ನಮ್ಮ ನಾಡಿನ ಹೆಮ್ಮೆ ಈ ಅಭಿನಯ ಸರಸ್ವತಿ !
ಹೊನ್ನಪ್ಪ ಭಾಗವತರ್ ಅವರ ತಂಡದಲ್ಲಿದ್ದ ಕು.ರ.ಸೀತಾರಾಮ ಶಾಸ್ತ್ರಿಗಳು, ಪರಮೇಶ್, ರಾಮನಾಥ್ ಎಲ್ಲರೂ ಮೇಕಪ್ ಟೆಸ್ಟ್ ನಂತರ ‘ಕಣ್ಣಿನಲ್ಲಿ ಒಂದು ಮಚ್ಚೆ ಇದೆ, ಸಣ್ಣ ಅಪರೇಷನ್ ಮಾಡಿ ಅದನ್ನು ತೆಗೆದರೆ ಪಾತ್ರ ಮಾಡಬಹುದು’ ಎಂದು ರೇಗಿಸಿದರು. ಚಿಕ್ಕ ಹುಡುಗಿ ಭಯದಿಂದ ‘ಈಗಲೇ ಬೆಂಗಳೂರಿಗೆ ಹೋಗೋಣ’ ಎಂದು ಅಳಲು ಆರಂಭಿಸಿದಳು.


ಎನ್.ಎಸ್.ಶ್ರೀಧರಮೂರ್ತಿ
ಕನ್ನಡನಾಡಿನ ಕಲಾವಿದೆ ಬಿ.ಸರೋಜಾದೇವಿಯವರು (1934-2025) ತಮಿಳು, ತೆಲುಗಿ ನಲ್ಲೂ ಯಶಸ್ವಿ ನಟಿಯೆನಿಸಿದ್ದರು! ಇದು ನಿಜಕ್ಕೂ ವಿಶೇಷ. ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಚಲನಚಿತ್ರ ರಂಗವನ್ನು ಪ್ರವೇಶಿಸಿದ ಸರೋಜಾ ದೇವಿ ಅವರಿಗೆ, ತೆಲುಗು, ತಮಿಳು ಚಿತ್ರರಂಗ ನೀಡಿದ ಪ್ರೋತ್ಸಾಹ ಅಪಾರವಾದುದು. ಸರೋಜಾ ದೇವಿಯವರ ವೃತ್ತಿ ಜೀವನದಲ್ಲಿ ಸದಾ ಬೆಂಗಾವಲಾಗಿದ್ದವರು ಅವರ ತಾಯಿ ರುದ್ರಮ್ಮ. ‘ತೋಳಿಲ್ಲದ ರವಿಕೆ ತೊಡಬಾರದು, ಈಜು ಉಡುಗೆ ಧರಿಸಬಾರದು’ ಮೊದಲಾದ ತಾಯಿ ಹಾಕಿದ ಕಟ್ಟಳೆ ಗಳನ್ನು ಸರೋಜಾ ದೇವಿ ಒಪ್ಪಿಕೊಂಡಿದ್ದರು. ಅದನ್ನು ಪಾಲಿಸುವುಕ್ಕಾಗಿ, ಕೆಲವು ಉತ್ತಮ ಅವಕಾಶಗಳನ್ನು ಸಹ ಬಿಟ್ಟುಕೊಟ್ಟಿದ್ದರು. ಕಳೆದ ವಾರ ನಮ್ಮನ್ನ ಗಲಿಗೆ ಬಿ.ಸರೋಜಾ ದೇವಿಯವರನ್ನು ಹಲವು ಬಾರಿ ಭೇಟಿ ಮಾಡಿ, ಸಂದರ್ಶನವನ್ನೂ ಮಾಡಿದ್ದ ಶ್ರೀಧರ ಮೂರ್ತಿಯವರ ಈ ಬರಹದ ಮೂಲಕ, ಸರೋಜಾದೇವಿಯವರಿಗೆ ವಿಶ್ವವಾಣಿ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತಿದೆ.
ಅದು 1954ನೆಯ ಇಸವಿ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಆಗಲೇ ಸೂಪರ್ ಸ್ಟಾರ್ ಎನ್ನಿಸಿಕೊಂಡಿದ್ದ ಹೊನ್ನಪ್ಪ ಭಾಗವತರ್ ಅವರು ಬೆಂಗಳೂರಿಗೆ ಬಂದಾಗ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ನೋಡುವ ಹವ್ಯಾಸವಿತ್ತು. ಹೀಗೆ ಮೆಯೋಹಾಲ್ ನಲ್ಲಿ ಜಯ ಮಾರತಿ ಆರ್ಕಾಸ್ಟ್ರಾದಲ್ಲಿ ‘ಅನಾರ್ಕಲಿ’ ಚಿತ್ರದ ಲತಾ ಮಂಗೇಶ್ಕರ್ ಅವರು ಹಾಡಿದ ‘ಏ ಜಿಂದಗೀ ಉಕೆ’ ಗೀತೆ ಯನ್ನು ಹಾಡುತ್ತಿದ್ದ ಒಬ್ಳು ಸುಂದರ ಹುಡುಗಿ ಅವರ ಕಣ್ಣಿಗೆ ಬಿದ್ದಳು. ಇವಳು ಅಭಿನಯದ ಜೊತೆಗೆ ಹಾಡಲೂ ಬಲ್ಲಳು ಎಂದು ನಿರ್ಧರಿಸಿ ಹುಡುಗಿಯ ತಾಯಿಯನ್ನು ಕಂಡು ಮಾತನಾಡಿ ದರು. ಆದರೆ ಆ ಹುಡುಗಿಗೆ ಸಿನಿಮಾ ಎಂದರೆ ಇಷ್ಟವಿರಲಿಲ್ಲ. ಆದರೆ ತಾಯಿ ಬಹಳವಾಗಿ ಒತ್ತಾ ಯಿಸಿ ‘ಇದೊಂದು ಸಿನಿಮಾ ಮಾತ್ರ’ ಎಂದಾಗ ಒಪ್ಪಿಕೊಂಡು ಮದ್ರಾಸಿಗೆ ಮೇಕಪ್ ಟೆಸ್ಟ್‌ಗೆ ತಾಯಿಯ ಜೊತೆಗೆ ಬಂದಳು.
ಹೊನ್ನಪ್ಪ ಭಾಗವತರ್ ಅವರ ತಂಡದಲ್ಲಿದ್ದ ಕು.ರ.ಸೀತಾರಾಮ ಶಾಸ್ತ್ರಿಗಳು, ಪರಮೇಶ್, ರಾಮನಾಥ್ ಎಲ್ಲರೂ ಮೇಕಪ್ ಟೆಸ್ಟ್ ನಂತರ ‘ಕಣ್ಣಿನಲ್ಲಿ ಒಂದು ಮಚ್ಚೆ ಇದೆ, ಸಣ್ಣ ಅಪರೇಷನ್ ಮಾಡಿ ಅದನ್ನು ತೆಗೆದರೆ ಪಾತ್ರ ಮಾಡಬಹುದು’ ಎಂದು ರೇಗಿಸಿದರು. ಚಿಕ್ಕ ಹುಡುಗಿ ಭಯದಿಂದ ‘ಈಗಲೇ ಬೆಂಗಳೂರಿಗೆ ಹೋಗೋಣ’ ಎಂದು ಅಳಲು ಆರಂಭಿಸಿದಳು.
ಇದನ್ನೂ ಓದಿ: Hari Paraak Column: ಸರ್ಕ್ಯುಲೇಶನ್ ಕಡಿಮೆ ಆಗಿರೋ ಡೈಲಿ ಪತ್ರಿಕೆ: ʼವೀಕ್ʼ ಲಿ
ಆಗ ಹೊನ್ನಪ್ಪ ಭಾಗವರ್ ನಕ್ಕು ‘ಇಲ್ಲಮ್ಮ, ಹೆದರಬೇಡ, ಅವರೆಲ್ಲರೂ ತಮಾಷೆ ಮಾಡುತ್ತಿದ್ದಾರೆ, ಕಣ್ಣಿನಲ್ಲಿರುವ ಮಚ್ಚೆ ನಿನ್ನ ಅದೃಷ್ಟದ ಸಂಕೇತ, ನೀನು ಬಹಳ ದೊಡ್ಡ ಕಲಾವಿದೆಯಾಗಿ ಬೆಳೆಯುತ್ತೀಯಾ’ ಎಂದು ತುಂಬು ಹೃದಯದಿಂದ ಆಶೀರ್ವಾದ ಮಾಡಿದರು. ಈ ಬಾಲಕಿಯೇ ಬಿ.ಸರೋಜಾದೇವಿ. ಈ ಘಟನೆಯನ್ನು ನನಗೆ ಅವರು ಹತ್ತಾರು ಸಲ ಹೇಳಿದ್ದಾರೆ. ನನ್ನ ‘ಹೊನ್ನಪ್ಪ ಭಾಗವತರ್’ ಅವರ ಕುರಿತ ‘ಹೊನ್ನ ಪರ್ವತ’ ಕೃತಿಗೆ ಬರೆದ ಮುನ್ನಡಿಯಲ್ಲಿಯೂ ನೆನಪು ಮಾಡಿ ಕೊಂಡಿದ್ದಾರೆ.
ಹೇಳುವಾಗ ಪ್ರತಿ ಸಲವೂ ಭಾವುಕರಗಿದ್ದಾರೆ. ಹಾಗೆ ನೋಡಿದರೆ ಅದು ಅವರ ಸ್ವಭಾವವೇ ಅಲ್ಲ. ತಮ್ಮದೇ ಆದ ಘನತೆಯನ್ನು ಹೊಂದಿದ್ದ ಸರೋಜ ದೇವಿ ಅದನ್ನು ಕೊನೆಯವರೆಗೂ ಉಳಿಸಿ ಕೊಂಡು ಬಂದಿದ್ದರು. ಕಣ್ಣಿನ ಕೆಳಗೆ ಹಚ್ಚುವ ಕಪ್ಪಿನಿಂದ ಹಿಡಿದು, ನಡೆಯುವ ಕ್ರಮದವರೆಗೆ ಎಲ್ಲದರಲ್ಲಿಯೂ ಘನತೆಯೇ!
ಮಲ್ಲೇಶ್ವರಂನ ರೈಲ್ವೆ ನಿಲ್ದಾಣದ ಬಳಿಯ ಅವರ ಮನೆಯಲ್ಲಿ, ಸದಾಶಿವ ನಗರದ ಅವರ ಕಚೇರಿಯಲ್ಲಿ ಹಲವು ಸಲ ಭೇಟಿ ಮಾಡಿದ, ಅವರ ನೆನಪುಗಳನ್ನು ಆಲಿಸಿದ ಅದೃಷ್ಟ ನನ್ನದು. ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ 1955ರಲ್ಲಿ ಬಿ.ಸರೋಜ ದೇವಿ ಚಿತ್ರರಂಗ ಪ್ರವೇಶಿಸಿದ್ದರು.
ಅದೇ ವರ್ಷ ಅವರಿಗೆ ‘ಶ್ರೀರಾಮಪೂಜಾ’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಇದೇ ಮೊದಲು ಬಿಡುಗಡೆಯಾಗಿದ್ದರಿಂದ ಅವರ ಮೊದಲ ಚಿತ್ರ ಎನ್ನಿಸಿಕೊಂಡಿದೆ. ಸರೋಜಾ ದೇವಿ ಯವರ ವೃತ್ತಿ ಜೀವನದಲ್ಲಿ ಸದಾ ಬೆಂಗಾವಲಾಗಿದ್ದವರು ಅವರ ತಾಯಿ ರುದ್ರಮ್ಮ. ‘ತೋಳಿಲ್ಲದ ರವಿಕೆ ತೊಡ ಬಾರದು, ಈಜು ಉಡುಗೆ ಧರಿಸಬಾರದು’ ಮೊದಲಾದ ತಾಯಿ ಹಾಕಿದ ಕಟ್ಟಳೆಗಳನ್ನು ಸರೋಜಾ ದೇವಿ ಒಪ್ಪಿಕೊಂಡಿದ್ದರು. ಅದನ್ನು ಪಾಲಿಸುವುಕ್ಕಾಗಿ, ಕೆಲವು ಉತ್ತಮ ಅವಕಾಶಗಳನ್ನು ಸಹ ಬಿಟ್ಟು ಕೊಟ್ಟಿದ್ದರು.
ಜಗತ್ತಿನ ತಾಯಿ
ಸರೋಜಾ ದೇವಿ ಅವರಿಗೆ ಆರಂಭದಲ್ಲೇನೂ ಅವಕಾಶಗಳ ಸುರಿಮಳೆಯಾಗಲಿಲ್ಲ. ‘ರತ್ನಗಿರಿ ರಹಸ್ಯ’ ದಲ್ಲಿ ಸಿಕ್ಕಿದ್ದು ನೃತ್ಯದಲ್ಲಿ ಬಂದು ಹೋಗುವ ಚಿಕ್ಕ ಪಾತ್ರ. ‘ಭೂ ಕೈಲಾಸ’ಚಿತ್ರದಲ್ಲಿ ಮಂಡೋದರಿ ಪಾತ್ರಕ್ಕೆಂದು ಕರೆಸಿದ್ದರೂ ಕೊಟ್ಟಿದ್ದು ಚಿಕ್ಕದಾದ ಪಾರ್ವತಿಯ ಪಾತ್ರ. ಸರೋಜಾ ದೇವಿಯವರ ತಾಯಿಗೇ ಈ ಕಹಿ ಘಟನೆಯಿಂದ ಚಿತ್ರರಂಗ ಸಾಕು ಎನ್ನಿಸಿತ್ತು.
ಆದರೆ ಕು.ರ.ಸೀ ‘ಪಾರ್ವತಿ ಎಂದರೆ ಜಗತ್ತಿನ ತಾಯಿ, ಈ ಪಾತ್ರ ಮಾಡುವ ಮೂಲಕ ನಿನ್ನ ಬಣ್ಣದ ಬದುಕು ಹೊಸ ಎತ್ತರಕ್ಕೆ ಏರುತ್ತದೆ’ ಎಂದಿದ್ದರು. ಈ ಮಾತು ನಿಜವಾಯಿತು ಎಂದು ಸರೋಜಾ ದೇವಿ ಸದಾ ನೆನಪು ಮಾಡಿ ಕೊಳ್ಳುತ್ತಿದ್ದರು. ಕು.ರ.ಸೀ.ಯವರ ‘ಅಣ್ಣ-ತಂಗಿ’ ಚಿತ್ರದಲ್ಲಿ ಮೈಸೂರು ಭಾಗದ ಗ್ರಾಮ್ಯ ಭಾಷೆಯನ್ನು ಸರೋಜಾ ದೇವಿ ಬಹಳ ಸಹಜವಾಗಿ ಆಡಿ ಹೊಸತನ ತಂದಿದ್ದರು. ಭಾಷೆಯ ಕುರಿತು ನನಗೆ ಅರಿವು ಮೂಡಿಸಿದವರೇ ಕು.ರ.ಸೀ. ಎನ್ನುತ್ತಿದ್ದ ಸರೋಜಾ ದೇವಿ ಇದನ್ನು ತಾವು ಅಭಿನಯಿಸಿದ ಐದೂ ಭಾಷೆಯಲ್ಲಿಯೂ ಉಳಿಸಿಕೊಂಡು ಬಂದರು. ಸ್ಪಷ್ಟ ಉಚ್ಚಾರಣೆ ಯಿಂದಾಗಿಯೇ ಅವರು ಮನೆ ಮಗಳ ಇಮೇಜ್ ಪಡೆದುಕೊಂಡರು.
1957ರಲ್ಲಿ ಎನ್. ಟಿ. ರಾಮರಾಯರ ಚಿತ್ರ ‘ಪಾಂಡುರಂಗ ಮಹಾತ್ಮೆ’ಯಲ್ಲಿ ನಟಿಸಿದರು. ತಮಿಳು ಚಿತ್ರರಂಗದಲ್ಲಿ ಜೆಮಿನಿ ಗಣೇಶನ್ ಅಭಿನಯದ ಚಿತ್ರವೊಂದಕ್ಕೆ ಆಹ್ವಾನ ಪಡೆದರು.
ಅದೇ ವರ್ಷದಲ್ಲಿ ತಮಿಳಿನಲ್ಲಿ ಮೇರು ನಟ ಎಂ.ಜಿ.ರಾಮಚಂದ್ರನ್ ಅವರ ನಾಡೋಡಿ ಮನ್ನನ್, ಶಿವಾಜಿ ಗಣೇಶನ್ ಅವರ ಶಬಾಸ್ ಮೀನ, ಹಿಂದೀ ಚಿತ್ರರಂಗದ ದಿಲೀಪ್ ಕುಮಾರ್ ಅವರೊಂದಿಗೆ ಪೈಗಮ್, ತೆಲುಗಿನ ಮತ್ತೋರ್ವ ಮಹಾನ್ ಕಲಾವಿದ ಅಕ್ಕಿನೇನಿ ನಾಗೇಶ್ವರರಾಯರೊಂದಿಗೆ ಪೆಳ್ಳಿ ಸಂದಡಿ ಚಿತ್ರಗಳಲ್ಲಿ ಅಭಿನಯಿಸಿದರು. ಹಿಂದಿಯಲ್ಲಿ ಅಶೋಕ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಅಜಿತ್, ಭರತ್ ಭೂಷಣ್, ಸುನಿಲ್ ದತ್ ಮುಂತಾದ ಜನಪ್ರಿಯ ನಟರೊಡನೆ ಕೂಡ, ಹಲವಾರು ಚಿತ್ರಗಳಲ್ಲಿ ನಟಿಸಿದರು.
ಈ ದಿನಗಳಲ್ಲಿ ನಾಲ್ಕು ಶಿ-ಗಳಲ್ಲಿ ಸರೋಜಾ ದೇವಿ ಅಭಿನಯಿಸುತ್ತಿದ್ದರು. ಅದರಲ್ಲಿಯೂ ಬೇರೆಬೇರೆ ಭಾಷೆಯ ಚಿತ್ರಗಳಲ್ಲಿ. ವ್ಯತ್ಯಾಸಕ್ಕಾಗಿ ಸರೋಜಾದೇವಿ ಸೀರೆ ಉಡುವ ಕ್ರಮ ಮತ್ತು ಹಣೆಯ ಕುಂಕಮದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದರಂತೆ. ‘ಬೇರೆಯವರಿಗಿರಲಿ, ನನಗೇ ವ್ಯತ್ಯಾಸ ಗೊತ್ತಾಗ ಬೇಕಿತ್ತಲ್ಲಪ್ಪ’ ಎಂದು ನಗುತ್ತಿದ್ದರು.
ಆರ್.ನಾಗೇಂದ್ರ ರಾಯರ ಮೇಲಿನ ಗೌರವದಿಂದ ‘ವಿಜಯನಗರದ ವೀರಪುತ್ರ’ ಚಿತ್ರವನ್ನು ಒಪ್ಪಿ ಕೊಂಡ ಸರೋಜಾ ದೇವಿ ಕೊಂಚವೂ ಚಿತ್ರೀಕರಣಕ್ಕೆ ತೊಂದರೆಯಾಗದಂತೆ ಸಹಕರಿಸಿದರು. ಪಂತಲು ‘ಕಿತ್ತೂರು ಚೆನ್ನಮ್ಮ’ದ ಚಾರಿತ್ರಿಕ ಪಾತ್ರಕ್ಕೆ ಆಯ್ಕೆ ಮಾಡಿದಾಗ ಮೂರು ಪ್ರಮುಖ ತಮಿಳು ಚಿತ್ರಗಳನ್ನು ಕೈ ಬಿಟ್ಟಿದ್ದರು.
ಆ ಚಿತ್ರದಲ್ಲಿ ಅವರು ‘ನಿಮಗೇಕೆ ಕೊಡ ಬೇಕು ಕಪ್ಪಾ.. ನೀವೇನು ನಮ್ಮ ಅಣ್ಣ-ತಮ್ಮಂದಿರೇ, ಬಂಧುಗಳೇ’ ಎಂದು ಅಬ್ಬರಿಸುವ ಸಂಭಾಷಣೆ ಹಲವು ದಶಕಗಳ ಕಾಲ ಶಾಲೆಗಳಲ್ಲಿ ಏಕ ಪಾತ್ರ ಅಭಿನಯದಲ್ಲಿ ಮೂಡಿ ಬಂದು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಬಿಟ್ಟಿತು. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ನಿರ್ಮಾಣವಾದ ‘ಅಮರ ಶಿಲ್ಪಿ ಜಕಣಾಚಾರಿ’ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಅವರಿಗೆ ಕನ್ನಡದಲ್ಲಿ ಮತ್ತು ಅಕ್ಕಿನೇನಿ ನಾಗೇಶ್ವರ ರಾವ್ ಅವರಿಗೆ ತೆಲುಗಿನಲ್ಲಿ ನಾಯಕಿಯಾಗಿ ಅಭಿನಯಿಸಿದರು.
ಆದರೆ ಆ ಚಿತ್ರದ ಕನ್ನಡ ಅವತರಣಿಕೆಯನ್ನು ರಾಷ್ಟ್ರಪ್ರಶಸ್ತಿ ಸ್ಪರ್ಧೆಗೆ ಕಳುಹಿಸ ಬಾರದು ಎಂದು ನಾಗೇಶ್ವರ ರಾವ್ ಹಾಕಿದ್ದ ಷರತ್ತಿನ ಬಗ್ಗೆ ಸರೋಜಾ ದೇವಿಯವರಿಗೆ ಸಾಕಷ್ಟು ಕೋಪವಿತ್ತು. ಹಲವು ಕನ್ನಡ ಚಿತ್ರಗಳು ರಾಷ್ಟ್ರಪ್ರಶಸ್ತಿಗಳನ್ನು ಕಳೆದುಕೊಂಡ ರಾಜಕೀಯವನ್ನು ಎಳೆ ಎಳೆಯಾಗಿ ಬಿಡಿಸಿಡುವುದು ಅವರಿಗೆ ಮಾತ್ರ ಸಾಧ್ಯವಿತ್ತು. ಮುಂದೆ ಅವರೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಸಮಿತಿ ಅಧ್ಯಕ್ಷರಾದಾಗ ಕನ್ನಡದ ‘ತಾಯಿ ಸಾಹೇಬ’ ಚಿತ್ರಕ್ಕೆ ಸ್ವರ್ಣ ಕಮಲ ಬರುವಂತೆ ನೋಡಿಕೊಂಡರು.
ಮದುವೆಯ ನಂತರ..
ವಿವಾಹವಾದರೆ ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾಗುತ್ತದೆ ಎನ್ನುವುದನ್ನು ಸುಳ್ಳು ಮಾಡಿದ ಕಲಾವಿದೆ ಸರೋಜಾ ದೇವಿ. ಚಿತ್ರರಂಗದ ಉತ್ತುಂಗದಲ್ಲಿದ್ದಾಗಲೇ 1967ರಲ್ಲಿ ಶ್ರೀಹರ್ಷ ಅವರನ್ನು ವಿವಾಹವಾದರು. ಮದುವೆಯ ನಂತರವೇ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮೊದಲಾದ ಗೌರವಗಳು ಬಂದವು.
ಅವಕಾಶವಿದ್ದಾಗಲೂ ಅವರು ಗ್ಲಾಮರ್ ಕಡೆ ವಾಲಲಿಲ್ಲ. ಘನತೆಯನ್ನು ಬಿಟ್ಟು ಕೊಡಲಿಲ್ಲ. ‘ಶ್ರೀಕೃಷ್ಣ ರುಕ್ಮಣಿ ಸತ್ಯಭಾಮ’ದಲ್ಲಿ ಅವರದು ರುಕ್ಮಿಣಿಯ ಘನತೆಯ ಪಾತ್ರ, ಈ ಪಾತ್ರ ಸರೋಜಾ ದೇವಿಯವರ ವ್ಯಕ್ತಿತ್ವಕ್ಕೆ ರೂಪಕದಂತಿದೆ ಎಂದು ಹಿಂದೊಮ್ಮೆ ಬರೆದಿದ್ದೆ. ಅದು ಅವರಿಗೆ ಬಹಳ ಇಷ್ಟವಾಗಿ, ಅದನ್ನು ಹತ್ತಾರು ಕಡೆ ಹೇಳಿಕೊಂಡು ಬಂದಿದ್ದರು.
ಚಿನ್ನದ ತಟ್ಟೆಯಲ್ಲಿ ಭೋಜನ!
ಕಲಾವಿದೆ ಜಯಂತಿಯವರೊಮ್ಮೆ ಏನೋ ಮಾತಿಗೆ ‘ಸರೋಜಾ ದೇವಿ ಚಿನ್ನದ ತಟ್ಟೆಯಲ್ಲಿ ಊಟ ಮಾಡುತ್ತಾರೆ’ ಎಂದಿದ್ದರು. ಮಧ್ಯಮ ವರ್ಗದಿಂದ ಬಂದ ನನ್ನಂತವರಿಗೆ ಅದು ಬೆರಗಿನ ಸಂಗತಿ. ಮುಂದೊಂದು ದಿನ ತುಸು ಅಳುಕುತ್ತಲೇ, ಈ ವಿಷಯವನ್ನು ಅವರ ಬಳಿ ಪ್ರಸ್ತಾಪ ಮಾಡಿದಾಗ ಅದು ದೊಡ್ಡ ವಿಷಯವೇ ಅಲ್ಲ ಎನ್ನುವಂತೆ ನಕ್ಕು, ಅವರು ಊಟ ಮಾಡುತ್ತಿದ್ದ ಚಿನ್ನದ ತಟ್ಟೆ ತೋರಿಸಿದ್ದರು. ಅವರ ಆಸ್ತಿಯ ಬಗ್ಗೆ ಹಲವು ಕಥೆಗಳಿವೆ. ಆದರೆ ಅದನ್ನು ಅವರು ಹೇಗೆ ಸದುಪಯೋಗಪಡಿಸಿಕೊಂಡರು ಎನ್ನುವುದು ಹೆಚ್ಚು ಪ್ರಚಾರ ಪಡೆಯಲಿಲ್ಲ.
ತಮ್ಮ ಹೆಸರಿನಲ್ಲಿಯೇ ಸಹ ಕಲಾವಿದರಿಗೆ ನೀಡಲು ಒಂದು ಲಕ್ಷ ರೂಪಾಯಿಯ ದೊಡ್ಡ ಮೊತ್ತದ ಪ್ರಶಸ್ತಿ ಸ್ಥಾಪಿಸಿದ್ದರು. ಅಕಾಲಿಕವಾಗಿ ಅಗಲಿದ ತಮ್ಮ ಮಗಳು ಭುವನೇಶ್ವರಿಯ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಲೇಖಕಿಯರಿಗೆ ದತ್ತಿ ಪುರಸ್ಕಾರ ಸ್ಥಾಪಿಸಿದರು. ಕಲಾವಿದರು ತೊಂದರೆ ಯಲ್ಲಿದ್ದರೆ ಕೂಡಲೇ ನೆರವಾಗುತ್ತಿದ್ದರು, ತಮ್ಮ ಹುಟ್ಟೂರು ದಶಾವರದಲ್ಲಿ ಶಾಲೆಯನ್ನು ಆರಂಭಿ ಸಿದರು. ಪ್ರಚಾರಕ್ಕೆ ಹೋಗದೆ ಅವರು ಮಾಡಿದ ಸಮಾಜ ಸೇವೆಯ ದೊಡ್ಡ ಪಟ್ಟಿಯೇ ಇದೆ.
ಈಡೇರದ ಪುಸ್ತಕ ಕನಸು
ಆದಿಚುಂಚನಗಿರಿ ಮಠದ ಯೋಜನೆಯೊಂದಕ್ಕೆ ಬಿ.ಸರೋಜಾದೇವಿಯವರ ಬಗ್ಗೆ ಪುಸ್ತಕ ಬರೆ ಯುತ್ತೇನೆ ಎಂದು ಎರಡು ವರ್ಷಗಳ ಹಿಂದೆಯೇ ಒಪ್ಪಿಕೊಂಡಿದ್ದೆ. ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡು, ಆ ಪುಸ್ತಕ ಬರವಣಿಗೆಯ ಕೆಲಸವನ್ನು ಮುಂದಕ್ಕೆ ಹಾಕುತ್ತಲೇ ಬಂದೆ. ನಾನು ನೋಡುತ್ತಾ ಬಂದಾಗಿಂದಲೂ ಸರೋಜಾ ದೇವಿ ಅನಾರೋಗ್ಯದಿಂದ ನರಳಿದ ಒಂದು ಘಟನೆಯೂ ನೆನಪಿಲ್ಲ.
ಅವರೊಂದು ರೀತಿ ಭೂಮಿಗೆ ಬಂದ ಗಂಧರ್ವರ ರೀತಿಯೇ ಭಾಸವಾಗುತ್ತಿದ್ದರು. ‘ಹೀಗೆ ಪುಸ್ತಕ ಬರೆಯ ಬೇಕು. ಒಂದು ದಿನ ಭೇಟಿಗೆ ಅವಕಾಶ’ ಎಂದು ಕೇಳಿದಾಗ ‘ನಿನಗೆ ಗೊತ್ತಿಲ್ಲದ್ದು ಏನಿದೆ! ಆಗಲಿ ಅದಕ್ಕೇನಂತೆ, ವರಮಹಾಲಕ್ಷ್ಮಿ ಹಬ್ಬ ಕಳೆದು ಕೊಂಡು ಬಾ’ ಎಂದಿದ್ದರು. ಅದೇ ಅವರ ಜೊತೆಗಿನ ಕೊನೆಯ ಸಂಭಾಷಣೆಯಾಯಿತು.
ಅವರಿದ್ದಾಗಲೇ ಪುಸ್ತಕ ಬರೆಯಲಿಲ್ಲ ಎನ್ನುವ ನೋವು ನನ್ನನ್ನು ಜೀವನವೆಲ್ಲಾ ಕಾಡುತ್ತದೆ. ಯಾರದೇ ಜನ್ಮಶತಮಾನೋತ್ಸವ ಬಂದರೂ ಸರೋಜಾ ದೇವಿಯವರ ಬಳಿ ಮಾಹಿತಿಗೆ ಓಡುತ್ತಿದ್ದೆ. ‘ಅಮ್ಮ, ನಿಮ್ಮ ಜನ್ಮ ಶತಮಾನೋತ್ಸವ ಕೂಡ ಹೀಗೆ ಮಾಡ್ತೀವಿ. ನೀವೂ ನಮ್ಮ ಜೊತೆ ಇರ್ತೀರಿ’ ಎಂದಾಗ ’ನೂರು ವರ್ಷ ಇರ ಬೇಕು ಅಂತೇನು ಆಸೆ ನನಗಿಲ್ಲ. ಯಾರಿಗೂ ತೊಂದರೆ ಕೊಡದೆ ಹೋಗಬೇಕು’ ಎಂದಿದ್ದರು. ದೇವರು ಅವರ ಕೋರಿಕೆಯನ್ನು ಈಡೇರಿಸಿದ್ದಾನೆ. ಅಂಕದ ಪರದೆ ಜಾರಿದೆ.. ವಹಿಸಿದ ಪಾತ್ರವ ಯಶಸ್ವಿಯಾಗಿ ಅಭಿನಯಿಸಿ ಸರೋಜಾ ದೇವಿ ತೆರಳಿದ್ದಾರೆ. ಅವರ ಪಾತ್ರಗಳ ಮೂಲಕ, ಅಭಿನಯದ ಮೂಲಕ ನಮ್ಮ ಹೃದಯಗಳಲ್ಲಿ ಚಿರಂತನವಾಗಿ ಉಳಿದು ಕೊಳ್ಳುತ್ತಾರೆ.
ಡಾ.ರಾಜ್ ಮೆಚ್ಚುಗೆ
‘ಮಲ್ಲಮ್ಮನ ಪವಾಡ’ ‘ಅಣ್ಣ ತಂಗಿ’ ಚಿತ್ರಗಳಲ್ಲಿ ಡಾ.ರಾಜ್ ಕುಮಾರ್ ಅವರ ಜೊತೆ ಅಭಿನಯಿ ಸಿದ್ದ ಸರೋಜಾ ದೇವಿ ‘ಭಾಗ್ಯವಂತರು’ ಚಿತ್ರದಲ್ಲಿ ಪೈಪೋಟಿಯ ಅಭಿನಯ ನೀಡಿದರು. ‘ಬಬ್ರು ವಾಹನ’ ಅವರ ಜೋಡಿಯ ಇನ್ನೊಂದು ಮಹತ್ವದ ಚಿತ್ರ. ‘ಅವರ ಡೆಡಿಕೇಷನ್, ನನಗೆ ಬಹಳ ಮೆಚ್ಚುಗೆ, ಪಾತ್ರ ನೈಜವಾಗಿ ಬರಲು ಶೇಕಡ ನೂರರಷ್ಟು ಸಮರ್ಪಿಸಿಕೊಳ್ಳುತ್ತಿದ್ದರು’ ಎಂದು ರಾಜ್ ಕುಮಾರ್ ಮೆಚ್ಚುಗೆ ಮಾತನಾಡಿದ್ದರು. ‘ಭಾಗ್ಯವಂತರು’ ಚಿತ್ರದ ಲೆಕ್ಕದ ಪುಸ್ತಕದ ಪ್ರಸಂಗ ಅಣ್ಣಾವ್ರಿಗೆ ಬಹಳ ಇಷ್ಟ. ‘ನೋಡು ಇದು ನಿಜವಾದ ಕಲಾವಿದರು ಕೊಡುವ ಅಭಿನಯ’ ಎಂದು ಅವರು ನನ್ನ ಬಳಿ ಮೆಚ್ಚುಗೆ ಮಾತನ್ನಾಡಿದ್ದರು.
ಗಾಯಕಿಯೂ ಹೌದು!
ಸರೋಜಾ ದೇವಿ ಒಳ್ಳೆಯ ಗಾಯಕಿ ಯಾಗಿದ್ದರೂ ಅವರಿಗೆ ಹಾಡುವ ಅವಕಾಶ ಸಿಕ್ಕಲಿಲ್ಲ. ‘ಹಾಡಬೇಕು ಎಂದು ಆಸೆ ಇತ್ತು, ಕಾಲ್ ಶೀಟ್ ಒತ್ತಡ ದಲ್ಲಿ ನಿರ್ಮಾಪಕರು ಈ ಸಾಹಸಕ್ಕೆ ಮುಂದಾಗಲಿಲ್ಲ’ ಎಂದು ಅವರು ಹೇಳಿ ದ್ದುಂಟು. ಮನೆಯಲ್ಲಿ ದೇವರ ಪೂಜೆ ಮಾಡುವಾಗ ಅವರೇ ಅಭಿನಯಿಸಿದ ‘ಶರಣೆಂಬೆ ನಾ ಶಶಿಭೂಷಣ’, ‘ಹರಿ ಚಿತ್ತ ನರಚಿತ್ತ’ ಮೊದಲಾದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು.
*
‘ಭೂ ಕೈಲಾಸ’ಚಿತ್ರದಲ್ಲಿ ಮಂಡೋದರಿ ಪಾತ್ರಕ್ಕೆಂದು ಕರೆಸಿದ್ದರೂ ಕೊಟ್ಟಿದ್ದು ಚಿಕ್ಕ ದಾದ ಪಾರ್ವತಿಯ ಪಾತ್ರ. ಸರೋಜಾ ದೇವಿಯವರ ತಾಯಿಗೇ ಈ ಕಹಿ ಘಟನೆಯಿಂದ ಚಿತ್ರರಂಗ ಸಾಕು ಎನ್ನಿ ಸಿತ್ತು. ಆದರೆ ಕು.ರ.ಸೀ ‘ಪಾರ್ವತಿ ಎಂದರೆ ಜಗತ್ತಿನ ತಾಯಿ, ಈ ಪಾತ್ರ ಮಾಡುವ ಮೂಲಕ ನಿನ್ನ ಬಣ್ಣದ ಬದುಕು ಹೊಸ ಎತ್ತರಕ್ಕೆ ಏರುತ್ತದೆ’ ಎಂದಿದ್ದರು. ಈ ಮಾತು ನಿಜವಾಯಿತು ಎಂದು ಸರೋಜಾ ದೇವಿ ಸದಾ ನೆನಪು ಮಾಡಿಕೊಳ್ಳುತ್ತಿದ್ದರು.