧುವಿಲಾ ನದಿಯಲ್ಲಿ ಸ್ನಾನ ಮಾಡಿದನು. ಅವನ ಶರೀರದ ವಕ್ರತೆಯೆಲ್ಲ ಮಾಯವಾಯಿತು.
ಅಂದಿನಿಂದ ಮಧುವಿಲಾ ನದಿಗೆ ಸಮಂಗಾ ಎಂಬ ಹೆಸರಾಯಿತು. ಅಷ್ಟಾವಕ್ರನ ಮನೋನಿಗ್ರಹ ಶಕ್ತಿಗೆ ಬೆರಗಾದ ವದಾನ್ಯ ಮುನಿಯು ತನ್ನ ಮಗಳಾದ ಸುಪ್ರಭೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು. ಮುಂದೆ ಅಷ್ಟಾವಕ್ರನೂ ಪ್ರಖರ ವರ್ಚಸ್ಸುಳ್ಳ ಋಷಿಯಾಗಿ ಬೆಳೆದನು. ಇದೆಲ್ಲವೂ ನಡೆಯುತ್ತಿರುವಾಗ ಶ್ವೇತಕೇತುವು ತಂದೆ ಉದ್ದಾಲಕನಿಂದ ಅಧ್ಯಾತ್ಮ ತತ್ತ್ವಜ್ಞಾನ ಪಾಠಗಳನ್ನು ಪ್ರಶ್ನೋತ್ತರ ಸಂವಾದಗಳ ಮೂಲಕ ಕಲಿಯುತ್ತಿದ್ದನು.
ಆರಂಭದಲ್ಲಿ ಒಂದು ತೆರನಾದ ಅಹಂಕಾರ ಅವನಲ್ಲಿತ್ತು, ತಾನು ಎಲ್ಲವನ್ನೂ ಕಲಿತಿದ್ದೇನೆ, ತನಗೆ ಎಲ್ಲವೂ ಗೊತ್ತಿದೆ ಎಂದು. ಆದರೆ ಪ್ರತಿಸಲವೂ ಉದ್ದಾಲಕ ನೀಡುತ್ತಿದ್ದ ಸವಾಲುಗಳು, ಅವುಗಳಿಗೆ ಉತ್ತರಿಸಲಿಕ್ಕೆ ಶ್ವೇತಕೇತು ತಿಣುಕಾಡುತ್ತಿದ್ದದ್ದು, ಆಮೇಲೆ ಉದ್ದಾಲಕನು ಆ ಸವಾಲುಗಳ ಉತ್ತರವನ್ನು ಅಧ್ಯಾತ್ಮದ ನೆಲೆಯಲ್ಲಿ ವಿಶದೀಕರಿಸುತ್ತಿದ್ದದ್ದು, ಆಗ ಅದು ಶ್ವೇತಕೇತುವಿಗೆ ಚೆನ್ನಾಗಿ ಮನದಟ್ಟು ಆಗುತ್ತಿದ್ದದ್ದು... ನಡೆದೇ ಇತ್ತಾದ್ದರಿಂದ ಕ್ರಮೇಣ ಶ್ವೇತುಕೇತು ದಿವ್ಯಜ್ಞಾನವನ್ನು ಹೊಂದಿದವನಾದನು.
ಛಾಂದೋಗ್ಯ ಉಪನಿಷತ್ತಿನಲ್ಲಿ ಉದ್ದಾಲಕ-ಶ್ವೇತಕೇತು ನಡುವಿನ ಸಂವಾದದ ವಿವರಗಳು ಬರುತ್ತವೆ. ಈಗ ಮತ್ತೆ ದೇವಲ ಋಷಿಯ ವಿಚಾರಕ್ಕೆ ಬರೋಣ. ಅವರು ವೇದೋಕ್ತ ವಿಽಯಲ್ಲಿ ಕರ್ಮಾಚರಣೆ ಮಾಡುತ್ತಿದ್ದ, ಧರ್ಮದ ನಿಜ ಪ್ರತಿರೂಪವಾಗಿದ್ದ ಋಷಿ. ಅವರಿಗೆ ಸುವರ್ಚಲೆ ಎಂಬ ಹೆಸರಿನ ಪುತ್ರಿಯಿದ್ದಳು. ಅತ್ಯಂತ ಸುಂದರಿ ಮತ್ತು ನಡವಳಿಕೆಯಲ್ಲೂ ಶ್ರೇಷ್ಠಳು.
ಆಕೆ ಯೋಗ್ಯ ವಯಸ್ಸಿಗೆ ಬಂದಾಗ, ದೇವಲರು ಆಕೆಗೊಬ್ಬ ತಕ್ಕ ವರನನ್ನು ಹುಡುಕುವ ವಿಚಾರ ದಲ್ಲಿ ಚಿಂತಾಕ್ರಾಂತರಾದರು. ಹೇಗೆ ಅವಳಿಗೆ ಒಬ್ಬ ವೇದಪಾಠಿ, ಬ್ರಹ್ಮಚಾರಿ, ಮೃದುಭಾಷಿ, ತಪಸ್ವಿಯಾಗಿರುವ ಪತಿಯನ್ನು ಹುಡುಕಬಹುದೆಂದು ಯೋಚಿಸತೊಡಗಿದರು. ತಂದೆಯ ಉದ್ದೇಶ ವನ್ನು ಅರ್ಥಮಾಡಿಕೊಂಡ ಸುವರ್ಚಲೆ, ಇಂತೆಂದಳು: “ನನ್ನ ಕೈಹಿಡಿಯುವವನು ಕಣ್ಣಿಲ್ಲದವನು ಆಗಿರಬೇಕು ಆದರೆ ಕುರುಡನಾಗಿರಬಾರದು!
ಅಂಥ ವ್ಯಕ್ತಿಯು ಎಲ್ಲವನ್ನೂ ತಿಳಿದವನು ಎಂದು ನಾನು ಪರಿಗಣಿಸುತ್ತೇನೆ" ಹೀಗೆ ತನ್ನದೊಂದು ಷರತ್ತನ್ನು ನಿಗದಿಪಡಿಸಿದಳು. ದೇವಲರು ಆಕೆಯ ಮಾತುಗಳನ್ನು ಕೇಳಿ ಬೆಚ್ಚಿಬಿದ್ದರು. ಕಣ್ಣಿಲ್ಲದವನಾಗಿರಬೇಕು ಮತ್ತು ಕುರುಡನಾಗಿರಬಾರದು. ಇದು ಹೇಗೆ ಸಾಧ್ಯ? ಪ್ರಪಂಚದಲ್ಲಿ ಯಾರಾದರೂ ಅಂಥ ವ್ಯಕ್ತಿ ಇದ್ದಾರೆಯೆ? ಅದೊಂದು ಬಿಡಿಸಲಾಗದ ಒಗಟಿನಂತೆಯೇ ಅನಿಸಿತು ಅವರಿಗೆ.
ಆದರೆ ಸುವರ್ಚಲೆ ಸ್ಪಷ್ಟವಾಗಿಯೇ ತಿಳಿಸಿದ್ದಳು. ತಾನು ಸರಿಯಾಗಿ ಯೋಚಿಸಿಯೇ ಹೇಳಿದ್ದೇ ನೆಂದೂ, ವೇದಾಧ್ಯಯನ ಮಾಡಿಕೊಂಡಿರುವ ಬುದ್ಧಿವಂತರನ್ನು ಕರೆತಂದರೆ ಅವರ ಪರೀಕ್ಷೆ ಮಾಡುತ್ತೇನೆಂದೂ, ಒಗಟಿನ ಉತ್ತರ ಬಿಡಿಸಿದವನನ್ನು ಮದುವೆಯಾಗುತ್ತೇನೆಂದೂ, ತನ್ನ ತಂದೆಗೆ ತಿಳಿಸಿದಳು. ದೇವಲರು ತನ್ನ ಶಿಷ್ಯರನ್ನು ಕರೆದು, ಸುತ್ತಲಿನ ದೇಶಗಳಲ್ಲಿರುವ ಸದಾಚಾರಿ, ಸದ್ಗುಣಸಂಪನ್ನ, ಸುಂದರವಾದ, ವಿವಾಹಯೋಗ್ಯ ತರುಣರನ್ನು ಕರೆತರುವಂತೆ ಸೂಚಿಸಿದರು. ಹಲವಾರು ಋಷಿಕುಮಾರರು ದೇವಲರ ಆಶ್ರಮಕ್ಕೆ ಸುವರ್ಚಲೆಯ ವರನಾಗುವ ಆಶಯದಿಂದ ಆಗಮಿಸಿದರು. ದೇವಲರು ಅವರನ್ನು ತನ್ನ ಪುತ್ರಿಗೆ ಪರಿಚಯಿಸಿ, ಇವರಲ್ಲಿ ಯಾರನ್ನಾದರೂ ವರನಾಗಿ ಆರಿಸು ಎಂದು ಹೇಳಿದರು.
ಆದರೆ ಸುವರ್ಚಲೆ ಮೃದುಮಾತಿ ನಿಂದಲೇ, “ನನ್ನ ಪತಿ ಆಗುವವನು ಕಣ್ಣಿಲ್ಲದವನಾಗಿರಬೇಕು ಆದರೆ ಕುರುಡನಾಗಿರಬಾರದು!" ಎಂದಳು. ಆಕೆಯ ಮಾತುಗಳಿಂದ ಗೊಂದಲಕ್ಕೊಳಗಾದ ಋಷಿಕುಮಾರರು ನಿರಾಶೆಗೊಂಡು ಅಲ್ಲಿಂದ ಹೊರಟುಬಿಟ್ಟರು. ಕೆಲವರಿಗೆ ಕೋಪವೂ ಬಂತು.
“ಇದೊಂದು ಮಂಕು ಹೆಣ್ಣು... ಭಾರಿ ಜಂಭಗಾತಿ... ಇವಳು ಯಾವ ಸೀಮೆಯ ಅಪ್ಸರೆ?..." ಅಂತೆಲ್ಲ ಬಾಯಿಗೆ ಬಂದಂತೆ ತೆಗಳಿ ಹೊರಟುಹೋದರು. ದೇವಲರಿಗೆ ಬಹಳ ಬೇಸರವಾಯಿತು. ಆದರೆ ಸುವರ್ಚಲೆ ತಾಳ್ಮೆಯಿಂದಿದ್ದಳು. ತನ್ನ ಪಾಠ ಮತ್ತು ಸ್ವಾಧ್ಯಾಯಗಳ ಕಡೆಗೆ ಗಮನಹರಿಸಿದ್ದಳು. ಹೀಗಿರುವಾಗ ಒಂದು ದಿನ ಬ್ರಹ್ಮತೇಜಸ್ಸು ಕಂಗೊಳಿಸುತ್ತಿದ್ದ ಋಷಿಕುಮಾರನೊಬ್ಬನು ದೇವಲರ ಆಶ್ರಮಕ್ಕೆ ಬಂದು ತನ್ನ ಪರಿಚಯ ಹೇಳಿಕೊಂಡನು. ಹೆಸರು ಶ್ವೇತಕೇತು. ತಂದೆಯ ಹೆಸರು ಉದ್ದಾಲಕ ಋಷಿ. ನ್ಯಾಯವಿಶಾರದನೂ ಸರ್ವಶಾಸಪಾರಂಗತನೂ ಆದ ಶ್ವೇತಕೇತುವಿಗೆ ಒಗಟು ಗಳೆಂದರೆ ಬಹಳ ಇಷ್ಟ.
ತನ್ನ ತಂದೆಯವರಿಂದ ತತ್ತ್ವಮಸಿ ಜ್ಞಾನದ ಬೋಧನೆಯನ್ನೂ ಪಡೆದಿದ್ದನು. ಶ್ವೇತಕೇತುವಿನ ಬಗ್ಗೆ ಈ ಮೊದಲೇ ಕೇಳಿತಿಳಿದಿದ್ದ ದೇವಲರಿಗೆ ಅತ್ಯಂತ ಸಂತೋಷವಾಯಿತು. ಸುವರ್ಚಲೆಯನ್ನು ಕರೆದು ಹೀಗೆಂದರು “ಮಗಳೇ, ಇವನೇ ಶ್ವೇತಕೇತು. ಮಹಾಪ್ರಾಜ್ಞನಾದ ಇವನನ್ನು ನೀನು ವರಿಸಬಹುದು!" ತಂದೆಯ ಅತಿ ಉತ್ಸಾಹದ ಮಾತುಗಳನ್ನು ಕೇಳಿದ ಸುವರ್ಚಲೆಗೆ ನಗುವಿನ ಜತೆಗೆ ಸ್ವಲ್ಪ ಕೋಪವೂ ಬಂತು.
ಶ್ವೇತಕೇತುವಿನ ಬಗ್ಗೆ ಅವಳಿಗೆ ತಿಳಿದಿಲ್ಲವೆಂದೇನಲ್ಲ. ಆದರೆ ತನ್ನ ಒಗಟಿನ ಪ್ರಸ್ತಾವವನ್ನೇ ಮಾಡದೆ ಈ ತರುಣನನ್ನೇ ತಾನು ವರಿಸಬಹುದು ಎಂದು ತಂದೆ ಅದಾವ ತರ್ಕದಿಂದ ನಿರ್ಧರಿಸಿದರು ಎಂಬ ಆಶ್ಚರ್ಯ ಅವಳಿಗೆ. ಜತೆಯಲ್ಲೇ ಸ್ವಲ್ಪ ನಾಚಿಕೆ, ಸ್ವಲ್ಪ ಸಿಟ್ಟು. ಸುವರ್ಚಲೆಯ ಗಂಟಿಕ್ಕಿದ ಹುಬ್ಬುಗಳನ್ನು ಗಮನಿಸಿದ ಶ್ವೇತಕೇತು, “ಸುಂದರಿ, ನನಗೆ ಕಣ್ಣುಗಳಿಲ್ಲ ಆದರೆ ನಾನು ಕುರುಡ ನಲ್ಲ!" ಎಂದುಬಿಟ್ಟನು.
ಈ ಮಾತುಗಳನ್ನು ಕೇಳಿದ ಸುವರ್ಚಲೆಗೆ ನಾಚಿಕೆಯ ಜತೆಗೆ ಸಂತೋಷವೂ ಆಯಿತು. ಆದರೂ ತನ್ನ ಭಾವನೆಗಳನ್ನು ತೋರಗೊಡದೆ, “ಸುಂದರ ವಿಶಾಲನೇತ್ರನಾದ ನೀನು ನನ್ನನ್ನು ಸುಂದರಿ ಎಂದು ಕರೆಯುತ್ತಿದ್ದೀಯೆ. ಅದು ಹೇಗೆ ನೀನು ಕಣ್ಣಿಲ್ಲದವನು ಎಂದು ಹೇಳಿಬಿಟ್ಟೆ? ವಿವರವಾಗಿ ತಿಳಿಸುವೆಯಾ?" ಎಂದು ಕೇಳಿದಳು.
ಶ್ವೇತಕೇತು ಮುಗುಳ್ನಕ್ಕು ಹೀಗೆಂದನು: “ರೂಪ, ರಸ, ಗಂಧ, ಶಬ್ದ, ಸ್ಪರ್ಶ ಎಂಬ ಪಂಚ ತನ್ಮಾತ್ರ ಗಳಿಂದ ಕೂಡಿದ ಜೀವಾತ್ಮವು ಆ ಪರಮಾತ್ಮನ ಕಾರಣದಿಂದಲೇ ಅಸ್ತಿತ್ವದಲ್ಲಿದೆ. ಪರಮಾತ್ಮನ ಕಾರಣದಿಂದಲೇ ನನ್ನ ಪಂಚೇಂದ್ರಿಯಗಳು ಕಾರ್ಯವೆಸಗುತ್ತಿವೆ. ನನಗೆ ಎಲ್ಲವೂ ಕಾಣಿಸುತ್ತದೆ, ಕೇಳಿಸುತ್ತದೆ, ರುಚಿ-ವಾಸನೆ-ಸ್ಪರ್ಶ ಎಲ್ಲವೂ ಅನುಭವಕ್ಕೆ ಬರುತ್ತದೆ. ಆದರೆ ಈ ಇಂದ್ರಿಯ ಗಳಾವುವೂ ನನ್ನವಲ್ಲ. ಆದ್ದರಿಂದಲೇ ನನ್ನ ಕಣ್ಣುಗಳು ನನ್ನವಲ್ಲ. ಎಲ್ಲವನ್ನೂ ಆ ಜೀವಾತ್ಮನೇ ನೋಡುತ್ತಾನೆಯೇ ಹೊರತು ನಾನಲ್ಲ.
ಹಾಗಾಗಿ ಈ ಕಣ್ಣುಗಳು ನನ್ನವಲ್ಲ. ಆದ್ದರಿಂದಲೇ ನನಗೆ ಕಣ್ಣುಗಳಿಲ್ಲ ಎಂದು ಹೇಳಿದೆ". ಅವನ ಸತ್ತ್ವಯುತ ಮಾತುಗಳನ್ನು ಕೇಳಿ ಸುವರ್ಚಲೆ ಮತ್ತು ದೇವಲರು ಬೆರಗಾದರು. ಶಾಂತಚಿತ್ತನಾಗಿ ಶ್ವೇತಕೇತು ತನ್ನ ವಿವರಣೆಯನ್ನು ಮುಂದುವರಿಸಿದನು- “ಪರಮಾತ್ಮನ ಕಾರಣದಿಂದಲೇ ನನ್ನ ಸುತ್ತಲಿನ ಜಗತ್ತಿನ ಅನುಭೂತಿ ನನಗೆ ಸಾಧ್ಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ಈ ವಿಷಯವು ನನಗೆ ಸುಟವಾಗಿ ಕಾಣುತ್ತದೆ. ಹಾಗಾಗಿ ನಾನು ಕುರುಡನಲ್ಲ!".
ಶ್ವೇತಕೇತುವಿನ ಮಾತುಗಳನ್ನು ಕೇಳಿದ ಸುವರ್ಚಲೆ ಅತ್ಯಂತ ಸಂತುಷ್ಟಳಾದಳು. ಬಹಳ ಕಾಲದಿಂದ ಮಾಯವಾಗಿದ್ದ ದೇವಲರ ಮುಗುಳ್ನಗೆ ಅವರ ಮುಖದಲ್ಲಿ ಮತ್ತೆ ಅರಳಿತು. ದೇವಲರು ಸಂತೋಷದಿಂದ ಶ್ವೇತಕೇತುವಿನ ತಂದೆ ಉದ್ದಾಲಕನನ್ನು ಆಹ್ವಾನಿಸಿ, ಋಷಿಮುನಿಗಳ ಸಮ್ಮುಖ ದಲ್ಲಿ ಸುವರ್ಚಲೆಯ ಮದುವೆಯನ್ನು ನೆರವೇರಿಸಿದರು.
ಶ್ವೇತಕೇತು ಮತ್ತು ಸುವರ್ಚಲೆ ಪರಸ್ಪರ ಸಹಕಾರದಿಂದ, ಸಮನ್ವಯದಿಂದ, ಧರ್ಮಪಥದಲ್ಲಿ ಬದುಕುತ್ತ ದೀರ್ಘಕಾಲ ಸುಖಸಂತೋಷಗಳಿಂದ ದಾಂಪತ್ಯಜೀವನ ನಡೆಸಿದರು. ಇಂತು, ಶ್ರಾವಣ ಮಾಸದ ಮೊದಲ ಭಾನುವಾರದಲ್ಲೊಂದು ಪುರಾಣಕಥನ/ವಾಚನ/ಶ್ರವಣ ಸಮಾಪ್ತವಾದುದು.