Uma Ramanna Column: ಎಳೆ ಮನಸ್ಸಿನ ತಲ್ಲಣಗಳು
ಇತ್ತೀಚೆಗೆ ಆರನೆಯ ತರಗತಿಯ ಬಾಲಕನೊಬ್ಬ ತನಗಿಂತ ಹಿರಿಯ ವಿದ್ಯಾರ್ಥಿಯನ್ನು ಕೊಲೆ ಮಾಡಿದ ನೋವಿನ ಸುದ್ದಿ ಹುಬ್ಬಳ್ಳಿಯಿಂದ ವರದಿಯಾಗಿದೆ. ಇಂತಹ ದುರಂತಗಳು ನಿಜಕ್ಕೂ ಆಘಾತ ಹುಟ್ಟಿಸು ವಂತಹವು. ಕೆಲವೇ ದಶಕಗಳ ಹಿಂದೆ ಇಂತಹ ದುರ್ಘಟನೆಗಳನ್ನು ಊಹಿಸಲೂ ಅಸಾಧ್ಯ ಎನಿಸು ವಂತಿತ್ತು. ಇಂದಿನ ಅಂತರ್ಜಾಲ ಯುಗ ಮತ್ತು ಆ ಮೂಲಕ ಸುಲಭವಾಗಿ ದೊರೆಯುವ ಹಿಂಸಾಭರಿತ ದೃಶ್ಯಗಳು, ಇಂತಹ ಎಳೆಯ ಮತ್ತು ಯು ತಲೆಮಾರಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆಯೆ?


ಉಮಾ ರಾಮಣ್ಣ
ಮಾರ್ಚ್ ತಿಂಗಳಲ್ಲಿ ನೆಟ್‌ಫ್ಲಿಕ್ಸ್ ಓಟಿಟಿಯಲ್ಲಿ ‘ಅಡಾಲೆಸೆನ್ಸ್’ ತಿಂಗಳೊಂದರಲ್ಲಿಯೇ 66.3 ಮಿಲಿ ಯನ್ ಜನರಿಂದ ವೀಕ್ಷಣೆಗೊಳಗಾಗಿ ಇತ್ತೀಚಿನ ಬಹುಚರ್ಚಿತ ಸೀರಿಯಲ್ ಎಂದೇ ಪರಿಚಿತವಾಗಿದೆ. ನಾಲ್ಕು ಪ್ರಸಂಗಗಳಲ್ಲಿ ಬಿಚ್ಚಿಕೊಳ್ಳುವ ಕಥೆಯನ್ನು ಅಡೆತಡೆಯಿಲ್ಲದಂತೆ ಪ್ರತಿ ಪ್ರಸಂಗವನ್ನೂ ಒಂದೇ ಶಾಟ್ ನಲ್ಲಿ ಚಿತ್ರಿಸಲಾಗಿದೆ. ‘ಅಡಾಲೆಸೆನ್ಸ್’ ನಿರ್ಮಾಪಕ ಗ್ರಾಹಮ್ ಹೇಳುತ್ತಾನೆ; ನಮ್ಮ ಮುಖ್ಯ ಗುರಿ ಇಂದಿನ ಯುವಜನತೆಯ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನಿಸುವು ದಾಗಿತ್ತು. ಅವರ ಸಮವಯಸ್ಕರಿಂದ, ಇಂಟರ್ನೆಟ್‌ನಿಂದ, ಸಾಮಾಜಿಕ ಜಾಲತಾಣಗಳಿಂದ ಅವರ ಮೇಲಾಗುತ್ತಿರುವ ಪರಿಣಾಮಗಳು ಯಾವ ರೀತಿಯವು ಎಂದು ಕೇಳಿಕೊಳ್ಳುವುದಾಗಿತ್ತು ಎಂದು; 14 ವರುಷದ ಹುಡುಗನೊಬ್ಬನ ಕತ್ತಿ ಇರಿತದ ಘಟನೆ ಅವನ ಮನಸ್ಸನ್ನು ಕಲಕಿದ ರೀತಿಯನ್ನು ನೆನೆಯುತ್ತಾನೆ.
ಅಂತಹ ಘಟನೆಗಳು ಪದೇ ಪದೇ ಮರು ಕಳಿಸಿದ್ದನ್ನು ಕಂಡ ಅವನು “ಏನಾಗುತ್ತಿದೆ ಇಂದು? ಇಲ್ಲಿ ಗೇಕೆ ಬಂದು ನಿಂತೆವು ನಾವು? ಸಮಾಜಕ್ಕೆ ಏನಾಗಿದೆ ಇಂದು?" ಎಂಬ ಪ್ರಶ್ನೆಗಳು ಕಾಡತೊಡಗಿದವು ಎಂದು ಅದರ ನಿರ್ಮಾಣದ ಹಿಂದಿನ ಉದ್ದೇಶವನ್ನು ವಿವರಿಸುತ್ತಾನೆ.
ಇದನ್ನೂ ಓದಿ: Srivathsa Joshi Column: ಕಬ್ಬಿಗರ ರಚನೆ ಕಬ್ಬಿಣದ ಕಡಲೆಯಾಗದೆ ಕಬ್ಬಿನ ರಸವಾದಾಗ...
ಪರಿಣಾಮವಾಗಿಯೇ ಎಡ್ಡಿ ಮಿಲ್ಲರ್ ಕುಟುಂಬದ ಕತೆ ಹುಟ್ಟಿದ್ದು; ಅವರ ಹದಿಮೂರರ ಪುಟ್ಟ ಬಾಲಕ ಜೇಮೀ ಒಂದು ಮುಂಜಾನೆ ತನ್ನ ಶಾಲೆಯ ಹುಡುಗಿಯೊಬ್ಬಳನ್ನು ಚಾಕುವಿನಿಂದ ಇರಿದ ನೆಂಬ ಆಪಾದನೆಗೊಳಗಾಗಿ ಪೊಲೀಸರಿಂದ ಬಂಧನಕ್ಕೊಳಗಾಗುವನು. ಆ ಬಾಲಕನ ತಂದೆ (ಸ್ಟೀಫನ್ ಗ್ರಾಹಮ್), ಪ್ಲಂಬರ್ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡ ಸಾಮಾನ್ಯ ಮನುಷ್ಯ. ಎಲ್ಲಾ ತಂದೆ ತಾಯಿಯರಂತೆಯೇ ಅವನೂ ತನ್ನ ಮಗ ತಪ್ಪು ಮಾಡಿಲ್ಲವೆಂದೇ ಮೊದಲಿಗೆ ನಂಬುತ್ತಾನೆ - ಅಪರಾಧದ ನರ ಹೆಪ್ಪುಗಟ್ಟಿಸುವ ಸಿಸಿಟಿವಿ ದೃಶ್ಯವನ್ನು ನೋಡುವವರೆಗೂ. ಪೊಲೀಸ್ ತನಿಖೆದಾರ ಬಾಸ್ ಕಾಂಬ್ (ಆಶ್ಲಿ ವಾಲ್ಟರ್ಸ್) ಇದ್ದಕ್ಕಿದ್ದಂತೆ ನಡೆದ ಪೊಲೀಸ್ ದಾಳಿ ಯಿಂದ ಪೈಜಾಮ ಒದ್ದೆ ಮಾಡಿಕೊಳ್ಳುವ ಬಾಲಕನಿಗೆ ಅಪ್ಪ ಬಟ್ಟೆ ಬದಲಿಸಲು ಸಹಾಯ ಮಾಡುವನೆಂದು ಹೇಳುವ ದೃಶ್ಯವು ಆ ಹುಡುಗ ಇನ್ನೂ ಮಗುವೆಂಬುದನ್ನು ನೆನೆಸುತ್ತಾ ಹೃದಯ ಹಿಂಡುವಂತಿದೆ.
ತನಿಖೆದಾರರಿಬ್ಬರೂ ಶಾಲೆಗೆ ಭೇಟಿ ನೀಡುವ ಪ್ರಸಂಗವೂ ಅದೇ ರೀತಿಯ ತಲ್ಲಣವನ್ನು ಇಂದಿನ ಪೋಷಕರಲ್ಲಿ ಮೂಡಿಸುತ್ತದೆ. ಬಾಸ್ ಕಾಂಬ್ ಮತ್ತು ಅವನ ಸಹಾಯಕಿ ಆ ಭೇಟಿಯಲ್ಲಿ ಸ್ಟೇಟ್ ಮಾಧ್ಯಮಿಕ ಶಾಲೆಯ ದುರ್ವಾಸನೆ, ಅಬ್ಬರ ಮತ್ತು ಗೊಂದಲಮಯ ವಾತಾವರಣದ ಬಗ್ಗೆ ದೂರುವಾಗ ಅದು ನೋಡುಗನ ಇಂದ್ರಿಯಗಳಿಗೂ ಅನುಭವಕ್ಕೆ ಬರುವಂತೆ ಚಿತ್ರಿಸಲಾಗಿದೆ. ನೀನು ಆಡಮ್‌ನ ತಂದೆಯಲ್ಲವೆ? ನಿನ್ನ ಗಲ್ಲದ ಮೂಳೆ ಅವನಿಗೇಕಿಲ್ಲ? ಎಂದು ಅವನನ್ನು ಪ್ರಶ್ನಿಸುವ, ಆಡಮ್ ಎಂದಾಕ್ಷಣ ಮೂಗಿನಿಂದ ಧ್ವನಿ ಹೊರಡಿಸಿ ಅಣಕಿಸುವ ಹಿಂಸಕ ಪ್ರವೃತ್ತಿಯ ವಿದ್ಯಾರ್ಥಿ ಗಳು ಎಲ್ಲೆಲ್ಲೂ!
ಹದಿಹರೆಯದಲ್ಲಿ, ತಮ್ಮ ಅಸ್ತಿತ್ವದ ಹುಡುಕಾಟದಲ್ಲಿ ದಿಕ್ಕುತಪ್ಪಿದ ಮಕ್ಕಳ ಆತ್ಮವಿಶ್ವಾಸಕ್ಕೆ ಬೀಳುವ ನಿತ್ಯಪೆಟ್ಟುಗಳ ಇಣುಕುನೋಟಗಳನ್ನು ನೀಡುತ್ತಾ ಗಾಢ ಪರಿಣಾಮ ಬೀರುವ ರೀತಿ ಯಿಂದಲೇ ಇದು ಪೋಷಕರಲ್ಲಿ ತಳಮಳವುಂಟು ಮಾಡಿರುವ ಷೋ ಆಗಿ ಹೊರಹೊಮ್ಮಿದೆ. ಹೊರಗೆ ಸಾಧಾರಣವಾಗಿಯೇ ಕಾಣುವ, ಆದರೆ, ಒಳಗೊಳಗೇ ಅಭದ್ರತೆಗೆ ಒಳಗಾಗಿರುವ ಪುಟ್ಟ ಹುಡುಗ. ಶಾಲೆಯಿಂದ ಬಂದ ಮೇಲೆ ತನ್ನ ಗಣಕಯಂತ್ರದಲ್ಲಿ ವಿಡಿಯೋ ಗೇಮ್ಸ್ ಆಡುತ್ತಿರುವನು ಅಂದುಕೊಳ್ಳುವ ತಂದೆ ತಾಯಿಯರು; ಎಲ್ಲಾ ರೀತಿಯ ಸರಕು ಮಕ್ಕಳಿಗೆ ಸಿಗುತ್ತಿದೆ ಎಂಬ ಅನು ಮಾನವೇ ಇಲ್ಲದ ಅವರು, ಇಂಟರ್ನೆಟ್ ನಲ್ಲಿ ಯಾರ್ಯಾರು ಯಾವ ರೀತಿಯ ದಿಕ್ಕು ತಪ್ಪಿಸುತ್ತಿರು ವರು ಎಂದು ಊಹೆಯೂ ಇಲ್ಲದ ಅವರು. 80% ಸ್ತ್ರೀಯರು ಕೇವಲ 20% ಪುರುಷೋತ್ತಮರಿಂದ ಆಕರ್ಷಿಸಲ್ಪಡುವರು ಎಂದು ಯಾವನೋ ಒಬ್ಬ ಪ್ರತಿಪಾದಿಸಿದ ಪೊಳ್ಳು ಸುದ್ದಿಯನ್ನು ನಂಬಿ ಆ ಎಳೆವಯಸ್ಸಿನಲ್ಲಿಯೇ ತಮ್ಮ ಲೈಂಗಿಕ ಭವಿಷ್ಯದ ಬಗ್ಗೆ ತತ್ತರಗೊಂಡ ಯುವಕರು!
ತಮ್ಮ ಅರಿವಿಲ್ಲದೆಯೇ ಮಕ್ಕಳ ಮನಸ್ಸಿನಲ್ಲಿ ಏನೇನು ನಡೆಯುತ್ತಿರಬಹುದು ಎಂಬ ಊಹೆಯೂ ಇಲ್ಲದ ಪೋಷಕರು! ಇಂದಿನ ಇಂಟರ್ನೆಟ್ ಯುಗದಲ್ಲಿ ಮಕ್ಕಳ ಪ್ರಪಂಚ ದೊಡ್ಡವರಿಂದ ಹೇಗೆ ದೂರಾಗುತ್ತಾಹೋಗತೊಡಗುತ್ತಿದೆ ಎಂದೂ, ಪೋಷಕರ ಪ್ರಭಾವವು ಮಕ್ಕಳ ಮೇಲೆ ಹೇಗೆ ಕಿರಿದಾಗ ತೊಡಗುತ್ತಿದೆಯೆಂದೂ, ಅದರಿಂದಾಗುತ್ತಿರುವ ಭೀಕರ ಅನಾಹುತಗಳನ್ನು ಯಾವುದೇ ವ್ಯಾಖ್ಯಾ ನಕ್ಕೆ ತೊಡಗಿಕೊಳ್ಳದೇ ಇಷ್ಟೊಂದು ಪರಿಣಾಮಕಾರಿಯಾಗಿ ಚಿತ್ರಿಸಬಹುದೇ ಎಂಬ ಸೋಜಿಗ ವೀಕ್ಷಕರನ್ನು ಕಾಡುವುದರಲ್ಲಿ ಸಂದೇಹವಿಲ್ಲ.
ಹದಿಹರೆಯದ ಮನಸುಗಳ ಗಲಿಬಿಲಿ, ಅಂತರ್ಜಾಲವು ಆ ಮಾನಸಸರೋವರಕ್ಕೆ ಎಸೆಯುವ ಕಲ್ಲು ಗಳ ಪರಿಣಾಮ ಎಲ್ಲವೂ ಪರಿಣಾಮಕಾರಿಯಾಗಿ ಮೂಡಿಬಂದಿರುವ ಎಡೋಲಸೆನ್ಸ್, ಆಧುನಿಕ ಸಮಾಜಕ್ಕೆ ಒಂದು ಎಚ್ಚರಿಕೆಯ ಗಂಟೆಯನ್ನೂ ಮೊಳಗಿಸಿದೆ ಎನ್ನಬಹುದು.