Vishwavani Editorial: ಇದು ರಕ್ತಬೀಜಾಸುರರ ಸಂತತಿ
ಭಯೋತ್ಪಾದಕ ಕೃತ್ಯಗಳಿಗೆ ಸಂಚು ನಡೆಸಿರುವ ಪ್ರಕರಣಗಳ ಸಂಬಂಧ ತೀವ್ರ ತನಿಖೆಯನ್ನು ಕೈಗೊಂಡಿ ರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಕರ್ನಾಟಕದ ಸೇರಿದಂತೆ 5 ರಾಜ್ಯಗಳಲ್ಲಿ ಹಾಗೂ ಜಮ್ಮು-ಕಾಶ್ಮೀರ ಪ್ರದೇಶದ ಒಟ್ಟು 22 ಸ್ಥಳಗಳಲ್ಲಿ ಶಂಕಿತ ವ್ಯಕ್ತಿಗಳಿಗಾಗಿ ಶೋಧ ನಡೆಸಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

-

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಕೃಪಾಪೋಷಿತ ಉಗ್ರರು ನಡೆಸಿದ 26 ಮಂದಿಯ ಮಾರಣ ಹೋಮವು ಜನರ ಮನದಲ್ಲಿ ಮೂಡಿಸಿರುವ ಗಾಯದ ಗುರುತುಗಳು ಇನ್ನೂ ಮಾಸಿಲ್ಲ. ಇಂಥ ದೊಂದು ಧಾರ್ಷ್ಟ್ಯ ತೋರಿದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲೆಂದು ಭಾರತವು ನಡೆಸಿದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಗೆ ಈ ಮಗ್ಗುಲುಮುಳ್ಳು ದೇಶ ಪತರಗುಟ್ಟಿದ್ದು ಜಗಜ್ಜಾಹೀರು.
ಕೊನೆಗೆ ದಮ್ಮಯ್ಯ ಗುಡ್ಡೆಹಾಕಿ ‘ಕದನ ವಿರಾಮ’ದ ಘೋಷಣೆಯಾಗುವಂತೆ ಪಾಕ್ ನೋಡಿ ಕೊಂಡಿತು. ತರುವಾಯದಲ್ಲಿ, ಪಾಕಿಸ್ತಾನವು ಅಂತಾರಾಷ್ಟ್ರೀಯ ಸಮುದಾಯದೆದುರು ತಲೆ ತಗ್ಗಿಸ ಬೇಕಾಗಿ ಬಂತು ಎನ್ನಿ. ಇಷ್ಟೆಲ್ಲ ಬೆಳವಣಿಗೆಗಳು ಆದ ನಂತರವೂ ಭಾರತ ನೆಮ್ಮದಿಯಾಗಿ ಕೂರು ವಂಥ ಪರಿಸ್ಥಿತಿಯಿಲ್ಲ.
ಇದನ್ನೂ ಓದಿ:Vishwavani Editorial: ಕಾನೂನು ಎಲ್ಲರಿಗೂ ಒಂದೇ
ಏಕೆಂದರೆ, ಪಾಕ್-ಪ್ರೇರಿತ ಉಗ್ರರು ಅಂತಲೇ ಅಲ್ಲ, ‘ಉಗ್ರರು’ ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವದ ಯಾವುದೇ ನೆಲೆಯಲ್ಲಿ ಠಿಕಾಣಿ ಹೂಡಿರುವವರು ‘ರಕ್ತಬೀಜಾಸುರ’ನ ಸಂತತಿಗೆ ಸೇರಿದವರೇ ಆಗಿರುತ್ತಾರೆ; ಹೀಗಾಗಿ ಯಾವುದೋ ಒಂದು ಕಡೆ ಅವರ ನೆಲೆಯನ್ನು ಪುಡಿಗಟ್ಟಲಾಯಿತು ಎಂದು ಸುಮ್ಮನೆ ಕೂರುವಂತಿರುವುದಿಲ್ಲ.
ಭಯೋತ್ಪಾದಕ ಕೃತ್ಯಗಳಿಗೆ ಸಂಚು ನಡೆಸಿರುವ ಪ್ರಕರಣಗಳ ಸಂಬಂಧ ತೀವ್ರ ತನಿಖೆಯನ್ನು ಕೈಗೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಕರ್ನಾಟಕದ ಸೇರಿದಂತೆ 5 ರಾಜ್ಯ ಗಳಲ್ಲಿ ಹಾಗೂ ಜಮ್ಮು-ಕಾಶ್ಮೀರ ಪ್ರದೇಶದ ಒಟ್ಟು 22 ಸ್ಥಳಗಳಲ್ಲಿ ಶಂಕಿತ ವ್ಯಕ್ತಿಗಳಿಗಾಗಿ ಶೋಧ ನಡೆಸಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.
ಭಾರತದ ಅನ್ನ-ನೀರು-ಗಾಳಿಯನ್ನು ಸೇವಿಸಿಕೊಂಡು, ಇಲ್ಲೇ ಆಶ್ರಯವನ್ನು ಪಡೆದುಕೊಂಡು, ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ರಾಷ್ಟ್ರ ವಿರೋಧಿ ಕೃತ್ಯಕ್ಕೆ ಸಂಚುಹೂಡುವವರನ್ನು ಹೀಗೆ ಹುಡುಕಿ ಹುಡುಕಿ ಹೆಡೆಮುರಿ ಕಟ್ಟಬೇಕಿದೆ. ಭಾರತದ ಭದ್ರತೆ, ಸುರಕ್ಷತೆ ಮತ್ತು ಸಾರ್ವಭೌಮತೆಗಳ ರಕ್ಷಣೆಯ ನಿಟ್ಟಿನಲ್ಲಿ ಇದು ಈ ಕ್ಷಣದ ಅನಿವಾರ್ಯತೆಯೂ ಹೌದು.