CM Siddaramaiah: ಧರ್ಮಸ್ಥಳಕ್ಕೆ ಯಾತ್ರೆಯಿಂದ ಬಿಜೆಪಿಗೆ ರಾಜಕೀಯ ಲಾಭ ಸಿಗುವುದಿಲ್ಲ- ಸಿಎಂ ಸಿದ್ದರಾಮಯ್ಯ ಟಾಂಗ್
CM Siddaramaiah: ಬಿಜೆಪಿ ರಾಜಕೀಯವಾಗಿ ಧರ್ಮಸ್ಥಳ ಯಾತ್ರೆ ಕೈಗೊಂಡಿದೆ. ಅವರಿಗೆ ರಾಜಕೀಯ ಲಾಭ ಸಿಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಅದು ಸಿಗುವುದಿಲ್ಲ. ಏಕೆಂದರೆ ಧರ್ಮಸ್ಥಳದ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಎಸ್ಐಟಿ ರಚಿಸಿದಾಗ ವಿರೋಧ ಮಾಡದೆ ಇದ್ದವರು, ನಂತರದಲ್ಲಿ ಏನೂ ಸಿಗುವುದಿಲ್ಲ ಎಂದು ತಿಳಿದು ವಿರೋಧಿಸುತ್ತಿದ್ದಾರೆ. ಇದು ಢೋಂಗಿತನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

-

ಮೈಸೂರು: ಊರಿನ ಋಣ ಯಾವಾಗಲೂ ನನ್ನ ಮೇಲೆ ಇದ್ದೇ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ವರುಣಾ ವಿಧಾನಸಭಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾಧ್ಯಮದವರ ಜತೆ ಮಾತನಾಡಿದ ಅವರು, ನನ್ನ ಊರಿನ ಶಾಲೆಯಲ್ಲಿ ನಾನು ಐದರಿಂದ ಏಳರವರೆಗೆ ಓದಿದ ಶಾಲೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ದತ್ತು ಪಡೆದಿದೆ. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನೂತನ ಕಟ್ಟಡವನ್ನು ನಿರ್ಮಿಸ ಲಾಗಿದೆ. ಈ ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದರು
ಪ್ರಾರ್ಥಮಿಕ, ಪ್ರೌಢಶಾಲೆ, ಪಿಯು ಕಾಲೇಜು ಇಲ್ಲಿ ನಡೆಯುತ್ತಿದೆ. ಪದವಿ ಕಾಲೇಜಿಗೆ ವಿದ್ಯಾರ್ಥಿಗಳು ದೊರೆಯುವುದಿಲ್ಲ ಎಂದು ಪದವಿ ಕೋರ್ಸು ತೆರೆದಿಲ್ಲ ಎಂದರು. ಆದರೆ ಊರಿನಲ್ಲಿ ಇತರೆ ಸೌಲಭ್ಯಗಳಾದ ಬಿಸಿಎಂ ವಿದ್ಯಾರ್ಥಿ ನಿಲಯ, ಪಶು ಚಿಕಿತ್ಸಾ ಕೇಂದ್ರ, ಗ್ರಂಥಾಲಯ, ಸಮುದಾಯ ಆರೋಗ್ಯ ಕೇಂದ್ರಗಳು ಇವೆ ಎಂದರು. ಸರ್ಕಾರದ ಅಭಿವೃದ್ಧಿಯನ್ನು ಕಾಣದಿರುವ ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿಯವರು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ರಾಜಕೀಯವಾಗಿ ಯಾತ್ರೆ ಕೈಗೊಂಡಿದೆ. ಅವರಿಗೆ ರಾಜಕೀಯ ಲಾಭ ಸಿಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಅದು ಸಿಗುವುದಿಲ್ಲ. ಏಕೆಂದರೆ ಧರ್ಮಸ್ಥಳದ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಎಸ್ಐಟಿ ರಚಿಸಿದಾಗ ವಿರೋಧ ಮಾಡದೆ ಇದ್ದವರು, ನಂತರದಲ್ಲಿ ಏನೂ ಸಿಗುವುದಿಲ್ಲ ಎಂದು ತಿಳಿದು ವಿರೋಧಿಸುತ್ತಿದ್ದಾರೆ. ಇದು ಢೋಂಗಿತನ ಎಂದರು.
ಮೈಸೂರಿಗೂ ಚಾಮುಂಡಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರು ಹಿಂದುತ್ವ ಗಟ್ಟಿಯಾಗುತ್ತದೆ, ಹಿಂದೂಗಳೆಲ್ಲ ಒಟ್ಟಾಗುತ್ತಾರೆ ಎಂದು ತಿಳಿದಿದ್ದಾರೆ. ನಾನೂ ಕೂಡ ಹಿಂದೂವೇ. ನಮ್ಮೂರಿನಲ್ಲಿ ನಾವು ರಾಮಮಂದಿರ ಕಟ್ಟಿಲ್ಲವೇ? ಎಂದು ಪ್ರಶ್ನಿಸಿದರು. ಹಿಂದುಗಳೆಂದರೆ ರಾಜಕೀಯ, ಅಪಪ್ರಚಾರ ಮಾಡುವುದಲ್ಲ, ಸುಳ್ಳು ಹೇಳುವುದಲ್ಲ. ಯಾರೇ ಆದರೂ ಮನಷ್ಯತ್ವವಿರಬೇಕು ಎಂದರು. ಬಿಜೆಪಿ ದಸರಾ ಹಬ್ಬದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಸುಳ್ಳು ಹೇಳುವುದು ಬಿಟ್ಟು ಬೇರೇನಾದರೂ ಅವರಿಗೆ ಬರುತ್ತದೆಯೇ ಎಂದರು.
ಬಾನು ಮುಷ್ತಾಕ್ ಅವರಿಗೆ ಉದ್ಘಾಟನೆಗೆ ಆಹ್ವಾನ
ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ದೊರಕಿದ್ದು, ಎಷ್ಟು ಜನಕ್ಕೆ ಈ ಪ್ರಶಸ್ತಿ ಲಭಿಸಿದೆ ಎಂದ ಮುಖ್ಯಮಂತ್ರಿಗಳು, ಅವರನ್ನು ಗೌರವಿಸಲು ದಸರಾ ಉದ್ಘಾಟನೆಗೆ ಅವಕಾಶ ನೀಡಲಾಗಿದೆ ಎಂದರು.
ದಸರಾ ಮೇಲೆ ರಾಜಕಾರಣ ಯಾವುದೇ ಪರಿಣಾಮ ಬೀರುವುದಿಲ್ಲ
ದಸರಾ ಹಬ್ಬದ ಮೇಲೆ ಈ ರಾಜಕಾರಣ ಯಾವುದೇ ಪರಿಣಾಮ ಬೀರುವುದಿಲ್ಲ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯೇ ಇರಬಹುದು. ದಸರಾ ಹಬ್ಬ ನಾಡ ಹಬ್ಬವಲ್ಲವೇ? ನಾಡ ಹಬ್ಬ ಎಂದರೆ ಎಲ್ಲರೂ ಸೇರಿ ಮಾಡುವುದು. ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧರು ಸೇರಿ ಆಚರಿಸುವ ಹಬ್ಬ ಎಂದರು.
ಈ ಸುದ್ದಿಯನ್ನೂ ಓದಿ | CM Siddaramaiah: ಧರ್ಮಾಂಧರಿಂದ ಮಾತ್ರ ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧ: ಸಿಎಂ ಸಿದ್ದರಾಮಯ್ಯ
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಷಯ ಇರುವುದು ಚಾಮುಂಡಿ ಬೆಟ್ಟದ್ದಲ್ಲ, ದಸರಾ ಹಬ್ಬದ್ದು ಎಂದು ತಿಳಿಸಿದರು.