ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ತ್ರಿಪುರಾಂತಕ ದೇವರ ಮೂಲ ಅನುಭವ ಮಂಟಪದ ಸುತ್ತ...

ಇಲ್ಲಿಯವರೆಗೆ ನಾಲ್ಕು ಶೂನ್ಯಸಂಪಾದನೆಗಳು ಪ್ರಕಟವಾಗಿವೆ. ಪ್ರಭು ದೇವರು ಶಾಪದಿಂದ ಬಂದರು ಎಂದು ಮೊದಲೆರಡು ಸಂಪಾದನೆಗಳು ಹೇಳಿದರೆ, ಮುಂದಿನ ಎರಡು ಅವರು ಪರಶಿವನ ಕಳೆ ಎಂದು ಹೇಳುತ್ತವೆ. ಗುಮ್ಮಳಾಪುರ ಸಿದ್ಧಲಿಂಗ ದೇವರ ಮೂರನೆಯ ಸಂಪಾದನೆಯಲ್ಲಿ “ಶೈವ ಪುರಾತನರ ಚರಿತ್ರೆಗಳಲ್ಲಿ ಶಿವನು ಬಗೆ ಬಗೆಯ ರೂಪದಿಂದ ಬಂದು ಭಕ್ತಜನರನ್ನು ಉದ್ಧರಿಸಿದಂತೆ ಸಾಕಾರ ಶಿವ ನಾದ ಈ ಪ್ರಭುದೇವರು ಬಗೆಬ ಗೆಯ ಹಾದಿಯಿಂದ ಭಕ್ತಪ್ರಮಥರನ್ನು ಉದ್ಧರಿಸುತ್ತಾನೆ" ಎಂದು ಹೇಳಲಾಗಿದೆ

ತ್ರಿಪುರಾಂತಕ ದೇವರ ಮೂಲ ಅನುಭವ ಮಂಟಪದ ಸುತ್ತ...

Profile Ashok Nayak Apr 18, 2025 8:10 AM

ಅನುಭವ ಮಂಟಪ: ಸ್ಥಾವರ ಜಂಗಮವೆಂಬೋ ದಿಗಿಲು ಭುಗಿಲು’ ಶೀರ್ಷಿಕೆಯ ನನ್ನ ಹಿಂದಿನ ಬರಹದಲ್ಲಿ ಮೂಲ ಅನುಭವ ಮಂಟಪದ ಬಗ್ಗೆ ಜಾಗತಿಕ ಮತ್ತು ಮಾರ್ಕ್ಸ್‌ವಾದಿ ತಂಡ ಹೊಂದಿ ರುವ ಸಂದಿಗ್ಧಗಳನ್ನು ಬಿಚ್ಚಿಡಲಾಗಿತ್ತು. ಮೂಲ ಅನುಭವ ಮಂಟಪಕ್ಕಾಗಿ ಹೋರಾಟ ಮಾಡದ ಇವರ ಮೋಹ-ಮೈತ್ರಿಗಳನ್ನು ಪ್ರಸ್ತಾಪಿಸಲಾಗಿತ್ತು. ಶಿವಶರಣರ ವಚನೇತರ ಸಾಹಿತ್ಯವನ್ನೂ ನಂಬದೇ, ‘ಕೇವಲ ವಚನಗಳು ಮಾತ್ರ ನಮಗೆ ಸಂವಿಧಾನ’ ಎಂದು ಹೊರಡುವ ಈ ಆಯಕಟ್ಟಿನ ಗುಂಪು, ಅದೇ ವಚನ ಸಂವಿಧಾನ ರಚನೆಯಾದ ಮೊದಲ ಪಾರ್ಲಿಮೆಂಟನ್ನೇ ಹುಡುಕದಿರುವ ವಿಸ್ಮೃತಿಗೆ ಕಾರಣ ಏನಿರಬಹುದು? ಒಬ್ಬ ಸ್ವಾಮಿ ಗಳು ಬಸವಣ್ಣನವರನ್ನು ಪ್ರವಾದಿ ಎಂದು ಕರೆದಿದ್ದರೆ, ಇನ್ನೊಬ್ಬ ಸ್ವಾಮಿಗಳು ಲಿಂಗಾಯತವನ್ನು ಮರಳುಗಾಡಿನ ಮತವೊಂದರ ಹತ್ತಿರ ತರಲು ಯತ್ನಿಸುತ್ತಿರುವುದು ಇರಬಹುದೇ? ಇಂಥ ಹಲವು ಸಂಶಯಗಳಿವೆ.

ಮೂಲ ಅನುಭವ ಮಂಟಪವೇ ಮೊದಲ ಪವಿತ್ರ ಕ್ಷೇತ್ರವಾಗಿರಬೇಕಾಗಿತ್ತು ಎಂಬುದು ಯಾರಾದರೂ ಒಪ್ಪುವ ಮಾತು. ಅದರ ಅನ್ವೇಷಣೆಯೇ ಆದ್ಯತೆಯಾಗಿರಬೇಕಾಗಿತ್ತು ಹಾಗಾಗಿಲ್ಲ. ಬದಲಾಗಿ ಈ ಜಾಡಿನ ಪುಸ್ತಕಗಳಲ್ಲ ಮೊದಲು ಅದೊಂದು ಸಂಸ್ಥೆ, ಕಟ್ಟಡವಲ್ಲ ಎಂಬುದನ್ನು ಪ್ರಚಾರ ಮಾಡಲಾಗಿದೆ. ಇತ್ತೀಚೆಗೆ ಜಾಗತಿಕ ನಾಯಕರೊಬ್ಬರು ಅನುಭವ ಮಂಟಪ ಕಟ್ಟಡ ಇರಲಿಲ್ಲ ಎಂಬುದನ್ನು ಒಪ್ಪಿಕೊಂಡೂ ಇದ್ದಾರೆ.

ಇದನ್ನೂ ಓದಿ: Ravi Hunj Column: ಮಹಾಮನೆ, ಅನುಭವ ಮಂಟಪಗಳ ಯಾವುದೇ ಕುರುಹು ಈವರೆಗೆ ಸಿಕ್ಕಿಲ್ಲವೇಕೆ ?

ಇವರು ಅನುಭವ ಮಂಟಪವನ್ನು ಸಮರ್ಥಿಸಲು ಬಳಸಿಕೊಂಡ ಉಲ್ಲೇಖಗಳು ಆಸಕ್ತಿಕರವಾಗಿವೆ ಅದಕ್ಕೊಂದು ಧನ್ಯವಾದ ಹೇಳಬೇಕು. ಆದರೆ ಅದನ್ನು ಪೂರ್ಣರೂಪದಲ್ಲಿ ಹೇಳದೇ, ಬೇಕಾ ದದ್ದನ್ನು ಮಾತ್ರ ಆಯ್ದುಕೊಳ್ಳಲಾಗಿದೆ. ಈ ಉಲ್ಲೇಖಗಳು ಇನ್ನೂ ಅಧ್ಯಯನಕ್ಕೆ ಹಚ್ಚುತ್ತವೆ.

ಅವುಗಳನ್ನು ಓದುಗರ ಮುಂದೆ ತೆರೆದಿಡುವ ಪ್ರಯತ್ನ ಇಲ್ಲಿದೆ. ಮೊದಲನೆಯದು ಅನುಭವ ಮಂಟಪದ ಇರುವನ್ನು ಸ್ಪಷ್ಟಪಡಿಸುವ ತಾಯಿ ನೀಲಮ್ಮನವರ ವಚನ. ಅದು ಅಲ್ಲಿನ ಚರ್ಚೆಯ ವಿಷಯಗಳನ್ನು ಪಟ್ಟಿಮಾಡುತ್ತಾ ಈ ವಚನ, ಸೃಷ್ಟಿಯ ಮೂಲಸತ್ಯ, ಪಿಂಡಾಂಡ, ಬ್ರಹ್ಮಾಂಡ, ಪಂಚತತ್ವ ಮೊದಲಾದವುಗಳನ್ನು ಉಲ್ಲೇಖಿಸುತ್ತಲೇ ಅನುಭವಮಂಟಪದ ಮೂಲಕ ‘ಕಲ್ಯಾಣ ಕೈಲಾಸ’ವಾದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ.

Ravi 180425 R

ಇನ್ನು ಎರಡನೆಯದು ಶೂನ್ಯ ಸಂಪಾದನೆಗಳು. ಇಲ್ಲಿಯವರೆಗೆ ನಾಲ್ಕು ಶೂನ್ಯಸಂಪಾದನೆಗಳು ಪ್ರಕಟವಾಗಿವೆ. ಪ್ರಭು ದೇವರು ಶಾಪದಿಂದ ಬಂದರು ಎಂದು ಮೊದಲೆರಡು ಸಂಪಾದನೆಗಳು ಹೇಳಿದರೆ, ಮುಂದಿನ ಎರಡು ಅವರು ಪರಶಿವನ ಕಳೆ ಎಂದು ಹೇಳುತ್ತವೆ. ಗುಮ್ಮಳಾಪುರ ಸಿದ್ಧಲಿಂಗ ದೇವರ ಮೂರನೆಯ ಸಂಪಾದನೆಯಲ್ಲಿ “ಶೈವ ಪುರಾತನರ ಚರಿತ್ರೆಗಳಲ್ಲಿ ಶಿವನು ಬಗೆ ಬಗೆಯ ರೂಪದಿಂದ ಬಂದು ಭಕ್ತಜನರನ್ನು ಉದ್ಧರಿಸಿದಂತೆ ಸಾಕಾರ ಶಿವನಾದ ಈ ಪ್ರಭುದೇವರು ಬಗೆಬ ಗೆಯ ಹಾದಿಯಿಂದ ಭಕ್ತಪ್ರಮಥರನ್ನು ಉದ್ಧರಿಸುತ್ತಾನೆ" ಎಂದು ಹೇಳಲಾಗಿದೆ (ಡಾ. ಆರ್.ಸಿ. ಹಿರೇಮಠರ ಪ್ರಸ್ತಾವನೆಯಲ್ಲಿ).

ನಾಲ್ಕನೆಯ ಶೂನ್ಯ ಸಂಪಾದನೆ ಗೋಳೂರು ಸಿದ್ಧವೀರ ಣ್ಣೊಡೆಯರದು. ಇಲ್ಲಿಯೂ ನಿಷ್ಕಲ ಪರಶಿವನ ಸ್ಥೂಲ ತತ್ವ ಬಸವೇಶ್ವರ, ನಿಷ್ಕಲ ಪರಶಿವನ ಸೂಕ್ಷ್ಮ ತತ್ವ ಚೆನ್ನಬಸವೇಶ್ವರ ಎಂದು ಅಲ್ಲಮ ಪ್ರಭುಗಳ ಯುಗಾವತಾರಗಳನ್ನು ಹೇಳಲಾಗಿದೆ. ಇನ್ನು ಮೂರನೇಯ ಉಲ್ಲೇಖ ಶ್ರೀನಿವಾಸ ಮೂರ್ತಿಯವರು ವಚನಗಳಿಗೆ ಮತ್ತು ಉಪನಿಷತ್ತುಗಳಿಗೆ ಸಂಬಂಧ ಇಲ್ಲ ಎಂದು ‘ವಚನ ಧರ್ಮ ಸಾರ’ದಲ್ಲಿ ಹೇಳಿದ್ದಾರೆ ಎನ್ನುವ ಮಾತುಗಳು.

ಈ ವಿಷಯವಾಗಿ ಜಾಗತಿಕ ಮತ್ತು ಮಾರ್ಕ್ಸ್‌ವಾದಿ ಚಿಂತಕರಲ್ಲಿ ದ್ವಂದ್ವಗಳಿವೆ. ಮೊದಲನೆಯ ಉಖದಲ್ಲಿ ಸ್ವತಃ ಬಸವಣ್ಣನವರ ಪತ್ನಿಯೇ ಕಲ್ಯಾಣವನ್ನು ಕೈಲಾಸ ಎಂದು ಕರೆದಿದ್ದಾರೆ. ಇದು ಶಿವನು ಇಂದುಧರನಲ್ಲ, ಕೇವಲ ವೈಚಾರಿಕ, ಕೈಲಾಸದ ಕಲ್ಪನೆಯನ್ನು ಶರಣರು ನಿರಾಕರಿಸಿದ್ದಾರೆ ಎನ್ನುವ ವಾದವನ್ನು ನಿರಾಕರಿಸುತ್ತದೆ, ಈ ವಚನದ ಆಧಾರದಲ್ಲಿ ಪರಶಿವನ ಕೈಲಾಸ ವನ್ನು, ಸನಾತನವಾದ ಪಿಂಡಾಂಡ-ಬ್ರಹ್ಮಾಂಡ-ಪಂಚತತ್ವಗಳನ್ನು ಒಪ್ಪಬೇಕಾಗುತ್ತದೆ.

ಇನ್ನು ಸಾಕ್ಷಿಗಾಗಿ ಶೂನ್ಯ ಸಂಪಾದನೆಗಳನ್ನು ಬಳಸಿಕೊಂಡವರು, ಬಸವೇಶ್ವರರು, ಅಲ್ಲಮ ಪ್ರಭುಗಳು ಮರ್ತ್ಯಲೋಕಕ್ಕೆ ಬಂದ ಕಾರಣಗಳಲ್ಲಿ ಶೂನ್ಯ ಸಂಪಾದನೆಯ ಒಂದನ್ನಾದರೂ ಪೂರ್ತಿ ಒಪ್ಪುತ್ತಾರೆಯೇ? ಉತ್ತರವಿಲ್ಲ. ಇದೇ ಜಾಡಿನ ಜನ ಹಿಂದೆ ಶೂನ್ಯ ಸಂಪಾದನೆಗಳನ್ನು ಟೀಕಿಸಿಕೊಂಡು ಬಂದಿದ್ದೇ ಇದೆ. ಉದಾಹರಣೆಗೆ “ಶೂನ್ಯ ಸಂಪಾದನೆಗಳಲ್ಲಿ ಅನುಭವ ಮಂಟಪದ ಪರಿಕಲ್ಪನೆಯನ್ನೇ ಬುಡಮೇಲು ಮಾಡಲಾಗಿದೆ. ಮುಕ್ತ ಚರ್ಚೆಯೇ ಅಲ್ಲಿಯ ಮುಖ್ಯ ಉದ್ದೇಶ ವಾಗಿದೆ. ಆದರೆ ಶೂನ್ಯ ಸಂಪಾದನೆಗಳಲ್ಲಿ ನಡೆದದ್ದೇನು? ತೋರಿಕೆಗೆ ಚರ್ಚೆ ಎಂದೆನಿಸಿದರೂ, ಆ ಚರ್ಚೆಯು ಸಿದ್ಧಗೊಂಡ ಏಕಸೂತ್ರವನ್ನವಲಂಬಿಸಿದೆ.

ಪ್ರಮುಖ ಪ್ರಸಂಗಗಳಲ್ಲಿ ಲಿಂಗದೀಕ್ಷೆ, ಅಧ್ಯಾತ್ಮ ಇವೇ ಮುಖ್ಯವಾಗಿವೆ. ಶೂನ್ಯಸಂಪಾದನೆಗಳ ಎಲ್ಲ ಆಧ್ಯಾಯಗಳಲ್ಲಿಯೂ ಅಲ್ಲಮಪ್ರಭುವೇ ನಿರ್ಣಯ ಕೊಡುತ್ತ ಹೋಗುತ್ತಾನೆ. ಉಳಿದ ಶರಣರ ವಿಚಾರಗಳು ಅಲ್ಲಿ ಗೌಣವಾಗಿವೆ. ಶರಣರ ಬಹುಮುಖಿ ಚಿಂತನೆಗೆ ಶೂನ್ಯಸಂಪಾದನೆ ದೊಡ್ಡಪೆಟ್ಟು ಕೊಟ್ಟಿದೆ.

ಅನೇಕ ವಚನಗಳನ್ನು ತಾವೇ ಸೃಷ್ಟಿಸಿ ಅವುಗಳನ್ನು ಅಲ್ಲಮಪ್ರಭುವಿನ ಮೂಲಕ ಹೇಳಿಸುತ್ತಾ, ವಚನ ಚಳವಳಿಯ ಒಟ್ಟು ಆಶಯವನ್ನೇ ಶೂನ್ಯ ಸಂಪಾದನಾಕಾರರು ಮುಚ್ಚಿಬಿಟ್ಟಿದ್ದಾರೆ. ಹೀಗಾಗಿ ಅನುಭವ ಮಂಟಪದ ಚರ್ಚೆಗೂ ಶೂನ್ಯಸಂಪಾದನೆಯ ಚರ್ಚೆಗೂ ಸಂಬಂಧವಿಲ್ಲ ದಂತಾಗಿದೆ" (‘ಶೂನ್ಯ ಸಂಪಾದನೆ ಪ್ರಸ್ತುತ ಸವಾಲುಗಳು’ ಪುಸ್ತಕ). ಆದರೆ ಈಗ ಇವರಿಗೆ ಶೂನ್ಯಸಂಪಾದನೆಗಳ ಗುರಾಣಿ ಬೇಕಾಗಿದೆ, ಅಂದರೆ ಇವರಿಗೆ ಇಷ್ಟಲಿಂಗ ದೀಕ್ಷೆ ಮತ್ತು ಅಧ್ಯಾತ್ಮ ಇವುಗಳು ಮುಖ್ಯ ವಿಷಯಗಳೇ ಅಲ್ಲ.

ಮೂರನೆಯ ಗುರಾಣಿ ಶ್ರೀನಿವಾಸಮೂರ್ತಿಯವರು ವಚನಗಳಿಗೆ ಮತ್ತು ಉಪನಿಷತ್ತುಗಳಿಗೆ ಸಂಬಂಧವೇ ಇಲ್ಲ ಎಂದು ‘ವಚನ ಧರ್ಮಸಾರ’ದಲ್ಲಿ ಹೇಳಿzರೆ ಎನ್ನುವ ಮಾತುಗಳು. ಅಸಲು ಇಂತಿದೆ: “ವಚನಸಾಹಿತ್ಯವೇ ತಪೋವನದ ಈ ಉಪನಿಷತ್ಸಾಹಿತ್ಯ, ವಚನಕಾರರೇ ಉಪನಿಷತ್ಕರ್ತೃ ಗಳಾದ ಮಹರ್ಷಿಗಳು. ಇಲ್ಲಿ ‘ಗುಹ್ಯಾತ್ ಗುಹ್ಯತರ’ವಾದ ರಹಸ್ಯಗಳೂ ಮುಚ್ಚು ಮರೆಗಳೂ ಇಲ್ಲ. ವರ್ಣ ವ್ಯತ್ಯಾಸಗಳಿಂದಾಗಲಿ, ಲಿಂಗಭೇದದಿಂದಾಗಲಿ, ಅಧಿಕಾರಿ-ಅನಧಿಕಾರಿ ಎಂಬ ತಾರತಮ್ಯ ವಿಲ್ಲ.

ವೇದಗಳು ಹೆಚ್ಚೇ, ಆಗಮಗಳು ಹೆಚ್ಚೇ ಎಂಬ ತರ್ಕ ವಿತರ್ಕಗಳೂ ಇಲ್ಲ. ವೇದಗಳ ಕಾಲದ ಶಾಂಡಿಲಿ, ಗಾರ್ಗಿ ಮೊದಲಾದವರಂತೆ, ಮುಕ್ತಾಯಕ್ಕ, ಮಹಾದೇವಿಯಕ್ಕ ಮೊದಲಾಗಿ ಹೆಂಗಸರು ಆತ್ಮ ಜಿಜ್ಞಾಸೆ ಮಾಡುವವರಾಗಿ ವಚನಸಾಹಿತ್ಯದಲ್ಲಿ ದೊರೆಯುತ್ತಾರೆ. ವಚನಕಾರರು ತಲೆಯೆತ್ತುವ ಕಾಲಕ್ಕೆ ಉಪನಿಷತ್ತುಗಳು ಹಿನ್ನೆಲೆಯಾಗಿದ್ದವು.

ಆದುದರಿಂದ ಪರವಸ್ತು, ಜೀವ, ಸೃಷ್ಟಿ ಮೊದಲಾದ ವಿಚಾರಗಳೆಲ್ಲ ಚರ್ಚೆಯಾಗಿ ಹೊಸಬೆಳಕು ಹರಡಿ, ಎಲ್ಲವೂ ಕಾಣುವಂತಿದ್ದವು. ಇವುಗಳನ್ನು ಕೆಲವರು ಬಳಸಿಕೊಂಡಿರಬಹುದು. ಆದರೆ ವಚನಕಾರರು ಸ್ವತಂತ್ರವಾಗಿ ಸತ್ಯಶೋಧನೆಗೆ ಪ್ರಯತ್ನ ಪಟ್ಟವರಾದ್ದರಿಂದ, ಅವರ ಅನುಭವ ವಚನಗಳು ಉಪನಿಷತ್ತಿನ ವಚನಗಳನ್ನು ಹೋಲುತ್ತವೆ. ಈ ವಚನಕಾರರಲ್ಲಿ ಎಲ್ಲರೂ ಒಂದೇ ಪಂಥವನ್ನು ಹಿಡಿದವರಲ್ಲ, ಒಂದೇ ಮಟ್ಟಕ್ಕೆ ಏರಿದವರೂ ಅಲ್ಲ. ಆದುದರಿಂದ ಉಪನಿಷತ್ತುಗಳ ಆಧಾರದಿಂದ ಹೇಗೆ ವಿವಿಧ ಸಿದ್ಧಾಂತಗಳನ್ನು ಕಲ್ಪಿಸಿಕೊಳ್ಳಬಹುದಾಗಿದೆಯೋ ಹಾಗೆಯೇ ಮೊದಲಿನ ವಚನ ಸಾಹಿತ್ಯದಿಂದಲೂ ವಿವಿಧ ಸಿದ್ಧಾಂತವನ್ನು ಕಲ್ಪಿಸಿಕೊಳ್ಳಬಹುದಾಗಿದೆ" (‘ವಚನ ಧರ್ಮಸಾರ’. ಅಧ್ಯಾಯ: ವಚನ ಧರ್ಮದ ಉದಯ). ಆದರೆ ಇರುವುದನ್ನು ಬಿಟ್ಟು ಬೇಕಾದ್ದನ್ನು ಮಾತ್ರ ಹೇಳಲಾಗುತ್ತಿದೆ.

ಅನುಭವ ಮಂಟಪ ಇದ್ದದ್ದು ಸತ್ಯವೇ ಎರಡು ಮಾತಿಲ್ಲ. “ಅನುಭವ ಮಂಪಟ ನಾಲ್ಕು ಮಹಾ ದ್ವಾರ, ಮೂವತ್ತಾರು ಕಂಬಗಳಿಂದ ಕೂಡಿದೆ, ಇದರ ಅಧ್ಯಕ್ಷ ಪೀಠವೇ ಶೂನ್ಯ ಸಿಂಹಾಸನ" ಎಂದು ಅನುಭವಮಂಟಪ ರಚನೆಯ ಕುರಿತು ಕನ್ನಡ ವಿಶ್ವಕೋಶ ಹೇಳುತ್ತದೆ. ಬಸವಣ್ಣನವರ ಕಾಲಜ್ಞಾನ ವಚನದಲ್ಲಿ, “ಅಮರಗಣಂಗಳು ಸಹಿತ ಆನಂದ ಸಂವತ್ಸರದ ಕಾರ್ತಿಕ ಮಾಸದ ದಶಮಿ ಸೋಮವಾರ ಶ್ರವಣಾ ನಕ್ಷತ್ರ ಬಂದು, ಅಹೋರಾತ್ರಿಯಲ್ಲಿ ಕಲ್ಯಾಣದ ತ್ರಿಪುರಾಂತಕ ದೇವರ ‘ಅನುಭವ ಮಂಟಪ’ದಲ್ಲಿ ವೀರ ವಸಂತಗೆ ಪಟ್ಟಣವಾದೀತು" ಎಂದು ಇದೆ. ಇದರಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ.

ಒಂದು ಅದು ಕೇವಲ ಶುಷ್ಕ ಅನುಭವ ಮಂಟಪವಲ್ಲ, ಅದು ತ್ರಿಪುರಾಂತಕ ದೇವರ ಅನುಭವ ಮಂಟಪ. ಎರಡನೆಯದು ಬಸವಣ್ಣನವರು ಸನಾತನ ಪಂಚಾಂಗವನ್ನು ಪ್ರಚಲಿತದಲ್ಲಿಟ್ಟಿದ್ದರು. ಸ್ವತಃ ಬಸವಣ್ಣನವರೇ ಸಂವತ್ಸರ, ಮಾಸ, ತಿಥಿ, ವಾರ, ನಕ್ಷತ್ರ ಸಹಿತ ಪಂಚಾಂಗವನ್ನು ಈ ವಚನ ದಲ್ಲಿ ಉಲ್ಲೇಖಿಸಿದ್ದಾರೆ, ಇಲ್ಲವಾದರೆ ಬೇರೆ ರೂಪದಲ್ಲಿ ಹೇಳುತ್ತಿದ್ದರು.

ಇನ್ನು ಪ್ರಭು ದೇವರ ಕಾಲeನ ವಚನದಲ್ಲಿ ಇದೇ ರೀತಿಯ ಸಾಲುಗಳಿವೆ: “ಶಂಭು ತ್ರಿಪುರಾಂತಕ ದೇವರ ಮುಂದಣ ಅನುಭವಮಂಟಪದಲ್ಲಿ ಕಪಿಲೆ ಬಾಣಸವ ಮಾಡ್ಯಾರು ನಂದಿಕಂಬ ಮುರಿ ದಾರು" (ಪುಸ್ತಕ: ಅನುಭವ ಮಂಟಪ- ಚಾರಿತ್ರಿಕ ಹಿನ್ನೆಲೆಗಳು). ತ್ರಿಪುರಾಂತಕ ದೇವರಿದ್ದು, ನಂದಿಯಿದ್ದು ಮತ್ತು ಅನುಭವ ಮಂಟಪವೆಂಬ ಸ್ಥಾವರ ಇತ್ತು ಎಂದು ಈ ವಚನ ಹೇಳುತ್ತದೆ. ಇಲ್ಲಿ ಕಲ್ಯಾಣವನ್ನು ಕೈಲಾಸದಂತೆ ವರ್ಣಿಸಲಾಗಿದ್ದು,ಕಲ್ಯಾಣದಲ್ಲಿರುವ ಅನುಭವ ಮಂಟಪವು ಕಲ್ಯಾಣದಲ್ಲಿದ್ದ ಲಕ್ಷದ ತೊಂಬತ್ತಾರು ಸಾವಿರ ಶಿವಾಲಯಕ್ಕೆ ಸಮವೆಂದು ಹೇಳಿದೆ.

ದೇವಾಲಯ ಸಂಸ್ಕೃತಿ ನಿರಾಕರಿಸಿದರು ಎಂದು ಹೇಳಲಾಗುವ ಬಸವಣ್ಣನವರೇ ಶಿವಾಲಯದ ಸಂಖ್ಯೆ ಉಲ್ಲೇಖ ಮಾಡುತ್ತಾರೆ. ಚೆನ್ನ ಬಸವಣ್ಣನವರ ಕಾಲeನ ವಚನದಲ್ಲಿಯೂ ಅನುಭವ ಮಂಟಪ ತ್ರಿಪುರಾಂತಕ ದೇವರ ಮುಂದೆ ಇದೆ. ಈಗ ತ್ರಿಪುರಾಂತಕ ದೇವಾಲಯ ಅದರ ಮುಂದಿ ರುವ ನಂದಿಯನ್ನು ಹುಡುಕಬೇಕಾಗಿದೆ.

ಶಿವಶರಣರ ಬದಲಿಗೆ ಶರಣ, ಶಿವಾನುಭವ ಮಂಟಪದ ಬದಲು ಅನುಭವ ಮಂಟಪ, ಅನುಭವ ಮಂಟಪದ ಸಮರ್ಥನೆಯಲ್ಲಿ ತ್ರಿಪುರಾಂತಕ ದೇವರ ಇಲ್ಲದಿರುವಿಕೆ, ಪೂಜೆ-ಪತ್ರೆ-ಪ್ರಸಾದಗಳ ನಿರಾಕರಣೆ, ಮೂಲ ಅನುಭವ ಮಂಟಪದ ಕಟ್ಟಡದ ಬದಲು ಹೊಸ ಕಾಂಕ್ರೀಟ್ ಕಟ್ಟಡ ಇವೆ ಸನಾತನದ ಕುರುಹುಗಳನ್ನು, ಸನಾತನ ಭಕ್ತಿ ಪಂರಂಪರೆಯ ಕೊಂಡಿಗಳನ್ನು ವ್ಯವಸ್ಥಿತವಾಗಿ ನಾಶಪಡಿಸಲು ಒಂದು ಗುಂಪು ಮಾಡುತ್ತಿರುವ ಹುನ್ನಾರಗಳು ಎಂಬುದು ಯಾರಿಗಾದರೂ ಗೊತ್ತಾಗುತ್ತದೆ.

ಇದೊಂದು ರೀತಿಯ ಸಾಂಸ್ಕೃತಿಕ ಮಾರ್ಕ್ಸ್‌ವಾದ. ‘ಓತಿಕ್ಯಾತಕ್ಕೆ ಬೇಲಿ ಸಾಕ್ಷಿ’ ಎಂಬಂತೆ ಇವರ ‘ಟೂಲ್-ಕಿಟ್’ಗಳಿಗೆ ಅವರದೇ ಪಟಾಲಂ ಬರೆದ ಸಾಹಿತ್ಯಗಳು, ವಿಡಿಯೋ ಲಿಂಕು ಗಳು ಆಧಾರ. ವಚನಾಭಿಮಾನಿಗಳು ಇವುಗಳನ್ನು ಅರಿತುಕೊಂಡಿರುವುದು ಒಳಿತು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)