ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಐಟಿ ಕಂಪನಿಗಳಿಗೆ ಮುಕ್ತ ಸ್ವಾಗತ ಎಂದ ಡಿಕೆಶಿ

DK Shivakumar: ಮಹಾರಾಷ್ಟ್ರವೂ ಸಹ ಐಟಿ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿರುವ ರಾಜ್ಯ. ಅಲ್ಲಿನ ಐಟಿ ಹಬ್ ಪುಣೆಯ ಹಿಂಜವಾಡಿಯು ಅತ್ಯಂತ ಪ್ರಮುಖ ಐಟಿ ಪ್ರದೇಶ. ಆದರೆ ನಮ್ಮ ರಾಜ್ಯಕ್ಕೆ ಬರುವ ಕಂಪನಿಗಳನ್ನು ನಾವು ಮುಕ್ತವಾಗಿ ಸ್ವಾಗತಿಸಿ ಬೆಂಬಲಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಐಟಿ ಕಂಪನಿಗಳನ್ನು ಸ್ವಾಗತಿಸಿದ ಡಿಕೆಶಿ

Profile Siddalinga Swamy Jul 31, 2025 6:13 PM

ಬೆಂಗಳೂರು: ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಲಸೆ ಬರುವ ಐಟಿ ಕಂಪನಿಗಳನ್ನು ನಾವು ಸ್ವಾಗತಿಸುತ್ತೇವೆ. ನಾವು ಈ ಕಂಪನಿಗಳಿಗೆ ತಂತ್ರಜ್ಞಾನ, ವಿದ್ಯುತ್ ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಲು ತಯಾರಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ನಗರದ ಮಾನ್ಯತಾ ಟೆಕ್ ಪಾರ್ಕಿನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆದ ಕ್ವಾಂಟಮ್ ಶೃಂಗಸಭೆಯ ನಂತರ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಉತ್ತರಿಸಿದರು. ನಾಲ್ಕು ದಿನಗಳ ಹಿಂದೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಪುಣೆಯಿಂದ ಬೆಂಗಳೂರಿಗೆ ಐಟಿ ಕಂಪೆನಿಗಳು ಹೋಗುತ್ತಿವೆ ಎಂದು ಹೇಳಿಕೆ ನೀಡಿದ್ದರು. ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ನಾವು ದೇಶದ ಇತರೆ ರಾಜ್ಯಗಳ ಜತೆ ಸ್ಪರ್ಧಿಸುತ್ತಿಲ್ಲ ಬದಲಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇವೆ ಎಂದರು.

ಮಹಾರಾಷ್ಟ್ರವೂ ಸಹ ಐಟಿ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿರುವ ರಾಜ್ಯ. ಅಲ್ಲಿನ ಐಟಿ ಹಬ್ ಪುಣೆಯ ಹಿಂಜವಾಡಿಯು ಅತ್ಯಂತ ಪ್ರಮುಖ ಐಟಿ ಪ್ರದೇಶ. ಆದರೆ ನಮ್ಮ ರಾಜ್ಯಕ್ಕೆ ಬರುವ ಕಂಪನಿಗಳನ್ನು ನಾವು ಮುಕ್ತವಾಗಿ ಸ್ವಾಗತಿಸಿ ಬೆಂಬಲಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ಮತಗಳ್ಳತನ ಜನರ ಗಮನಕ್ಕೆ ತರಬೇಕು

ಬಿಜೆಪಿಯವರು ವಿಧಾನಸಭಾ ಚುನಾವಣೆ ವೇಳೆ ಚಿಲುಮೆ ಸಂಸ್ಥೆ ಬಳಸಿಕೊಂಡು ಅಕ್ರಮ ಎಸಗಿದರು ಎಂದು ಆರೋಪಿಸಿದ ಅವರು, ನಮ್ಮ ನಾಯಕರು ಇದರ ಬಗ್ಗೆ ಮಾತನಾಡುತ್ತಾರೆ. ಈ ವಿಚಾರದಲ್ಲಿ ತನಿಖೆ ನಡೆಸಿಯೇ ನಮ್ಮ ನಾಯಕರು ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ರಾಜಕೀಯ ಉದ್ದೇಶಕ್ಕೆ ರಾಜ್ಯಕ್ಕೆ ಬರುತ್ತಿಲ್ಲ. ಬದಲಾಗಿ ಜನರನ್ನು ಎಚ್ಚರಗೊಳಿಸಲು ಬರುತ್ತಿದ್ದಾರೆ. ನಮಗೆ ಪ್ರಜಾಪ್ರಭುತ್ವ ಉಳಿಯಬೇಕು. ಚುನಾವಣಾ ಆಯೋಗ ರಾಜಕೀಯ ಪಕ್ಷದ ಭಾಗವಾಗುವುದನ್ನು ತಪ್ಪಿಸಬೇಕು ಎಂದರು.

ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಬಗ್ಗೆ ಕೇಳಿದಾಗ, ಬಿಜೆಪಿ ಮತಗಳ್ಳತನ ನಡೆಸಿದೆ ಎಂಬುದನ್ನು ಜನರ ಗಮನಕ್ಕೆ ತರಬೇಕು ಎಂಬುದು ನಮ್ಮ ಉದ್ದೇಶ. ಬಿಜೆಪಿ ಮತಗಳ್ಳತನದ ಬಗ್ಗೆ ಪ್ರತಿಭಟನಾ ಸಭೆ ಅಥವಾ ರ‍್ಯಾಲಿ ಮಾಡಬೇಕೆ ಎನ್ನುವುದನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡು ನಮ್ಮ ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಯವರು ಚುನಾವಣಾ ಅಕ್ರಮ ಎಸಗಿರುವುದನ್ನು ಬೆಳಕಿಗೆ ತರಬೇಕು. ಈ ಬಗ್ಗೆ ಪಕ್ಷದಿಂದಲೂ ಸಂಶೋಧನೆ ನಡೆದಿದೆ. ಆದರೆ ಜನ ಸೇರುವುದರ ಕುರಿತು ನ್ಯಾಯಲಯದ ನಿರ್ದೇಶನ ಹಾಗೂ ಸರ್ಕಾರದ ಮಾರ್ಗಸೂಚಿಗಳು ಇರುವ ಕಾರಣಕ್ಕೆ ಪ್ರತಿಭಟನೆಯ ಸ್ವರೂಪವನ್ನು ಚರ್ಚೆ ಮಾಡಲಾಗುವುದು ಎಂದು ಡಿಕೆಶಿ ತಿಳಿಸಿದರು.

ಹನಿಟ್ರ್ಯಾಪ್ ತನಿಖೆ ನನಗೆ ಏನೂ ಗೊತ್ತಿಲ್ಲ

ರಾಜಣ್ಣ ಅವರ ಹನಿಟ್ಯ್ರಾಪ್ ವಿಚಾರದಲ್ಲಿ ಸಾಕ್ಷ್ಯಗಳಿಲ್ಲ ಎನ್ನುವ ಸಿಐಡಿ ವರದಿಯ ಬಗ್ಗೆ ಕೇಳಿದಾಗ, ನನಗೂ ಇದಕ್ಕೂ ಏನು ಸಂಬಂಧ? ಯಾರು ದೂರು ನೀಡಿದ್ದು ಗೊತ್ತಿಲ್ಲ. ತನಿಖೆ ನಡೆದಿದ್ದು ಗೊತ್ತಿಲ್ಲ. ಇದನ್ನು ನಿಮ್ಮ (ಮಾಧ್ಯಮಗಳ) ಬಾಯಲ್ಲೇ ಕೇಳುತ್ತಿದ್ದೇನೆ. ನನಗೆ ಏನೂ ಗೊತ್ತಿಲ್ಲ ಎಂದರು.

ಈ ಸುದ್ದಿಯನ್ನೂ ಓದಿ | Bengaluru News: ಅಖಿಲ ಭಾರತ ಕರಾಟೆ ಸ್ಪರ್ಧೆಯಲ್ಲಿ ಸುಡೋಕನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಗೆ ಚಾಂಪಿಯನ್‌ಶಿಪ್

ಕೆಎಂಎಫ್ ಅಧ್ಯಕ್ಷ ಗಾದಿಯ ಬಗ್ಗೆ ಕೇಳಿದಾಗ, ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅಧ್ಯಕ್ಷಗಾದಿ ವಿಚಾರ ಮಾಧ್ಯಮಗಳ ಸೃಷ್ಟಿ. ಇದರ ಬಗ್ಗೆ ಸಂಘದ ಪದಾಧಿಕಾರಿಗಳು ನೋಡಿಕೊಳ್ಳುತ್ತಾರೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.