ಆರಾಮದಾಯಕವಾಗಬೇಕಿದ್ದ ಪ್ರಯಾಣ ದುಃಸ್ವಪ್ನವಾಗಿ ಮಾರ್ಪಟ್ಟಿತು; ರ‍್ಯಾಪಿಡೊ ಬೈಕ್ ಸವಾರಿಯ ಆಘಾತಕಾರಿ ವಿಡಿಯೊ ವೈರಲ್
Rapido Ride: ದೆಹಲಿಯ ಯುವತಿಯೊಬ್ಬರು ರ‍್ಯಾಪಿಡೊ ಬೈಕ್ ಸವಾರಿಯ ಸಮಯದಲ್ಲಿ ತನಗಾದ ಅಪಘಾತಕಾರಿ ಘಟನೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಚಾಲಕ ತನಗೆ ಹೆಲ್ಮೆಟ್ ನೀಡಲು ನಿರಾಕರಿಸಿದ್ದಾಗಿ ಆರೋಪಿಸಿದ್ದಾರೆ. ಈ ವಿಡಿಯೊ ರಸ್ತೆ ಸುರಕ್ಷತೆ, ಸವಾರಿಯ ಜವಾಬ್ದಾರಿಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.


ದೆಹಲಿ: ಎಲ್ಲಿಗಾದರೂ ಪ್ರಯಾಣಿಸಬೇಕಾದರೆ ವಿಶೇಷವಾಗಿ ನಗರಗಳಲ್ಲಿ ರ‍್ಯಾಪಿಡೊ ಅಥವಾ ಉಬರ್ ಬೈಕ್ ಅನ್ನು ಅನೇಕರು ಅವಲಂಬಿಸುತ್ತಾರೆ. ಬೆಂಗಳೂರಿನಲ್ಲಿ ಇದು ನಿಷೇಧವಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಾಲ್ತಿಯಲ್ಲಿದೆ. ಬಹುತೇಕರಿಗೆ ಇದು ಬಹಳ ಸಹಾಯಕಾರಿ ಎನಿಸಿಕೊಂಡಿದೆ. ಆದರೀಗ, ಆಘಾತಕಾರಿ ಘಟನೆಯೊಂದು ವೈರಲ್ ಆಗಿದ್ದು, ಯುವತಿಯೊಬ್ಬರು ರ‍್ಯಾಪಿಡೊ ಬೈಕ್ ಸವಾರಿಯ ಸಮಯದಲ್ಲಿ ತನಗಾದ ಅಪಘಾತವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಎಂದು ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೊದಲ್ಲಿ ಯುವತಿಗೆ ಸಂಭವಿಸಿದ ಅಪಘಾತವೂ ಕಂಡುಬಂದಿದೆ. ಈ ವಿಡಿಯೊ ರಸ್ತೆ ಸುರಕ್ಷತೆ, ಸವಾರಿಯ ಜವಾಬ್ದಾರಿಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.
ಏನಿದು ಘಟನೆ?
ಪ್ರಿಯಾಂಕಾ ರ‍್ಯಾಪಿಡೊ ಬೈಕ್ ಬುಕ್ ಮಾಡಿದರು. ಆದರೆ ಶೀಘ್ರದಲ್ಲೇ ತಾನು ಅಸುರಕ್ಷಿತವಾಗಿದ್ದೇನೆ ಎನ್ನುವ ಭಾವನೆ ಮೂಡಿತು ಎಂದು ಹೇಳಿದ್ದಾರೆ. ಚಾಲಕ ತನಗೆ ಹೆಲ್ಮೆಟ್ ನೀಡಲು ನಿರಾಕರಿಸಿದ್ದಾಗಿ ಆರೋಪಿಸಿದ್ದಾರೆ. ಅವನು ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿರುವುದು ಸಹ ಕಂಡುಬಂದಿದೆ. ಚಾಲಕ ಪದೇ ಪದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಮತ್ತು ರಾಂಗ್ ಸೈಡ್‌ನಲ್ಲಿ ಚಾಲನೆ ಮಾಡಿದ್ದಾನೆ ಎಂದು ಹೇಳಿದರು.
ಅಸುರಕ್ಷಿತ ಎಂದು ಭಾವಿಸಿ, ಸವಾರಿಯ ಸಮಯದಲ್ಲಿ ಯುವತಿ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ರ‍್ಯಾಪಿಡೊ ಬೈಕ್ ಸವಾರ ಚಾಲನೆ ಮಾಡುತ್ತಿರುವ ರೀತಿಯಿಂದ ನನಗೆ ತುಂಬಾ ಅಸುರಕ್ಷಿತ ಅನಿಸಿದ್ದು ಇದೇ ಮೊದಲು ಎಂದು ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ವಿಡಿಯೊ ವೀಕ್ಷಿಸಿ:
ಕ್ಯಾಮೆರಾದಲ್ಲಿ ಸೆರೆಯಾದ ಅಪಘಾತ
ವಿಡಿಯೊದಲ್ಲಿ ಬೈಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ನೋಡಬಹುದು. ದೆಹಲಿ ಪೊಲೀಸ್ ಕಾರಿನ ಮುಂದೆಯೇ ಈ ಅಪಘಾತ ಸಂಭವಿಸಿದೆ. ಸವಾರ ಮತ್ತು ಪ್ರಿಯಾಂಕಾ ಇಬ್ಬರೂ ರಸ್ತೆಗೆ ಉರುಳಿ ಬಿದ್ದಿದ್ದಾರೆ.
ಪೊಲೀಸರ ಸಮೀಪವೇ ಅಪಘಾತ ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಚಾಲಕ ಗಾಯಗೊಂಡಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಲಿಲ್ಲ ಎಂದು ಪ್ರಿಯಾಂಕಾ ಹೇಳಿದರು. ಪ್ರಯಾಣ ದರವನ್ನು ಪಾವತಿಸಿ ತನ್ನ ಗಮ್ಯಸ್ಥಾನಕ್ಕೆ ನಡೆದುಕೊಂಡು ಹೋಗಿಸಿದ್ದಾಗಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ
ಪ್ರಿಯಾಂಕಾ ಇನ್‌ಸ್ಟಾಗ್ರಾಮ್‍ನಲ್ಲಿ ವಿಡಿಯೊ ಹಂಚಿಕೊಂಡ ಬಳಿಕ ಇದು ತ್ವರಿತವಾಗಿ ವೈರಲ್ ಆಗಿದ್ದು, 67,000ಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವಾರು ಕಮೆಂಟ್‌ಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಸವಾರನ ಅಸಡ್ಡೆ ವರ್ತನೆಗೆ ಆಘಾತ ವ್ಯಕ್ತಪಡಿಸಿದರು. ಘಟನೆಯನ್ನು ಹೈಲೈಟ್ ಮಾಡಿದ್ದಕ್ಕಾಗಿ ಪ್ರಿಯಾಂಕಾ ಅವರನ್ನು ಬಳಕೆದಾರರು ಬೆಂಬಲಿಸಿದ್ದಾರೆ. ಅನೇಕ ಬಳಕೆದಾರರು ಸುರಕ್ಷತಾ ಮಾನದಂಡಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಲ್ಮೆಟ್ ಇಲ್ಲದಿರುವುದು ಮತ್ತು ತಪ್ಪು ದಿಕ್ಕಿನಲ್ಲಿ ಚಾಲನೆ ಮಾಡುವುದನ್ನು ಸಹಿಸಬಾರದು ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ.
ರ‍್ಯಾಪಿಡೊ ಪ್ರತಿಕ್ರಿಯೆ
ಪ್ರಿಯಾಂಕಾ ಅವರ ಪೋಸ್ಟ್‌ಗೆ ರ‍್ಯಾಪಿಡೊ ಕೂಡ ಪ್ರತಿಕ್ರಿಯಿಸಿದೆ. ನೀವು ಚೆನ್ನಾಗಿದ್ದೀರಿ ಎಂದು ಖಚಿತಪಡಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಕೋರಿಕೆಯಂತೆ, ನಾವು ಬೈಕ್ ಸವಾರನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಮುಂದಿನ ಸವಾರಿಗಳಲ್ಲಿ ನೀವು ಇದೇ ರೀತಿಯ ಯಾವುದೇ ಸಮಸ್ಯೆಯನ್ನು ಎದುರಿಸಿದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ ಎಂದು ತಿಳಿಸಿದೆ.
ಕಂಪನಿಯ ಪ್ರತಿಕ್ರಿಯೆಯು ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿತು. ಕೆಲವು ಬಳಕೆದಾರರು ತ್ವರಿತವಾಗಿ ಪ್ರತಿಕ್ರಿಯೆ ನೀಡಿದರು. ಇತರರು ಕಠಿಣ ಕ್ರಮ ಕೈಗೊಳ್ಳದಿದ್ದಕ್ಕಾಗಿ ರ‍್ಯಾಪಿಡೊವನ್ನು ಟೀಕಿಸಿದರು.