DK Shivakumar: ಆರ್. ಅಶೋಕ್‌ಗೆ ಬುದ್ದಿ ಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್ ಕಿಡಿ
DK Shivakumar: ಧರ್ಮಸ್ಥಳ ಆಸ್ತಿ ಒಡೆಯಲು ಸರ್ಕಾರ ಮುಂದಾಗಿದೆ ಎನ್ನುವ ಆರ್. ಅಶೋಕ್ ಆರೋಪದ ಕುರಿತು ಮಾಗಡಿಯಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ʼವಿಪಕ್ಷ ನಾಯಕ ಆರ್. ಅಶೋಕ್‌ಗೆ ಬುದ್ದಿ ಭ್ರಮಣೆಯಾಗಿದೆ. ಧರ್ಮಸ್ಥಳ ಆಸ್ತಿ ಒಡೆಯುವುದು ಅವರ ಪಕ್ಷದ ಆಂತರಿಕ ರಾಜಕಾರಣ. ಇದು ಅವರ ಪಕ್ಷದ ಆಂತರಿಕ ವಿಚಾರ ಎಂದು ಆರೋಪಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್. -

ಮಾಗಡಿ: ಮಾಗಡಿಗೆ ಶ್ರೀರಂಗ ಕುಡಿಯುವ ನೀರಿನ ಯೋಜನೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಈಗ ಸತ್ತೇಗಾಲದಿಂದ ಕ್ಷೇತ್ರದ 44 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಯೋಜನೆ, 159 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ, ಮಂಚನಬೆಲೆ ಅಣೆಕಟ್ಟು ಕೆಳಭಾಗದ ಅಭಿವೃದ್ದಿಗೆ ರೂ.13 ಕೋಟಿ, ರೂ.35 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ನೀರಾವರಿ ಇಲಾಖೆಯಿಂದ ಕ್ಷೇತ್ರದ ಅಭಿವೃದ್ದಿಗೆ ರೂ.100 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಗಡಿ ಯೋಜನಾ ಪ್ರಾಧಿಕಾರದಿಂದ ಗೌರಮ್ಮ ಕೆರೆ ಅಭಿವೃದ್ಧಿಗೆ ರೂ.20 ಕೋಟಿ ನೀಡಲಾಗಿದೆ. ಇ ಸ್ವತ್ತನ್ನು 1200 ಜನರಿಗೆ ವಿತರಣೆ ಮಾಡಲಾಗಿದ್ದು, ಮಿಕ್ಕವರಿಗೂ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು. ಇಂತಹ ನೂರಾರು ಕೆಲಸಗಳನ್ನು ನಿಮಗಾಗಿ ನೀಡಿದ್ದೇವೆ. ಸುಮ್ಮನಹಳ್ಳಿಯಿಂದ ತಾವರೆಕೆರೆವರೆಗೆ ಮೆಟ್ರೋ ಮಾರ್ಗ ವಿಸ್ತರಣೆಯಾಗಲಿದೆ. ಇದರಿಂದ ನಿಮ್ಮ ಕ್ಷೇತ್ರಕ್ಕೆ ಹೆಚ್ಚು ಲಾಭವಾಗಲಿದೆ ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರದಿಂದ ರೂ.40 ಕೋಟಿ ವೆಚ್ಚದ ಕಾಮಗಾರಿಗೆ ಆರೋಗ್ಯ ಸಚಿವರು ಮತ್ತು ನೂತನ ಬಸ್ ನಿಲ್ದಾಣ ಹಾಗೂ ಡಿಪೋ ಬಗ್ಗೆ ಸಾರಿಗೆ ಸಚಿವರು ವಾಗ್ದಾನ ನೀಡಿದ್ದಾರೆ. ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎನ್ನುವುದಕ್ಕೆ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಕೆಲಸಗಳೇ ಸಾಕ್ಷಿ ಎಂದರು.
ಕನಕಪುರದಂತೆ ಮಾಗಡಿಯೂ ನಮ್ಮ ಕ್ಷೇತ್ರ, ನಿಜವಾದ ಬಂಡೆ ಬಾಲಕೃಷ್ಣ
ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಆದರೆ ಕೆಂಪು ಬಂಡೆ ನಿಮ್ಮ ಬಾಲಕೃಷ್ಣ. ಇವರು ಗಟ್ಟಿಯಾಗಿ ಬಂಡೆಯಂತೆ ಕುಳಿತುಕೊಂಡು ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಎಲ್ಲೇ ಹೋದರು ಕ್ಷೇತ್ರದ ಬಗ್ಗೆ ಅರ್ಜಿ ಹಿಡಿದುಕೊಂಡು ಬರುತ್ತಾರೆ. ಕ್ಷೇತ್ರದ ಜನರ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಮಾಗಡಿ ಕ್ಷೇತ್ರ ಬಾಲಕೃಷ್ಣ ಅವರದ್ದಲ್ಲ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಅವರ ಸ್ವಂತ ಕ್ಷೇತ್ರವಿದ್ದಂತೆ. ಕನಕಪುರದಲ್ಲಿ ಯಾವ ರೀತಿ ಕೆಲಸ ಮಾಡುತ್ತಾ ಇದ್ದೇವೋ ಅದೇ ರೀತಿ ಇಲ್ಲಿಯೂ ಕೆಲಸ ಮಾಡುತ್ತೇವೆ ಎಂದರು.
ಜನರ ಏಳಿಗೆಗೆ ಜಿಲ್ಲೆಯ ಹೆಸರು ಬದಲಾವಣೆ
ಜನ ಸಾಮಾನ್ಯರ ಬದುಕು ಏಳಿಗೆಯಾಗಬೇಕು, ಎಲ್ಲರ ಬದುಕಿನಲ್ಲಿ ಹೊಸ ರೂಪ ಕಾಣಬೇಕು, ಎಲ್ಲರ ಆಸ್ತಿ ಮೌಲ್ಯ ಹೆಚ್ಚಳವಾಗಬೇಕು ಎನ್ನುವ ಕಾರಣಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ್ದೇವೆ. ಜನತಾದಳದ ನಾಯಕರು ದೆಹಲಿಗೆ ಹೋಗಿ ಜಿಲ್ಲೆಯ ಹೆಸರು ಬದಲಾವಣೆ ಸಾಧ್ಯವಿಲ್ಲ ಎಂದು ಬರೆಸಿದ್ದರು. ಕುಮಾರಣ್ಣ ಇದರ ವಿರುದ್ಧ ಬಂದ್ ಮಾಡಿಸಿದರು. ಆದರೂ ಸಹ ಹೆಸರು ಬದಲಾವಣೆಗಾಗಿ ನಾನು ದೊಡ್ಡ ಹೋರಾಟ ಮಾಡಿದೆ ಎಂದು ತಿಳಿಸಿದರು.
ಅವರ ಬದುಕನ್ನು ಏಳಿಗೆ ಮಾಡಿಕೊಳ್ಳಬೇಕು ಎಂದು ಇದೇ ಕುಮಾರಣ್ಣ ಹಾಸನದಿಂದ ಬೆಂಗಳೂರಿಗೆ ಬಂದು ಆಸ್ತಿ ತೆಗೆದುಕೊಂಡಿಲ್ಲವೇ? ರಾಮನಗರದಲ್ಲಿ ನೀವು, ನಿಮ್ಮ ತಂದೆಯವರು ರಾಜಕಾರಣ ಮಾಡಿದರೂ ನಾವು ಬೇಸರಿಸಿಕೊಳ್ಳಲಿಲ್ಲ. ನೀವು ನಿಮ್ಮ ಊರಿನಲ್ಲಿ ಆಸ್ತಿ ತೆಗೆದುಕೊಳ್ಳದೇ ಇಲ್ಲೇಕೆ ಆಸ್ತಿ ತೆಗೆದುಕೊಂಡಿರಿ? ಎಂದು ಪ್ರಶ್ನಿಸಿದರು.
ಕೆಲವರು ರಾಮನಗರ ಜಿಲ್ಲೆ ಎಂದು ಹೇಳುತ್ತಿದ್ದರು. ಇದು ಬೆಂಗಳೂರು ದಕ್ಷಿಣ ಜಿಲ್ಲೆ. ಶಾಸಕರಾದ ಹುಲಿಕಟ್ಟೆ ಬಾಲಕೃಷ್ಣ, ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್, ಎಚ್.ಡಿ ಕುಮಾರಸ್ವಾಮಿ ಹೀಗೆ ನಮ್ಮ ಗುರುತನ್ನು ಅಳಿಸಲು ಸಾಧ್ಯವಿಲ್ಲ. ಅದೇ ರೀತಿ ನಾವು ಬೆಂಗಳೂರು ಜಿಲ್ಲೆಯವರಾದ ನಮ್ಮ ಅಸ್ಮಿತೆಯನ್ನು ಬಿಟ್ಟು ಕೊಡಲು ಸಾಧ್ಯವೇ? ಎಂದರು ಪ್ರಶ್ನಿಸಿದರು.
ಸರ್ವರಿಗೂ ಸಮಬಾಳು, ಸಮಪಾಲು
‘ಎಸ್‌ಇಎಸ್‌ಪಿ, ಟಿಎಸ್‌ಪಿ ಅಡಿ 40 ಸಾವಿರ ಕೋಟಿ ಮೀಸಲಿಡಲಾಗಿದೆ. ಕಳೆದ 30 ವರ್ಷಗಳಿಂದ ನಡೆಯುತ್ತಿದ್ದ ಒಳಮೀಸಲಾತಿ ವಿಚಾರವನ್ನು ನಾವು ಬಗೆಹರಿಸಿದ್ದೇವೆ. ಇದನ್ನು ಇಡೀ ದೇಶ ಗಮನಿಸುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವವನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಈ ರೀತಿಯ ಒಂದೇ ಒಂದು ಕೆಲಸವನ್ನು ದಳ- ಬಿಜೆಪಿಯವರು ಮಾಡಿದ್ದಾರೆಯೇ’ ಎಂದರು.
ಕೆಂಪೇಗೌಡರು ಕಟ್ಟಿದ ಕೋಟೆ ಹಾಗೂ ಕೆಂಪಾಪುರದಲ್ಲಿನ ಅವರ ಸಮಾಧಿ ಸ್ಥಳವನ್ನು ಅಭಿವೃದ್ದಿ ಮಾಡುವ ಕೆಲಸವನ್ನು ನಮ್ಮ ಸರ್ಕಾರ ರೂ.100 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಸುಮ್ಮನಹಳ್ಳಿಯಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಭವನ ನಿರ್ಮಾಣ ಮಾಡಲಾಗುತ್ತಿದೆ. ಶಿವಕುಮಾರ ಸ್ವಾಮೀಜಿಯವರು, ಬಾಲಗಂಗಾಧರನಾಥ ಸ್ವಾಮೀಜಿ ಅವರು ಜನಿಸಿದ ಪುಣ್ಯಕ್ಷೇತ್ರಗಳು ಈ ಪವಿತ್ರವಾದ ಮಾಗಡಿ ಕ್ಷೇತ್ರದಲ್ಲಿವೆ. ಒಂದು ಕಾಲದಲ್ಲಿ ಈ ಕ್ಷೇತ್ರದ ತಿಪ್ಪಗೊಂಡನಹಳ್ಳಿ ಕೆರೆಯಿಂದ ಇಡೀ ಬೆಂಗಳೂರಿಗೆ ಕುಡಿಯುವ ನೀರು ನೀಡಲಾಗುತ್ತಿತ್ತು ಎಂದರು.
ಈ ಸುದ್ದಿಯನ್ನೂ ಓದಿ | MB Patil: ಒಸಾಕಾ, ನಗೋಯ ನಗರಗಳಿಗೆ ಬೆಂಗಳೂರಿನಿಂದ ನೇರ ವಿಮಾನ ಸೇವೆ ಕುರಿತು ಚರ್ಚೆ: ಎಂ.ಬಿ. ಪಾಟೀಲ್
ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇವರುಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಇವರುಗಳು ಅಧಿಕಾರದಲ್ಲಿದ್ದಾಗ ಜನರ ಹೊಟ್ಟೆ ತುಂಬಿಸುವ ಜನಪರವಾದ ಒಂದೇ ಒಂದು ಕೆಲಸ ಮಾಡಿದ್ದರೆ ತಿಳಿಸಲಿ. ಉಳುವವನೆ ಭೂಮಿ ಒಡೆಯ, ಪಿಂಚಣಿ, ಆಶಾ, ಪಡಿತರ ವ್ಯವಸ್ಥೆ, ಅಂಗನವಾಡಿ ಕಾರ್ಯಕ್ರಮ ಸೇರಿದಂತೆ ನೂರಾರು ಕಾರ್ಯಕ್ರಮ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನಾವು ಜಾತಿ ಮಾಡಿದವರಲ್ಲ ನೀತಿ ಮಾಡಿದವರು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಧರ್ಮಸ್ಥಳ ಆಸ್ತಿ ಒಡೆಯಲು ಸರ್ಕಾರ ಮುಂದಾಗಿದೆ ಎನ್ನುವ ಆರ್.ಅಶೋಕ್ ಆರೋಪದ ಬಗ್ಗೆ ಕೇಳಿದಾಗ, “ವಿಪಕ್ಷ ನಾಯಕ ಆರ್.ಅಶೋಕ್ ಗೆ ಬುದ್ದಿ ಭ್ರಮಣೆಯಾಗಿದೆ. ಧರ್ಮಸ್ಥಳ ಆಸ್ತಿ ಒಡೆಯುವುದು ಅವರ ಪಕ್ಷದ ಆಂತರಿಕ ರಾಜಕಾರಣ. ಇದು ಅವರ ಪಕ್ಷದ ಆಂತರಿಕ ವಿಚಾರ”ಎಂದು ಉತ್ತರಿಸಿದರು.