ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕನ್ನಡಕ್ಕಾಗಿ ಕಣ್ಣೀರಿಟ್ಟ ರಾಜಕುಮಾರ್‌ !

ನಮ್ಮ ‘ಕನ್ನಡ ಜಾಗೃತಿ’ ಎಂಬ ಸಾಕ್ಷ್ಯಚಿತ್ರದಲ್ಲಿ ಆ ಐತಿಹಾಸಿಕ ಚಳುವಳಿಯ ನೇರ ಚಿತ್ರೀಕರಣ ವಿದೆ. ಇದು ಆ ಚಳುವಳಿಯ ಏಕಮೇವ ಸಾಕ್ಷಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮೇ 18, 1982. ಸಮಯ ಬೆಳಿಗ್ಗೆ 11 ಗಂಟೆ. ಸ್ಥಳ: ಪುರಸಭೆ ಮೈದಾನ, ಮೈಸೂರು. ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಮುಖ ಸ್ಥಾನ ದೊರೆಯಲು ‘ಗೋಕಾಕ್ ವರದಿ’ಯನ್ನು ಜಾರಿಗೆ ತರಲು ಸರಕಾರವನ್ನು ಒತ್ತಾಯಿಸಿ ಎಲ್ಲೆಡೆ ನಡೆಯು ತ್ತಿದ್ದ ಆಂದೋಲನಕ್ಕೆ ಡಾ.ರಾಜ್ ಬಂದು ಸೇರಿದ್ದು ಬಹುದೊಡ್ಡ ಬಲವನ್ನು ಒದಗಿಸಿತು.

ಕನ್ನಡಕ್ಕಾಗಿ ಕಣ್ಣೀರಿಟ್ಟ ರಾಜಕುಮಾರ್‌ !

Profile Ashok Nayak Apr 24, 2025 2:15 PM

ಬಿ.ಎಸ್.ಮನೋಹರ್

ಡಾ.ರಾಜ್‌ಕುಮಾರ್ ಅವರು ಗೋಕಾಕ್ ಚಳವಳಿಯ ಅಂಗವಾಗಿ 18.5.1982ರಂದು ಮೈಸೂರಿನಲ್ಲಿ ಭಾಷಣ ಮಾಡಿದಾಗ, ಅದನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಲೇಖಕರ ಆತ್ಮೀಯ ಅನುಭವ ಇಲ್ಲಿದೆ.

ಇಂದಿಗೆ ನಲವತ್ತ ಮೂರು ವರ್ಷಗಳ ಹಿಂದೆ, 1982ರಲ್ಲಿ ಡಾ. ರಾಜ್ ಕುಮಾರ್ ರವರ ನೇತ್ರತ್ವದಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಬೇಕೆಂದು ಒತ್ತಾಯಿಸಿ ರಾಜ್ಯದಾದ್ಯಂತ ನಡೆದ ಗೋಕಾಕ್ ಚಳುವಳಿ, ಕರ್ನಾಟಕದ ನಾಡು-ನುಡಿಯ ರಕ್ಷಣೆಗಾಗಿ ನಡೆಸಿದ ಒಂದು ಐತಿಹಾಸಿಕ ಹೋರಾಟ. ಆ ಸಂದರ್ಭದಲ್ಲಿ ನಡೆದ ಪ್ರತಿಭಟನಾ ಸಭೆ ಹಾಗೂ ಮೆರವಣಿಗೆಗಳಲ್ಲಿ ಸಾಹಿತಿಗಳು, ಕಲಾವಿದ ರೊಂದಿಗೆ ಜನಸಾಮಾನ್ಯರು ಪಾಲ್ಗೊಳ್ಳುತ್ತಿದ್ದರು.

ನಮ್ಮ ‘ಕನ್ನಡ ಜಾಗೃತಿ’ ಎಂಬ ಸಾಕ್ಷ್ಯಚಿತ್ರದಲ್ಲಿ ಆ ಐತಿಹಾಸಿಕ ಚಳುವಳಿಯ ನೇರ ಚಿತ್ರೀಕರಣ ವಿದೆ. ಇದು ಆ ಚಳುವಳಿಯ ಏಕಮೇವ ಸಾಕ್ಷಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮೇ 18, 1982. ಸಮಯ ಬೆಳಿಗ್ಗೆ 11 ಗಂಟೆ. ಸ್ಥಳ: ಪುರಸಭೆ ಮೈದಾನ, ಮೈಸೂರು. ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಮುಖ ಸ್ಥಾನ ದೊರೆಯಲು ‘ಗೋಕಾಕ್ ವರದಿ’ಯನ್ನು ಜಾರಿಗೆ ತರಲು ಸರಕಾರವನ್ನು ಒತ್ತಾಯಿಸಿ ಎಲ್ಲೆಡೆ ನಡೆಯುತ್ತಿದ್ದ ಆಂದೋಲನಕ್ಕೆ ಡಾ.ರಾಜ್ ಬಂದು ಸೇರಿದ್ದು ಬಹುದೊಡ್ಡ ಬಲವನ್ನು ಒದಗಿಸಿತು.

ಇದನ್ನೂ ಓದಿ: Vishweshwar Bhat Column: ವಿಶ್ವಶಾಂತಿ ಕದಡಲು ಅಮೆರಿಕ ಅಧ್ಯಕ್ಷರ ಒಂದು ಮಾತು ಸಾಕು !

ಕರ್ನಾಟಕದ ಉದ್ದಗಲಕ್ಕೂ ಸಂಚಾರ ಮಾಡಿ, ಸಭೆಗಳನ್ನು ನಡೆಸಿ, ಡಾ.ರಾಜ್ ಮೇ 18, 1982ರಂದು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬಂದರು. ಸಾವಿರಾರು ಜನ ಸೇರಿದ್ದ ಆ ಸಭೆಗೆ, ಬಿಳಿ ಪಂಚೆ ಹಾಗೂ ಶರ್ಟ್ ಧರಿಸಿದ್ದ ರಾಜ್, ನಡೆದು ಬಂದು ಎಲ್ಲರ ಕಡೆಗೂ ಕೈಬೀಸಿದಾಗ, ನೆರೆದಿದ್ದ ಜನರಲ್ಲಿ ರೋಮಾಂಚನ! ‘ಗೋಕಾಕ್ ವರದಿ ಜಾರಿಗೆ ಬರಲಿ’ ಎಂಬ ಘೋಷಣೆ ಮುಗಿಲು ಮುಟ್ಟಿತು. ಅಂದಿನ ಆ ಬೃಹತ್ ಸಭೆಯಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರ ಹಾಗೂ ಕಲಾವಿದರ ದಂಡೇ ರಾಜ್‌ರನ್ನು ಹಿಂಬಾಲಿಸಿತ್ತು. ವಿಷ್ಣುವರ್ಧನ್, ಅನಂತನಾಗ್, ಶಂಕರ್ ನಾಗ್, ಎಂ.ಪಿ. ಶಂಕರ್, ಅಶ್ವತ್, ಲೋಕನಾಥ್, ರಾಜೇಶ್, ಲೋಕೇಶ್, ತೂಗುದೀಪ, ದ್ವಾರಕೀಶ್, ಅಶೋಕ್, ಪ್ರಭಾಕರ್, ಪಾಟೀಲ್ ಪುಟ್ಟಪ್ಪ, ತರಾಸು, ಚಿದಾನಂದ ಮೂರ್ತಿ ಸೇರಿದಂತೆ ಅನೇಕ ಖ್ಯಾತ ನಾಮರು ಭಾಗವಹಿಸಿದ್ದರು.

ಆಗಮಿಸಿದ್ದ ಗಣ್ಯರೆಲ್ಲಾ ಕೆಲವೇ ಶಬ್ಧಗಳಲ್ಲಿ, ಗೋಕಾಕ್ ಚಳುವಳಿಗೆ ತಮ್ಮ ಸಂಪೂರ್ಣ ಬೆಂಬಲ ವನ್ನು ವ್ಯಕ್ತಪಡಿಸುತ್ತಾ, ಚಳುವಳಿಯ ಪ್ರಮುಖ ಬೇಡಿಕೆಯಾದ ಕನ್ನಡ ಭಾಷೆಗೆ ಪ್ರಾಮುಖ್ಯತೆ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.

ವರನಟನ ಕಣ್ಣಲ್ಲಿ ಕಂಬನಿ

ಕೊನೆಗೆ ಸಭೆಯನ್ನು ಉದ್ದೇಶಿಸಿ ಮಾತನಾಡಲು ಡಾ.ರಾಜ್ ಎದ್ದುನಿಂತರು. ವೇದಿಕೆಯ ಮೇಲಿದ್ದ ನಾನು, ಸೂಪರ್ 8 ಮಿ.ಮಿ. ಕ್ಯಾಮೆರಾದಲ್ಲಿ ಆ ಕಾರ್ಯಕ್ರಮವನ್ನು ಚಿತ್ರೀಕರಿಸುತ್ತಿದ್ದೆ. ಮಾತ ನಾಡಲು ಎದ್ದು ನಿಂತ ಡಾ: ರಾಜ್, ಕೆಲ ಕ್ಷಣ ಏನೂ ಮಾತನಾಡದೆ ಹಾಗೇ ನಿಂತುಬಿಟ್ಟರು. ತಮ್ಮ ಕೈಯಲ್ಲಿದ್ದ ಕರ್ಚೀಫ಼ಿನಿಂದ ಮುಖವನ್ನು ಮುಚ್ಚಿಕೊಂಡು ರಾಜ್, ಕಣ್ಣೀರು ಸುರಿಸತೊಡಗಿದರು. ಅದನ್ನು ನೋಡಿದ ಹತ್ತಿರದಲ್ಲಿದ್ದ ನಾವೆಲ್ಲರೂ ಕ್ಷಣಕಾಲ ದಿಗ್ಭ್ರಾಂತರಾದೆವು.

ಎರಡು ನಿಮಿಷಗಳ ತರುವಾಯ ರಾಜ್ ಕುಮಾರ್ ಸುಧಾರಿಸಿಕೊಂಡು, ಮಾತಾಡ ತೊಡಗಿದರು. ‘ಕನ್ನಡ ನಾಡಿನಲ್ಲಿಯೇ ಕನ್ನಡ ತಾಯಿಗೆ ಒದಗಿರುವ ದುರ್ಗತಿಯನ್ನು ನೆನೆದು ನನಗೆ ಅತೀವ ದುಃಖವಾಗಿದೆ’ ಎಂದು ನೋವಿನಿಂದ ಹೇಳಿದ ರಾಜ್, ತಮ್ಮ ದೇಹದಲ್ಲಿ ಉಸಿರಿರುವವರೆಗೂ ತಾಯಿ ಕನ್ನಡಾಂಬೆಗೆ ಅಗ್ರ ಸ್ಥಾನ ದೊರಕಿಸಿಕೊಡಲು ತಾವು ಹೋರಾಡುವುದಾಗಿ ಘೋಷಣೆ ಮಾಡಿದರು. ಆ ಅಮೂಲ್ಯ ಕ್ಷಣಗಳನ್ನು ನಾನು ದಾಖಲಿಸಿದ್ದು, ನನ್ನ ಜೀವನದ ಒಂದು ಅವಿಸ್ಮರಣೀಯ ಅನುಭವ.

ಕರ್ನಾಟಕದ ಉದ್ದಗಲಕ್ಕೂ ತಾವು ಕೈಗೊಂಡ ಜಾಥಾದ ಕೆಲವು ವಿಶಿಷ್ಟ ಅನುಭವಗಳನ್ನು ರಾಜ್ ಹಂಚಿಕೊಂಡರು. ಅವರು ಭಾಗವಹಿಸುತ್ತಿದ್ದ ಎಲ್ಲಾ ಸಭೆಗಳಲ್ಲಿಯೂ ಪ್ರೇಕ್ಷಕರ ಕೋರಿಕೆಯ ಮೇರೆಗೆ ತಮ್ಮ ಜನಪ್ರಿಯ ಗೀತೆ, ನಾನಿರುವುದೆ ನಿಮಗಾಗಿ ..... ಹಾಡನ್ನು ಹಾಡುತ್ತಿದ್ದರು. ಅಂದೂ ಕೂಡ ತಮ್ಮ ಮಾತಿನ ಕೊನೆಯಲ್ಲಿ ಹಾಡಿದ ಆ ಚಿತ್ರಗೀತೆಯನ್ನು ಕೇಳುತ್ತಾ ಅಲ್ಲಿದ್ದ ಸಾವಿರಾರು ಕನ್ನಡಿಗರು ದೀರ್ಘ ಕರತಾಡನದೊಂದಿಗೆ ಸಂಭ್ರಮಿಸಿದರು.

ಈ ಘಟನೆಯಾದ ಕೆಲವು ವಾರಗಳ ನಂತರ ಗೋಕಾಕ್ ಚಳುವಳಿಯ ಕೆಲವು ಪ್ರಮುಖ ಬೇಡಿಕೆ ಗಳನ್ನು ಅಂದಿನ ಗುಂಡೂರಾವ್ ನೇತೃತ್ವದ ಸರ್ಕಾರ ಅಂಗೀಕರಿಸಿದೆ ಎಂಬ ಅಧಿಕೃತ ಘೋಷಣೆ ಯಾದದ್ದು ಇತಿಹಾಸ.

ಚಿತ್ರ : ಡಾ. ರಾಜ್‌ಕುಮಾರ್ ಜತೆ ಲೇಖಕರು