ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ನಿರ್ವಾತವನ್ನು ತುಂಬುವವರಾರು?

ಚಿತ್ರರಂಗದ ವಿಷಯಕ್ಕೆ ಬರುವುದಾದರೆ, ‘ಅಣ್ಣಾವ್ರು’ ಎಂದೇ ಕರೆಸಿಕೊಳ್ಳುತ್ತಿದ್ದ ಜನಪ್ರಿಯ ನಟ ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರು ಅಭಿಮಾನಿಗಳನ್ನು ಅಗಲಿದ ನಂತರ ಇಂಥದೊಂದು ಖಾಲಿತನ ಬಹುತೇಕರ ಅನುಭವಕ್ಕೆ ಬಂದಿದೆ. ಕಾರಣ, ‘ಅಣ್ಣಾವ್ರು’ ಬರಿಯ ಚಿತ್ರನಟರಾಗಿರದೆ ನಾಡಿನ ಕಲೆ-ಸಂಸ್ಕೃತಿ-ಕನ್ನಡತನ-ಕನ್ನಡಿಗರ ಅಸ್ಮಿತೆ ಗಳಿಗೆ ಪರ್ಯಾಯ ಪದವೇ ಆಗಿದ್ದರು.

ನಿರ್ವಾತವನ್ನು ತುಂಬುವವರಾರು?

Ashok Nayak Ashok Nayak Jul 26, 2025 4:34 AM

ರಂಗಭೂಮಿ, ಚಲನಚಿತ್ರ, ಸಾಹಿತ್ಯ, ಯಕ್ಷಗಾನ, ಹಿನ್ನೆಲೆ ಗಾಯನ, ಉದ್ಯಮ ಹೀಗೆ ನಮ್ಮ ನಾಡಿನ ವಿವಿಧ ಕ್ಷೇತ್ರಗಳು ‘ಧ್ರುವತಾರೆಗಳು’ ಎನ್ನಬಹುದಾದ ಮಹಾನ್ ಸಾಧಕರನ್ನು ಕಂಡಿವೆ. ಆದರೆ ಇಂಥ ಮಹಾನ್ ಚೇತನಗಳು ಕಣ್ಮರೆಯಾದ ನಂತರ, ಅವರು ಪ್ರತಿನಿಧಿಸುತ್ತಿದ್ದ ಜಾಗವನ್ನು ತುಂಬುವವರೇ ಇಲ್ಲವಾಗಿ ‘ನಿರ್ವಾತ ಸ್ಥಿತಿ’ ರೂಪುಗೊಂಡಿದೆ ಎಂಬುದು ಒಪ್ಪುವಂಥ ಮಾತು.

ಚಿತ್ರರಂಗದ ವಿಷಯಕ್ಕೆ ಬರುವುದಾದರೆ, ‘ಅಣ್ಣಾವ್ರು’ ಎಂದೇ ಕರೆಸಿಕೊಳ್ಳುತ್ತಿದ್ದ ಜನಪ್ರಿಯ ನಟ ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರು ಅಭಿಮಾನಿಗಳನ್ನು ಅಗಲಿದ ನಂತರ ಇಂಥದೊಂದು ಖಾಲಿತನ ಬಹುತೇಕರ ಅನುಭವಕ್ಕೆ ಬಂದಿದೆ. ಕಾರಣ, ‘ಅಣ್ಣಾವ್ರು’ ಬರಿಯ ಚಿತ್ರನಟರಾಗಿರದೆ ನಾಡಿನ ಕಲೆ-ಸಂಸ್ಕೃತಿ-ಕನ್ನಡತನ-ಕನ್ನಡಿಗರ ಅಸ್ಮಿತೆ ಗಳಿಗೆ ಪರ್ಯಾಯ ಪದವೇ ಆಗಿದ್ದರು.

ಇದನ್ನೂ ಓದಿ : Vishwavani Editorial: ಹದ್ದಿನ ಕಣ್ಣಿಗೆ ಧೂಳು ಬಿದ್ದಿತ್ತೇ?

ಗೋಕಾಕ್ ಚಳವಳಿಯು ಏರುಗತಿಯನ್ನು ಕಂಡಿದ್ದು ‘ಅಣ್ಣಾವ್ರ’ ಪ್ರವೇಶವಾದ ನಂತರವೇ ಎಂಬುದು ನಿರ್ವಿವಾದಿತ ಸಂಗತಿ. ಕನ್ನಡ ಚಿತ್ರರಂಗವಿಂದು ‘ನಾಯಕನಾರೋ ನಡೆಸುವನೆಲ್ಲೋ?’ ಎಂಬ ಗೊಣಗಾಟದಲ್ಲೇ ಮರುಗುತ್ತಿದೆ ಎಂದರೆ ಡಾ.ರಾಜ್ ಅವರಂಥ ನಾಯಕ ಇಲ್ಲದಿರುವುದೇ ಅದಕ್ಕೆ ಕಾರಣ. ಇನ್ನು, ಪ್ರತಿಭೆಗೂ ಸಹೃದಯತೆಗೂ ಮೃದುಮಾತಿಗೂ ‘ಪರ್ಯಾಯರೂಪ’ವೇ ಆಗಿದ್ದ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕರೋನಾ ಮಹಾಮಾರಿಗೆ ತುತ್ತಾಗಿ ಇಲ್ಲವಾದರು.

ಸಹೃದಯತೆ-ಪ್ರತಿಭೆ-ಮೃದುಮಾತಿನ ಆಯಾಮದಲ್ಲಿ ಅವರು ಬಿಟ್ಟು ಹೋದ ‘ಖಾಲಿಜಾಗ’ ಇನ್ನೂ ಭರ್ತಿ ಯಾಗಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಇಲ್ಲಿ ನೀಡಿರುವುದು ಎರಡು ಉದಾಹರಣೆ ಗಳಷ್ಟೇ, ಹುಡುಕುತ್ತ ಹೋದರೆ ವಿವಿಧ ಕ್ಷೇತ್ರಗಳಲ್ಲಿನ ಇಂಥ ಮೇರುಸಾಧಕರು (ಮಾಸ್ಟರ್ ಹಿರಣ್ಣಯ್ಯ, ಕೆ.ಎಸ್.ನಿಸಾರ್ ಅಹಮದ್, ಎಚ್.ಎಸ್.ವೆಂಕಟೇಶಮೂರ್ತಿ ಇತ್ಯಾದಿ) ಸಾಕಷ್ಟು ಸಿಕ್ಕಾರು, ಅವರ ಅಗಲುವಿಕೆಯಿಂದಾಗಿ ರೂಪುಗೊಂಡ ‘ಖಾಲಿತನ’ ಅನುಭವಕ್ಕೆ ಬಂದೀತು.

ಇವರೆಲ್ಲರೂ ಶುರುವಿನಲ್ಲೇ ಪ್ರಚಾರಕ್ಕಾಗಿ ಹಾತೊರೆಯದೆ, ಸಾಧನೆಯ ಕಡೆಗಷ್ಟೇ ಗಮನ ನೆಟ್ಟವರು ಎಂಬುದನ್ನು ಗಮನಿಸಬೇಕು ಮತ್ತು ಇಂದಿನ ಪೀಳಿಗೆಯವರಿಗೆ ಅದು ಮೇಲ್ಪಂಕ್ತಿ ಯಾಗಬೇಕು.