Vinayak V Bhat Column: ಸದಾ ವತ್ಸಲೆಯ ಸೇವೆಯಲ್ಲಿ ಸವೆದ ನೂರು ವರ್ಷ
ತ್ಯಾಗ-ಬಲಿದಾನಗಳೊಂದಿಗೆ 100 ವಸಂತಗಳನ್ನು ಕಂಡ ಆರೆಸ್ಸೆಸ್‌ನ ಯಶಸ್ಸು ಅನನ್ಯವಾಗಿದೆ. ದೇಶ ಭಕ್ತಿಯು ಕೇವಲ ಧ್ವಜಹಾರಿಸುವುದಕ್ಕೆ, ದೇಶಭಕ್ತಿ ಗೀತೆಗಳನ್ನು ಹಾಡುವುದಕ್ಕೆ, ರಾಷ್ಟ್ರೀಯ ಏಕತೆಯ ಪ್ರತಿಜ್ಞೆಯನ್ನು ಕೈಗೊಳ್ಳುವುದಕ್ಕೆ ಸೀಮಿತವಾಗಬಾರದು ಎಂಬ ಅರಿವನ್ನು ಜನರಲ್ಲಿ ಮೂಡಿಸಿದ ಕೀರ್ತಿ ಆರೆಸ್ಸೆಸ್‌ಗೆ ಸಲ್ಲಬೇಕು.


ಖಾಕಿ ಚಡ್ಡಿ ಮತ್ತು ಬಿಳಿ ಅಂಗಿಯು ಸಂಘದ ಸಮವಸ್ತ್ರವಾಗಿರುವುದರಿಂದ, ಸಂಘಕ್ಕೆ ತೆರಳುವವ ರನ್ನು ಲಂಕೇಶರು ‘ಚಡ್ಡಿಗಳು’ ಎಂದೇ ಸಂಬೋಧಿಸುತ್ತಿದ್ದರು. ಸಂಘದ ಹಿನ್ನೆಲೆಯಿಂದ ಬಂದವ ರೆಂಬ ಕಾರಣಕ್ಕೆ ಜನಸಂಗಳು/ಬಿಜೆಪಿಗರನ್ನೂ ಅವರು ಹಾಗೇ ಕರೆಯುತ್ತಿದ್ದರು. ಮಾತ್ರವಲ್ಲದೆ, ಬಂಗಾರಪ್ಪನವರನ್ನು ‘ಬಂ’ ಎಂದೂ, ಗುಂಡೂರಾಯರನ್ನು ‘ಗುಂ’ ಎಂದೂ ತಮ್ಮ ಪತ್ರಿಕೆಯಲ್ಲಿ ಅವರು ಉಲ್ಲೇಖಿಸುತ್ತಿದ್ದುದು ಅಂದಿನ ‘ಲಂಕೇಶ್ ಪತ್ರಿಕೆ’ಯ ಓದುಗರಿಗೆ ನೆನಪಿರಬಹುದು.
ಹಾಗೆ, ‘ಸಂಗಳು’ ಅಂದರೆ ‘ಎಲ್ಲರಿಂದಲೂ ಟೀಕೆಗೊಳಗಾಗುತ್ತಿದ್ದವರು, ಕೆಲಸವಿಲ್ಲದ ನಾಲ್ಕು ಹುಡುಗರು, ಹತ್ತಿರದ ಶಾಲೆಯ ಬಯಲಿನಲ್ಲಿ ಕೇಸರಿ ಧ್ವಜ ಹುಗಿದು, ನಮಗೆ ಮರೆತುಹೋದ ಹಳೆಯ ದೇಶೀಯ ಆಟಗಳನ್ನಾಡುತ್ತಾ ಕಾಲ ಕಳೆಯುವವರು; ಇವರು ದೇಶಕ್ಕಾಗಿ ಮಾಡಿದ್ದು ಅಷ್ಟಕ್ಕಷ್ಟೇ’ ಎಂಬ ಭಾವನೆ ಬಹುತೇಕರಲ್ಲಿತ್ತು. ರಕ್ಷಾಬಂಧನದ ದಿನ ಮಾತ್ರ ಸಂಘದ ಶಾಖೆಯಲ್ಲಿ ಎಂದಿಗಿಂತ ಹೆಚ್ಚು ಜನ ಕಾಣುತ್ತಿದ್ದರು.
ಕಾರಣ, ಅಂದು ಬಂದವರಿಗೆಲ್ಲ, ರೇಷ್ಮೆನೂಲಿನ ಕೇಸರಿ ಬಣ್ಣದ ರಕ್ಷೆಯನ್ನು ಕಟ್ಟಲಾಗುತ್ತಿತ್ತು. ಅದರ ಗುಣಮಟ್ಟ ಚೆನ್ನಾಗಿದ್ದು ವರ್ಷಪೂರ್ತಿ ತನ್ನ ಬಣ್ಣವನ್ನೂ ಮೃದುತ್ವವನ್ನೂ ಕಳೆದು ಕೊಳ್ಳುತ್ತಿರಲಿಲ್ಲ. ಸಾಮಾನ್ಯವಾಗಿ ಹೆಣ್ಣು ಮಕ್ಕಳು, ಅಗತ್ಯ ಬಂದಾಗ ರಕ್ಷಣೆ ನೀಡಿರೆಂದು ತಮ್ಮ ಸೋದರರಿಗೆ ಭಾಷೆ ಕಟ್ಟುವ ಸಂಪ್ರದಾಯ ದೇಶದ ಕೆಲ ಭಾಗದಲ್ಲಿತ್ತು.
ಪರಸ್ಪರ ಎಲ್ಲರಿಗೂ ರಕ್ಷೆ ಕಟ್ಟುವ ಸಂಪ್ರದಾಯ ಸಂಘದಲ್ಲಿ ಹೊಸದಾಗಿ ಶುರುವಾಯಿತು. ಇದರ ಹಿಂದಿನ ಉದ್ದೇಶ ಪರಸ್ಪರ ಹಿಂದೂಗಳ ರಕ್ಷಣೆಯೇ ಇರಬೇಕು. ಹೀಗೆ ಸಂಘದ ಜನರನ್ನು, ಅವರು ಶಾಖೆ ನಡೆಸುವ ಪರಿಯನ್ನು ಸಮಾಜ ವಿಚಿತ್ರವಾಗಿ ಕಾಣುತ್ತಿದ್ದ ಕಾಲವದು. ಸಂಘದ ಸ್ವಯಂ ಸೇವಕರು ಎಂದರೆ ಸಮಾಜದಿಂದ ಭಿನ್ನವಾಗಿರುವವರು, ಎಲ್ಲರೊಂದಿಗೂ ಸಹಜವಾಗಿ ಬೆರೆಯ ದವರು ಎಂದು ದೂರವಿಡುತ್ತಿದ್ದ ಕಾಲವದು.
ಇದನ್ನೂ ಓದಿ: Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ
ಒಂದು ನಾಗರಿಕ ರಾಷ್ಟ್ರಕ್ಕೆ ಸಂಸ್ಕೃತಿಯು ಅಡಿಪಾಯವಾಗಿರಬೇಕು. ಭಾರತೀಯ ರಾಷ್ಟ್ರೀಯತೆ ಅಂದರೆ ಅದರ ತಿರುಳಿನಲ್ಲಿ ಸಾಂಸ್ಕೃತಿಕತೆ ಇರಬೇಕು. ಆದರೆ ದುರದೃಷ್ಟವಶಾತ್, ಸ್ವಾತಂತ್ರ್ಯಾ ನಂತರ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಸೋಗಿನಡಿ ನಮ್ಮ ಸಂಸ್ಕೃತಿಯ ಕೇಂದ್ರೀಕರಣ ವನ್ನು ನಿರಾಕರಿಸುವುದೇ ಸರಕಾರಗಳಿಗೆ ಅಭ್ಯಾಸವಾಗಿ ಹೋಯಿತು. ಇದರ ಭಾಗವಾಗಿ, ನಮ್ಮ ಪೂರ್ವೇತಿಹಾಸವನ್ನು ತಿರುಚುವುದು, ಸಂಪ್ರದಾಯಗಳನ್ನು ತಪ್ಪಾಗಿ ಅರ್ಥೈಸುವುದು, ಭಾರತವು ಒಂದು ರಾಷ್ಟ್ರವೇ ಅಲ್ಲವೆಂದು ತೋರಿಸಲು ವಿಘಟನೆಯ ಪರವಾದ ಸಿದ್ಧಾಂತಗಳನ್ನು ಪ್ರತಿಪಾದಿಸುವುದು, ರಾಷ್ಟ್ರೀಯತೆಯನ್ನು ಅಂಚಿಗೆ ತಳ್ಳುವುದು, ದೇಶಭಕ್ತಿಯನ್ನು ಅಂಧಶ್ರದ್ಧೆ ಯಾಗಿ ಸಂಕುಚಿತ ಪರಿಕಲ್ಪನೆಯಾಗಿ ಬಿಂಬಿಸುವುದು ವಾಡಿಕೆಯಾಗಿಬಿಟ್ಟಿತು.
ಮಾತ್ರವಲ್ಲದೆ, ‘ಭಾರತವೊಂದು ಸಂಯೋಜಿತ ರಾಷ್ಟ್ರವೇ ಅಲ್ಲ, ಅದು ಕೇವಲ ಪ್ರಾಂತ್ಯಗಳ ಒಕ್ಕೂಟ; ಕೃತಕವಾಗಿ ಜೋಡಿಸಲಾದ ಹಲವು ಪ್ರಾಂತ್ಯಗಳ ತುಣುಕುಗಳಿಂದ ಭಾರತದ ನಕ್ಷೆಯನ್ನು ರೂಪಿಸಲಾಗಿದೆ’ ಎಂದು ಅನೇಕರು ನಂಬಿಸುತ್ತಾ ಬಂದರು. ಭಾರತವು ವಿವಿಧತೆಯಲ್ಲಿ ಏಕತೆ ಯನ್ನು ಹೊಂದಿದ್ದರೂ, ‘ಭಾರತವು ಮೂಲತಃ ಛಿದ್ರಗೊಂಡಿತ್ತು’ ಎಂದು ಅನೇಕರು ಈ ಪರಿಕಲ್ಪನೆ ಯನ್ನು ತಿರುಚಿ ವ್ಯಾಖ್ಯಾನಿಸುತ್ತಿದ್ದರು.

ಗುಲಾಮಿ ಮನಸ್ಥಿತಿಯಿಂದ ದೇಶವಿನ್ನೂ ಹೊರಬರದ ಮತ್ತು ಸಾಂಸ್ಕೃತಿಕ ಏರಿಳಿತದ ಈ ಕಾಲ ಘಟ್ಟದಲ್ಲಿ ಪ್ರವಾಹದೆದುರು ಈಜುತ್ತಾ ದೇಶಭಕ್ತಿಯನ್ನು, ಬಹುಸಂಖ್ಯಾತ ಹಿಂದೂಗಳ ಅಸ್ಮಿತೆಯ ರಕ್ಷಣೆಯನ್ನು ಪ್ರತಿಪಾದಿಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಅದರ ಅಂಗಸಂಸ್ಥೆಗಳು. ರಾಷ್ಟ್ರೀಯ ಏಕೀಕರಣ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಸಂಬಂಧಿಸಿದ ವಿಷಯ ಗಳ ಬಗ್ಗೆ ಒಂದು ಶತಮಾನದಿಂದ ಜನಜಾಗೃತಿಯಲ್ಲಿ ತೊಡಗಿರುವ ಆರೆಸ್ಸೆಸ್, ದೇಶಭಕ್ತಿಯನ್ನು ಒಂದು ಮೂಲಭೂತ ಮೌಲ್ಯವಾಗಿ ವಿಕಸನಗೊಳಿಸಿದೆ, ನಾಗರಿಕರನ್ನು ಒಗ್ಗೂಡಿಸಲು ಪ್ರೇರೇಪಿಸು ತ್ತಿದೆ.
ಅನೇಕ ಸವಾಲುಗಳು, ತ್ಯಾಗ-ಬಲಿದಾನಗಳೊಂದಿಗೆ 100 ವಸಂತಗಳನ್ನು ಕಂಡ ಆರೆಸ್ಸೆಸ್‌ನ ಯಶಸ್ಸು ಅನನ್ಯವಾಗಿದೆ. ದೇಶಭಕ್ತಿಯೆಂಬುದು ಕೇವಲ ಧ್ವಜಹಾರಿಸುವುದಕ್ಕೆ, ದೇಶಭಕ್ತಿ ಗೀತೆ ಗಳನ್ನು ಹಾಡುವುದಕ್ಕೆ, ರಾಷ್ಟ್ರೀಯ ಏಕತೆಯ ಪ್ರತಿಜ್ಞೆಯನ್ನು ಕೈಗೊಳ್ಳುವುದಕ್ಕೆ ಸೀಮಿತವಾಗ ಬಾರದು ಎಂಬ ಅರಿವನ್ನು ಜನರಲ್ಲಿ ಮೂಡಿಸಿದ ಕೀರ್ತಿ ಆರೆಸ್ಸೆಸ್‌ಗೆ ಸಲ್ಲಬೇಕು.
ಸಾಮಾಜಿಕ-ಸಾಂಸ್ಕೃತಿಕ ನಡವಳಿಕೆ, ಆರ್ಥಿಕ ಸ್ವಾಯತ್ತತೆ ಸೇರಿದಂತೆ ದೇಶಭಕ್ತಿಗೆ ಬಹು ಆಯಾಮ ಗಳಿವೆ ಎಂದು ಪ್ರತಿಪಾದಿಸುವ ಆರೆಸ್ಸೆಸ್, ಸಾಂಸ್ಕೃತಿಕ ದೇಶಭಕ್ತಿಯ ಮೌಲ್ಯಗಳನ್ನು ಒಂದು ಬಂಧಕ ಶಕ್ತಿಯಾಗಿ ಜನರಿಗೆ ಮನವರಿಕೆ ಮಾಡಿಕೊಡುತ್ತಾ ಬಂದಿದೆ. ಸಾಮಾಜಿಕ ಋಣಭಾರದ ಪ್ರಜ್ಞೆಯನ್ನು ನಾಗರಿಕರಲ್ಲಿ ಮೂಡಿಸುವ ಆರೆಸ್ಸೆಸ್, ನೈತಿಕತೆಗೆ ಬದ್ಧವಾಗಿರಲು ಬಯಸುವ ನಾಗರಿಕರನ್ನು ಬೆಳೆಸಲು ಯತ್ನಿಸುತ್ತದೆ.
ಸಂಘದಿಂದ ಪ್ರೇರಿತವಾದ ನೂರಾರು ಸಂಘಟನೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಕಂಡುಬರುವುದು, ಪಾರದರ್ಶಕತೆಯ ಮತ್ತು ಉತ್ತರ ದಾಯಿತ್ವದ ಕೊರತೆಯ ಬಗ್ಗೆ ಕೇಳಿಬರುವುದು ಅಪರೂಪ. ತಾನು ಹೇಳುವುದನ್ನೇ ಮಾಡಿ ತೋರಿಸುವ ಆರೆಸ್ಸೆಸ್, ಕೇವಲ ಸಮಾನತೆಗಿಂತ ಮುಂದೆ ಹೋಗಿ ಸಾಮಾಜಿಕ ಸಾಮರಸ್ಯದ ಬಗ್ಗೆಆಲೋಚಿಸುತ್ತದೆ, ಸೇವಾ ದೇಶಭಕ್ತಿ ಮತ್ತು ಮಾನವೀಯ ದೇಶಭಕ್ತಿಯನ್ನು ಉತ್ತೇಜಿಸುತ್ತದೆ.
ಆರೆಸ್ಸೆಸ್ ಕಾರ್ಯಕರ್ತರು ಪ್ರಚಾರದ ಹಂಗಿಲ್ಲದೆಯೇ ಪರಿಹಾರ ಮತ್ತು ಪುನರ್ವಸತಿ ಕಾರ್ಯ ಗಳಿಗೆ ಧಾವಿಸುವುದು ಶ್ಲಾಘನೀಯ. ಆರೆಸ್ಸೆಸ್‌ನ ಹಿಂದುತ್ವದ ಅಜೆಂಡಾದ ಬಗ್ಗೆ ಅನೇಕರು ಪ್ರಶ್ನಿಸುವುದುಂಟು. ಆದರೆ ಇಲ್ಲಿಯೂ ಆರೆಸ್ಸೆಸ್ ಸ್ಪಷ್ಟವಾಗಿದೆ. ‘ನಾವೆಲ್ಲ ಒಂದು, ನಾವೆಲ್ಲ ಹಿಂದೂ’ ಎನ್ನುವ ಆರೆಸ್ಸೆಸ್‌ನ ಅಭಿಪ್ರಾಯದಲ್ಲಿ ಹಿಂದುತ್ವವು ಒಂದು ಜೀವನ ವಿಧಾನವಾಗಿದ್ದು ಹೃದಯವೈಶಾಲ್ಯಕ್ಕೆ ಅದು ಸಮಾನಾರ್ಥಕವಾಗಿದೆ. ಹಿಂದೂ ಅಸ್ಮಿತೆಯ ರಕ್ಷಣೆಯೇ ಆರೆಸ್ಸೆಸ್‌ನ ಅಸ್ಮಿತೆಯಾಗಿದೆ.
ಸ್ವಯಂಸೇವಕರ ಬಲದಿಂದಲೇ ನಡೆಸಲ್ಪಡುವ ಆರೆಸ್ಸೆಸ್‌ಗೆ ಈ ವರ್ಷ ಶತಮಾನೋತ್ಸವದ ಸಂಭ್ರಮ. ‘ಏಕಾಂತ್ ಮೇ ಆತ್ಮಸಾಧನಾ, ಲೋಕಾಂತ್ ಮೇ ಸೇವಾ ಪರೋಪಕಾರ್’ ಇದು ಆರೆಸ್ಸೆಸ್‌ನ ಮೂಲತತ್ವ. ‘ಒಂದು ತಾಸಿನ ಸ್ವಂತ ಸಾಧನೆಯಾದರೆ, ಉಳಿದ 23 ತಾಸುಗಳು ಲೋಕ ಸೇವೆ’ ಎನ್ನುವುದು ಸ್ವಯಂಸೇವಕರಿಗೆ ವಿಽಸಲಾದ ನಿಯಮ ಎನ್ನುತ್ತಾರೆ ಆರೆಸ್ಸೆಸ್‌ನ ಮುಖ್ಯಸ್ಥ ಮೋಹನ್ ಭಾಗವತ್.
ಕಾರ್ಯಕರ್ತರ ಕಾರ್ಯಾಗಾರದ ಅವಧಿಯಲ್ಲಿ ಒಮ್ಮೆಯೂ ರಾಜಕೀಯ ಚಟುವಟಿಕೆಗಳ ತರಬೇತಿ ಯಾಗಲೀ, ಚರ್ಚೆ- ಸಂವಾದಗಳಾಗಲೀ ಆಗದು. ಅಂಥ ನಿರೀಕ್ಷೆಯೊಂದಿಗೆ ಅಲ್ಲಿಗೆ ಬರುವವರಿಗೆ ನಿರಾಸೆಯೇ ಗತಿ. ಜಾತಿ, ಮತ, ಭಾಷೆಗಳ ಗೋಡೆಯನ್ನೂ ಮೀರಿ ಸಾಮರಸ್ಯ ಸಾಧಿಸುವ ಬಗೆ, ಸಮಾಜ ಎದುರಿಸುತ್ತಿರುವ ವಿವಿಧ ಸವಾಲುಗಳ ನಿರ್ವಹಣೆ, ವೈಯಕ್ತಿಕ ಚಾರಿತ್ರ್ಯ ನಿರ್ಮಾಣ ಸೇರಿದಂತೆ
ಒಬ್ಬ ಸಾಮಾಜಿಕ ಕಾರ್ಯಕರ್ತನಿಗೆ ಅತ್ಯಗತ್ಯವಾಗುವ ಹಲವು ವೈಶಿಷ್ಟ್ಯಗಳ ಕುರಿತು ಅಲ್ಲಿ ವಿಸ್ತೃತವಾಗಿ ಚರ್ಚಿಸಲಾಗುತ್ತದೆ. ರಾಷ್ಟ್ರೀಯ ವಿಚಾರಧಾರೆಗಳ ಈ ಮೂಸೆಯಲ್ಲಿ ಅರಳಿದ ಕಾರ್ಯಕರ್ತರು ಆರೆಸ್ಸೆಸ್ ಸೂಚಿಸಿದಂತೆ ಶಿಸ್ತಿನಿಂದ ಕೆಲಸ ಮಾಡುತ್ತಾರೆ; ಅದು ಜನಸಂಪರ್ಕ ವಿರಳವಾಗಿರುವ ಗುಡ್ಡಗಾಡು ಪ್ರದೇಶವೇ, ನಗರದ ಕೊಳೆಗೇರಿಯೇ ಎಂಬುದನ್ನೂ ಲೆಕ್ಕಿಸದೆ ಗ್ರಾಮೀಣಾಭಿವೃದ್ಧಿಯಿಂದ ಮೊದಲ್ಗೊಂಡು ಶಿಕ್ಷಣ, ಆರೋಗ್ಯದವರೆಗಿನ ಹತ್ತಾರು ಆಯಾಮ ಗಳಲ್ಲಿ ಸಮಾಜದೆದುರು ನಿಸ್ವಾರ್ಥದಿಂದ ತಮ್ಮನ್ನು ತೆರೆದುಕೊಳ್ಳುತ್ತಾರೆ.
ಆರೆಸ್ಸೆಸ್ ಹೆಸರಲ್ಲೇ ರಾಷ್ಟ್ರೀಯತೆಯಿದೆ, ಸೇವೆಯೂ ಇದೆ. ಆರೆಸ್ಸೆಸ್‌ಗೆ ‘ಸೇವೆಯೇ ಧರ್ಮ’. 100 ವರ್ಷಗಳ ಇತಿಹಾಸವಿರುವ ಆರೆಸ್ಸೆಸ್ ರಾಜಕೀಯಕ್ಕೆ ಮೊದ ಮೊದಲು ಎಷ್ಟು ಬೇಕೋ ಅಷ್ಟು ಮಹತ್ವವನ್ನು ಕೊಟ್ಟಿತ್ತು. ನಂತರದ ವರ್ಷಗಳಲ್ಲಿ, ‘ರಾಜಕೀಯ ಅಸ್ತಿತ್ವವಿರದಿದ್ದಲ್ಲಿ ಸಾಧಿಸ ಬೇಕಾದ್ದನ್ನು ಸಾಧಿಸಲಾಗದು’ ಎಂದು ನಿರ್ಧರಿಸಿ ರಾಜಕೀಯದ ಕುರಿತು ಆರೆಸ್ಸೆಸ್ ಸ್ಪಷ್ಟ ಮತ್ತು ತೀಕ್ಷ್ಣ ಒಳನೋಟಗಳನ್ನು ಹೊಂದುವಂತಾಯಿತು. ಅನೇಕ ರಾಜ್ಯಗಳಲ್ಲಿ ಮತ್ತು ಸುಮಾರು 20 ವರ್ಷಗಳ ನಂತರ ಕೇಂದ್ರದಲ್ಲಿ ಬಲಪಂಥೀಯರು ಅಧಿಕಾರಕ್ಕೆ ಬರುವಂತಾಗುವಲ್ಲಿ ಆರೆಸ್ಸೆಸ್ ನ ಪಾತ್ರವನ್ನು ಅಲ್ಲಗಳೆಯಲಾಗದು.ಇಲ್ಲೂ ಕೆಲಸ ಮಾಡಿದ್ದು ಆರೆಸ್ಸೆಸ್‌ನ ದೂರದರ್ಶಿತ್ವ, ಸ್ವಯಂ ಸೇವಕರ ಪರಿಶ್ರಮವೇ.
ಅದರಲ್ಲೂ, ಆರೆಸ್ಸೆಸ್‌ನ ಸಾಮಾನ್ಯ ಕಾರ್ಯಕರ್ತರಾಗಿದ್ದವರೊಬ್ಬರು ಸತತ 3ನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿದು, ಜಾಗತಿಕ ಮಟ್ಟದ ವರ್ಚಸ್ಸನ್ನು ದಕ್ಕಿಸಿಕೊಂಡಿರುವ ಈ ಕಾಲಘಟ್ಟವನ್ನು ಆರೆಸ್ಸೆಸ್ ನ ‘ಸುವರ್ಣಕಾಲ’ ಎನ್ನಲೇಬೇಕು.
ಕಳೆದ ವರ್ಷ ಅನ್ಯಕಾರ್ಯದ ನಿಮಿತ್ತ ನಾಗ್ಪುರಕ್ಕೆ ತೆರಳಿದ್ದ ನಾನು ಪೂರ್ವನಿರ್ಧಾರದಂತೆ ಕಾರ್ಯಾಲಯಕ್ಕೆ ತೆರಳಿ ಅಲ್ಲಿನ ಜನರನ್ನು ಮಾತಾಡಿಸಿದೆ. ಅಲ್ಲಿ ಎಲ್ಲರನ್ನೂ ಗೌರವದಿಂದ ಮಾತನಾಡಿಸುತ್ತಾರಾದರೂ, ಕರ್ನಾಟಕದವರೆಂದರೆ ಒಂದು ತೂಕ ಹೆಚ್ಚು ಮರ್ಯಾದೆ. ಸರ ಸಂಘಚಾಲಕರಾಗಿದ್ದ ಸುದರ್ಶನ್ ಮತ್ತು ಸದ್ಯ ಉನ್ನತ ಸ್ಥಾನದಲ್ಲಿರುವ ಹೊಸಬಾಳೆಯ ವರಂಥವರು ಕರ್ನಾಟಕದವರು ಎಂಬುದೂ ಇದಕ್ಕೆ ಕಾರಣವಿರಬಹುದು.
ಅಲ್ಲಿನ ಆಡಳಿತಗಾರರನ್ನು ಮಾತಿಗೆಳೆದ ನಾನು, “ಭಾರತದ ರಾಜಕೀಯ ಭೂಪಟದಲ್ಲಿ 100 ವರ್ಷಗಳ ನಂತರ ಏನಾಗಬೇಕು ಎಂಬುದನ್ನು ಆರೆಸ್ಸೆಸ್ ಈಗಲೇ ಆಲೋಚಿಸಿ ಅದರ ನೆರವೇರಿಕೆ ಯತ್ತ ಕಾರ್ಯಪ್ರವೃತ್ತವಾಗುತ್ತದೆ ಎನ್ನಲಾಗುತ್ತದೆ, ನಿಜವಾ?" ಎಂದು ಕೇಳಿದಾಗ ಆರೆಸ್ಸೆಸ್‌ನ ಆ ಹಿರಿಯ ಜೀವ, “ನೀವು ದೇಶದ ಇಂದಿನ ರಾಜಕೀಯ ಪರಿಸ್ಥಿತಿಯನ್ನು ಏನು ನೋಡುತ್ತಿದ್ದೀರಾ, ಅದು ಅದರಷ್ಟಕ್ಕೇ ಆಗಿದ್ದಲ್ಲ ಮತ್ತು ನಿನ್ನೆ ಮೊನ್ನೆಯ ಚಿಂತನೆಯಿಂದ ಆಗಿದ್ದಲ್ಲ; ಬಹಳ ವರ್ಷಗಳ ಹಿಂದೆಯೇ ಆರೆಸ್ಸೆಸ್ ಚಿಂತನೆ ಮಾಡಿ ಕಾರ್ಯಪ್ರವೃತ್ತವಾಗಿದ್ದರ ಫಲವಾಗಿಯೇ ಇಂದು ದೇಶಕ್ಕೆ ಸಮರ್ಥ ನೇತೃತ್ವ ಸಾಧ್ಯವಾಗಿದ್ದು" ಎಂದು ಸ್ಪಷ್ಟವಾಗಿ ಹೇಳಿದರು. ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು!
“ಆರೆಸ್ಸೆಸ್ ಎಂಬುದು ಪುರುಷಪ್ರಧಾನ ಸಮಾಜವನ್ನು ಪ್ರತಿಪಾದಿಸುವ, ಬ್ರಾಹ್ಮಣರು ಮತ್ತು ಮೇಲ್ಜಾತಿಯವರ ಒಂದು ಸಂಸ್ಥೆ. ಈ ಮನುವಾದಿ ಸಂಘಟನೆಯಲ್ಲಿ ಸ್ತ್ರೀಯರಿಗೆ ಆದ್ಯತೆಯಿಲ್ಲ. ಇದಕ್ಕಿರುವುದು ಹಿಂದೂ ರಾಷ್ಟ್ರದ ಮೂಲಭೂತ ಚಿಂತನೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಸಂಗಳು ಮೀಸಲಾತಿಯ ವಿರೋಧಿಗಳು" ಎಂಬ ಹಣೆಪಟ್ಟಿಗಳನ್ನು ಕಾಂಗ್ರೆಸ್ಸಿಗರು, ಎಡಪಂಥೀ ಯರು ಕಟ್ಟುತ್ತಲೇ ಬಂದಿದ್ದಾರೆ; ಆರೆಸ್ಸೆಸ್ ವಿಷಯದಲ್ಲಿ ಅವರಿಗೆ ಇಂದಿಗೂ ಒಂಥರಾ ಭಯವೂ ಇದೆಯೆನ್ನಿ!
ಈ 100 ವರ್ಷಗಳ ಅವಧಿಯಲ್ಲಿ ಆರೆಸ್ಸೆಸ್ ಅನ್ನು 3 ಬಾರಿ ನಿಷೇಧಿಸಲಾಗಿತ್ತು. 1948ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯಾದಾಗ, ಆಗಿನ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರು, ‘ದ್ವೇಷ ಮತ್ತು ವಿಚ್ಛಿದ್ರಕಾರಕ ಶಕ್ತಿಗಳನ್ನು ಬೇರುಸಹಿತ ಕಿತ್ತೊಗೆಯಲು ಆರೆಸ್ಸೆಸ್ ಅನ್ನು ನಿಷೇಧಿಸ ಲಾಗುತ್ತಿದೆ’ ಎಂದು ಅಧಿಸೂಚನೆ ಹೊರಡಿಸಿದ್ದು ಮೊದಲ ನಿದರ್ಶನ. ಒಂದು ವರ್ಷದ ನಂತರ ಪಟೇಲರು ಈ ನಿಷೇಧವನ್ನು ತೆಗೆದುಹಾಕಿದ್ದರು. ನಂತರ, 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದಾಗ ಆರೆಸ್ಸೆಸ್‌ನ ಚಟುವಟಿಕೆಗಳನ್ನು ಮೊಟಕು ಗೊಳಿಸಲಾಗಿತ್ತು. ಮತ್ತೆ 1992ರಲ್ಲಿ, ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಪ್ರಧಾನಿ ಪಿ.ವಿ.ನರಸಿಂಹ ರಾಯರು ನಿಷೇಧಿಸಿದ್ದು 3ನೇ ನಿದರ್ಶನ.
ಕಾಲ ಬದಲಾಗಿದೆ. ಆರೆಸ್ಸೆಸ್ ವೈಚಾರಿಕವಾಗಿ ಅನೇಕ ಪರಿವರ್ತನೆಯನ್ನು ತಂದುಕೊಂಡು ಸಮಾಜದಲ್ಲಿ ಹೆಚ್ಚೆಚ್ಚು ಸ್ವೀಕಾರಾರ್ಹವಾಗಿದೆ. ಅನೇಕ ಏರಿಳಿತಗಳನ್ನು ಕಂಡರೂ, ರಾಷ್ಟ್ರೀಯತೆ ಕುರಿತಾದ ತನ್ನ ನಿಲುವಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವ್ಯವಸ್ಥಿತವಾಗಿ ಹೋರಾಡುತ್ತಾ, ದೇಶಪ್ರೇಮಿಗಳ ಭರವಸೆಯ ಬೆಳಕಾಗಿ ಇಂದಿಗೂ ನಿಂತಿದೆ.
ಆರೆಸ್ಸೆಸ್ ಅನ್ನು ಅಸ್ಪೃಶ್ಯ ಭಾವದಿಂದ ನೋಡುತ್ತಿದ್ದ ಕಾಲದಿಂದ ಮೊದಲ್ಗೊಂಡು, ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಂಥವರು ಆರೆಸ್ಸೆಸ್ ಕಾರ್ಯಾಲಯಕ್ಕೆ ಹೆಮ್ಮೆಯಿಂದ ಭೇಟಿಯಿತ್ತು ಅದರ ಕಾರ್ಯಗಳನ್ನು ಶ್ಲಾಘಿಸುವ ಮಟ್ಟಕ್ಕೆ ಇಂದು ತನ್ನನ್ನು ತಾನು ತೆರೆದುಕೊಂಡಿದೆ. ಮೂಲತಃ ಕಾಂಗ್ರೆಸ್ಸಿಗರಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಆರೆಸ್ಸೆಸ್‌ನ ಕಾರ್ಯಾಲಯಕ್ಕೆ ಭೇಟಿಯಿತ್ತು ದೇಶ ಕಟ್ಟುವಲ್ಲಿನ ಅದರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದು ಇದಕ್ಕೆ ಮತ್ತೊಂದು ನಿದರ್ಶನ. ಈ ನಿರಂತರ ಪಯಣದಲ್ಲಿ ಆರೆಸ್ಸೆಸ್‌ಗೆ ‘ಆಹ್ರಮ’ ಇಲ್ಲವೇ ಇಲ್ಲ, ಯಾವಾಗಲೂ ‘ಸಂಘ ದಕ್ಷ’ವೇ ಆಗಿರುತ್ತದೆ.