ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hosur Rathnakar Shetty Column: ಮೇಕಿಂಗ್‌ ದಿ ಸ್ವರ್ಗ ಗ್ರೇಟ್‌ ಅಗೇನ್

ತಾವು ಭೂಲೋಕದಲ್ಲಿ ಮಾಡ ಬೇಕಾದ ಎಲ್ಲಾ ಒಳ್ಳೆಯ ಕೆಲಸಗಳು ಈಗಾಗಲೇ ಮುಗಿದಿದ್ದು, ಇದಕ್ಕಾಗಿ ತಮಗೆ ‘ನೊಬೆಲ್ ಶಾಂತಿ ಪ್ರಶಸ್ತಿ’ ದಕ್ಕುವುದೊಂದೇ ಬಾಕಿ ಎನ್ನುವಂತಿದೆ ಅವರ ಧೋರಣೆ. ‘ಮೇಕಿಂಗ್ ದಿ ಸ್ವರ್ಗ ಗ್ರೇಟ್ ಅಗೇನ್’ ಎನ್ನುವಂತಿದೆ ಅವರ ಚಿತ್ತಸ್ಥಿತಿ. ಇದನ್ನೇ ಲೇಖಕರು ರಸವತ್ತಾಗಿ ವರ್ಣಿಸಿರುವ ಪರಿ ಮಾತ್ರ ಅನನ್ಯ.

ಮೇಕಿಂಗ್‌ ದಿ ಸ್ವರ್ಗ ಗ್ರೇಟ್‌ ಅಗೇನ್

-

Ashok Nayak Ashok Nayak Sep 10, 2025 11:05 AM

ಪ್ರತಿಸ್ಪಂದನ

ಹೊಸೂರು ರತ್ನಾಕರ ಶೆಟ್ಟಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತಾಗಿ ಹಿರಿಯ ಪತ್ರಕರ್ತ ಎಂ.ಜೆ.ಅಕ್ಬರ್ ಅವರು ‘ಅಕ್ಬರ್‌ನಾಮ’ ಅಂಕಣದಲ್ಲಿ (ಸೆ.8 ಮತ್ತು 9) ಬರೆದ ವಿಡಂಬನಾತ್ಮಕ ಲೇಖನ ಸೊಗಸಾಗಿ ಮೂಡಿ ಬಂದಿದೆ. ಕಹಿಸತ್ಯವನ್ನು ಅರಗಿಸಿಕೊಳ್ಳಲಾಗದವರಿಗೆ ಈ ಹಾಸ್ಯಮಿಶ್ರಿತ ಲೇಖನವು ಮನದಾಳಕ್ಕೆ ಮುಟ್ಟುವುದರಲ್ಲಿ ಅನುಮಾನವಿಲ್ಲ.

ಅಷ್ಟರ ಮಟ್ಟಿಗೆ ಓದುಗರನ್ನು ತಲ್ಲೀನಗೊಳಿಸುವ ಮಾಂತ್ರಿಕ ಶಕ್ತಿಯನ್ನು ಸಿದ್ಧಿಸಿಕೊಂಡ ಕೆಲವೇ ಕೆಲವರ ಪೈಕಿ ಎಂ.ಜೆ.ಅಕ್ಬರ್ ಅಗ್ರಗಣ್ಯರೆಂದೇ ಹೇಳಬೇಕು. ಹಾಗೆ ಈ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದವರೂ ಅಷ್ಟೇ ಅಭಿನಂದನಾರ್ಹರು. ಇರಲಿ, ಈಗ ವಿಷಯಕ್ಕೆ ಬರೋಣ... ನೀರಿನಲ್ಲಿ ಈಜುವ ಮೀನಿನ ಹೆಜ್ಜೆಯನ್ನಾದರೂ ಹುಡುಕಬಹುದೇನೋ, ಆದರೆ ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್ ಅವರ ನಡೆ-ನುಡಿಗಳನ್ನು ಅರ್ಥೈಸಿಕೊಳ್ಳುವುದು ಮಾತ್ರ ಕಷ್ಟ ಸಾಧ್ಯ.

ಇದು ಜಾಗತಿಕ ರಾಜಕೀಯ ವಲಯದಲ್ಲಿ ಹೊಮ್ಮುತ್ತಿರುವ ಗಾಢ ಅನಿಸಿಕೆಯೂ ಹೌದು. ಯಾವುದೇ ವಿಚಾರದ ಕುರಿತು ಸ್ಥಿರ ನಿಲುವಾಗಲೀ, ಮಾನವೀಯ ಮೌಲ್ಯವಾಗಲೀ ಅಥವಾ ತಾರ್ಕಿಕ ಸಮರ್ಥನೆಗಳಾಗಲೀ ಇಲ್ಲದಿದ್ದರೂ ತಲೆಕೆಡಿಸಿಕೊಳ್ಳದ ಟ್ರಂಪ್, ತಮ್ಮ ನಿಲುವು ಏನಿದ್ದರೂ ‘ಮೇಕಿಂಗ್ ಅಮೆರಿಕ ಗ್ರೇಟ್ ಅಗೇನ್’ ಎಂದು ಹೇಳುತ್ತಿರುವಂತಿದೆ.

ಇದನ್ನೂ ಓದಿ: Dr Prabhat Balnad Column: ಕರಾವಳಿಯ ಹಿಂದೂ-ಜೈನ ಸಾಮರಸ್ಯ: ಚರಿತ್ರೆ- ವರ್ತಮಾನ

ಹಾಗಾಗಿ, ಇತರರ ನೋವು, ಹತಾಶೆ, ಆಕ್ರಂದನ ಎಲ್ಲವೂ ಇವರಿಗೆ ನಗಣ್ಯ. ಒಟ್ಟಿನಲ್ಲಿ ಅಮೆರಿಕ ದತ್ತ ಹಣದ ಹೊಳೆ ನಿರಂತರ ಹರಿದುಬರುತ್ತಿರ ಬೇಕು ಎಂಬುದು ಇವರ ಧೋರಣೆ. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಅಲ್ಲಲ್ಲಿ ಪ್ರಚಲಿತವಾಗಿರುವ ಮಧ್ಯವರ್ತಿಗಳ ನೆನಪು ಇಲ್ಲಿ ಬರುತ್ತಿದೆ. ಹಳ್ಳಿಗಳ ಬಡರೈತರು ತಮ್ಮೆಲ್ಲ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಅನಿವಾರ್ಯವಾಗಿ ಮೊರೆ ಹೋಗುವುದು ಇದೇ ಮಧ್ಯವರ್ತಿಗಳನ್ನು. ಆಗ, ಈ ಕರುಣಾರಹಿತ ಮಧ್ಯವರ್ತಿಗಳು ತಾವು ನೀಡುವ ಸಾಲಕ್ಕೆ ಭಯಾನಕ ಬಡ್ಡಿಯನ್ನು ಪಡೆಯುವುದರ ಜತೆಗೆ, ರೈತರು ಬೆಳೆದ ಉತ್ಪನ್ನಗಳನ್ನು ಅತಿ ಕಡಿಮೆ ಬೆಲೆಗೆ ತಾವೇ ಕೊಂಡುಕೊಳ್ಳುತ್ತಾರೆ.

ರೈತರನ್ನು ಇಂಥ ಮಧ್ಯವರ್ತಿಗಳ ಕಪಿಮುಷಿಯಿಂದ ಬಿಡಿಸಿ ಅವರ ಬಾಳನ್ನು ಕೊಂಚ ಮಟ್ಟಿಗಾದರೂ ಸುಧಾರಿಸುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿರುವುದು ತುಸು ನೆಮ್ಮದಿಯ ವಿಷಯ. ಅಂತೆಯೇ, ಟ್ರಂಪ್ ಕೂಡ ಜಗತ್ತಿನ ಬಡದೇಶಗಳ ಮೇಲೆ, ಯಾವುದೋ ಕಾರಣಕ್ಕೆ ತಮ್ಮ ಮುಲಾಜಿಗೆ ಸಿಕ್ಕಿಹಾಕಿಕೊಂಡಿರುವವರ ಮೇಲೆ ಅವ್ಯಾಹತವಾಗಿ ದಬ್ಬಾಳಿಕೆ ನಡೆಸುತ್ತಾ ಬಂದರೂ, ಅವರನ್ನು ವಿರೋಧಿಸಿದವರು ವಿರಳಾತಿವಿರಳ. ಹಾಗೆ ಅಲ್ಲಿ ಇಲ್ಲಿ ವಿರೋಧಿಸಿದವರನ್ನು ಅಮೆರಿಕವು ಸರ್ವನಾಶ ಮಾಡಿರುವುದೇ ಹೆಚ್ಚು.

ಇರಾನ್, ಲಿಬಿಯಾ, ಚಿಲಿ, ಸಿರಿಯಾ ಹೀಗೆ ಹೇಳುತ್ತಾ ಹೋದರೆ ಅಂಥ ದೇಶಗಳ ಪಟ್ಟಿಯೇ ನಮ್ಮ ಕಣ್ಣ ಮುಂದೆ ಸುಳಿದಾಡುತ್ತದೆ. ಇಲ್ಲಿ ಕಾರಣಗಳು ಬಾಲಿಶವಾದರೂ ಉದ್ದೇಶ ಮಾತ್ರ ಸ್ಪಷ್ಟ: ಅಂದರೆ, ದೊಡ್ಡಣ್ಣನ ಮಾತಿಗೆ ತಲೆಬಾಗದವರ ತಲೆ ಯನ್ನು ತೆಗೆದರೂ ತಪ್ಪಿಲ್ಲ ಎನ್ನುವ ಮೊಂಡು ನೀತಿ! ‘ನಾವೇನಾದರೂ ಸಾಧನೆ ಮಾಡಿದರೆ ಅದನ್ನು ಸುತ್ತಲಿನ ಸಮಾಜವು ಗುರುತಿಸ ಬೇಕೇ ವಿನಾ, ನಾವೇ ಎಲ್ಲವನ್ನು ಸಾಧಿಸಿದೆವು ಎಂದು ಬಡಾಯಿ ಕೊಚ್ಚಿಕೊಳ್ಳುವುದು ಸಭ್ಯತೆ ಯಲ್ಲ’ ಎಂಬುದು ಸಮಾಜದಲ್ಲಿ ಹಾಸುಹೊಕ್ಕಾಗಿರುವ ಒಂದು ಸಾಮಾನ್ಯ ನಂಬಿಕೆ.

ಆದರೆ ಈ ಟ್ರಂಪ್ ಮಾತ್ರ ಈ ವಿಷಯದಲ್ಲಿ ಕೊಂಚ ವ್ಯತಿರಿಕ್ತ! ತಾವು ಭೂಲೋಕದಲ್ಲಿ ಮಾಡ ಬೇಕಾದ ಎಲ್ಲಾ ಒಳ್ಳೆಯ ಕೆಲಸಗಳು ಈಗಾಗಲೇ ಮುಗಿದಿದ್ದು, ಇದಕ್ಕಾಗಿ ತಮಗೆ ‘ನೊಬೆಲ್ ಶಾಂತಿ ಪ್ರಶಸ್ತಿ’ ದಕ್ಕುವುದೊಂದೇ ಬಾಕಿ ಎನ್ನುವಂತಿದೆ ಅವರ ಧೋರಣೆ. ‘ಮೇಕಿಂಗ್ ದಿ ಸ್ವರ್ಗ ಗ್ರೇಟ್ ಅಗೇನ್’ ಎನ್ನುವಂತಿದೆ ಅವರ ಚಿತ್ತಸ್ಥಿತಿ. ಇದನ್ನೇ ಲೇಖಕರು ರಸವತ್ತಾಗಿ ವರ್ಣಿಸಿರುವ ಪರಿ ಮಾತ್ರ ಅನನ್ಯ.

ಸ್ವರ್ಗಲೋಕದ ಸ್ಥಾಪಿತ ಹಿತಾಸಕ್ತಿ, ದೇವ- ಗಂಧರ್ವರ ಆಚಾರ-ವಿಚಾರ ಇವುಗಳನ್ನು ಟ್ರಂಪ್ ತಮ್ಮದೇ ರೀತಿಯಲ್ಲಿ ಹೇಗೆ ನಿಭಾಯಿಸಬಲ್ಲರು ಎಂಬುದನ್ನು ರಸವ ತ್ತಾಗಿ ವಿವರಿಸಿದ್ದಾರೆ ಎಂ.ಜೆ.ಅಕ್ಬರ್. ಇವರ ಮುಂಬರುವ ಅಂಕಣ ಬರಹಗಳಿಗೂ ಕಾತುರ ದಿಂದ ಕಾಯುವಂತಾಗಿದೆ. ಜಗತ್ತಿನಲ್ಲಿ ಪಾಪಕರ್ಮಗಳು ಸಹಿಸಲಸಾಧ್ಯವಾದ ಮಟ್ಟವನ್ನು ತಲುಪಿದಾಗ, ಪರಮಾತ್ಮನು ಯಾವುದಾದರೂ ರೂಪದಲ್ಲಿ ಭೂಲೋಕದಲ್ಲಿ ಅವತರಿಸಿ, ದುಷ್ಟರನ್ನು ಶಿಕ್ಷಿಸಿ, ಪ್ರಕೃತಿಯ ಸಮತೋಲನವನ್ನು ಕಾಪಾಡುತ್ತಾನೆ ಎಂಬುದು ನಮ್ಮ ಸನಾತನ ಧರ್ಮದಲ್ಲಿ ಹಾಸುಹೊಕ್ಕಾಗಿ ರುವ ಬಲವಾದ ನಂಬಿಕೆ.

ಅಂತೆಯೇ, ಪ್ರಾಯಶಃ ಅಮೆರಿಕದ ದೌರ್ಜನ್ಯವನ್ನು ಎದುರಿಸಲು ಪ್ರಪಂಚದ ಉಳಿದ ದೈತ್ಯ ಆರ್ಥಿಕ ಶಕ್ತಿಗಳಾದ ಭಾರತ, ಚೀನಾ, ರಷ್ಯಾ ದೇಶಗಳು ಒಗ್ಗೂಡಿ ಸಜ್ಜುಗೊಳ್ಳುತ್ತಿರುವುದು. ಅಮೆರಿಕ ದಿಂದ ಶೋಷಣೆಗೆ ಒಳಗಾದ ಅಸಹಾಯಕ ರಾಷ್ಟ್ರಗಳು ಈ ಬೆಳವಣಿಗೆಯನ್ನು ಕಾತರ, ಕುತೂಹಲ ದಿಂದ ಕಾದು ನೋಡುತ್ತಿವೆ.

ಕರೋನಾ ಕಾಲಘಟ್ಟದಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ, ವಿಶೇಷವಾಗಿ ಬಡರಾಷ್ಟ್ರಗಳಿಗೆ ಕೋವಿಡ್ ಲಸಿಕೆಯನ್ನು ಸಕಾಲಕ್ಕೆ ಉಚಿತವಾಗಿ ನೀಡಿದ ದೇಶ ನಮ್ಮದು. ಇದನ್ನು ಜಾಗತಿಕ ಸಮುದಾಯವೂ ಮೆಲುಕು ಹಾಕುತ್ತಿದೆ.

ಹೀಗೆ ಜಾಗತಿಕ ಮಟ್ಟದಲ್ಲಿ ಸ್ನೇಹಮಯಿ, ಕರುಣಾಮಯಿ, ಶಾಂತಿಪ್ರಿಯ ಎಂದೇ ಕರೆಸಿಕೊಂಡಿರುವ ಭಾರತವನ್ನೇ ಟ್ರಂಪ್ ಮಹಾಶಯರು ಕೆಣಕಿ ಕೈಸುಟ್ಟುಕೊಂಡರಾ? ಎಂದು ರಾಜಕೀಯ ಪರಿಣತರು ಅನುಮಾನಿಸುವಂತಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು)