ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

327 ಕೋಟಿ ರೂ. ವೆಚ್ಚದ ನವಲಗುಂದ ಬೈಪಾಸ್ ರಸ್ತೆಗೆ ಕೇಂದ್ರ ಅಸ್ತು

Pralhad Joshi: ಸವದತ್ತಿ ಯಲ್ಲಮ್ಮನಗುಡ್ಡ ಸೇರಿದಂತೆ ವಿವಿಧ ಸುಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ನವಲಗುಂದ ಬೈಪಾಸ್‌ ರಸ್ತೆ ₹327 ಕೋಟಿ ವೆಚ್ಚದ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

327 ಕೋಟಿ ರೂ. ವೆಚ್ಚದ ನವಲಗುಂದ ಬೈಪಾಸ್ ರಸ್ತೆಗೆ ಕೇಂದ್ರ ಅಸ್ತು

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy May 14, 2025 10:15 PM

ನವದೆಹಲಿ: ಸವದತ್ತಿ ಯಲ್ಲಮ್ಮನಗುಡ್ಡ ಸೇರಿದಂತೆ ವಿವಿಧ ಸುಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ನವಲಗುಂದ ಬೈಪಾಸ್‌ ರಸ್ತೆ ₹327 ಕೋಟಿ ವೆಚ್ಚದ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ನವಲಗುಂದ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆಯೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಇದೀಗ ಕಾಮಗಾರಿಗೆ ಅನುಮೋದನೆ ದೊರಕಿದೆ. ರಾಜ್ಯ ಸರ್ಕಾರ ಟೆಂಡರ್ ಕರೆದು ಕಾರ್ಯಾರಂಭ ಮಾಡುವ ಹಂತ ತಲುಪಿದೆ ಎಂದು ತಿಳಿಸಿದ್ದಾರೆ.

ಈ ಬೈಪಾಸ್‌ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಸಲ್ಲಿಸಿದ್ದ ಜೋಡಣೆ (alignment) ಮತ್ತು DPR (ವಿವರವಾದ ಯೋಜನಾ ವರದಿ) ಅನ್ನು ಅಲೈನ್‌ಮೆಂಟ್ ಅಪ್ರೂವಲ್ ಕಮಿಟಿ (Alignment Approval Committee (AAC) ಅನುಮೋದನೆ ನೀಡಿದೆ. ನವಲಗುಂದ ಪಟ್ಟಣಕ್ಕೆ 10.575 ಕಿ.ಮೀ. ವಿಸ್ತೀರ್ಣದ ಬೈಪಾಸ್‌ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.

ಬೆಣ್ಣೆಹಳ್ಳ ಮತ್ತು ಅದನ್ನು ಸೇರುವ ಸಣ್ಣ ನಾಲಾಗಳು ಮಳೆಗಾಲದಲ್ಲಿ ತುಂಬಿ ಹರಿದು ಪ್ರವಾಹ ಪರಿಸ್ಥಿತಿ ಎದುರಾಗುತ್ತಿತ್ತು. ಇದರಿಂದ ಅಪಾರ ಕೃಷಿ ಭೂಮಿಯಲ್ಲಿ ಬೆಳೆ ಹಾನಿ ಸಂಭವಿಸುತ್ತಿತ್ತು ಮತ್ತು ಅನೇಕ ಕಡೆ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದನ್ನೆಲ್ಲ ಗಮನಿಸಿ ಶಾಶ್ವತ ಪರಿಹಾರ ಎನ್ನುವಂತೆ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಸಿದ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದೆ. ಅಲೈನ್‌ಮೆಂಟ್ ಅಪ್ರೂವಲ್ ಕಮಿಟಿ ಅನುಮತಿ ನೀಡಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಹೆದ್ದಾರಿಯು ನವಲಗುಂದ ಪಟ್ಟಣದ ಮಧ್ಯ ಭಾಗದಿಂದ ಹಾದು ಹೋಗುವ ಕಾರಣ ಟ್ರಾಫಿಕ್ ಸಮಸ್ಯೆಗಳಿಂದಾಗಿ ಪಟ್ಟಣಿಗರು ರೋಸಿ ಹೋಗಿದ್ದರು. ಹೀಗಾಗಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಬಹು ವರ್ಷಗಳಿಂದಲೂ ಇದ್ದ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಂತೆ ಹೆದ್ದಾರಿ ಸಚಿವ ನಿತಿನ ಗಡ್ಕರಿ ಅವರು ಸ್ಪಂದಿಸಿದ್ದಾರೆ. ಈ ಮೂಲಕ ಜನರ ಆಶಯ ಸಾಕಾರಗೊಂಡಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕದ ಆರಾಧ್ಯ ದೈವ ಸವದತ್ತಿ ಯಲ್ಲಮ್ಮ ದೇವಸ್ಥಾನ ಸೇರಿದಂತೆ ವಿವಿಧ ಐತಿಹಾಸಿಕ, ಧಾರ್ಮಿಕ ನಗರಗಳಿಗೆ ಸಂಪರ್ಕ ಜೋಡಿಸುತ್ತದೆ ನವಲಗುಂದ ಪಟ್ಟಣ. ಹೀಗಾಗಿ ಈ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುತ್ತದೆ. ಬೈಪಾಸ್ ರಸ್ತೆ ನಿರ್ಮಾಣದಿಂದ ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳಿಗೂ ಅನುಕೂಲವಾಗಲಿದೆ ಎಂದಿದ್ದಾರೆ.

ಕಳೆದ 10 ವರ್ಷಗಳ ಅವಧಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಆ ಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಹೆದ್ದಾರಿಗಳ ಅಭಿವೃದ್ಧಿಗೆ ಸದಾ ಅಗತ್ಯ ನೆರವು ನೀಡುತ್ತಿದ್ದಾರೆಂದು ಈರ್ವರಿಗೂ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ.

ಶೀಘ್ರ ಕಾಮಗಾರಿಗೆ ಒತ್ತಾಯ

ನವಲಗುಂದ ಬೈಪಾಸ್‌ ನಿರ್ಮಾಣ ಸಂಬಂಧ ಈಗಾಗಲೇ ಡಿಪಿಆ‌ರ್ ಸಿದ್ಧಗೊಂಡಿದ್ದು, ರಾಜ್ಯ ಸರ್ಕಾರ ಶೀಘ್ರವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ತ್ವರಿತ ಚಾಲನೆ ನೀಡಬೇಕೆಂದು ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ-ಕುಷ್ಟಗಿ ನೂತನ ಎಕ್ಸ್‌ಪ್ರೆಸ್‌ ರೈಲ್ವೆಗೆ ಅನುಮೋದನೆ

ಹುಬ್ಬಳ್ಳಿ-ಕುಷ್ಟಗಿ ಮಧ್ಯೆ ನೂತನ ಎಕ್ಸ್‌ಪ್ರೆಸ್‌ ರೈಲ್ವೆ ಸಂಚಾರಕ್ಕೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಈ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಲ್ಲಿ ಮನವಿ ಮಾಡಿದ್ದೆ. ಇದೀಗ ಸ್ಪಂದಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka Rains: ರಾಜ್ಯದ ಒಳನಾಡಿನಲ್ಲಿ ಅಬ್ಬರಿಸಲಿದೆ ಭಾರಿ ಮಳೆ; ಆರೆಂಜ್‌ ಅಲರ್ಟ್‌ ಘೋಷಣೆ

ನಾಳೆ‌ (ಮೇ 15ರಂದು) ಬೆಳಗ್ಗೆ 10.30ಕ್ಕೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಕುಷ್ಟಗಿಯಿಂದ‌ ಹುಬ್ಬಳ್ಳಿಗೆ ಸಂಚರಿಸುವ ನೂತನ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ-ಕುಷ್ಟಗಿ ಎಕ್ಸ್‌ಪ್ರೆಸ್‌ ರೈಲು ಪ್ರತಿನಿತ್ಯ ಸಂಚರಿಸಲಿದೆ ಎಂದಿದ್ದಾರೆ.