Operation Sindoor: ಭಾರತ ಕಾರ್ಯಾಚರಣೆ ನಿಲ್ಲಿಸಿದರೆ, ನಾವೂ ಸೇನೆ ಹಿಂತೆಗೆದುಕೊಳ್ಳಲು ಸಿದ್ಧ; ಪಾಕಿಸ್ತಾನ ರಕ್ಷಣಾ ಸಚಿವ
ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ದಾಳಿಗೆ (Operation Sindoor) ಪಾಕಿಸ್ತಾನ ತತ್ತರಿಸಿ ಹೋಗಿದೆ. ಪಾಕ್ ನೆಲದಲ್ಲಿರುವ 9 ಉಗ್ರ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಲ್ಲಿ LET ಪ್ರಮುಖ ಉಗ್ರ ಸೇರಿದಂತೆ 100 ಕ್ಕೂ ಅಧಿಕ ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.


ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ದಾಳಿಗೆ (Operation Sindoor) ಪಾಕಿಸ್ತಾನ ತತ್ತರಿಸಿ ಹೋಗಿದೆ. ಪಾಕ್ ನೆಲದಲ್ಲಿರುವ 9 ಉಗ್ರ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಲ್ಲಿ LET ಪ್ರಮುಖ ಉಗ್ರ ಸೇರಿದಂತೆ 100 ಕ್ಕೂ ಅಧಿಕ ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಪ್ರತೀಕಾರವಾಗಿ ಭಾರತ ಈ ದಾಳಿಯನ್ನು ಮಾಡಿದೆ. ಭಾರತ ನಡೆಯನ್ನು ಖಂಡಿಸಿರುವ ಪಾಕಿಸ್ತಾನ ಇದು ವಿಶ್ವಸಂಸ್ಥೆಯ ಚಾರ್ಟರ್, ಅಂತಾರಾಷ್ಟ್ರೀಯ ಕಾನೂನು ಮತ್ತು ಅಂತರರಾಜ್ಯ ಸಂಬಂಧಗಳ ಸ್ಥಾಪಿತ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಜತೆಗೆ ಭಾರತಕ್ಕೆ ನಾವು ಪ್ರತ್ಯುತ್ತರ ನೀಡುತ್ತೇವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿಕೆ ನೀಡಿದ್ದರು. ಇದೀಗ ಪಾಕಿಸ್ತಾನಕ್ಕೆ ಎಲ್ಲಡೆ ಟೀಕೆ ವ್ಯಕ್ತವಾಗಿತ್ತು.
ಇದೀಗ ಭಾರತದ ಆರ್ಭಟಕ್ಕೆ ಬೆದರಿದ ಪಾಕ್ ಉಲ್ಟಾ ಹೊಡೆದಿದೆ. ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ , ಭಾರತ ತನ್ನ ಕಾರ್ಯಾಚರಣೆಯನ್ನು ಹಿಂದೆಗೆದುಕೊಂಡರೆ ನಾವು ಸುಮ್ಮನಿರುತ್ತೇವೆ. ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಭಾರತ ನಮ್ಮ ನೆಲದ ಮೇಲೆ ದಾಳಿ ನಡೆಸಿದೆ. ಅವರು ತಮ್ಮ ಕಾರ್ಯಾಚರಣೆಯನ್ನು ಹಿಂಪಡೆದರೆ, ನಾವೂ ಹಿಂದೆ ಸರಿಯುತ್ತೇವೆ. ನಾವೂ ಎಂದಿಗೂ ದಾಳಿ ಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ನಮ್ಮ ಮೇಲೆ ದಾಳಿಯಾದರೆ ನಾವು ಪ್ರತಿಕ್ರಿಯಿಸುತ್ತೇವೆ. ಇದೆಲ್ಲಾ ಶಮನವಾಗಬೇಕೆಂದರೆ, ಭಾರತ ಪ್ರತೀಕಾರದ ದಾಹವನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ರಕ್ಷಣಾ ಸಚಿವ ಹೇಳಿದ ಹೇಳಿಕೆ ಇದೀಗ ವೈರಲ್ ಆಗಿದ್ದು, ವೈಮಾನಿಕ ದಾಳಿಗೆ ಪಾಕಿಸ್ತಾನ ಸಂಪೂರ್ಣವಾಗಿ ಹೆದರಿದೆ. ಇಷ್ಟು ದಿನ ಜೊತೆಗೆಗಿದ್ದ ಚೀನಾ ಕೂಡ ಪಾಕ್‌ಗೆ ಕೈ ಕೊಟ್ಟಿದ್ದು, ಚೀನಾ ಶಾಂತಿ ಮಂತ್ರ ಪಠಿಸಿದೆ. ಪರಿಸ್ಥಿತಿಯ ಬಗ್ಗೆ ಕಳವಳವಿದೆ. ಭಾರತ ಮತ್ತು ಪಾಕಿಸ್ತಾನ ಯಾವಾಗಲೂ ನಮ್ಮ ನೆರೆ ಹೊರೆಯ ರಾಷ್ಟ್ರ. ಅವರು ಚೀನಾದ ನೆರೆಹೊರೆಯವರು. ಚೀನಾ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ ಎಂದು ಹೇಳಿಕೆ ನೀಡಿದೆ.
ಈ ಸುದ್ದಿಯನ್ನೂ ಓದಿ: Operation Sindoor: 'ರೆಡಿ ಟು ಸ್ಟ್ರೈಕ್' ; ಆಪರೇಷನ್ ಸಿಂಧೂರ್‌ಗೂ ಮೊದಲು ಸೇನೆಯಿಂದ ಪೋಸ್ಟ್!
ಏ. 22 ರಂದು ಪಹ್ಗಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ದೊರಕಿಸುತ್ತೇವೆ. ತಾಯಂದಿರ ಹಣೆಯಲ್ಲಿನ ಕುಂಕುಮ ಅಳಿಸಿದವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಭಾರತೀಯರಿಗೆ ಭರವಸೆ ನೀಡಿದ್ದರು. ಇದೀಗ ಅದು ನೆರವೇರಿದೆ. ಭಾರತ ಉಗ್ರರ ಮೇಲೆ ನಡೆಸಿದ ದಾಳಿಯನ್ನು ಅಮೆರಿಕ ಸೇರಿದಂತೆ ಉಳಿದ ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಟ್ರಂಪ್ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ್ದಾರೆ.