Operation Sindoor: ರಾತ್ರಿಯಿಡೀ ಎಚ್ಚರವಿದ್ದು ದಾಳಿಗಳನ್ನು ಗಮನಿಸಿದ ಪ್ರಧಾನಿ ಮೋದಿ
Operation Sindoor: ನಿನ್ನೆ ರಾತ್ರಿಯವರೆಗೂ ಯುದ್ಧದ ಯಾವುದೇ ಸುಳಿವು ಕೊಡದೆ ಇತರ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದ ಪ್ರಧಾನಿ ಮೋದಿ, ರಾತ್ರಿ ಹತ್ತರ ಬಳಿಕ ಸೇನಾ ಮುಖ್ಯಸ್ಥರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದರು ಎಂದು ಗೊತ್ತಾಗಿದೆ.


ನವದೆಹಲಿ: ಆಪರೇಶನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಭಾರತದ ವಾಯುಸೇನೆ ಪಾಕಿಸ್ತಾನದ ಗಡಿಯೊಳಗೆ 9 ಕಡೆ ನಡೆಸಿದ ನಿಖರ ಕ್ಷಿಪಣಿ ಹಾಗೂ ವಾಯುದಾಳಿಗಳನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ (Prime minister Narendra Modi) ಅವರು ರಾತ್ರಿಯಿಡೀ ಎಚ್ಚರವಿದ್ದು ಗಮನಿಸಿದ್ದಲ್ಲದೆ, ದಾಳಿಗಳ ಕ್ಷಣಕ್ಷಣದ ಮಾಹಿತಿ ಪಡೆದರು. ನಿನ್ನೆ ರಾತ್ರಿಯವರೆಗೂ ಯುದ್ಧದ ಯಾವುದೇ ಸುಳಿವು ಕೊಡದೆ ಇತರ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದ ಪ್ರಧಾನಿ ಮೋದಿ, ರಾತ್ರಿ ಹತ್ತರ ಬಳಿಕ ಸೇನಾ ಮುಖ್ಯಸ್ಥರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದರು ಎಂದು ಗೊತ್ತಾಗಿದೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಬುಧವಾರ ಬೆಳಗಿನ ಜಾವ ಭಾರತೀಯ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ನಿಷೇಧಿತ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಗುಂಪುಗಳ ಪ್ರಧಾನ ಕಚೇರಿಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರಿಯಾಗಿಸಲಾದ ಒಂಬತ್ತು ತಾಣಗಳಲ್ಲಿ ಬಹಾವಲ್ಪುರದಲ್ಲಿರುವ ಜೆಇಎಂ ಪ್ರಧಾನ ಕಚೇರಿ ಮತ್ತು ಪಾಕಿಸ್ತಾನ ಪಂಜಾಬ್‌ನಲ್ಲಿರುವ ಮುರಿಡ್ಕೆಯಲ್ಲಿರುವ ಎಲ್‌ಇಟಿ ಸೇರಿವೆ ಎಂದು ಅವರು ಹೇಳಿದರು. ಪಾಕಿಸ್ತಾನದ ಸಶಸ್ತ್ರ ಪಡೆ ವಕ್ತಾರರು ಬಿಬಿಸಿಗೆ ನೀಡಿದ ಮಾಹಿತಿಯಲ್ಲಿ, ಬಹಾವಲ್ಪುರ್ ಮತ್ತು ಮುರಿಡ್ಕೆಯನ್ನು ಐಎಎಫ್ ಗುರಿಯಾಗಿಸಿಕೊಂಡಿದೆ ಎಂದು ದೃಢಪಡಿಸಿದರು.
ಭಾರತ ನಡೆಸಿದ ದಾಳಿಯ ನಂತರ, ಪಾಕಿಸ್ತಾನದ ಪ್ರಮುಖ ವಿಮಾನ ನಿಲ್ದಾಣಗಳನ್ನು 48 ಗಂಟೆಗಳ ಕಾಲ ಮುಚ್ಚಲಾಗಿದೆ. ಭಾರತದಲ್ಲೂ ಕಾಶ್ಮೀರದಲ್ಲಿ ಹಲವಾರು ಖಾಸಗಿ ವಾಯುಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗಳನ್ನು ವಿರಳಗೊಳಿಸುವ ಸೂಚನೆ ನೀಡಿವೆ.
ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರು, ಐದು ಸ್ಥಳಗಳಲ್ಲಿ ಭಾರತ ದಾಳಿಗಳನ್ನು ನಡೆಸಿದೆ. ಪಾಕಿಸ್ತಾನ ಬಲವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ. ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸೇನೆಯು ಪೂಂಚ್-ರಾಜೌರಿ ವಲಯದ ಭಿಂಬರ್ ಗಲಿ ಪ್ರದೇಶದಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಫಿರಂಗಿ ಗುಂಡಿನ ದಾಳಿ ನಡೆಸಿತು. 10 ದಿನಗಳಿಂದ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಗಳನ್ನು ಮುಂದುವರೆಸಿತು.
ಇದನ್ನೂ ಓದಿ: Operation Sindoor: ಉಗ್ರರ ನೆಲೆಗೆ ನುಗ್ಗಿ ಹೊಡೆದ ಭಾರತ; ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹೇಗಿತ್ತು?