Dr N Someshwara Column: ಹುಳುಗಳನ್ನು ಔಷಧವನ್ನಾಗಿ ಬಳಸಬಹುದೇ ?
ಹುಳುಗಳನ್ನು ಔಷಧವನ್ನಾಗಿ ಬಳಸಬಹುದೋ ಇಲ್ಲವೋ ಎನ್ನುವುದರ ಬಗ್ಗೆ ವಿಚಾರ ಮಾಡುವು ದಕ್ಕೆ ಮೊದಲು, ಕೆಲವು ಮೂಲ ಭೂತ ವಿಚಾರಗಳನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ವಾಸ್ತವ ದಲ್ಲಿ ನಮ್ಮ ದೇಹವೊಂದು ‘ಜ಼ೂ’ ಎನ್ನುವುದು ನಮಗೆ ತಿಳಿದಿಲ್ಲ. ನಾವು ಊಟ ಮಾಡಿದರೆ, ನಾವೊ ಬ್ಬರು ಮಾತ್ರ ಊಟವನ್ನು ಮಾಡುತ್ತಿಲ್ಲ, ನಮ್ಮ ಜತೆಯಲ್ಲಿ ಲಕ್ಷಕೋಟಿ (ಟ್ರಿಲಿಯನ್) ಗಟ್ಟಲೆ ಜೀವಿಗಳೂ ಊಟವನ್ನು ಮಾಡುತ್ತವೆ ಎಂದರೆ, ಅದು ಖಂಡಿತ ಅತಿಶಯೋಕ್ತಿಯಲ್ಲ


ಹಿಂದಿರುಗಿ ನೋಡಿದಾಗ
ಹುಳುಗಳನ್ನು ಔಷಧವನ್ನಾಗಿ ಬಳಸಬಹುದೋ ಇಲ್ಲವೋ ಎನ್ನುವುದರ ಬಗ್ಗೆ ವಿಚಾರ ಮಾಡುವು ದಕ್ಕೆ ಮೊದಲು, ಕೆಲವು ಮೂಲ ಭೂತ ವಿಚಾರಗಳನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ವಾಸ್ತವ ದಲ್ಲಿ ನಮ್ಮ ದೇಹವೊಂದು ‘ಜ಼ೂ’ ಎನ್ನುವುದು ನಮಗೆ ತಿಳಿದಿಲ್ಲ. ನಾವು ಊಟ ಮಾಡಿದರೆ, ನಾವೊ ಬ್ಬರು ಮಾತ್ರ ಊಟವನ್ನು ಮಾಡುತ್ತಿಲ್ಲ, ನಮ್ಮ ಜತೆಯಲ್ಲಿ ಲಕ್ಷಕೋಟಿ (ಟ್ರಿಲಿಯನ್) ಗಟ್ಟಲೆ ಜೀವಿಗಳೂ ಊಟವನ್ನು ಮಾಡುತ್ತವೆ ಎಂದರೆ, ಅದು ಖಂಡಿತ ಅತಿಶಯೋಕ್ತಿಯಲ್ಲ.
೧. ನಾವು, ನಾವು ಮಾತ್ರವಲ್ಲ! ನಮ್ಮ ಶರೀರವು 30 ಲಕ್ಷ ಕೋಟಿ ಜೀವಕೋಶಗಳಿಂದ ಆಗಿದ್ದರೆ, ನಮ್ಮ ಮೈಮೇಲೆ ಹಾಗೂ ಮೈ ಒಳಗೆ 100 ಲಕ್ಷಕೋಟಿ ಸೂಕ್ಷ್ಮಜೀವಿಗಳು ವಾಸಿಸುತ್ತವೆ. ನಮ ಗಿಂತಲೂ ಮೂರು ಪಟ್ಟು ಹೆಚ್ಚು. ನಮ್ಮ ದೇಹದಲ್ಲಿ ನಾವೇ ಅಲ್ಪಸಂಖ್ಯಾತರು!
೨. ನಮ್ಮ ದೇಹದಲ್ಲಿ ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ವಾಸಿಸುವಂತೆ, ನಮ್ಮ ದೇಹದ ಮೇಲೆ ಹಾಗೂ ಒಳಗೆ ಕಣ್ಣಿಗೆ ಕಾಣುವ ಜೀವಿಗಳು ವಾಸಿಸುತ್ತವೆ. ಚರ್ಮದ ಮೇಲೆ ಹೇನು, ಒಡಲಹೇನು, ಜನನಾಂಗ ಹೇನು, ಕಜ್ಜಿನುಸಿಗಳು ವಾಸಿಸುತ್ತವೆ. ರಕ್ತದಲ್ಲಿ ಮಲೇರಿಯ, ಫೈಲೇರಿಯ, ಆಫ್ರಿಕನ್ ನಿದ್ರಾರೋಗದ ಆದಿಜೀವಿಗಳಿರುತ್ತವೆ. ಕರುಳಿನಲ್ಲಿ ದುಂಡುಹುಳ, ಕೊಕ್ಕೆಹುಳ, ಲಾಡಿಹುಳ, ಚಾವಟಿಹುಳ, ಜಿಯಾರ್ಡಿಯ, ಎಂಟಮೀಬಗಳಿರುತ್ತವೆ. ಯಕೃತ್ತಿನಲ್ಲಿ ಎಂಟಮೀಬ, ಎಕೈನೋ ಕಾಕಸ್, ಕ್ಲೋನಾರ್ಕಿಸ್, ಶಿಸ್ಟೋಸೋಮ, ಫೇಸಿಯೋಲ ಹೆಪಾಟಿಕ ಇತ್ಯಾದಿಗಳಿರುತ್ತವೆ. ನಮ್ಮ ಸ್ನಾಯುಗಳಲ್ಲಿ ಟ್ರೈಕಿನೆಲ್ಲ ಸ್ಪೈರಾಲಿಸ್, ಟೀನಿಯ ಸೋಲಿಯಂ, ಸಾರ್ಕೋಸಿಸ್ಟಿಸ್ ಇರುತ್ತವೆ. ಮಿದುಳಿನಲ್ಲಿ ನೆಗ್ಲೇರಿಯ, ಟೀನಿಯ ಸೋಲಿಯಂ, ಟಾಕ್ಸೋಪ್ಲಾಸ್ಮ ಗೊಂಡಿ, ಟ್ರಿಪನೋ ಸೋಮ ಬ್ರೂಸಿ, ಅಕ್ಯಾಂಥಮೀಬಗಳಿರುತ್ತವೆ.
ಇದನ್ನೂ ಓದಿ: Dr N Someshwara Column: ಕ್ಷಯ ಚಿಕಿತ್ಸೆಯು ನಡೆದು ಬಂದ ದಾರಿ
ಕಣ್ಣಿನಲ್ಲಿ ಲೋವಲೋವಾ, ಟಾಕ್ಸೋಕ್ಯಾರ ಕ್ಯಾನಿಸ್, ಆಂಕೋಸೆರ್ಕ ವಾಲ್ವ್ಯುಲಸ್, ಟಾಕ್ಸೋ ಪ್ಲಾಸ್ಮ ಗೊಂಡಿಗಳಿರುತ್ತವೆ. ಮೂಗು ಮತ್ತು ಶ್ವಾಸಕೊಶಗಳಲ್ಲಿ ಪ್ಯಾರಗೋನಿಮಸ್, ಸ್ಟ್ರಾಂಗೈಲಾ ಯ್ಡಸ್, ಆಸ್ಕ್ಯಾರಿಸ್ ಲುಂಬ್ರಿಕಾಯ್ಡ್ಸ್ ಹುಳುಗಳಿರುತ್ತವೆ. ಇವು ಕೆಲವು ಉದಾಹರಣೆಗಳು ಮಾತ್ರ.
೩. ನಾವು ಸ್ವತಂತ್ರರಲ್ಲ! ನಾವು ಆರೋಗ್ಯಕರ ಜೀವನವನ್ನು ನಡೆಸಬೇಕಾದರೆ, ಈ ಸೂಕ್ಷ್ಮಜೀವಿಗಳು ಹಾಗೂ ಕೆಲವು ಹುಳುಗಳು ಅಗತ್ಯ ಎನ್ನುವುದು ಆಧುನಿಕ ವಿಜ್ಞಾನದ ಅಭಿಮತ.
೪. ಒಂಟೆ ಮತ್ತು ಅರಬ್ಬನ ಕಥೆ ನಮಗೆ ತಿಳಿದಿದೆ. ಹೊರಗೆ ವಿಪರೀತ ಚಳಿ, ನನ್ನ ತಲೆಯನ್ನು ಮಾತ್ರ ಗುಡಾರದಲ್ಲಿ ಇರಿಸುತ್ತೇನೆ ಎಂದ ಒಂಟೆ ಮುಂದೇನು ಮಾಡಿತು ಎಂಬುದು ನಮಗೆ ಗೊತ್ತಿದೆ. ಹಾಗೆಯೇ ಈ ಜ಼ೂ ಜೀವಿಗಳು! ಇವುಗಳನ್ನು ಸಾಕಲೇಬೇಕಾದದ್ದು ನಮ್ಮ ಅನಿವಾರ್ಯ ‘ಕರ್ಮ’! ಇವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಿಲ್ಲವೆಂದರೆ, ನಮಗೂ ಅರಬ್ಬನ ಕಥೆಯೇ ಆಗುತ್ತದೆ. ಹಾಗಾಗಿ ನಮ್ಮ ದೇಹದಲ್ಲಿ ಒಂದು ‘ರೋಗರಕ್ಷಣಾ ವ್ಯವಸ್ಥೆ’ ಅಥವಾ ‘ಇಮ್ಯೂನ್ ಸಿಸ್ಟಮ್’ ಇರು ತ್ತದೆ. ಈ ರಕ್ಷಣಾ ವ್ಯೂಹಕ್ಕೆ ಜ಼ೂನಲ್ಲಿರುವ ಎಲ್ಲ ಪ್ರಾಣಿಗಳ ಪರಿಚಯವಾಗಬೇಕು.

ಪರಿಚಯವಾದರೆ, ಅವುಗಳ ಬಲಾಬಲವನ್ನು ತಿಳಿದುಕೊಂಡು, ಅವು ಹದ್ದುಮೀರಿದಾಗ, ಅವನ್ನು ನಿಗ್ರಹಿಸಬೇಕಾದ ಎಲ್ಲ ತಂತ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತದೆ. ಈ ರೋಗರಕ್ಷಣಾ ವ್ಯವಸ್ಥೆಯ ಕಾರಣದಿಂದಲೇ ನಾವೆಲ್ಲ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ.
೫. ‘ಕೆಲಸವಿಲ್ಲದಾತ ತನ್ನ ಮಗನ ಬೆನ್ನು ಕೆತ್ತಿದ’ ಎಂಬ ಗಾದೆ ಮಾತನ್ನು ನಾವೆಲ್ಲ ಕೇಳಿದ್ದೇವೆ. ಈ ಗಾದೆಯು ನಮ್ಮ ರೊಗರಕ್ಷಣಾ ವ್ಯೂಹಕ್ಕೆ ಹೇಳಿ ಮಾಡಿಸಿರುವಂಥದ್ದು. ರೋಗ ರಕ್ಷಣಾ ವ್ಯೂಹಕ್ಕೆ ನಮ್ಮ ಒಡಲು ಜ಼ೂ ಜೀವಿಗಳ ಪರಿಚಯವು ಕಾಲಕಾಲಕ್ಕೆ ಆಗುತ್ತಿದ್ದರೆ, ಅವುಗಳನ್ನು ನಿಗ್ರಹಿಸುವ ಕುರಿತು ಸದಾ ವ್ಯಸ್ತವಾಗಿರುತ್ತವೆ. ಇಲ್ಲದಿದ್ದರೆ ಇವು ನಮ್ಮ ದೇಹದ ವಿವಿಧ ಅಂಗಗಳನ್ನೇ ‘ಶತ್ರು’ ಗಳೆಂದು ಭಾವಿಸಿ ಅವುಗಳ ಮೇಲೆ ಉಗ್ರ ಆಕ್ರಮಣವನ್ನು ಮಾಡಿ ಕಾಯಿಲೆಗಳನ್ನು ತರುತ್ತವೆ. ಉದಾ: ಅಸ್ತಮಾ, ರುಮಟಾಯ್ಡ್ ಆರ್ಥ್ರೈಟಿಸ್, ತೊನ್ನು, ಮಲ್ಟಿಪಲ್ ಸ್ಕ್ಲೀರೋಸಿಸ್ ಇತ್ಯಾದಿ ಕಾಯಿಲೆಗಳು ಬರುತ್ತವೆ. ಇಂಥವನ್ನು ‘ಸ್ವಯಂ ವಿನಾಶಕ ರೋಗಗಳು’ ಅಥವಾ ‘ಆಟೋಇಮ್ಯೂನ್ ಡಿಸಾರ್ಡರ್ಸ್’ ಎಂದು ಕರೆಯುತ್ತೇವೆ.
೬. ಸತ್ಯಮೇವ ಜಯತೆ ಎನ್ನುವ ಮಾತು ಎಷ್ಟು ಸತ್ಯವೋ ಹಾಗೆಯೇ ಸ್ವಚ್ಛಮೇವ ಜಯತೆ ಎನ್ನುವ ಮಾತೂ ಅಷ್ಟೇ ಸತ್ಯ. ಆದರೆ ಸ್ವಚ್ಛತೆಯೂ ಸದಾ ಹಿತ-ಮಿತವಾಗಿದ್ದರೆ ಮಾತ್ರ ಅದು ಉಪಯುಕ್ತ. ಮಿತಿಮೀರಿದರೆ ಅಪಾಯಕಾರಿ. ನ್ಯೂಯಾರ್ಕ್ ನಗರದಲ್ಲಿರುವ ಹೆತ್ತವರು ತಮ್ಮ ಮಕ್ಕಳನ್ನು ಮಣ್ಣಿನಲ್ಲಿ ಆಡುವುದನ್ನು ಬಿಡಿ, ನಡೆದಾಡಲೂ ಬಿಡಲಿಲ್ಲ.
ಅಷ್ಟು ಸ್ವಚ್ಛತೆಯ ವ್ಯಸನವು ಅವರನ್ನು ಆವರಿಸಿತು. ಆಗ ಮಕ್ಕಳಲ್ಲಿ ವಿಚಿತ್ರ ನಮೂನೆಯ ಅಲರ್ಜಿ ಮತ್ತು ಅಸ್ತಮಾ ಗಳು ಕಂಡುಬಂದವು. ವಿಜ್ಞಾನಿಗಳು ಅಧ್ಯಯನವನ್ನು ನಡೆಸಿದರು. ಮಣ್ಣಿನಲ್ಲಿ ‘ಮೈಕೋಬ್ಯಾಕ್ಟೀರಿಯಂ ವ್ಯಾಕ್ಸೆ’ ಎಂಬ ಬ್ಯಾಕ್ಟೀರಿಯವಿರುತ್ತದೆ. ಮಕ್ಕಳು ಮಣ್ಣಿನಲ್ಲಿ ಆಟವಾಡದ ಕಾರಣ, ಅವರು ಈ ಬ್ಯಾಕ್ಟೀರಿಯದ ಸಂಪರ್ಕಕ್ಕೆ ಬರಲಿಲ್ಲ.
ಹಾಗಾಗಿ ಅವರಲ್ಲಿ ಅಪರೂಪದ ಅಲರ್ಜಿಯ ಲಕ್ಷಣಗಳು ಕಂಡುಬಂದವು. ಹಾಗಾಗಿ ಸರಕಾರವು ನ್ಯೂಯಾರ್ಕಿನ ಸೆಂಟ್ರಲ್ ಪಾರ್ಕಿನಲ್ಲಿ ರಾಶಿ ರಾಶಿ ಮರಳನ್ನು ಸುರಿದು, ವಾರಾಂತ್ಯದಲ್ಲಿ ಆ ಮರಳಿನಲ್ಲಿ ಆಟವಾಡುವಂತೆ ಮಕ್ಕಳನ್ನು ಪ್ರೇರೇಪಿಸಿತು. ಆಗ ಅವರ ಅಲರ್ಜಿಯು ಕಡಿಮೆಯಾ ಯಿತು. ‘ಅತಿ ಸರ್ವತ್ರಮ್ ವರ್ಜಯೇತ್’ ಎಂಬ ಮಾತಿಗೆ ಮತ್ತೊಮ್ಮೆ ಪುರಾವೆಯು ದೊರೆಯಿತು.
ಅನಾದಿಕಾಲ: ಮಾನವ ದೇಹದ ಜ಼ೂನಲ್ಲಿರುವ ಪ್ರಾಣಿಗಳು ಮನುಷ್ಯನೊಡನೆ ತಾವೂ ವಿಕಾಸ ವಾಗುತ್ತ ಕೋಟ್ಯಂತರ ವರ್ಷಗಳಿಂದ ಅವನ ಒಡನಾಡಿಯಾಗಿ ಬದುಕುತ್ತಿವೆ. ಇವುಗಳ ಬಗ್ಗೆ ಜಗತ್ತಿನ ಎಲ್ಲ ಪ್ರಧಾನ ಸಂಸ್ಕೃತಿಗಳು ದಾಖಲಿಸಿವೆ. ಈಜಿಪ್ಷಿಯನ್ನರ ‘ಈಬರ್ಸ್ ಪ್ಯಾಪಿ ರಸ್’ (ಕ್ರಿ.ಪೂ.1500) ನಮ್ಮ ದೇಹದಲ್ಲಿರುವ ಹುಳುಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಬಹುಶಃ ಕ್ರಿ.ಪೂ.600ರ ಆಸುಪಾಸಿನಲ್ಲಿ ರೂಪುಗೊಂಡ ಸುಶ್ರುತ ಸಂಹಿತೆಯು ನಮ್ಮ ಒಡಲ ಜ಼ೂಗಳ ಬಗ್ಗೆ ಅದ್ಭುತ ಮಾಹಿತಿಯನ್ನು ನೀಡುತ್ತದೆ.
ಮೊದಲನೆಯದು ‘ರಕ್ತಜ’, ನಮ್ಮ ರಕ್ತದಲ್ಲಿ ಇರುವಂಥವು. ಎರಡನೆಯದು ‘ಮಲಜ’, ಎಂದರೆ ನಮ್ಮ ಕರುಳಿನಲ್ಲಿ ವಾಸವಾಗಿದ್ದು ಹೆಚ್ಚುವರಿ ಹುಳುಗಳು ಮಲದ ಮೂಲಕ ಹೊರಬೀಳುವಂಥವು. ಮೂರನೆಯದು ‘ಕಫಜ’, ನಮ್ಮ ಮೂಗು ಮತ್ತು ಶ್ವಾಸಕೋಶಗಳಲ್ಲಿ ವಾಸಮಾಡುವಂಥವು ಹಾಗೂ ನಾಲ್ಕನೆಯದು ‘ಭೂತಜ’ ಅಂದರೆ ನಮ್ಮ ಬರಿಗಣ್ಣಿಗೆ ಕಾಣದೆ, ಅದೃಶ್ಯವಾಗಿ ನಮ್ಮ ದೇಹವನ್ನು ಪ್ರವೇಶಿಸಿ, ವಾಸಿಸುವಂಥವು. ಇವು ಬಹುಶಃ ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರ ಮುಂತಾದ ಸೂಕ್ಷ್ಮಜೀವಿಗಳೇ ಆಗಿರಬಹುದು. ಹಿಪ್ಪೋಕ್ರೇಟ್ಸ್ ಸಹ ಒಡಲ ಹುಳುಗಳು ಹಾಗೂ ಅವುಗಳನ್ನು ನಿವಾರಿಸುವ ಬಗ್ಗೆ ಬರೆದಿದ್ದಾನೆ.
20ನೆಯ ಶತಮಾನ: 20ನೆಯ ಶತಮಾನದಲ್ಲಿ ಆರೋಗ್ಯ ವಿಜ್ಞಾನವು ಸರ್ವತೋಮುಖ ಪ್ರಗತಿ ಯನ್ನು ಕಂಡಿತು. ಅದರ ಫಲವಾಗಿ, ಸ್ವಚ್ಛತೆಗೆ ಆದ್ಯತೆಯನ್ನು ನೀಡುವುದರ ಮೂಲಕ ಅಸಂಖ್ಯ ರೋಗಗಳನ್ನು ತಡೆಗಟ್ಟಬಹುದು ಎಂಬ ವಿಚಾರವು ತಿಳಿಯಿತು.
ಕುಡಿಯಲು ಸ್ವಚ್ಛನೀರು, ಒಳಚರಂಡಿ ವ್ಯವಸ್ಥೆ, ಪ್ರತಿ 6 ತಿಂಗಳಿಗೊಮ್ಮೆ ಹೊಟ್ಟೆಹುಳಕ್ಕೆ (ಇದ್ದರೂ ಸರಿ, ಇರದಿದ್ದರೂ ಸರಿ) ಔಷಧಿಗಳನ್ನು ತೆಗೆದುಕೊಳ್ಳುವ ಹವ್ಯಾಸ ಎಲ್ಲೆಡೆ ಹರಡಿತು. ಇದರಿಂದ ಕರುಳ ಹುಳುಗಳನ್ನು ಬಹುಪಾಲು ನಿವಾರಿಸಲು ಸಾಧ್ಯವಾಯಿತು. 1989ರಲ್ಲಿ ಬ್ರಿಟನ್ನಿನ ಡಾ. ಡೇವಿಡ್ ಪಿ. ಸ್ಟ್ರಾನ್ ಎನ್ನುವವನು ಅತಿ ಸ್ವಚ್ಛತೆಯಿಂದ ಅಲರ್ಜಿ, ಅಸ್ತಮ, ಎಕ್ಜಿಮ ಮುಂತಾದ ಕಾಯಿಲೆಗಳು ಹೆಚ್ಚಿವೆ ಎನ್ನುವುದನ್ನು ಆಧಾರ ಸಮೇತ ನಿರೂಪಿಸಿದ. ಜತೆಗೆ ‘ಪುರಾತನ ಮಿತ್ರರ ಸಿದ್ಧಾಂತ’ವನ್ನು (ಓಲ್ಡ್ ಫ್ರೆಂಡ್ ಹೈಪಾಥೆಸಿಸ್) ಮಂಡಿಸಿದ.
ಈ ಸಿದ್ಧಾಂತದ ಅನ್ವಯ, ‘ನಮ್ಮ ಒಡಲು, ಸಕಾಲದಲ್ಲಿ ಹುಳುಗಳ ಸಂಪರ್ಕಕ್ಕೆ ಬಂದರೆ ಮಾತ್ರ, ನಮ್ಮ ರೋಗರಕ್ಷಣಾ ವ್ಯವಸ್ಥೆಯು ಸಮರ್ಪಕವಾಗಿ ಕೆಲಸಕ್ಕೆ ಬರುತ್ತದೆ. ಅತಿ ಸ್ವಚ್ಛತೆಯ ಕಾರಣ ಹುಳುಗಳ ಸಂಪರ್ಕಕ್ಕೆ ಬರದಿದ್ದರೆ, ರೋಗರಕ್ಷಣಾ ವ್ಯವಸ್ಥೆಯು ನಮ್ಮ ಮೇಲೆಯೇ ದಾಳಿ ಮಾಡು ತ್ತದೆ’ ಎಂಬ ವಿಚಾರವು ಮನದಟ್ಟಾಯಿತು.
ಈ ಹಿನ್ನೆಲೆಯಲ್ಲಿ ಸ್ವಯಂ ವಿನಾಶಕ ರೋಗಗಳಾದ ಮಲ್ಟಿಪಲ್ ಸ್ಕ್ಲೀರೋಸಿಸ್ ಮತ್ತು ರುಮ ಟಾಯ್ಡ್ ಆರ್ಥ್ರೈ ಟಿಸ್, ಅಲರ್ಜಿಯ ನಮೂನೆಗಳಾದ ಅಸ್ತಮಾ, ಎಕ್ಜಿಮ ಮತ್ತು ಆಹಾರ ಅಲರ್ಜಿ ಗಳು ಹಾಗೂ ಕರುಳ ಉರಿಯೂತ ರೋಗಗಳಾದ ಕ್ರಾನ್ಸ್ ಡಿಸೀಸಸ್ ಮತ್ತು ಅಲ್ಸರೇಟಿವ್ ಕೊಲೈಟಿಸ್ ಕಾಯಿಲೆಗಳಿಗೂ ಈ ಹುಳುಗಳ ಗೈರುಹಾಜರಿಗೂ ಸಂಬಂಧವಿರಬೇಕೆಂದು ವಿಜ್ಞಾನಿಗಳು ತರ್ಕಿಸಿ ದರು. ಹಾಗಾಗಿ ಹುಳುಗಳ ಚಿಕಿತ್ಸೆಯಿಂದ ಈ ಕಾಯಿಲೆಗಳನ್ನು ಗುಣಪಡಿಸಬಹುದೇ ಅಥವಾ ನಿಯಂತ್ರಣ ದಲ್ಲಿ ಇಟ್ಟುಕೊಳ್ಳಬಹುದೇ ಎನ್ನುವ ಬಗ್ಗೆ ಅಧ್ಯಯನಗಳನ್ನು ಆರಂಭಿಸಿದರು.
ದಿಟ್ಟ ಪ್ರಯೋಗಗಳು: 2005ರಲ್ಲಿ ಡಾ.ಜೋಯಲ್ ವೀನ್‌ಸ್ಟಾಕ್ (1948-2022) ಸ್ವಯಂವಿನಾಶಕ ರೋಗವಾದ ಕ್ರಾನ್ಸ್ ಡಿಸೀಸ್ ಕಾಯಿಲೆಯ ಚಿಕಿತ್ಸೆಯಲ್ಲಿ, ‘ಟ್ರಿಚುರೀಸ್ ಸ್ಯೂಸ್’ ಎಂಬ ಹಂದಿ ಚಾವಟಿಹುಳದ ಮೊಟ್ಟೆಯನ್ನು ಬಳಸಲು ನಿರ್ಧರಿಸಿದರು. ಪ್ರತಿ ಮೂರು ವಾರಕ್ಕೆ ಒಮ್ಮೆ 2500 ಮೊಟ್ಟೆಗಳನ್ನು ನುಂಗಿಸಿದರು ಹಾಗೂ 24 ವಾರಗಳವರೆಗೆ ಮುಂದುವರಿಸಿದರು.
ಶೇ.72ರಷ್ಟು ರೋಗಿಗಳ ರೋಗಲಕ್ಷಣಗಳೆಲ್ಲ ಸಂಪೂರ್ಣವಾಗಿ ಶಮನವಾದವು ಹಾಗೂ ಶೇ.62 ರಷ್ಟು ರೋಗಿಗಳ ಲಕ್ಷಣಗಳು ಸುಧಾರಿಸಿದವು. ಮಕ್ಕಳು ಚಿಕ್ಕವರಾಗಿದ್ದಾಗ ಅವರ ಕರುಳಿನಲ್ಲಿ ಹುಳುಗಳು ಇರದಿದ್ದರೆ, ರೋಗರಕ್ಷಣಾ ವ್ಯೂಹಕ್ಕೆ ಅಪೂರ್ಣ ತರಬೇತಿ ದೊರೆಯುವ ಕಾರಣ, ವಯಸ್ಕರಾದಾಗ ಅವರಿಗೆ ಬಾಯಿ ಯಿಂದ ಗುದನಾಳದವರೆಗೆ ಕರುಳಿನ ಯಾವುದೇ ಭಾಗವನ್ನು ಉರಿಯೂತಕ್ಕೊಳಪಡಿಸಿ ನಾನಾ ರೋಗಲಕ್ಷಣಗಳನ್ನು ತೋರುತ್ತದೆ ಎಂದು, ಅತಿ ಸ್ವಚ್ಛತೆ ಅಪಾಯಕಾರಿ ಎಂದು ನಿರೂಪಿಸಿದ.
ಮಲ್ಟಿಪಲ್ ಸ್ಕ್ಲೀರೋಸಿಸ್ (ಎಂ.ಎಸ್) ಎನ್ನುವುದು ಒಂದು ಸ್ವಯಂವಿನಾಶಕ ರೋಗ. ಇದು ಮಿದುಳು ಮತ್ತು ನರಮಂಡಲವನ್ನು ಕಾಡುತ್ತದೆ. ನರಕೋಶಗಳ ಮೇಲೆ ‘ಮಯಲಿನ್’ ಎನ್ನುವ ಹೊದಿಕೆಯಿರುತ್ತದೆ. ನರಸಂಜ್ಞೆಗಳು ಒಂದು ನರಕೋಶದಿಂದ ಮತ್ತೊಂದು ನರಕೋಶಕ್ಕೆ ಸಾಗಲು ಮಯಲಿನ್ ಶೀತ್ ಆರೋಗ್ಯಕರವಾಗಿರಬೇಕು. ಆದರೆ ರೋಗರಕ್ಷಣಾ ವ್ಯೂಹವು ಮಯಲಿನ್ ಹೊದಿಕೆಯನ್ನು ‘ಅಪಾಯಕಾರಿ’ ವಸ್ತು ಎಂದು ಪರಿಗಣಿಸಿ, ಅದನ್ನು ನಾಶ ಪಡಿಸುತ್ತದೆ. ಆಗ ವ್ಯಕ್ತಿಯ ಎಲ್ಲ ಕೆಲಸಗಳು ಮಂದವಾಗುತ್ತವೆ.
ಡಾ.ಜಾರ್ಜ್ ಕೊರಿಲೇಟ್ ಅರ್ಜೆಂಟೀನ ದೇಶದ ಓರ್ವ ನರವೈದ್ಯ. ಈತ 24 ಎಂ.ಎಸ್ ರೋಗಿ ಗಳನ್ನು ಆಯ್ಕೆ ಮಾಡಿಕೊಂಡ. ಅವರಲ್ಲಿ 12 ಜನರ ಕರುಳಿನಲ್ಲಿ ಸಹಜವಾಗಿ ಹುಳುಗಳಿದ್ದವು (ಚಾವಟಿಹುಳ, ಲಾಡಿಹುಳ, ಜಂತುಹುಳ, ದಾರದ ಹುಳ ಮತ್ತು ಶಿಸ್ಟೋಸೋಮ ಎಂಬ ರಕ್ತಪರೋ ಪಜೀವಿ). ಉಳಿದ 12 ಜನರ ಕರುಳಿನಲ್ಲಿ ಯಾವುದೇ ಹುಳುಗಳಿರಲಿಲ್ಲ. ಈ ಎರಡೂ ಗುಂಪಿನವ ರನ್ನು 5 ವರ್ಷಗಳ ಕಾಲ ಅಧ್ಯಯನ ಮಾಡಿದರು.
ಹುಳುಗಳಿದ್ದವರಲ್ಲಿ ರೋಗಲಕ್ಷಣಗಳು ಕಡಿಮೆಯಾದವು. ಕಾಯಿಲೆ ಸ್ಥಗಿತವಾಗಿತ್ತು. ಎಂ.ಆರ್.ಐ ಪರೀಕ್ಷೆಗಳಲ್ಲಿ ಕರುಳುಹುಣ್ಣು ಕಡಿಮೆಯಾಗಿರುವುದು ತಿಳಿಯಿತು. ರೋಗರಕ್ಷಣಾ ವ್ಯವಸ್ಥೆಯ ಟಿ- ರೆಗ್ಯುಲೇಟರಿ ಸೆಲ್ಸ್, ಐಎಲ್-10, ಟಿಜಿಎಫ್ -ಬೀಟ ಇತ್ಯಾದಿ ರಾಸಾಯನಿಕಗಳ ಸುಧಾರಣೆಯ ಕಾರಣ ಮೇಲಿನ ಗುಣಕಾರಿ ಲಕ್ಷಣಗಳು ಕಂಡುಬಂದಿದ್ದವು. ಇಂಥ ಗುಣಕಾರಿ ಲಕ್ಷಣಗಳು ಹುಳು ಗಳಿಲ್ಲದ 12 ಎಂ.ಎಸ್.ರೋಗಿಗಳಲ್ಲಿ ಕಂಡುಬರಲಿಲ್ಲ.
ಗುಣಕಾರಿ ರೋಗಲಕ್ಷಣಗಳನ್ನು ತೋರಿದ 12 ರೋಗಿಗಳಲ್ಲಿ ನಾಲ್ವರು ರೋಗಿಗಳಿಗೆ ಜಂತುನಾಶಕ ಔಷಧಗಳನ್ನು ನೀಡಿದಾಗ, ಅವರ ಕರುಳ ಹುಳುಗಳೆಲ್ಲ ನಾಶವಾದವು. ಆಗ ಆ ನಾಲ್ವರಲ್ಲಿ ಎಂ.ಎಸ್. ರೋಗಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಂಡವು.
ಸಾರಾಂಶ: ಮಾನವನ ಒಡಲಿನ ಜ಼ೂ ಅನಾದಿಕಾಲದ್ದು. ಅವನ್ನು ಸಂಪೂರ್ಣ ನಿರ್ನಾಮ ಮಾಡಬಾರದು. ಅತಿ ಸ್ವಚ್ಛತೆ ಅಪಾಯಕಾರಿ. ಹುಳುಗಳ ಚಿಕಿತ್ಸೆ ಭರವಸೆದಾಯಕವಾಗಿದ್ದರೂ ಅಮೆರಿಕದ ಎಫ್ ಡಿಎ ಇದಕ್ಕೆ ಅನುಮತಿಯನ್ನು ನೀಡಿಲ್ಲ. ಆಸ್ಟ್ರೇಲಿಯಾ, ಜರ್ಮನಿ, ಮೆಕ್ಸಿಕೊ, ಅರ್ಜೆಂಟೀನ, ಯುಕೆ, ಅಮೆರಿಕಗಳಲ್ಲಿ ಇಂಥ ಚಿಕಿತ್ಸೆಗಳು ನಡೆದಿವೆ. ಅವನ್ನು ಪ್ರಾಯೋಗಿಕ ಚಿಕಿತ್ಸೆ (ಎಕ್ಸ್ ಪರಿಮೆಂಟಲ್ ಥೆರಪಿ) ಎಂದು ಪರಿಗಣಿಸಿದ್ದಾರೆಯೇ ಹೊರತು ಪ್ರಮಾಣಬದ್ಧ ಚಿಕಿತ್ಸೆ ಎಂದು ಪರಿಗಣಿಸಿಲ್ಲ. ಆದರೂ ಆಟಿಸಂ, ಡಯಾಬಿಟಿಸ್-ಟೈಪ್ 1, ಡಿಪ್ರೆಶನ್ ಅಂಡ್ ಆಂಕ್ಸೆ ಟಿ, ಸೋರಿ ಯಾಸಿಸ್, ಏಟೋಪಿಕ್ ಡರ್ಮಟೈಟಿಸ್ ಮುಂತಾದ ರೋಗಗಳನ್ನು ಹುಳುಚಿಕಿತ್ಸೆಯಿಂದ ನಿಗ್ರಹಿಸ ಬಹುದೇ ಎನ್ನುವ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.
ಇದುವರೆಗೂ ನಡೆದ ಹುಳುಗಳ ಚಿಕಿತ್ಸೆಯಿಂದ ಒಂದು ಹೊಸ ಸಂಶೋಧನೆಯು ಆರಂಭವಾಗಿದೆ. ಹುಳುಗಳ ಒಡಲಿನ ಯಾವ ರಾಸಾಯನಿಕ ಅಂಶವು ನಮ್ಮ ರೋಗರಕ್ಷಣಾ ವ್ಯೂಹವನ್ನು ಜಾಗೃತ ಗೊಳಿಸುತ್ತದೆ ಎನ್ನುವುದನ್ನು ತಿಳಿದು, ಅವನ್ನು ಕೃತಕವಾಗಿ ತಯಾರಿಸಿ, ಔಷಧ ರೂಪದಲ್ಲಿ ಬಳಸುವ ಪ್ರಯತ್ನಗಳು ಆರಂಭವಾಗಿವೆ. ಅಲ್ಲಿಯವರೆಗೆ ಜ಼ೂ ಜೀವಿಗಳೊಡನೆ ಹೊಂದಿಕೊಂಡು ಬದುಕುವುದು ಅನಿವಾರ್ಯವಾಗಿದೆ.