ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಉಗ್ರರ ನೆಲೆಗೆ ನುಗ್ಗಿ ಹೊಡೆದ ಭಾರತ; ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ಹೇಗಿತ್ತು?

ಪಹಲ್ಗಾಮ್ ಭಯೋತ್ಪಾದಕ ದಾಳಿಯ 2 ವಾರಗಳ ನಂತರ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ (ಮೇ 7) ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ. ʼಆಪರೇಷನ್ ಸಿಂಧೂರ್ʼ ಅಡಿಯಲ್ಲಿ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆಯು ಮಧ್ಯರಾತ್ರಿ 1.44ಕ್ಕೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ಹೇಗಿತ್ತು?

Ramesh B Ramesh B May 7, 2025 4:57 AM

ಹೊಸದಿಲ್ಲಿ: ಜಮ್ಮು ಕಾಶ್ಮೀರದ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯ 2 ವಾರಗಳ ನಂತರ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ (ಮೇ 7) ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ (Operation Sindoor). ಆಪರೇಷನ್‌ ಸಿಂಧೂರ್‌ ಹೆಸರಿನ ಈ ದಾಳಿಯಲ್ಲಿ ಸುಮಾರು 12 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಈ ಬಗ್ಗೆ ಸೇನೆ ಮಾಹಿತಿ ಹಂಚಿಕೊಂಡಿದೆ.

ʼಆಪರೇಷನ್ ಸಿಂಧೂರ್ʼ ಅಡಿಯಲ್ಲಿ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆಯು ಮಧ್ಯರಾತ್ರಿ 1.44ಕ್ಕೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಈ ಕಾರ್ಯಾಚರಣೆಯಡಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಸೇನೆಯು ದಾಳಿ ನಡೆಸಿದೆ. ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ನಡೆಸಿದ ತಾಣಗಳನ್ನು ಧ್ವಂಸಗೊಳಿಸಲಾಗಿದೆ ಎಂದು ವಿವರಿಸಿದೆ.



ಪಾಕಿಸ್ತಾನದ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ 26 ಮಂದಿ ಮೃತಪಟ್ಟ ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತಿಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದೆ. 'ಆಪರೇಷನ್ ಸಿಂಧೂರ್' ಕುರಿತು ವಿವರವಾದ ಮಾಹಿತಿ ಬಳಿಕ ನೀಡಲಾಗುವುದು ಎಂದೂ ಹೇಳಿದೆ.

ʼʼಬುಧವಾರ ಬೆಳಗಿನ ಜಾವ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮುರಿಡ್ಕೆ ಮತ್ತು ಬಹಾವಲ್ಪುರ್ ಸೇರಿದಂತೆ 9 ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ. ಇವು ಕ್ರಮವಾಗಿ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪುಗಳ ಭದ್ರಕೋಟೆಗಳುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Operation Sindoor: 9 ಕಡೆ ದಾಳಿ, ಉಗ್ರ ನೆಲೆಗಳೇ ಟಾರ್ಗೆಟ್: ಭಾರತ ಸೈನ್ಯ ಹೇಳಿದ್ದಿಷ್ಟು; ವಿಡಿಯೋ ಇಲ್ಲಿದೆ



ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ಪರಿಣಾಮಕಾರಿ ನಾಗರಿಕ ರಕ್ಷಣೆಗಾಗಿ ದೇಶಾದ್ಯಂತ 244 ಜಿಲ್ಲೆಗಳಲ್ಲಿ ಯೋಜಿಸಲಾದ ಭದ್ರತಾ ಅಣಕು ಕವಾಯತು ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಭಾರತ ಈ ದಾಳಿಯನ್ನು ನಡೆಸಿದೆ.

ʼʼಭಾರತದ ವಿರುದ್ಧ ಬಯೋತ್ಪಾದನಾ ದಾಳಿಯನ್ನು ನಡೆಸಿ, ಕಾರ್ಯರೂಪಕ್ಕೆ ತಂದ ಉಗ್ರರ ಶಿಬಿರಗಳನ್ನು ನಾಶ ಮಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯು ನಿರ್ದಿಷ್ಟ ಗುರಿ ಕೇಂದ್ರೀಕೃತವಾಗಿತ್ತು. ದಾಳಿಯ ಗುರಿಗಳನ್ನು ಆಯ್ಕೆ ಮಾಡುವಾಗ ಮತ್ತು ಕಾರ್ಯಾಚರಣೆನ್ನು ಜಾರಿಗೊಳಿಸುವಾಗ ಭಾರತ ಸಂಯಮವನ್ನು ಪಾಲಿಸಿದೆʼʼ ಎಂದು ಸೇನೆ ತಿಳಿಸಿದೆ.



ವಿಲ ವಿಲ ಒದ್ದಾಡಿದ ಪಾಕ್‌

ಭಾರತೀಯ ಸೇನೆಯ ಈ ದಾಳಿಯಿಂದ ಪಾಕ್‌ ಅಕ್ಷರಶಃ ತತ್ತರಿಸಿ ಹೋಗಿದೆ. ಈ ದಾಳಿಯನ್ನು ಖಂಡಿಸಿರುವ ಪಾಕಿಸ್ತಾನ, ʼʼಇದು ವಿಶ್ವಸಂಸ್ಥೆಯ ಚಾರ್ಟರ್, ಅಂತಾರಾಷ್ಟ್ರೀಯ ಕಾನೂನು ಮತ್ತು ಅಂತಾರಾಜ್ಯ ಸಂಬಂಧಗಳ ಸ್ಥಾಪಿತ ಮಾನದಂಡಗಳ ಉಲ್ಲಂಘನೆʼʼ ಎಂದು ಹೇಳಿದೆ. ಜತೆಗೆ ಭಾರತಕ್ಕೆ ನಾವು ಪ್ರತ್ಯುತ್ತರ ನೀಡುತ್ತೇವೆ ಎಂದು ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್ ತಿಳಿಸಿದ್ದಾರೆ.

ʼʼಪಾಕಿಸ್ತಾನದ ಸರ್ಕಾರ, ಸಶಸ್ತ್ರ ಪಡೆಗಳು ಮತ್ತು ಜನರು ಭಾರತದ ಆಕ್ರಮಣವನ್ನು ಎದುರಿಸಲು ಒಗ್ಗಟ್ಟಿನಿಂದ ನಿಲ್ಲುತ್ತಾರೆ. ಪಾಕಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಅವರು ಯಾವಾಗಲೂ ದೃಢನಿಶ್ಚಯದಿಂದ ಕಾರ್ಯನಿರ್ವಹಿಸುತ್ತಾರʼ' ಎಂದು ಪಾಕ್‌ ಹೇಳಿದೆ.