ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr K S Chaithra Column: ಶಿಲಾಸಮಾಧಿಯೇ ವಿಶ್ವದ ಅದ್ಭುತ

ಕ್ಯಾಟಕಾಂಬ್ ಭೂಗತವಾದ ಮೆಟ್ಟಿಲು, ಕಿರುಮಾರ್ಗ, ಗೂಡು, ಎಲ್ಲವನ್ನೂ ಹೊಂದಿರುವ ಕೋಣೆಗಳ ಜಾಲವಾಗಿದ್ದು ಮೃತರ ಅಂತ್ಯಕ್ರಿಯೆಗೆ ಬಳಸುವ ಸಮಾಧಿ ಸ್ಥಳಗಳು! ಈಜಿಪ್ಟಿನ ಜನರು ಮರಣ ನಂತರದ ಬದುಕಿನಲ್ಲಿ ಅಪಾರವಾದ ನಂಬಿಕೆಯನ್ನು ಹೊಂದಿದ್ದರು. ಹಾಗಾಗಿಯೇ ಘೆರೋಗಳು ಮತ್ತು ರಾಜ ಮನೆತನದವರಿಗೆ ವಿಶಾಲ ಮತ್ತು ವೈಭವಯುತವಾದ ಸಮಾಧಿಗಳನ್ನು ನಿರ್ಮಿಸಲಾಗುತ್ತಿತ್ತು.

ಶಿಲಾಸಮಾಧಿಯೇ ವಿಶ್ವದ ಅದ್ಭುತ

Profile Ashok Nayak May 11, 2025 1:44 PM

ಈಜಿಪ್ಟಿನ ರಾಜಧಾನಿ ಕೈರೋದಿಂದ ಎರಡೂವರೆ ತಾಸಿನ ಪಯಣದ ನಂತರ ಪ್ರಾಚೀನ ಕಾಲದ ಕಲೆ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿದ್ದ ಅಲೆಕ್ಸಾಂಡ್ರಿಯಾ ತಲುಪಿದ್ದೆವು. ಮಿನಿವ್ಯಾನ್‌ನಲ್ಲಿ ಎಸಿಯ ತಂಪಿನಲ್ಲಿ ಕುಳಿತು ಹೊರಗೆ ಕಣ್ಣು ಹಾಯಿಸಿದರೆ ಪ್ರಖರ ಬಿಸಿಲಿನಲ್ಲಿ ಹೊಳೆವ ನೀಲ ನದಿಯ ಇಕ್ಕೆಲಗಳಲ್ಲಿ ಛತ್ರಿ ಬಿಚ್ಚಿಟ್ಟಂತೆ ಕಾಣುವ ತಾಳೆ ಮರಗಳು ಮನ ಸೆಳೆದವು!

ನೋಡಲೇಬೇಕಾದ ಅದ್ಭುತ ಸ್ಥಳ ಎಂದು ಗೈಡ್ ಮುನೀರ್ ಬಣ್ಣಿಸಿದಾಗ ಮನಸ್ಸಿನಲ್ಲಿ ಇದ್ದದ್ದು ಪಿರಮಿಡ್‌ನಂಥ ಬೃಹತ್ ರಚನೆ, ಎತ್ತರದ ಮೂರ್ತಿ ಇತ್ಯಾದಿ. ಎದುರಿಗೆ ಕಂಡಿದ್ದು ಸಮತಟ್ಟಾದ ನೆಲದ ಮೇಲೆ ಗೋಳಾಕಾರದ ಚಿಕ್ಕದಾದ ಬಾಗಿಲು; ಇಷ್ಟೇನಾ ಎಂದುಕೊಂಡು ತಣ್ಣಗಿನ ಗಾಳಿ, ಮಂದ ಬೆಳಕಿನ ನಡುವೆ ಒಳಗೆ ಕಾಲಿಟ್ಟರೆ ಅದು ಈವರೆಗೆ ನಾವು ಕಂಡರಿಯದ ಲೋಕ, ಅದೇ ಅಲೆಕ್ಸಾಂಡ್ರಿಯದ ಕ್ಯಾಟಕಾಂಬ್!

ಕತ್ತೆ ಕಾರಣ!

ಮಧ್ಯಯುಗದ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಅಲೆಕ್ಸಾಂಡ್ರಿಯದ ‘ಕ್ಯಾಟಕಾಂಬ್’ ಹೊರಜಗತ್ತಿಗೆ ಪರಿಚಯವಾದದ್ದು ಒಂದು ಕತ್ತೆಯಿಂದ! 1900 ಇಸವಿಯಲ್ಲಿ ಜನನಿಬಿಡ ಈ ಪುಟ್ಟ ಪಟ್ಟಣದ ಮಾರುಕಟ್ಟೆಯಲ್ಲಿ ಬಂಡಿಯನ್ನು ಕತ್ತೆಯೊಂದು ಎಳೆಯುತ್ತಾ ನಡೆಯುತ್ತಿತ್ತು. ಇಲ್ಲಿಗೆ ಬಂದು ಕಾಲಿಟ್ಟದ್ದೇ ತಡ ದುಡುಂ ಎಂದು ಕೆಳಗೆ ಬಿದ್ದು, ಜನರೆಲ್ಲ ನೋಡನೋಡುತ್ತಿರುವಂತೆಯೇ ನೆಲದಾಳದಲ್ಲಿ ಕಣ್ಮರೆಯಾಯಿತು. ಇದೇನು ವಿಚಿತ್ರ ಎಂದು ಶೋಧಿಸಿದಾಗ ಮಣ್ಣಿನಲ್ಲಿ ಅಡಗಿದ್ದ ಈ ವಿಶಿಷ್ಟ ಭೂಗತ ಪ್ರಪಂಚ ಬೆಳಕಿಗೆ ಬಂತು. ಈಗ ಈಜಿಪ್ಟಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು ಬೆಳಗ್ಗೆ ಒಂಬತ್ತರಿಂದ ಸಂಜೆ ಐದರವರೆಗೆ ಇದು ತೆರೆದಿದ್ದು ಸುಮಾರು ಮುನ್ನೂರಾ ಐವತ್ತು ರೂಪಾಯಿ ಪ್ರವೇಶಧನ. ನೋಡಲು ಕನಿಷ್ಠ ಎರಡರಿಂದ ಮೂರು ತಾಸು ಸಮಯ ಬೇಕು.

ಇದನ್ನೂ ಓದಿ: Shashidhara Halady Column: ತಿರುಳಿನ ಬಣ್ಣ ಆಕರ್ಷಕ: ಯಾವ ಹಣ್ಣಿದು ?

ಕ್ಯಾಟಕಾಂಬ್ ಭೂಗತವಾದ ಮೆಟ್ಟಿಲು, ಕಿರುಮಾರ್ಗ, ಗೂಡು, ಎಲ್ಲವನ್ನೂ ಹೊಂದಿರುವ ಕೋಣೆ ಗಳ ಜಾಲವಾಗಿದ್ದು ಮೃತರ ಅಂತ್ಯಕ್ರಿಯೆಗೆ ಬಳಸುವ ಸಮಾಧಿ ಸ್ಥಳಗಳು! ಈಜಿಪ್ಟಿನ ಜನರು ಮರಣ ನಂತರದ ಪಯಣ ಮತ್ತು ಬದುಕಿನಲ್ಲಿ ಅಪಾರವಾದ ನಂಬಿಕೆಯನ್ನು ಹೊಂದಿದ್ದರು. ಹಾಗಾಗಿಯೇ ಘೆರೋಗಳು ಮತ್ತು ರಾಜ ಮನೆತನದವರಿಗೆ ವಿಶಾಲ ಮತ್ತು ವೈಭವಯುತ ವಾದ ಸಮಾಧಿಗಳನ್ನು ನಿರ್ಮಿಸಲಾಗುತ್ತಿತ್ತು. ಗ್ರೀಕ್ ರೋಮನ್ ಆಳ್ವಿಕೆ ಶುರು ವಾದ ನಂತರವೂ ಈ ನಂಬಿಕೆ ಮುಂದುವರಿಯಿತು. ಆದರೆ ನೆಲಮಟ್ಟದಲ್ಲಿ ಸಮಾಧಿ ಮಾಡಲು ಜಾಗದ ಕೊರತೆ ಇತ್ತು. ಹಾಗೆಯೇ ಇವುಗಳನ್ನು ಲೂಟಿ ಮಾಡಿ, ವಿರೂಪಗೊಳಿಸಿ ಅಪವಿತ್ರಗೊಳಿಸುವ ಸಾಧ್ಯತೆ ಇತ್ತು.

ಹೀಗಾಗಿ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಅಂತ್ಯಕ್ರಿಯೆಗಾಗಿ ಮೀಸಲಾಗಿಟ್ಟ ಸುರಕ್ಷಿತ ಭೂಗತ ರಚನೆಗಳು ಈ ಕ್ಯಾಟಕಾಂಬ್‌ಗಳು. ಕ್ರಿಸ್ತಶಕ ಒಂದರಿಂದ ಮೂರನೇ ಶತಮಾನದವರೆಗೆ ರೋಮನ್ನರ ಆಳ್ವಿಕೆಯಲ್ಲಿ ಇವುಗಳ ನಿರ್ಮಾಣ ನಡೆಯಿತು. ಹಾಗಾಗಿಯೇ ಈ ಶಿಲಾಸಮಾಧಿಗಳ ವಿನ್ಯಾಸ ಮತ್ತು ಕೆತ್ತನೆಗಳಲ್ಲಿ ಈಜಿಪ್ಟ್, ಗ್ರೀಕ್, ರೋಮನ್ ಈ ಮೂರೂ ಶೈಲಿಗಳ ಮಿಶ್ರಣವನ್ನು ಕಾಣಬಹುದು.

Ghero 2 R

ಆರಂಭದಲ್ಲಿ ನಿರ್ದಿಷ್ಟ ಕುಲೀನ ಮನೆತನಕ್ಕಾಗಿ ಕಟ್ಟಿದಂತಹ ಭೂಗತ ಸಮಾಧಿ, ನಂತರ ವಿಸ್ತಾರ ಗೊಳ್ಳುತ್ತ ಸಾರ್ವಜನಿಕ ಸಮಾಧಿಸ್ಥಳವಾಗಿ ಬಳಸಲ್ಪಟ್ಟಿತು. ಅಲೆಕ್ಸಾಂಡ್ರಿಯಾದಲ್ಲಿರುವ ಈ ಸಮುಚ್ಚಯದಲ್ಲಿ ಮುನ್ನೂರು ಸಮಾಧಿಗೆ ಅವಕಾಶವಿತ್ತು! ಇವು ಸುಮಾರು ನೂರಾಹತ್ತು ಅಡಿ ಕೆಳಗಿದ್ದು ಶಿಲಾಪದರವನ್ನು ಮೂರು ಹಂತಗಳಲ್ಲಿ ಕತ್ತರಿಸಿ, ಕೆತ್ತಿ ಇವುಗಳನ್ನು ನಿರ್ಮಿಸಲಾಗಿದೆ. ಅತ್ಯಂತ ಕೆಳಗಿನ ಹಂತ ಅಂತರ್ಜಲ ಸೋರಿಕೆಯಿಂದಾಗಿ ಈಗ ಮುಳುಗಿದೆ. ಕೋಮ್ ಎಲ್ ಶೋಕಾಫಾ ಕ್ಯಾಟಕಾಂಬ್ ಗಳನ್ನು ಕೋಮ್ ಎಲ್ ಶೋಕಾ- ಅಂದರೆ ಚೂರುಗಳ ದಿಬ್ಬ ಎಂದು ಕರೆಯಲಾಗುತ್ತದೆ. ಆರಂಭದಲ್ಲಿ ಇದರ ಶೋಧ ನಡೆಸಿದಾಗ ಮುರಿದ ಮಡಕೆಗಳು ಮತ್ತು ಜಾಡಿ ಗಳ ರಾಶಿಯೇ ಸಿಕ್ಕಿತು.

ಅಂತ್ಯಕ್ರಿಯೆಯ ಸಮಯದಲ್ಲಿ ಅಥವಾ ನಂತರದ ಸ್ಮರಣಾರ್ಥ ಕೂಟಗಳಲ್ಲಿ ಭೇಟಿ ನೀಡುವ ವರು ಆಹಾರ ಮತ್ತು ವೈನ್, ಮಡಕೆಗಳಲ್ಲಿ ತರುವುದು ಅಂದಿನ ರೂಢಿ. ಪ್ರಾರ್ಥನೆಯ ನಂತರ ಅವುಗಳನ್ನು ಒಟ್ಟಾಗಿ ಸೇವಿಸುತ್ತಿದ್ದರು. ಸಾವಿನ ಜಾಗದಿಂದ ಯಾವುದೇ ವಸ್ತುವನ್ನು ಮತ್ತೆ ಮನೆಗೆ ತಂದು ಮರುಬಳಕೆ ಮಾಡುವಂತಿರಲಿಲ್ಲ. ಮಣ್ಣಿನ ಪಾತ್ರೆಗಳಾದ್ದರಿಂದ ಅಗ್ಗವಾಗಿದ್ದು ಅಲ್ಲಿಯೇ ಸುಲಭವಾಗಿ ಒಡೆಯಲಾಗುತ್ತಿತ್ತು. ಈ ರೀತಿ ಒಡೆದ ಮಣ್ಣಿನ ಮಡಕೆಗಳ ದೊಡ್ಡ ರಾಶಿಯಿಂದ ಈ ಹೆಸರು!

ಸುರುಳಿಯಾಕಾರದ ತೊಂಬತ್ತೊಂಬತ್ತು ಮೆಟ್ಟಿಲುಗಳ ಮೂಲಕ ಕೆಳಗೆ ನಡೆದಂತೆ ರೋಟುಂಡಾ ಎಂದು ಕರೆಯಲ್ಪಡುವ ವೃತ್ತಾಕಾರದ ದೊಡ್ಡ ಕೋಣೆಗೆ ಪ್ರವೇಶ. ಮೃತದೇಹಗಳು ಮತ್ತು ಅವರಿಗೆ ನೀಡುವ ಕಾಣಿಕೆಗಳನ್ನು ಹಗ್ಗ ಕಟ್ಟಿ ಈ ಮೆಟ್ಟಿಲುಗಳ ಮೂಲಕ ಸಾಗಿಸಲಾಗುತ್ತಿತ್ತು. ಹಾಗೆಯೇ ಮೆಟ್ಟಿಲು ಗಳ ಮೇಲೆ ನಿಂತು ಮಧ್ಯಕೋಣೆ ಯಲ್ಲಿ ನಡೆಯುವ ವಿಧಿ ವಿಧಾನಗಳನ್ನು ನೋಡಲು ಅವಕಾಶ ಕಲ್ಪಿಸಿದ್ದರು.

ಈ ಮಧ್ಯ ಕೋಣೆಯಲ್ಲಿ ನಾಲ್ಕು ಮಾರ್ಗಗಳಿದ್ದು ಸುತ್ತಲೂ ಒಂದಕ್ಕೊಂದು ಸಂಪರ್ಕವಿರುವ ಅನೇಕ ಕೋಣೆಗಳಿವೆ. ಮುಖ್ಯ ಸಮಾಧಿ ಕೋಣೆಯಲ್ಲಿ ಮೃತದೇಹವನ್ನು ಬ್ಯಾಂಡೆಜ್ ಸುತ್ತಿ, ರಕ್ಷಣಾ ಕವಚಗಳನ್ನು ಹಾಕಿ ಮಮ್ಮಿಗಳ ನ್ನಾಗಿ ಮಾಡುವ ಪ್ರಕ್ರಿಯೆ ನಡೆಯುತ್ತಿತ್ತು.

ನಂತರ ಶಿಲಾ ಪೆಟ್ಟಿಗೆಯಲ್ಲಿ ಇವುಗಳನ್ನು ಸಂರಕ್ಷಿಸಿ ಇಡಲಾಗುತ್ತಿತ್ತು. ಗೋಡೆಯಲ್ಲಿ ಅಲಂಕಾರಿಕ ಚಿತ್ರಗಳಿದ್ದು ಪ್ರಾಚೀನ ಈಜಿಪ್ಟಿನ ದೇವರನ್ನು ರೋಮನ್ ಉಡುಪು ಮತ್ತು ಶೈಲಿಯಲ್ಲಿ ಚಿತ್ರಿಸ ಲಾಗಿದೆ. ಹಾಗೆಯೇ ಮರಣದ ನಂತರದ ಪಯಣ- ಬದುಕಿಗಾಗಿ ಅಗತ್ಯವಿರುವ ಆಹಾರಕ್ಕಾಗಿ ಮಣ್ಣಿನ ಪಾತ್ರೆ, ಆಭರಣಗಳು, ಇನ್ನಿತರ ವಸ್ತುಗಳನ್ನು ಇಡಲು, ಗೋಡೆಗಳಲ್ಲಿ ನಿರ್ದಿಷ್ಟ ಜಾಗ ಗಳಿವೆ. ಇಲ್ಲಿರುವ ಚಿತ್ರಗಳು ಮೃತರಿಗೆ ನಂತರದ ಪಯಣದಲ್ಲಿ ಧೈರ್ಯ ತುಂಬುವ ಅನೇಕ ಸಂಕೇತಗಳನ್ನು ಹೊಂದಿದೆ.

ಅಲ್ಲಲ್ಲಿ ಕಾಣಬರುವ ಕಮಲದ ಹೂವು -ಪರಿಶುದ್ಧತೆ ಮತ್ತು ಸೃಷ್ಟಿ, ಜೀರುಂಡೆ -ಹುಟ್ಟು ಹಾಗೂ ಪರಿವರ್ತನೆಗೆ ಸಂಕೇತವಾಗಿದೆ. ಕೆಲವು ಪ್ರಾಣಿಗಳಿಗೂ ಇಲ್ಲಿ ಸ್ಥಾನವಿದೆ! ಇಲ್ಲಿನ ಕಾರಕೆಲಾ ಹಾಲ್, ರೋಮನ್ ಚಕ್ರವರ್ತಿ ಕಾರಕೆಲಾನ ಕಾಲದಲ್ಲಿ ಕುದುರೆ ಜೂಜಿನಲ್ಲಿ ಗೆದ್ದ ಪ್ರತಿಷ್ಠಿತ ವ್ಯಕ್ತಿಗಳಲ್ಲದೇ ಕುದುರೆಗಳಿಗೂ ಸಮಾಧಿ ಸ್ಥಳವಾಗಿತ್ತು ಎಂದು ಅಲ್ಲಿ ಸಿಕ್ಕ ಮೂಳೆಗಳಿಂದ ಊಹಿಸಲಾಗಿದೆ. ಒಟ್ಟಿನಲ್ಲಿ ಜನರು ಮರಣಾ ನಂತರದ ಬದುಕಿನ ಬಗ್ಗೆ ದೃಢವಾದ ನಂಬಿಕೆ ಹೊಂದಿದ್ದರು ಎನ್ನುವು ದಂತೂ ಸ್ಪಷ್ಟ!

ಟ್ರೈಕ್ಲಿನಿಯಂ ಎನ್ನುವ ದೊಡ್ಡ ಕೋಣೆ, ಅಂತ್ಯ ಕ್ರಿಯೆ ನಂತರದ ಭೋಜನ ನಡೆಯುವ ಸ್ಥಳ. ಇಲ್ಲಿ ಕುಟುಂಬದವರು ಮತ್ತು ಪ್ರೀತಿಪಾತ್ರರು, ಮೃತರ ಸ್ಮರಣಾರ್ಥ ಭೋಜನವನ್ನು ಏರ್ಪಡಿಸುತ್ತಿದ್ದರು. ಎಲ್ಲರೂ ಸೇರಿ ಭೋಜನದಲ್ಲಿ ಪಾಲ್ಗೊಳ್ಳುವುದು ಶೋಕದ ತೀವ್ರತೆಯನ್ನು ಕಡಿಮೆ ಮಾಡುವುದರ ಜತೆ ಧಾರ್ಮಿಕ ಆಚರಣೆಯೂ ಆಗಿತ್ತು. ಈ ಭೋಜನ ಕೋಣೆ, ಕಲ್ಲಿನ ಬೆಂಚುಗಳನ್ನು ಯು ಆಕಾರದಲ್ಲಿ ಹೊಂದಿದ್ದು ಅನೇಕ ಜನರು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಹೊಂದಿದೆ.

ಹಾಗೆ ನೋಡಿದರೆ ಕ್ಯಾಟಕಾಂಬ್, ಭೂಗತ ಶಿಲಾಸಮಾಧಿ ಸಮುಚ್ಚಯ ಎನ್ನುವುದಕ್ಕಿಂತ ಮೃತರ ಕುರಿತಾದ ಗೌರವ, ಮರಣಾನಂತರದ ಬದುಕಿನ ಬಗ್ಗೆ ಜನರ ನಂಬಿಕೆಗಳು, ಅಂದಿನ ಜನಜೀವನ-ಸಂಸ್ಕೃತಿ ಇವೆಲ್ಲವನ್ನು ಕಲಾತ್ಮಕವಾಗಿ ಪ್ರಸ್ತುತಪಡಿಸಿರುವ ಒಂದು ಶಿಲಾಸ್ಮಾರಕ ಎನ್ನುವುದೇ ಸೂಕ್ತ. ವರ್ಷಗಟ್ಟಲೇ ಅಪಾರ ಪರಿಶ್ರಮ, ಸಂಪನ್ಮೂಲ ಬಳಸಿ ಭೂಮಿಯ ಮೇಲೆ ಬೃಹತ್ ಕಲ್ಲು ಜೋಡಿಸಿ ಪಿರಮಿಡ್, ಭೂತಳದಲ್ಲಿ ಶಿಲಾಪದರ ಕೊರೆದು ಸಮಾಧಿ ನಿರ್ಮಾಣ ಇವೆಲ್ಲ ಕಂಡು ಬೆರಗಾದರೂ, ಇಲ್ಲಿನ ಬದುಕಿಗಿಂತ ಸಾವಿನ ನಂತರದ ಬದುಕೇ ಮುಖ್ಯವಾಗಿತ್ತೇ ಎಂಬ ಪ್ರಶ್ನೆಯೂ ಮೂಡಿತು!