Yagati Raghu Naadig Column: ʼಯುಗʼ ಬದಲಾದರೂ, ʼಯುಗಧರ್ಮʼ ಬದಲಾಗಲಿಲ್ಲವೇ..?!
ಫೋನಿನ ಅತ್ತ ಕಡೆಯಿಂದ ಸಿಡಿದ ಸಂಪಾದಕರ ‘ತಾಂಬೂಲ-ಭರಿತ’ ನಗೆಯನ್ನು ಜೀರ್ಣಿಸಿ ಕೊಳ್ಳುವ ಹರಸಾಹಸದಲ್ಲಿದ್ದ ಕಥೆಗಾರ, “ಕಥೆಯ ಎಳೆ ಸಿಕ್ಕಿದೆ ಸರ್, ಇನ್ನೇನು ಮನೆಗೆ ಹೋಗಿ ನಿಮಗೆ ಮತ್ತೊಮ್ಮೆ ಫೋನ್ ಮಾಡುತ್ತೇನೆ" ಎಂದಷ್ಟೇ ಹೇಳಿ ಕರೆಯನ್ನು ತುಂಡರಿಸಿದ. ನಂತರ ಶ್ರಮಜೀವಿಯ ಕಂಗಳನ್ನೇ ಒಮ್ಮೆ ಅಭಿಮಾನಪೂರ್ವಕವಾಗಿ ದಿಟ್ಟಿಸಿ, ಅವನ ಕೈಗಳನ್ನು ಮೃದು ವಾಗಿ ಅದುಮಿ, “ನನ್ನನ್ನು ನೀವು ಹಗುರಮಾಡಿಬಿಟ್ಟಿರಿ" ಎಂದ. ಅದಕ್ಕೆ ಅಯೋಮಯಗೊಂಡ ಶ್ರಮಜೀವಿ, “ಅದರನು ಬಂತು ಸರ್? ಮಾಲೀಶ್ ಮಾಡಿಸಿಕೊಳ್ಳೋದೇ ದೇಹ-ಮನಸ್ಸು ಹಗುರ ವಾಗಲಿ ಅಂತಲ್ವೇ?" ಎಂದು ಮರುಪ್ರಶ್ನಿಸಿದ


ರಸದೌತಣ
naadigru@gmail.com
ಶ್ರಮಜೀವಿಯಿಂದ ಮಾಲೀಶ್ ಮಾಡಿಸಿಕೊಳ್ಳುತ್ತಲೇ ಅವನ ಪೂರ್ವವೃತ್ತಾಂತವನ್ನು ಆಲಿಸಿದ ಕಥೆಗಾರ, ಅಲ್ಲಿಂದ ಹೊರಡಲು ಉದ್ಯುಕ್ತನಾಗುತ್ತಿದ್ದಂತೆ ಪತ್ರಿಕೆಯ ಸಂಪಾದಕರ ಕರೆ ಬರುತ್ತದೆ. ಮುಂದಕ್ಕೆ ಓದಿ...
ಫೋನಿನ ಅತ್ತ ಕಡೆಯಿಂದ ಸಿಡಿದ ಸಂಪಾದಕರ ‘ತಾಂಬೂಲ-ಭರಿತ’ ನಗೆಯನ್ನು ಜೀರ್ಣಿಸಿ ಕೊಳ್ಳುವ ಹರಸಾಹಸದಲ್ಲಿದ್ದ ಕಥೆಗಾರ, “ಕಥೆಯ ಎಳೆ ಸಿಕ್ಕಿದೆ ಸರ್, ಇನ್ನೇನು ಮನೆಗೆ ಹೋಗಿ ನಿಮಗೆ ಮತ್ತೊಮ್ಮೆ ಫೋನ್ ಮಾಡುತ್ತೇನೆ" ಎಂದಷ್ಟೇ ಹೇಳಿ ಕರೆಯನ್ನು ತುಂಡರಿಸಿದ. ನಂತರ ಶ್ರಮಜೀವಿಯ ಕಂಗಳನ್ನೇ ಒಮ್ಮೆ ಅಭಿಮಾನಪೂರ್ವಕವಾಗಿ ದಿಟ್ಟಿಸಿ, ಅವನ ಕೈಗಳನ್ನು ಮೃದು ವಾಗಿ ಅದುಮಿ, “ನನ್ನನ್ನು ನೀವು ಹಗುರಮಾಡಿಬಿಟ್ಟಿರಿ" ಎಂದ. ಅದಕ್ಕೆ ಅಯೋಮಯಗೊಂಡ ಶ್ರಮಜೀವಿ, “ಅದರನು ಬಂತು ಸರ್? ಮಾಲೀಶ್ ಮಾಡಿಸಿಕೊಳ್ಳೋದೇ ದೇಹ-ಮನಸ್ಸು ಹಗುರ ವಾಗಲಿ ಅಂತಲ್ವೇ?" ಎಂದು ಮರುಪ್ರಶ್ನಿಸಿದ. ಅದಕ್ಕೆ ಕಥೆಗಾರ, “ನಾನು ಹೇಳಿದ್ದು ಆ ಅರ್ಥ ದಲ್ಲಲ್ಲ; ನನ್ನ ಕೆಲಸವನ್ನು ನೀವು ಹಗುರ ಮಾಡಿ ಬಿಟ್ರಿ, ಯುಗಾದಿ ವಿಶೇಷಾಂಕದ ಕಥೆಗೆ ನೀವೇ ವಸ್ತುವಾಗಿ ಬಿಟ್ರಿ..." ಎಂದು ಹೇಳಿ ಶ್ರಮಜೀವಿಯಿಂದ ಬೀಳ್ಕೊಂಡು ‘ಅಂಗರಾಜ ಮರ್ದನ ಕೇಂದ್ರ’ ನಾಮಫಲಕವನ್ನೊಮ್ಮೆ ಸವರಿ ಅಲ್ಲಿಂದ ನಿರ್ಗಮಿಸಿದ.
ಹೋಟೆಲಿನಲ್ಲಿ ತಿಂಡಿ ಕಟ್ಟಿಸಿಕೊಂಡು ಮನೆಗೆ ಬಂದ ಕಥೆಗಾರ, ಸ್ನಾನ-ತಿಂಡಿ ಮುಗಿಸಿ, ಬರೆಯುವ ಮೇಜಿನ ಬಳಿಗೆ ಬಂದ. ಎದುರಿದ್ದ ಶೃಂಗೇರಿ ಶಾರದೆ, ಹೊರನಾಡು ಅನ್ನಪೂರ್ಣೇಶ್ವರಿ ಮತ್ತು ಸಖರಾಯಪಟ್ಟಣದ ವೇಂಕಟಾಚಲ ಅವಧೂತರ ದಿವ್ಯಚಿತ್ರಗಳಿಗೆ ಒಮ್ಮೆ ನಮಸ್ಕರಿಸಿ, ಬಿಳಿ ಹಾಳೆಯ ಮೇಲೆ ‘ಶ್ರೀಂ’ ಎಂದು ಬರೆದು ಅರೆಕ್ಷಣ ಕಣ್ಣುಮುಚ್ಚಿ ಕೂತ. ‘ಅಕ್ಷರ ರಂಗೋಲಿ’ ಇಡುವುದಕ್ಕೂ ಮುಂಚೆ ಹೀಗೆ ಆ ದಿವ್ಯಶಕ್ತಿಗಳನ್ನೊಮ್ಮೆ ಧ್ಯಾನಿಸುವುದು, ಕಥಾಹೂರಣದ ಆಳಕ್ಕಿಳಿದು ಧೇನಿಸುವುದು ಅವನ ಕಾರ್ಯಶೈಲಿಯಾಗಿತ್ತು. ಹಾಗೆ ಆತ ಕಣ್ಣು ಮುಚ್ಚಿ ಆ ಶ್ರಮ ಜೀವಿಯ ವೃತ್ತಾಂತವನ್ನು ಮನದಂಗಳಕ್ಕೆ ಎಳೆತರುತ್ತಿದ್ದಂತೆ ಅದೇಕೋ ದೇಹ ಕಂಪಿಸಿ ಕಂಗಳಿಂದ ಸಣ್ಣಗೆ ನೀರು ಜಿನುಗತೊಡಗಿತು. “ಅಮ್ಮಾ ಶಾರದೇ... ಹೀಗೂ ಆಗುವುದುಂಟೇ?" ಎಂದು ತನ್ನಲ್ಲೇ ಹೇಳಿಕೊಂಡ ಕಥೆಗಾರ ಕೆಲ ಕ್ಷಣದ ನಂತರ ರೆಪ್ಪೆ ತೆರೆದಾಗ ಕಂಗಳು ನಕ್ಷತ್ರಗಳಾಗಿದ್ದವು. ಅದು ಕಥೆಯ ಹೆಣಿಗೆ ರೂಪುಗೊಂಡಿದ್ದರ ದ್ಯೋತಕ. ಕೆಲ ಹೊತ್ತಿನ ಮುಂಚೆ ಮಾತುಕೊಟ್ಟಂತೆಯೇ ಸಂಪಾದಕರಿಗೆ ಕರೆಮಾಡಿದ ಕಥೆಗಾರ...
ಇದನ್ನೂ ಓದಿ: Yagati Raghu Naadig Column: ಏಕ್ ಚುಟ್ಕೀ ʼಸಿಂದೂರ್ʼ ಕೀ ಕೀಮತ್ ತುಮ್ ಕ್ಯಾ ಜಾನೋ ʼಮುನೀರ್ʼ ಬಾಬು ?!
ಅತ್ತಲಿಂದ ಸಂಪಾದಕರು, “ಹೇಳಿ ಕಥೆಗಾರರೇ... ಕಥೆಯ ‘ಎಳೆ’ ಸಿಕ್ಕಿದೆ ಅಂದ್ರ? ಅದೇನು ‘ಎಳೆ’? ಅದನ್ನು ಇನ್ನೆಷ್ಟು ‘ಎಳೆ’ಯಬೇಕು ಅಂದುಕೊಂಡಿದ್ದೀರಿ? ಯುಗಾದಿಯ ಒಳಗೇ ‘ಎಳೆ’ಯುತ್ತೀರೋ ಅಥವಾ ದೀಪಾವಳಿಯ ತನಕವೂ ‘ಎಳೆ’ಯುತ್ತಲೇ ಇರುತ್ತೀರೋ?" ಎಂದು ವಿಲಕ್ಷಣವಾಗಿ ‘ಪನ್’ ಮಾಡಿ, ಖಳನಾಯಕ ವಜ್ರಮುನಿಯಂತೆ ಮತ್ತೊಮ್ಮೆ ಗಹಗಹಿಸಿ ನಕ್ಕರು. ಆ ‘ಶ್ರಾವ್ಯಸುಖ’ವನ್ನು ವಿಧಿಯಿಲ್ಲದೆ ಅರೆಕ್ಷಣ ಅನುಭವಿಸಿದ ಕಥೆಗಾರ, ತಾನು ಶ್ರಮಜೀವಿಯ ಮಾಲೀಶ್ ಕೇಂದ್ರಕ್ಕೆ ಹೋದಾಗಿನಿಂದ ಶುರುಮಾಡಿ ಆತ ಹೇಳಿದ ಒಂದೊಂದು ಪ್ರಸಂಗವನ್ನೂ ಒಂದಕ್ಷರ ತಪ್ಪದಂತೆ, ಅದರ ಭಾವದ ಸಮೇತ ಸಂಪಾದಕರಿಗೆ ವಿವರಿಸಿ, “ಸರ್, ಇದು ಈ ಸಲ ನಾನು ನಿಮಗೆ ಬರೆದು ಕೊಡಲಿರುವ ಕಥೆಯ ಹೂರಣ" ಎಂದ.
ಆಗ ಸಂಪಾದಕರು, “ಅರೆ, ಹೃದಯವಿದ್ರಾವಕವಾಗಿ ಇದೆಯಲ್ರೀ....? ಮತ್ತಿನ್ಯಾಕ್ರೀ ತಡಾ? ಹಂಗೇ ಬರೆದು ಈ ಕಡೆ ವಗಾಯಿಸಿಬಿಡ್ರೀ..." ಎಂದರು. ಅದಕ್ಕೆ ಕಥೆಗಾರ, “ಸರ್, ನೀವು ಆ ಶ್ರಮಜೀವಿಯ ವೃತ್ತಾಂತವನ್ನಷ್ಟೇ ಕೇಳಿಸಿಕೊಂಡ್ರಿ, ಆದರೆ ಅದರ ಹಿಂದಿನ ಒಂದು ‘ಇತಿಹಾಸ ಸೂಕ್ಷ್ಮ’ವನ್ನು ಗ್ರಹಿಸಲಿಲ್ಲ ಎನಿಸುತ್ತೆ. ಕಥಾಹೂರಣದ ಜತೆಜತೆಗೆ ಆ ‘ಸೂಕ್ಷ್ಮ’ವೇ ನನ್ನನ್ನ ತುಂಬಾ ಕಾಡ್ತಾ ಇದೆ" ಎಂದ.

ಈ ಮಾತಿಗೆ ಸಂಪಾದಕರು, “ಕಥೆಗಾರರೇ, ಹೀಗೆ ಒಗಟಾಗಿ ಮಾತಾಡ್ತಾ ಇದ್ರೆ ನಂಗೂ ಗೊಂದಲ ವಾಗುತ್ತೆ. ಕಗ್ಗಂಟನ್ನು ಬಿಡಿಸಿ ದಾರವನ್ನು ನೇರವಾಗಿಸಿ. ಸುತ್ತು-ಬಳಸಿದ ಮಾರ್ಗಬೇಕಿಲ್ಲ. ಅದೇನು ಇತಿಹಾಸ ಸೂಕ್ಷ್ಮ ಹೇಳಿ?" ಎಂದರು.
ಅದಕ್ಕೆ ಕಥೆಗಾರ, “ಸರ್, ಗಮನವಿಟ್ಟು ಕೇಳಿಸಿಕೊಳ್ಳಿ. ಇಲ್ಲಿ ಕಥೆಯೊಳಗೊಂದು ಕಥೆ ಇದೆ. ‘ಇತಿಹಾಸ ಪುನರಾವರ್ತನೆಯಾಗುತ್ತೆ’ ಎಂಬ ಜಾಣನುಡಿಗೂ ಇಲ್ಲಿ ಪುರಾವೆ ಸಿಕ್ಕಿದೆ..." ಎಂದ. ಈ ಮಾತಿಗೆ ಸಂಪಾದಕರು ಜೋರಾಗಿ ತಲೆ ಕೆರೆದುಕೊಂಡಿದ್ದು ಕಥೆಗಾರನಿಗೆ ಫೋನಿನಲ್ಲಿ ಸ್ಪಷ್ಟವಾಗಿ ಕೇಳಿಸಿತು. ಅಂತೆಯೇ ಸಂಪಾದಕರು, “ಅಯ್ಯಾ, ಸಾಮಾಜಿಕ ಕಥೆಯೊಳಗೆ ಸಸ್ಪೆನ್ಸ್ ತುರುಕು ತ್ತಿದ್ದೀರಲ್ಲಪ್ಪಾ? ಆಯಿತು, ಅದೇನು ಪುನರಾವರ್ತಿತ ಅಂಶ ಈ ಕಥೆಯಲ್ಲಿ ಅಡಗಿದೆ ಹೇಳಿ.." ಎನ್ನುತ್ತಾ ಅವಸರಿಸತೊಡಗಿದರು. ಆಗ ಕಥೆಗಾರ, “ಸರ್, ಕಥೆಯ ಹೂರಣದ ಜತೆಜತೆಗೇ ಅಲ್ಲಿ ಅನಾವರಣಗೊಳ್ಳುವ ಸಜೀವ-ನಿರ್ಜೀವ ಪಾತ್ರಗಳ ಹೆಸರುಗಳನ್ನೂ ಒಮ್ಮೆ ಏಕಾಗ್ರತೆಯಿಂದ ಗಮನಿಸಿ. ಬಾಲಕ ಶ್ರಮಜೀವಿಯ ಗುರಿಕೌಶಲವನ್ನು ಕಂಡ ಮಿಲಿಟರಿ ಮಾವ ಆತನನ್ನು ತಮ್ಮೊಂ ದಿಗೆ ಕರೆದೊಯ್ದು ಆಶ್ರಯ ನೀಡಿ, ಬಿಲ್ಲು ವಿದ್ಯಾ ತರಬೇತಿ ಕೇಂದ್ರವೊಂದಕ್ಕೆ ಸೇರಿಸುತ್ತಾರೆ. ಅದರ ಹೆಸರು ‘ಧನಂಜಯ ಆರ್ಚರಿ ಸೆಂಟರ್’. ‘ಧನಂಜಯ’ ಎಂಬುದು ಮಹಾಭಾರತದ ಅರ್ಜುನನಿಗೆ ಇದ್ದ ಇನ್ನೊಂದು ಹೆಸರು. ಆ ಕೇಂದ್ರವನ್ನು ನಡೆಸುತ್ತಿದ್ದ ಮಿಲಿಟರಿ ಮಾವನನ್ನು ಎಲ್ಲರೂ ‘ಅಜ’ ಎಂದೇ ಕರೆಯುತ್ತಿರುತ್ತಾರೆ. ಅದು ‘ಅಶ್ವತ್ಥಾಮ ಜನಕ’ ಎಂಬ ಹೆಸರಿನ ಸಂಕ್ಷಿಪ್ತ ರೂಪ. ಹಾಗೆಂದರೆ, ಅಶ್ವತ್ಥಾಮನ ತಂದೆ ಎಂದರ್ಥ. ಅಂದರೆ ಅದು ಮಹಾಭಾರತದಲ್ಲಿ ಬರುವ ದ್ರೋಣಾಚಾರ್ಯರ ಹೆಸರು. ಆ ಬಿಲ್ಲು ವಿದ್ಯಾ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತ, ಶ್ರಮಜೀವಿಗೆ ಪ್ರತಿಸ್ಪರ್ಧಿಯಾಗಿದ್ದ ಶ್ರೀಮಂತ ಹುಡುಗನ ಹೆಸರು ‘ಕಿರೀಟಿ’. ಇದು ಮಹಾಭಾರತದ ಅರ್ಜುನನಿಗೆ ಇದ್ದ ದಶನಾಮ ಗಳಲ್ಲಿ ಒಂದು. ಇನ್ನು, ಕಿರೀಟಿಯ ತಾಯಿಯಾಗಿದ್ದಾಕೆ ‘ಪೃಥೆ’. ಇದು ಕೂಡ ಅರ್ಜುನನ ತಾಯಿ ಕುಂತಿಗೆ ಇದ್ದ ಇನ್ನೊಂದು ಹೆಸರು. ಶ್ರಮಜೀವಿ ಮತ್ತು ಕಿರೀಟಿ ಇಬ್ಬರೂ ಬಿಲ್ಲು ವಿದ್ಯೆ ಯಲ್ಲಿ ಅತೀವ ಪರಿಣತರಾಗಿದ್ದರೂ, ಈ ಪೈಕಿ ಒಂದು ಕೈ ಮೇಲಿದ್ದ ಶ್ರಮಜೀವಿಗೆ ರಾಷ್ಟ್ರೀಯ ಕ್ರೀಡಾಕೂಟ ದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಆಶ್ರಯದಾತ ‘ಅಜ’ ಮರಣಿಸಿದಾಗ ಒಂದು ತಿಂಗಳ ವರೆಗೆ ಅವನಿಗೆ ಊಟ-ಉಪಾಹಾರ ಪೂರೈಸುತ್ತಾಳೆ ಕಿರೀಟಿಯ ತಾಯಿ ಪೃಥೆ; ಶ್ರಮಜೀವಿಯು ಕ್ರೀಡಾಕೂಟಕ್ಕೂ ಮುನ್ನ ಆಶೀರ್ವಾದ ಪಡೆಯಲು ತನ್ನ ಸಾಕುತಾಯಿಯಲ್ಲಿಗೆ ಬಂದಿದ್ದಾಗ ಅಲ್ಲಿಗೇ ಹುಡುಕಿಕೊಂಡು ಬಂದ ಪೃಥೆ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಮ್ಮಿಯಾಗಿ ರುವ ಕಾರಣ ತನ್ನ ಮಗ ಕಿರೀಟಿ ಹಾಸಿಗೆ ಹಿಡಿದಿದ್ದಾನೆ ಎಂದು ಅಲವತ್ತುಕೊಂಡು ಸದರಿ ಕ್ರೀಡಾ ಕೂಟದಿಂದ ಹಿಂದೆ ಸರಿಯುವಂತೆ ಬಾಲಕ ಶ್ರಮಜೀವಿಯಲ್ಲಿ ಕೇಳಿಕೊಳ್ಳುತ್ತಾಳೆ. ‘ಮಹಾಭಾರತ’ ಯುದ್ಧದ ವೇಳೆ ಕುಂತಿಯು ಕರ್ಣನಲ್ಲಿಗೆ ಬಂದು ‘ತೊಟ್ಟ ಬಾಣವನ್ನು ತೊಡಬೇಡ’ ಎಂದು ಭಾಷೆ ತೆಗೆದುಕೊಂಡರೆ, ಈ ‘ಕಲಿಭಾರತ’ ದಲ್ಲಿ ಪೃಥೆ ಹೀಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಶ್ರಮಜೀವಿಯಿಂದ ಭಾಷೆ ತೆಗೆದುಕೊಳ್ಳುತ್ತಾಳೆ. ಬರೋಬ್ಬರಿ ಒಂದು ತಿಂಗಳವರೆಗೆ ತನಗೆ ಅನ್ನ ನೀಡಿದಾಕೆ ಎಂಬ ದಾಕ್ಷಿಣ್ಯಕ್ಕೆ ಬಗ್ಗುವ ಶ್ರಮಜೀವಿ, ತನ್ನ ಸಂಕಲ್ಪದಿಂದ ಮತ್ತು ‘ಅಜ’ರ ಆಸೆಯ ಈಡೇರಿಕೆ ಹೆಜ್ಜೆಯಿಂದ ಹಿಂದೆ ಸರಿಯುತ್ತಾನೆ. ನಂತರ ಅಲ್ಲಿಗೆ ಬರುವ ಸಾಕುತಾಯಿಯು ಪೃಥೆ ಯನ್ನು ಕಂಡು ಕೋಪಗೊಂಡು ಮೀನಿನ ಗಾಳದಿಂದ ಅವಳಿಗೆ ಅಪ್ಪಳಿಸಲು ಹೋಗುತ್ತಾಳೆ. ಅದನ್ನು ತಪ್ಪಿಸಿದ ಶ್ರಮಜೀವಿ ಸಾಕುತಾಯಿಯ ಕೋಪಕ್ಕೆ ಕಾರಣವನ್ನು ಕೇಳಿದಾಗ, ಆಕೆ ಅವನ ಪೂರ್ವವೃತ್ತಾಂತವನ್ನು ತಿಳಿಸುತ್ತಾಳೆ. ಅದರ ಪ್ರಕಾರ, ಮದುವೆಗೆ ಮುಂಚೆಯೇ ಗರ್ಭಧರಿಸಿ ಮಗುವನ್ನು ಹೆತ್ತು ಉದ್ಯಾನದಲ್ಲಿ ಮಲಗಿಸಿ ಹೋದಾಕೆಯೇ ಪೃಥೆ ಮತ್ತು ಆ ಮಗುವೇ ತಾನು ಎಂಬುದು ಶ್ರಮಜೀವಿಗೆ ಗೊತ್ತಾಗುತ್ತದೆ. ಮಹಾಭಾರತದಲ್ಲಿ ಕುಂತಿಯೂ ಮದುವೆಗೆ ಮುಂಚೆಯೇ ಗರ್ಭ ಧರಿಸಿ ಲೋಕಾಪವಾದಕ್ಕೆ ಬೆದರಿ ನವಜಾತ ಶಿಶುವನ್ನು ಬುಟ್ಟಿಯಲ್ಲಿಟ್ಟು ನದಿಯಲ್ಲಿ ತೇಲಿ ಬಿಡುತ್ತಾಳೆ, ಅದು ಬೆಸ್ತ ದಂಪತಿಗೆ ಸಿಕ್ಕಿ ಆ ಮಗುವನ್ನು ಸಾಕತೊಡಗುತ್ತಾರೆ. ಶ್ರಮಜೀವಿಯ ಈ ವೃತ್ತಾಂತದಲ್ಲೂ, ಉದ್ಯಾನದಲ್ಲಿ ಮಲಗಿದ್ದ ಶಿಶುವನ್ನು ಮೀನುಗಾರಿಕೆ ಕಸುಬಿನ ಸಾಕುತಾಯಿ ಎತ್ತಿಕೊಂಡು ಬಂದು ಸಾಕುತ್ತಾಳೆ. ಇವಳನ್ನೂ ಕಳೆದುಕೊಂಡ ಶ್ರಮಜೀವಿ ಆತ್ಮಹತ್ಯೆ ಮಾಡಿ ಕೊಳ್ಳುವ ಯತ್ನದಲ್ಲಿದ್ದಾಗ ಆ ದುಡುಕಿನಿಂದ ಅವನನ್ನು ರಕ್ಷಿಸುವ ಪರಮಾಪ್ತ ‘ಚೌರದ ಚಂದ್ರಣ್ಣ’ ನಡೆಸುತ್ತಿದ್ದ ಅಂಗಡಿಯ ಹೆಸರು ‘ಕೌರವೇಶ್ವರ ಕ್ಷೌರಕೇಂದ್ರ’. ‘ಕೌರವೇಶ್ವರ’ ಎಂಬುದು ದುರ್ಯೋಧನನ ಮತ್ತೊಂದು ಹೆಸರು. ಅಂದು ‘ಮಹಾಭಾರತ’ದಲ್ಲಿ ಕಂಗಾಲಾಗಿದ್ದ ಕರ್ಣನಿಗೆ ಹೆಗಲು ಕೊಟ್ಟಿದ್ದು ಆ ‘ಕೌರವೇಶ್ವರ’ ನಾದರೆ, ‘ಕಲಿಭಾರತ’ ದಲ್ಲಿ ಶ್ರಮಜೀವಿಗೆ ಹೆಗಲಾಗಿದ್ದು ‘ಕೌರವೇಶ್ವರ’ ನಾಮಾಂಕಿತ ಅಂಗಡಿಯ ಚೌರದ ಚಂದ್ರಣ್ಣ! ಅಲ್ಲಿ ದುರ್ಯೋಧನ-ಕರ್ಣರ ಸ್ನೇಹ ‘ಹೈಲೈಟ್’ ಆದರೆ, ಇಲ್ಲಿ ಶ್ರಮಜೀವಿ-ಚಂದ್ರಣ್ಣರ ನಂಟು ಕಳೆಗಟ್ಟಿದೆ. ನಂತರ ನಗರಿಗೆ ಬಂದು ಮಾಲೀಶ್ ಅಂಗಡಿಯನ್ನು ತೆರೆಯುವ ಶ್ರಮಜೀವಿ ಅದಕ್ಕೆ ಇಟ್ಟ ಹೆಸರು ‘ಅಂಗರಾಜ ಮರ್ದನ ಕೇಂದ್ರ’ ಅಂತ.ಅಂಗಮರ್ದನದ ಕಸುಬಿನ ಕಾರಣದಿಂದಾಗಿ ಆತ ‘ಅಂಗರಾಜ’ ಎಂಬ ಹೆಸರು ಇಟ್ಟಿರಬಹುದಾದರೂ, ರಾಜಮನೆತನದ ಇತಿಹಾಸವಿಲ್ಲ ಎಂಬ ಕಾರಣಕ್ಕೆ ಮಹಾಭಾರತದಲ್ಲಿ ಕರ್ಣನು ಹೀಯಾಳಿಕೆಗೆ, ಅವಮಾನಕ್ಕೆ ಒಳಗಾದಾಗ ದುರ್ಯೋಧನ ತಕ್ಷಣವೇ ಆತನನ್ನು ‘ಅಂಗ’ರಾಜ್ಯದ ಅಧಿಪತಿಯನ್ನಾಗಿಸುತ್ತಾನೆ. ಅಗ ಕರ್ಣ ‘ಅಂಗರಾಜ’ ಎಂದೇ ಕರೆಸಿಕೊಳ್ಳುತ್ತಾನೆ. ಈ ‘ಕಲಿಭಾರತ’ದಲ್ಲಿ ನೋಡಿದರೆ, ಶ್ರಮಜೀವಿ ತನ್ನ ಮಳಿಗೆಗೆ ‘ಅಂಗರಾಜ’ನ ಹೆಸರನ್ನೇ ಇರಿಸಿಕೊಂಡಿ ದ್ದಾನೆ. ಇದೆಂಥಾ ಕಾಕತಾಳೀಯ...?" ಎಂದು ಹೇಳಿ ಅರೆಕ್ಷಣ ನಿಲ್ಲಿಸಿದ.
ಆಗ ಸಂಪಾದಕರು, “ಅಯ್ಯಾ, ನಿಮ್ಮ ಪಾದಕ್ಕೆ ನಮಸ್ಕಾರ, ನಿಲ್ಲಿಸಬೇಡಿ ಮುಂದುವರಿಸಿ" ಎಂದರು.
ಆಗ ಕಥೆಗಾರ, “ಸರ್, ಈ ‘ಇತಿಹಾಸ ಸೂಕ್ಷ’ವನ್ನೇ ನಾನು ನಿಮ್ಮ ಗಮನಕ್ಕೆ ತರಲು ಹೊರಟಿದ್ದು. ಮಹಾಭಾರತ ನಡೆದಿದ್ದು ದ್ವಾಪರ ಯುಗದಲ್ಲಿ. ಆದರೆ ಆ ಕಾಲಘಟ್ಟದ ಕಥಾನಕವು ಕಲಿಯುಗ ದಲ್ಲೂ ನಡೆಯಿತು ಎಂದರೆ ಅದನ್ನು ‘ಇತಿಹಾಸದ ಪುನರಾರ್ತನೆ’ ಎಂದುಕೊಳ್ಳ ಬೇಕೋ? ‘ಯುಗ ಬದಲಾದರೂ ಯುಗಧರ್ಮ ಬದಲಾಗಲಿಲ್ಲ’ ಎಂದುಕೊಳ್ಳಬೇಕೋ? ಅಥವಾ ‘ಇದು ಎಲ್ಲ ಯುಗ ದಲ್ಲೂ, ಎಲ್ಲ ಸಮಾಜಗಳಲ್ಲೂ ನಡೆಯಬಹುದಾದ ಕಥೆ. ಯುಗಗಳು ಬದಲಾದರೂ ಮನುಷ್ಯನ ಸ್ವಾರ್ಥ, ದುರಾಸೆ, ಅವಕಾಶವಾದಿತನ ಬದಲಾಗುವುದಿಲ್ಲ’ ಎಂಬ ಗ್ರಹಿಕೆಯ ವ್ಯಾಸಮುನಿಗಳು ತಮ್ಮ ತಪೋಬಲದಿಂದ ಮುನ್ನಂದಾಜಿಸಿ ಹೆಣೆದ ಕಥೆ ಎಂದುಕೊಳ್ಳಬೇಕೋ? ಎಂಬುದು ಗೊತ್ತಾ ಗುತ್ತಿಲ್ಲ. ಜತೆಗೆ, ಶ್ರಮಜೀವಿಯ ಈ ವೃತ್ತಾಂತವನ್ನು ನಿಮ್ಮ ಪತ್ರಿಕೆಯ ಯುಗಾದಿ ವಿಶೇಷಾಂಕಕ್ಕೆ ಬರೆದುಕೊಡುವುದೋ ಬಿಡುವುದೋ ಎಂಬ ಜಿಜ್ಞಾಸೆಯೂ ನನ್ನನ್ನು ಕಾಡುತ್ತಿದೆ" ಎಂದು ಅಳಲು ತೋಡಿಕೊಂಡ.
ಆಗ ಸಂಪಾದಕರು, “ಅರೆ ಇಸ್ಕಿ! ಕಥೆ ಚೆನ್ನಾಗೇ ಇದೆಯಲ್ರೀ? ಬರೆದುಕೊಡಲು ಏನು ಧಾಡಿ?" ಎಂದು ಹುಸಿಮುನಿಸು ತೋರಿದರು.
ಅದಕ್ಕೆ ಕಥೆಗಾರ, “ಸರ್, ಇದನ್ನು ಬರೆದುಕೊಟ್ಟರೆ ಓದುಗರು, ‘ಹೋ, ಮಹಾಭಾರತದ ಕಥೆಯನ್ನೇ ಒಂದಿಷ್ಟು ತಿರುವಿ ಒಗ್ಗರಣೆ ಹಾಕಿಬಿಟ್ಟಿದ್ದಾರೆ’ ಎಂದು ಕಾಲೆಳೆಯಬಹುದು.
ನಾನು ಅತೀವವಾಗಿ ಗೌರವಿಸುವ ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರು ತಮ್ಮ ‘ಪರ್ವ’ ಕಾದಂಬರಿಯಲ್ಲಿ ಮಹಾಭಾರತದ ಕಥನವನ್ನೇ ವಿಶಿಷ್ಟವಾಗಿ ಮರುವ್ಯಾಖ್ಯಾನಿಸಿ ಹೆಸರಾಗಿ ದ್ದರೆ, ಗಿರೀಶ್ ಕಾರ್ನಾಡರೂ ತಮ್ಮ ‘ಯಯಾತಿ’ ನಾಟಕದಲ್ಲಿ ಇಂಥದೇ ಹೆಜ್ಜೆಯಿಟ್ಟಿ ದ್ದಾರೆ. ಆದರೆ, ಅವರೆ ಸಾಹಿತ್ಯಲೋಕದ ಧ್ರುವತಾರೆಗಳು, ಬರೆದು ದಕ್ಕಿಸಿಕೊಂಡಿದ್ದಾರೆ ಸರ್. ನಾನಿನ್ನೂ ಎಳಸು, ಹಾಗಾಗಿ ಕೊಂಚ ಹಿಂಜರಿಕೆ" ಎಂದ.
ಆಗ ಸಂಪಾದಕರು ಸಮಾಧಾನಿಸುವ ದನಿಯಲ್ಲಿ, “ಎಲ್ಲ ರೀತಿಯ ಪಯಣ ಶುರುವಾಗೋದೂ ಪುಟ್ಟ ಹೆಜ್ಜೆಯಿಂದಲೇ ಕಥೆಗಾರರೇ. ನೀವು ಧೈರ್ಯವಾಗಿ ಬರೆದುಕೊಡಿ" ಎಂದು ಹುರಿದುಂಬಿಸಿ, “ಅಂದ್ಹಾಗೆ, ಕಥೆಯನ್ನೇನೋ ಸೊಗಸಾಗಿ ಹೇಳಿಬಿಟ್ರಿ, ಆದರೆ ಕಥೆಯುದ್ದಕ್ಕೂ ‘ಶ್ರಮಜೀವಿ, ಶ್ರಮ ಜೀವಿ’ ಅಂತಲೇ ಹೇಳ್ತಾ ಬಂದುಬಿಟ್ರಲ್ಲಪ್ಪಾ? ಆತನ ಹೆಸರೇನಪ್ಪಾ?" ಎಂದು ತಿವಿದರು.
“ಅರೆ! ಹೌದಲ್ಲಾ..?" ಎಂದು ಗೊಣಗಿಕೊಂಡ ಕಥೆಗಾರ, “ಒಂದು ನಿಮಿಷ ಸರ್" ಎಂದು ಹೇಳಿ ಕರೆಯನ್ನು ತುಂಡರಿಸಿದ. ಮಾಲೀಶಿನ ನಂತರ ಶ್ರಮಜೀವಿಯು ಕಾಗದದಲ್ಲಿ ತನ್ನ ಮೊಬೈಲ್ ನಂಬರ್ ಬರೆದುಕೊಟ್ಟಿದ್ದು ನೆನಪಾಗಿ, ಅದನ್ನೆತ್ತಿಕೊಂಡು ಶ್ರಮಜೀವಿಗೆ ಕರೆ ಮಾಡಿದ ಕಥೆಗಾರ, “ಅಯ್ಯಾ, ನಿಮ್ಮ ವೃತ್ತಾಂತ ವನ್ನೆ ಕೇಳಿದೆ, ಸೊಗಸಾದ ಮಾಲೀಶನ್ನೂ ಮಾಡಿಸಿ ಕೊಂಡೆ. ಆದರೆ ನಿಮ್ಮ ಹೆಸರನ್ನೇ ಕೇಳೋದು ಮರೆತುಬಿಟ್ಟೆ ನೋಡಿ. ಎಂಥಾ ಮುಠ್ಠಾಳ ನಾನು. ಅಂದಹಾಗೆ ನಿಮ್ಮಹೆಸರೇನು?" ಎಂದು ಕೇಳಿದ.
“ಕರ್ಣ ಅಂತ ಸರ್... ಕರ್ಣ, ಕರ್ಣ..." ಎಂದು ಆ ಕಡೆಯಿಂದ ಉತ್ತರ ಬಂತು!
ಕಥೆಗಾರ ಈಗ ನಿಜಕ್ಕೂ ನಿಬ್ಬೆರಗಾಗಿದ್ದ. ಆ ಬೆರಗಿನ ಗುಂಗ ಸಂಪಾದಕರಿಗೆ ಕರೆಮಾಡಿ, “ಸರ್, ಆ ಶ್ರಮಜೀವಿಯ ಹೆಸರು ಕರ್ಣ ಅಂತೆ..!" ಎಂದ.
“ಓಹ್, ‘ಇತಿಹಾಸ ಪುನರಾವರ್ತನೆಗೊಳ್ಳುತ್ತೆ’ ಅನ್ನೋ ಮಾತು ನಿಜ ಕಣ್ರೀ.." ಎಂದು ಸಂಪಾದಕರೂ ಪ್ರತಿಕ್ರಿಯಿಸಿದರು ಅಪ್ರತಿಭರಾಗಿ.
ಅಲ್ಲಿಗೆ, ‘ಕರ್ಮಯೋಗಿಯೊಂದಿಗೆ ಕಥೆಗಾರನ ಕಥಾ ಕಾಲಕ್ಷೇಪ’ ಮುಗಿಯಿತು. ಅಂದಹಾಗೆ, ಇಷ್ಟನ್ನೂ ನಿಮ್ಮೊಂದಿಗೆ ಹಂಚಿಕೊಂಡ ಕಥೆಗಾರನ ಹೆಸರೇನು ಗೊತ್ತೇ- ‘ವ್ಯಾಸರಾಯ’!
‘ಇತಿಹಾಸ ಪುನರಾವರ್ತನೆಗೊಳ್ಳುತ್ತದೆ’ ಅನ್ನೋದು ತಮಾಷೆಗಲ್ಲ...!
(ಮುಗಿಯಿತು)
***
ನಲ್ಮೆಯ ಓದುಗರೇ,
ಆರು ಕಂತುಗಳಲ್ಲಿ ಮೂಡಿಬಂದ ಈ ಕಥನವನ್ನು, ನನ್ನ ಮತ್ತು ಸಮಸ್ತ ಕನ್ನಡಿಗರ ಅಚ್ಚು ಮೆಚ್ಚಿನ ಕಾದಂಬರಿಕಾರ ಶ್ರೀಯುತ ಎಸ್.ಎಲ.ಭೈರಪ್ಪನವರಿಗೆ ಸಮರ್ಪಿಸಲು ಬಯಸು ತ್ತೇನೆ. ಇದು ಅವರಿಗೆ ನಾನು ನನ್ನ ಮಿತಿಯಲ್ಲಿ ಸಲ್ಲಿಸುವ ‘ಅಳಿಲು-ನಮನ’...