Daiva Movie: ಮಂಜುನಾಥ್ ಜಯರಾಜ್ ನಟನೆ, ನಿರ್ದೇಶನದ ʼದೈವʼ ಚಿತ್ರದ ಟೀಸರ್ ರಿಲೀಸ್
Daiva Movie: ಎಂ.ಜೆ. (ಮಂಜುನಾಥ್ ಜಯರಾಜ್) ಅಭಿನಯ ಹಾಗೂ ನಿರ್ದೇಶನದ ʼದೈವʼ ಚಿತ್ರದ ಟೀಸರ್ ಶಿಕ್ಷಕರ ದಿನಾಚರಣೆಯ ದಿನದಂದು ಬಿಡುಗಡೆಯಾಯಿತು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಗುರು ದೇಶಪಾಂಡೆ, ಹರಿ ಸಂತೋಷ್, ಭರ್ಜರಿ ಚೇತನ್, ಜಡೇಶ್ ಕೆ ಹಂಪಿ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್ ಅವರು ʼದೈವʼ ಚಿತ್ರದ ಟೀಸರ್ ಅನ್ನು ಅನಾವರಣ ಮಾಡಿದರು.

-

ಬೆಂಗಳೂರು: ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಜಯಮ್ಮ ಪದ್ಮರಾಜ್ ನಿರ್ಮಿಸಿರುವ, ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ. ಪಟ್ಟಣಶೆಟ್ಟಿ ಅವರ ಸಹ ನಿರ್ಮಾಣವಿರುವ ಹಾಗೂ ಎಂಜೆ ಅವರು ನಿರ್ದೇಶನದ ಜತೆಗೆ ನಾಯಕನಾಗೂ ನಟಿಸಿರುವ ʼದೈವʼ ಚಿತ್ರದ (Daiva Movie) ಟೀಸರ್ ಶಿಕ್ಷಕರ ದಿನಾಚರಣೆಯ ದಿನದಂದು ಬಿಡುಗಡೆಯಾಯಿತು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಗುರು ದೇಶಪಾಂಡೆ, ಹರಿ ಸಂತೋಷ್, ಭರ್ಜರಿ ಚೇತನ್, ಜಡೇಶ್ ಕೆ ಹಂಪಿ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್ ʼದೈವʼ ಚಿತ್ರದ ಟೀಸರ್ ಅನ್ನು ಅನಾವರಣ ಮಾಡಿ ತಮ್ಮ ಪ್ರೋತ್ಸಾಹದ ನುಡಿಗಳ ಮೂಲಕ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಎಂಟೆಕ್ ಮುಗಿಸಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಎಂ.ಜೆ. (ಮಂಜುನಾಥ್ ಜಯರಾಜ್) ಅಭಿನಯ ಹಾಗೂ ನಿರ್ದೇಶನದ ಈ ಚಿತ್ರದ ಟೀಸರ್ ಶಿಕ್ಷಕರ ದಿನದಂದೇ ಬಿಡುಗಡೆಯಾಗಿದ್ದು ವಿಶೇಷವಾಗಿತ್ತು. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಇದೊಂದು ಪಕ್ಕಾ ದೇಸಿ ಕಥಾಹಂದರ ಹೊಂದಿರುವ ಚಿತ್ರ. ʼದೈವʼ ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಜೋಗಯ್ಯನ ಪಾತ್ರದಲ್ಲಿ ಎರಡು ಗೆಟಪ್‌ಗಳಲ್ಲಿ ನಾನು ಅಭಿನಯಿಸಿದ್ದೇನೆ. ʼದೈವʼ ಎಂದ ಕೂಡಲೇ ಇದು ಪೌರಾಣಿಕ ಚಿತ್ರವಲ್ಲ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಒಂದು ಕಮರ್ಷಿಯಲ್ ಸಿನಿಮಾ. ಈಗಾಗಲೇ ಚಿತ್ರೀಕರಣ ಮುಗಿದಿರುವ ಈ ಚಿತ್ರ ಈಗ ರೀರೆಕಾರ್ಡಿಂಗ್‌ನಿಂದ ಸಿಂಗಾರಗೊಳ್ಳುತ್ತಿದೆ. ಸದ್ಯದಲ್ಲೇ ಪ್ರಥಮ ಪ್ರತಿ ಸಿದ್ದವಾಗಲಿದೆ. ನಮ್ಮ ತಾಯಿ ಜಯಮ್ಮ ಪದ್ಮರಾಜ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಸುರಭಿ, ನೀತು ರಾಯ್, ಬಲ ರಾಜ್ವಾಡಿ, ಮಂಜುರಾಜ್ ಸೂರ್ಯ, ಅರುಣ್ ಬಚ್ಚನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಶಿಕ್ಷಕರ ದಿನದಂದು ಸರಸ್ವತಿ ಪುತ್ರರು ಹಾಗೂ ಗುರು ಸಮಾನರಾದ ಕನ್ನಡದ ಐದು ಜನಪ್ರಿಯ ನಿರ್ದೇಶಕರು ನಮ್ಮ ʼದೈವʼ ಚಿತ್ರದ ಟೀಸರ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಅವರಿಗೆ ಹಾಗೂ ಚಿತ್ರರಂಗದ ನನ್ನ ಗುರುಗಳಾದ ರವಿ ಶ್ರೀವತ್ಸ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಹಾಗೂ ನಾಯಕ MJ (ಮಂಜುನಾಥ್ ಜಯರಾಜ್).
ನಾನು ಈ ಚಿತ್ರದಲ್ಲಿ ಎನ್.ಜಿ.ಓ. ಮೂಲಕ ಹಳ್ಳಿ ಮಕ್ಕಳಿಗೆ ವಿಧ್ಯಾಬ್ಯಾಸಕ್ಕೆ ಸಹಾಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ʼದೈವʼ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಪತ್ರಕರ್ತ, ನಟ ಮಂಜುರಾಜ್ ಸೂರ್ಯ (ವಿ.ಸಿ.ಎನ್ ಮಂಜು) ತಿಳಿಸಿದರು.
ಈ ಸುದ್ದಿಯನ್ನೂ ಓದಿ | Beauty Trend 2025: ಮುಂಬರುವ ನವರಾತ್ರಿ ಫೆಸ್ಟೀವ್ ಸೀಸನ್‌ಗೆ ಲಗ್ಗೆ ಇಟ್ಟ ಬ್ಯೂಟಿ ಪ್ಯಾಕೇಜ್‌ಗಳು
ನನ್ನ ಮಗ ಈ ಚಿತ್ರದ ಮೂಲಕ ನಾಯಕ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಎಲ್ಲರೂ ಹಾರೈಸಿ ಎಂದರು ನಿರ್ಮಾಪಕಿ ಜಯಮ್ಮ ಪದ್ಮರಾಜ್. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಟಿ ನೀತು ರಾಯ್. ಚಿತ್ರದಲ್ಲಿ ನಟಿಸಿರುವ ಅರುಣ್ ಬಚ್ಚನ್, ಮೀಸೆ ಮೂರ್ತಿ, ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಗೂ ಛಾಯಾಗ್ರಾಹಕ ಸಿದ್ಧಾರ್ಥ್ ಮುಂತಾದವರು ʼದೈವʼ ಚಿತ್ರದ ಕುರಿತು ಮಾತನಾಡಿದರು.