ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಬೆಂಗಳೂರಿನ ಗರ್ಭದಲ್ಲಿ ಮ್ಯಾನ್‌ ಹೋಲ್‌ ಗಳೆಂಬ ಸಜೀವ ಬಾಂಬ್‌ !

ಸುಮಾರು 25ರಿಂದ 30 ವರ್ಷಗಳ ಹಿಂದಿನ ಮಾತು. ನಾನು ಆಗ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಟ್ರೇನಿ ವರದಿಗಾರ/ ಉಪಸಂಪಾದಕನಾಗಿ ಕೆಲಸಕ್ಕೆ ಸೇರಿದ್ದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಶುಕ್ರವಾರದ ನಮಾಜು ಮಾಡಲು ಐದಾರು ಸಾವಿರ ಮಂದಿ ಸೇರಿದ್ದರು. ಇದ್ದಕ್ಕಿದ್ದಂತೆ ಭಾರಿ ಸ್ಫೋಟದ ಸದ್ದು. ಪ್ರಾರ್ಥನೆ ಸಲ್ಲಿಸುತ್ತಿದ್ದವರೆಲ್ಲ ದಿಕ್ಕಾಪಾಲಾಗಿ ಓಡಲಾ ರಂಭಿಸಿದರು.

ಬೆಂಗಳೂರಿನ ಗರ್ಭದಲ್ಲಿ ಮ್ಯಾನ್‌ ಹೋಲ್‌ ಗಳೆಂಬ ಸಜೀವ ಬಾಂಬ್‌ !

ನೂರಂಟು ವಿಶ್ವ

vbhat@me.com

18-20 ಅಡಿ ಆಳದ ಮ್ಯಾನ್‌ಹೋಲ್ ಒಳಗೆ ಇಳಿಯುವಾಗ ಕೆಲವು ಅಗತ್ಯ ಕ್ರಮಗಳನ್ನು ಪಾಲಿಸಬೇಕೆಂಬ ನಿಯಮವಿದೆ. ಮ್ಯಾನ್ ಹೋಲ್ ಒಳಗೆ ಮಿಥೇನ್, ಕಾರ್ಬನ್ ಮೊನಾ ಕ್ಸೈಡ್‌ನಂಥ ವಿಷಾನಿಲಗಳು ಉತ್ಪತ್ತಿಯಾಗುವುದರಿಂದ ಅದರ ಮುಚ್ಚಳವನ್ನು ಒಂದು ಗಂಟೆ ಕಾಲ ತೆರೆದ ನಂತರವೇ ಅದರೊಳಗೆ ಇಳಿಯಬೇಕು. ಅದಕ್ಕೆ ಮೊದಲು, ಕಾರ್ಮಿಕರು ಕೈಗೆ ಗ್ಲೌಸ್, ಕಾಲಿಗೆ ಗಂಬೂಟು, ಮಾಸ್ಕ್ ಧರಿಸಬೇಕು.

ಸುಮಾರು 25ರಿಂದ 30 ವರ್ಷಗಳ ಹಿಂದಿನ ಮಾತು. ನಾನು ಆಗ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಟ್ರೇನಿ ವರದಿಗಾರ/ ಉಪಸಂಪಾದಕನಾಗಿ ಕೆಲಸಕ್ಕೆ ಸೇರಿದ್ದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಶುಕ್ರವಾರದ ನಮಾಜು ಮಾಡಲು ಐದಾರು ಸಾವಿರ ಮಂದಿ ಸೇರಿದ್ದರು. ಇದ್ದಕ್ಕಿದ್ದಂತೆ ಭಾರಿ ಸ್ಫೋಟದ ಸದ್ದು. ಪ್ರಾರ್ಥನೆ ಸಲ್ಲಿಸುತ್ತಿದ್ದವರೆಲ್ಲ ದಿಕ್ಕಾಪಾಲಾಗಿ ಓಡಲಾ ರಂಭಿಸಿದರು.

ಕೆಲವರು ಬಾಂಬ್ ಸ್ಫೋಟವಾಗಿದ್ದಿರಬಹುದೆಂದು ಭಯಭೀತರಾದರು. ಇನ್ನು ಕೆಲವರು ಯಾರೋ ಪಟಾಕಿ ಸಿಡಿಸಿದ್ದಿರಬಹುದೆಂದು ಅಂದುಕೊಂಡರು. ಆದರೆ ಕಿವಿ ತಮ್ಮಟೆ ಹರಿದು ಹೋಗುವಂಥ ಆ ಭಾರೀ ಸದ್ದು ಹಲವು ಊಹಾಪೋಹ, ಆತಂಕ ಹುಟ್ಟಲು ಕಾರಣವಾಗಿ, ಕೆಲಕಾಲ ತ್ವೇಷಮಯ ವಾತಾವರಣವನ್ನುಂಟು ಮಾಡಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು.

ಶ್ವಾನದಳವೂ ಬಂದಿತು. ಪೊಲೀಸರು ಈದ್ಗಾ ಮೈದಾನವನ್ನು ಸುತ್ತುವರಿದರು. ಅಲ್ಲಿ ಸೇರಿದ್ದ ಮುಸ್ಲಿಮರನ್ನು ಭಾರಿ ಸದ್ದು ಬಂದ ವಿರುದ್ಧ ದಿಕ್ಕಿನ ಒಂದು ಪಾರ್ಶ್ವದಿಂದ ಸುರಕ್ಷಿತವಾಗಿ ಖಾಲಿ ಮಾಡಿಸಿದರು. ಆ ಸುತ್ತಮುತ್ತಲ ಪ್ರದೇಶವನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆ ಭಾರೀ ಸದ್ದು ಏಕೆ ಬಂದಿತು, ಅದಕ್ಕೆ ಕಾರಣವೇನು ಎಂಬುದನ್ನು ತನಿಖೆ ಮಾಡಲಾರಂಭಿಸಿದರು.

ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ಆಸನಗಳ ವ್ಯವಸ್ಥೆ

ಈದ್ಗಾ ಮೈದಾನದ ಒಂದೆಡೆ ಕುರಿಗಳನ್ನು ಮಾರುತ್ತಿದ್ದವನೊಬ್ಬ ಸದ್ದು ಬಂದ ಜಾಗದೆಡೆ ಪೊಲೀಸರನ್ನು ಕರೆದುಕೊಂಡು ಹೋದ. ಪೊಲೀಸರು ಅತ್ತ ಹೋಗಿ ನೋಡಿದರೆ ಮ್ಯಾನ್‌ಹೋಲು! ಅದರ ಬಾಯಿಗೆ ತೊಡಿಸಿದ್ದ ಕಬ್ಬಿಣದ ಮುಚ್ಚಳ ಹಾರಿ ಹೋಗಿ ಸುಮಾರು ಇಪ್ಪತ್ತು-ಇಪ್ಪತ್ತೈದು ಅಡಿ ದೂರದಲ್ಲಿ ಬಿದ್ದಿತ್ತು. ಮ್ಯಾನ್‌ಹೋಲ್ ತೆರೆದುಕೊಂಡಿತ್ತು.

ಪೊಲೀಸರು ಕಕ್ಕಾಬಿಕ್ಕಿಯಾದರು. ಮ್ಯಾನ್‌ಹೋಲ್ ಬಾಯಿಗೆ ಹಾಕಿದ್ದ ಕಬ್ಬಿಣದ ಮುಚ್ಚಳ ಏನಿಲ್ಲವೆಂದರೂ 30-35 ಕೆಜಿ ಭಾರದ್ದು. ಅಂಥ ಭಾರದ ಮುಚ್ಚಳ ಅಷ್ಟು ದೂರ ಬಿದ್ದಿದ್ದಾದರೂ ಯಾಕೆ? ಅಷ್ಟು ಭಾರದ ಮುಚ್ಚಳ ಕಿತ್ತು ಹೋದ ರಭಸಕ್ಕೆ ಆ ಭಾರಿ ಸದ್ದು ಬಂದಿದೆಯೆಂದರೆ ಆ ಮ್ಯಾನ್ ಹೋಲ್ ಒಳಗೆ ಯಾರೋ ಬಾಂಬ್ ಇಟ್ಟಿದ್ದಿರಬೇಕು, ಅದು ಸ್ಫೋಟಗೊಂಡ ಹೊಡೆತಕ್ಕೆ ಮುಚ್ಚಳ ಕಿತ್ತುಕೊಂಡು ಹೋಗಿ ಬಿದ್ದಿರಬೇಕು.

ಇದು ಯಾರದೋ ಕಿಡಿಗೇಡಿಗಳ ಕೃತ್ಯವಿರಬೇಕು... ಎಂದೆಲ್ಲ ಪೊಲೀಸರು ಯೋಚಿಸುತ್ತಾ ತಲೆ ಕೆರೆದುಕೊಳ್ಳುತ್ತಿದ್ದರು. ಈ ಘಟನೆಯಲ್ಲಿ ಯಾರಿಗೂ ಸಾವು-ನೋವು ಸಂಭವಿಸಿರಲಿಲ್ಲ. ಮರುದಿನ ಈ ಘಟನೆ ಎಲ್ಲ ಪತ್ರಿಕೆಗಳಲ್ಲಿ ‘ಚಾಮರಾಜಪೇಟೆಯಲ್ಲಿ ಭಾರಿ ಸದ್ದು’, ‘ನಗರದ ಈದ್ಗಾ ಮೈದಾನ ಸಮೀಪ ಬಾಂಬ್ ಸೋಟ’, ‘ಜನರನ್ನು ಬೆಚ್ಚಿ ಬೀಳಿಸಿದ ಭಾರೀ ಸದ್ದು’... ಮುಂತಾದ ತಲೆಬರಹ ಗಳಲ್ಲಿ ಆ ಸುದ್ದಿ ಪ್ರಕಟವಾದವು.

ಆದರೆ ಯಾವ ಪತ್ರಿಕೆಯೂ ಈ ಸುದ್ದಿಗೆ ಕಾರಣವೇನೆಂಬುದನ್ನು ವರದಿ ಮಾಡಿರಲಿಲ್ಲ. ಆ ದಿನ ಗಳಲ್ಲಿ ನ್ಯೂಸ್ ಚಾನೆಲ್‌ಗಳಿರಲಿಲ್ಲ. ಹೀಗಾಗಿ ಆ ಸುದ್ದಿ ಹೆಚ್ಚು ಲಕ್ಷ್ಯ ಸೆಳೆಯಲಿಲ್ಲ. ಮರುದಿನ ಯಾವುದೇ ಪತ್ರಿಕೆಗಳಲ್ಲೂ ಈ ಬಗ್ಗೆ ಪ್ರಸ್ತಾಪವಿರಲಿಲ್ಲ. ಆ ದಿನಗಳಲ್ಲಿ ನಾನು ಚಾಮರಾಜಪೇಟೆ ಯಲ್ಲಿ ವಾಸವಾಗಿದ್ದೆ. ಈ ಸುದ್ದಿಯ ಬೆನ್ನು ಹತ್ತಿದೆ. ಮೊದಲು ಚಾಮರಾಜಪೇಟೆ ಪೊಲೀಸ್ ಠಾಣೆಗೆ ಹೋದೆ. ಅಲ್ಲಿ ನಾಗರಾಜ್ ಎಂಬ ಇನ್ಸ್‌ಪೆಕ್ಟರ್ ಇದ್ದರು. ಅವರು ಮೊದಲು ಈ ಪ್ರಕರಣದ ಬಗ್ಗೆ ವಿವರಿಸಲು ಅಂಥ ಆಸಕ್ತಿ ತೋರಿಸಲಿಲ್ಲ. ಆದರೆ ನನ್ನ ಉತ್ಸಾಹವನ್ನು ಕಂಡು ಇಡೀ ಘಟನೆ ಯನ್ನು ತೆರೆದಿಟ್ಟರು.

‘ಸಾರ್, ಇಂಥ ಘಟನೆಯಾದಾಗ ನಾವು ಪಟಾಕಿ ಸದ್ದು ಎಂದು ಹೇಳುತ್ತೇವೆ. ಆದರೆ ಇದು ಮ್ಯಾನ್‌ಹೋಲ್ ಸ್ಫೋಟ’ ಎಂದರು. ‘ಮ್ಯಾನ್‌ಹೋಲ್ ಸ್ಫೋಟಾನಾ? ಇದೇನು ಸಾರ್?’ ಎಂದು ಕೇಳಿದೆ. ‘ಸಾರ್ ಇದು ಬಹಳ ಸಾಮಾನ್ಯ. ಭೂಮಿಯೊಳಗೆ ಕೊಳಚೆ ನೀರು ಹರಿಯಲೆಂದು ಹಾಕಿದ ಪೈಪುಗಳೆಲ್ಲ ನಿರ್ದಿಷ್ಟ ದೂರದಲ್ಲಿ ಮ್ಯಾನ್‌ಹೋಲ್ (ಮಲಗುಂಡಿ) ಗಳಿಗೆ ಸಂಪರ್ಕ ಹೊಂದಿವೆ. ಪ್ರತಿ ಮ್ಯಾನ್‌ಹೋಲ್‌ನಲ್ಲೂ ಈ ಪೈಪುಗಳನ್ನು ಅಗತ್ಯಕ್ಕೆ ತಕ್ಕಂತೆ ತಿರುಗಿಸುವ ವ್ಯವಸ್ಥೆ ಹೊಂದ ಲಾಗಿದೆ.

ಬಹುತೇಕ ಮ್ಯಾನ್‌ಹೋಲ್‌ಗಳ ಮುಚ್ಚಳ ತೆಗೆದರೆ ಕೆಳಗೆ ಕೊಚ್ಚೆ ನೀರು ಹರಿಯುವುದನ್ನು ನೋಡಬಹುದು. ಮಲಮೂತ್ರ, ಕೊಚ್ಚೆ, ಕಸಕಡ್ಡಿಗಳು ಶೇಖರವಾಗಿ ಪ್ರತಿ ಮ್ಯಾನ್‌ಹೋಲ್ ಸಹ ಗೋಬರ್‌ಗ್ಯಾಸ್ ಗುಂಡಿಗಳಂತೆ ಪರಿವರ್ತಿತವಾಗುತ್ತವೆ. ಗೋಬರ್‌ಗ್ಯಾಸ್ ಗುಂಡಿಗೂ ಮ್ಯಾನ್‌ ಹೋಲ್‌ಗೂ ಹೆಚ್ಚು ವ್ಯತ್ಯಾಸ ಇಲ್ಲ. ಗೋಬರ್‌ಗ್ಯಾಸ್‌ನಲ್ಲಿ ಇಂಧನ ಶೇಖರವಾಗುವ ಪ್ರಮಾಣ ಜಾಸ್ತಿಯಿರಬಹುದು.

ಬಹುತೇಕ ಸಂದರ್ಭಗಳಲ್ಲಿ ಮ್ಯಾನ್‌ಹೋಲ್‌ನಲ್ಲಿ ಶೇಖರವಾಗುವ ಅನಿಲ ಮುಚ್ಚಳದ ಹತ್ತಿರ ಸೋರಿ ಹೋಗುತ್ತದೆ. ಆದರೆ ಮುಚ್ಚಳವನ್ನು ಬಿಗಿಯಾಗಿ ಹಾಕಿದಾಗ ಅನಿಲ ಹೊರ ಹೋಗಲಾಗದೇ ಕುಕ್ಕರ್‌ನ ಸೇಫ್ಟಿ ವಾಲ್ವ್ ಸಿಡಿಯುವಂತೆ, ಮ್ಯಾನ್‌ಹೋಲ್ ಮುಚ್ಚಳ ಒಳಗಿನ ರಭಸದಿಂದಾಗಿ ಒಡೆದು, ಕಬ್ಬಿಣದ ಮುಚ್ಚಳ ಗಾಳಿಯಲ್ಲಿ ಹತ್ತು-ಹದಿನೈದು ಅಡಿ ಎತ್ತರಕ್ಕೆ ಚಿಮ್ಮುವುದುಂಟು. ಹಾಗೆ ಸಿಡಿಯುವಾಗ ಬಾಂಬ್ ಸ್ಫೋಟದಂತೆ ಭಾರಿ ಸದ್ದಾಗುತ್ತದೆ.

ಗಾಳಿಯಲ್ಲಿ ಚಿಮ್ಮಿದ ಮುಚ್ಚಳವೇನಾದರೂ ಯಾರದ್ದಾದರೂ ತಲೆ ಮೇಲೆ ಬಿದ್ದರೆ ಕತೆ ಮುಗೀತು. ಮೊನ್ನೆ ಈದ್ಗಾ ಮೈದಾನದಲ್ಲಿ ಆದದ್ದೂ ಇದೇ’ ಎಂದು ಮ್ಯಾನ್‌ಹೋಲ್ ವೃತ್ತಾಂತವನ್ನು ವಿವರಿಸಿದರು. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಳ್ಳುವ ಗೊಡವೆಗೂ ಹೋಗುವುದಿಲ್ಲ.

‘ಹಾಗಾದರೆ ಬೆಂಗಳೂರಿನ ಪ್ರತಿಯೊಂದು ಮ್ಯಾನ್ ಹೋಲ್ ಸಹ ಒಂದು ನೆಲಬಾಂಬ್ ಇದ್ದಂತೆ. ಯಾವ ಕ್ಷಣದಲ್ಲಿ ಬೇಕಾದರೂ ಸಿಡಿಯಬಹುದು, ಸ್ಫೋಟಗೊಳ್ಳಬಹುದು ಎಂದಂತಾಯಿತು’ ಅಂದೆ. ‘ನಿಸ್ಸಂದೇಹವಾಗಿ, ಪ್ರತಿ ಮ್ಯಾನ್‌ಹೋಲ್ ಮುಚ್ಚಳದ ಹತ್ತಿರ ಬೆಂಕಿಕಡ್ಡಿ ಗೀರಿ ನೋಡಿ. ಕಿಡಿ ಭಗ್ ಎಂದು ಹೊತ್ತಿಕೊಳ್ಳುತ್ತದೆ. ಮ್ಯಾನ್‌ಹೋಲ್‌ನಲ್ಲಿ ಇಳಿಯುವುದಕ್ಕಿಂತ ಮುನ್ನ ಪೌರ ಕಾರ್ಮಿಕರು ಬೆಂಕಿಕಡ್ಡಿ ಗೀರಿ, ಅನಿಲದ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುತ್ತಾರೆ’ ಎಂದು ನಾಗರಾಜ್ ಹೇಳಿದರು.

ಕೆಲವು ಸಲ, ಅದರಲ್ಲೂ ವಿಶೇಷವಾಗಿ ಬೇಸಿಗೆಯಲ್ಲಿ ಮ್ಯಾನ್‌ಹೋಲ್ ಒಳಗೆ ಮೀಥೇನ್ ಗ್ಯಾಸ್ ಬಹಳ ಬೇಗ ಶೇಖರವಾಗುವುದರಿಂದ ಮುಚ್ಚಳ ಸಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣದಿಂದ ಮುಚ್ಚಳವನ್ನು ತೆಗೆದಿಡುವುದುಂಟು. ಹಾಗೆ ಮುಚ್ಚಳ ತೆಗೆದಿಟ್ಟ ಮ್ಯಾನ್‌ಹೋಲ್‌ಗಳು ಅಕ್ಷರಶಃ ಮೃತ್ಯುಕೂಪಗಳೇ. ಯಾರಾದರೂ ಬಿದ್ದರೆ ಅವರು ಪ್ರಾಣ ಉಳಿಸಿಕೊಂಡು ಪಾರಾಗುವುದು ಸಾಧ್ಯ ವಿಲ್ಲದ ಮಾತು.

ಅಂದು ಚಾಮರಾಜಪೇಟೆಯಲ್ಲಿ ಮ್ಯಾನ್ ಹೋಲ್ ಸಿಡಿದು, ಮುಚ್ಚಳ ಹಾರಿಹೋದ ಘಟನೆ ಸಂಭವಿಸಿದ ಮೂರು ತಿಂಗಳ ನಂತರ ಮ್ಯಾನ್‌ಹೋಲ್ ಒಳಗೆ ಇಳಿದ ಇಬ್ಬರು ಪೌರ ಕಾರ್ಮಿಕರು ಸತ್ತಾಗ ದೊಡ್ಡ ಸುದ್ದಿಯಾಯಿತು. ಅದಾಗಿ ಹದಿನೈದು ದಿನಗಳ ನಂತರ ಮತ್ತೊಬ್ಬನನ್ನು ಮ್ಯಾನ್ ಹೋಲ್ ನುಂಗಿ ಹಾಕಿತು. ಆಗ ಈ ಪ್ರಕರಣ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣ ವಾಗಿತ್ತು. ಆ ಸಂದರ್ಭದಲ್ಲಿ ನಾನು ‘ಕನ್ನಡಪ್ರಭ’ದಲ್ಲಿ ‘ಮೃತ್ಯುಕೂಪವಾಗುತ್ತಿರುವ ಮ್ಯಾನ್ ಹೋಲ್‌ಗಳು’ ಎಂಬ ಒಂದು ಪುಟದ ಲೇಖನ ಬರೆದಿದ್ದೆ.

ಆ ಸಂದರ್ಭದಲ್ಲಿ ಪೌರಕಾರ್ಮಿಕರು, ಪಾಲಿಕೆ ಅಧಿಕಾರಿಗಳು, ಪರಿಣತರನ್ನು ಭೇಟಿ ಮಾಡಿದಾಗ ಭಯಾನಕ ಸಂಗತಿಗಳು ಗೊತ್ತಾಗಿದ್ದವು. ಈ ವರ್ಷಗಳಲ್ಲಿ ಬೆಂಗಳೂರಿನಲ್ಲಿ 160ಕ್ಕೂ ಹೆಚ್ಚು ಪೌರ ಕಾರ್ಮಿಕರು ಮ್ಯಾನ್‌ಹೋಲ್‌ಗೆ ಬಲಿಯಾಗಿದ್ದಾರೆ. 2008 ರಿಂದ 2016 ರವರೆಗಿನ ಎಂಟು ವರ್ಷ ಗಳಲ್ಲಿ 59 ಮಂದಿ ಸತ್ತಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಇದಕ್ಕೆ ಮತ್ತಷ್ಟು ಕಾರ್ಮಿಕರು ಬಲಿಯಾಗಿ ದ್ದಾರೆ.

ಆದರೆ 30 ವರ್ಷಗಳ ನಂತರವೂ ಸಮಸ್ಯೆ ಹಾಗೆಯೇ ಉಳಿದಿದೆ. ಮ್ಯಾನ್‌ಹೋಲ್‌ಗಳೆಂದರೆ ಭಯಾನಕ ಮೃತ್ಯುಕೂಪಗಳಿದ್ದಂತೆ. ಊರ ಹೊಲಸು ನೀರೆಲ್ಲ ಬಂದು ಸೇರುವ ಸಂಗಮ. ಜತೆಗೆ ಕಸ, ಸೀಸ, ಮುಳ್ಳು, ಬಾಟಲಿ ಚೂರು, ಕಬ್ಬಿಣದ ತುಂಡುಗಳು, ನಿರುಪಯುಕ್ತ ವಸ್ತುಗಳು ಶೇಖರ ವಾಗುವ ತಾಣವದು. ಹೇಳಿ ಕೇಳಿ ಮಲಗುಂಡಿ. ಅದರೊಳಗೆ ಶರೀರವನ್ನು ಅದ್ದುವುದನ್ನು, ಮುಳುಗುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.

ಕಾಲ ಕಾಲಕ್ಕೆ ಈ ಮ್ಯಾನ್ ಹೋಲ್‌ಗಳು ಕಟ್ಟಿದಾಗ ಹೊಲಸು ನೀರೆಲ್ಲ ರಸ್ತೆ ಮೇಲೆ ಉಕ್ಕಿ ಹರಿಯುವುದುಂಟು. ಆಗ ಆಸುಪಾಸು ಗಬ್ಬುನಾತ ಸೂಸುವುದರಿಂದ, ಮ್ಯಾನ್‌ಹೋಲ್ ಒಳಗೆ ಇಳಿದು ಸ್ವಚ್ಛಗೊಳಿಸುವುದು ಅನಿವಾರ್ಯ. ಮ್ಯಾನ್ ಹೋಲ್ ಒಳಗೆ ಇಳಿದು ಕ್ಲೀನ್ ಮಾಡುವುದು ಅಮಾನವೀಯ, ಅದು ಮಲ ಹೊರುವ ಪದ್ಧತಿಗೆ ಸಮಾನ. ಹೀಗಾಗಿ ಯಾವುದೇ ಕಾರಣಕ್ಕೂ ಯಾರನ್ನೂ ಮ್ಯಾನ್‌ಹೋಲ್ ಒಳಗೆ ಇಳಿಸಕೂಡದೆಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಆದರೆ ಮ್ಯಾನ್ ಹೋಲ್ ಕಟ್ಟಿದಾಗ ಅದನ್ನು ಸ್ವಚ್ಛಗೊಳಿಸುವ ವಿಧಾನ ಎಂತು ಎಂಬುದನ್ನು ವಿವರಿಸಿಲ್ಲ. ಆದರೆ ಅದನ್ನು ಸ್ವಚ್ಛಗೊಳಿಸುವ ಯಾವುದೇ ಯಂತ್ರ ನಮ್ಮಲ್ಲಿ ಲಭ್ಯವಿಲ್ಲ.

ಇಂದಿಗೂ ಪೌರ ಕಾರ್ಮಿಕರೇ ಗತಿ. 18-20 ಅಡಿ ಆಳದ ಮ್ಯಾನ್‌ಹೋಲ್ ಒಳಗೆ ಇಳಿಯುವಾಗ ಕೆಲವು ಅಗತ್ಯ ಕ್ರಮಗಳನ್ನು ಪಾಲಿಸಬೇಕೆಂಬ ನಿಯಮವಿದೆ. ಮ್ಯಾನ್ ಹೋಲ್ ಒಳಗೆ ಮೀಥೇನ್, ಕಾರ್ಬನ್ ಮೊನಾಕ್ಸೈಡ್ ನಂಥ ವಿಷಾನಿಲಗಳು ಉತ್ಪತ್ತಿಯಾಗುವುದರಿಂದ ಅದರ ಮುಚ್ಚಳವನ್ನು ಒಂದು ಗಂಟೆ ಕಾಲ ತೆರೆದ ನಂತರವೇ ಅದರೊಳಗೆ ಇಳಿಯಬೇಕು. ಅದಕ್ಕೆ ಮೊದಲು, ಕಾರ್ಮಿಕರು ಕೈಗೆ ಗ್ಲೌಸ್, ಕಾಲಿಗೆ ಗಂಬೂಟು, ಮಾಸ್ಕ್ ಧರಿಸಬೇಕು.

ಕಾರ್ಮಿಕರು ಅದರೊಳಗೆ ಇಳಿದಾಗ ಮೇಲೊಬ್ಬ ಸಹಾಯಕ ನಿಂತಿರಬೇಕು ಹಾಗೂ ಅವರು ಪ್ರತಿ ನಾಲ್ಕೈದು ನಿಮಿಷಕ್ಕೊಮ್ಮೆ ಅನಿಲವನ್ನು ಪರೀಕ್ಷಿಸಬೇಕು. ಮ್ಯಾನ್ ಹೋಲ್ ಒಳಗೆ ಮುಳುಕು ಹಾಕುವ ಪ್ರಸಂಗ ಬಂದರೆ, ಅವರಿಗೆ ಆಮ್ಲಜನಕ ಸಿಲಿಂಡರ್ ಅನ್ನು ಒದಗಿಸಬೇಕು. ಆದರೆ ಈ ಯಾವ ನಿಯಮಗಳೂ ಪಾಲನೆಯಾಗುವುದೇ ಇಲ್ಲ. ಪೌರ ಕಾರ್ಮಿಕರು ತಮಗೆ ನೀಡುವ ಗಂಬೂಟು, ಗ್ಲೌಸ್, ಮಾಸ್ಕ್‌ಗಳನ್ನೆಲ್ಲ ಮಾರಾಟ ಮಾಡಿಕೊಂಡು ಬಿಡುತ್ತಾರೆ.

ಅವರ‍್ಯಾರೂ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಪಾಲಿಸುವುದಿಲ್ಲ. ಇವರೆಲ್ಲ ಹತ್ತಾರು ವರ್ಷಗಳಿಂದ ಈ ಕಸುಬನ್ನು ಮಾಡಿಕೊಂಡು ಬಂದಿರುವುದರಿಂದ, ಅವರಲ್ಲಿ ವಿಚಿತ್ರ ದಾಢಸಿತನ ಬೆಳೆದಿರುತ್ತದೆ. ಹೆಚ್ಚೆಂದರೆ, ಮುಚ್ಚಳ ತೆಗೆದು ಬೆಂಕಿ ಕಡ್ಡಿ ಗೀರಿ ವಿಷಾನಿಲದ ಪ್ರಮಾಣವನ್ನು ಪರೀಕ್ಷಿಸಿಕೊಂಡು ಇಳಿದು ಬಿಡುತ್ತಾರೆ. ಇದರೊಳಗೆ ಇಳಿಯುವಾಗಲೇ ಕಂಠಮಟ್ಟ ಕುಡಿದಿರುತ್ತಾರೆ.

ಇದರೊಳಗೆ ಇಳಿಯುವುದು ಅಸಾಧ್ಯ ಎಂಬ ಭಾವನೆ ಕಾರ್ಮಿಕರಲ್ಲಿ, ಅವರನ್ನು ಇಳಿಸುವವ ರಲ್ಲೂ ಬೇರೂರಿಬಿಟ್ಟಿದೆ. ಇನ್ನೂ ಭಯಾನಕ ಅಂಶವೇನೆಂದರೆ, ಈ ಕಾರ್ಮಿಕರಲ್ಲಿ ಬಹುಪಾಲು ಮಂದಿ ಚರ್ಮರೋಗಿಗಳು. ಇವರ ಕೆಲಸವನ್ನು ಬೇರಾರೂ ಮಾಡಲು ಸಾಧ್ಯವೇ ಇಲ್ಲದಿದ್ದರಿಂದ ಇವರಿಗೆ ಎಲ್ಲಿಲ್ಲದ ಬೇಡಿಕೆ. ಒಂದು ಸಲ ಗುಂಡಿಗೆ ಇಳಿದರೆ ಒಂದರಿಂದ ಎರಡು ಸಾವಿರ ರುಪಾಯಿ ಗಿಟ್ಟಿಸುತ್ತಾರೆ. ಜತೆಗೆ ಕುಡಿಯಲು ಪ್ರತ್ಯೇಕ. ಆದರೆ ಇತ್ತೀಚಿನ ದಿನಗಳಲ್ಲಿ ಈ ವೃತ್ತಿಗೆ ಹೊಸಬರಾರೂ ಬಾರದಿರುವುದರಿಂದ, ಇರುವ ಕೆಲವರಿಗೆ ಭಾರೀ ಡಿಮ್ಯಾಂಡ್.

ಬೆಂಗಳೂರಿನಲ್ಲಿ ಎರಡು ಲಕ್ಷದ ಮೂವತ್ತು ಸಾವಿರ ಮ್ಯಾನ್ ಹೋಲ್‌ಗಳಿವೆ. ಆದರೆ ಇವುಗಳ ಸ್ವಚ್ಛತೆಗೆ ಇರುವ ಕಾರ್ಮಿಕರು ಮಾತ್ರ ಮುನ್ನೂರು. ಅಂದರೆ ಏಳೂವರೆ ಸಾವಿರ ಮ್ಯಾನ್ ಹೋಲ್ ಸ್ವಚ್ಛತೆ ಜವಾಬ್ದಾರಿ ಒಬ್ಬ ಕಾರ್ಮಿಕನ ಪಾಲಿಗೆ ಬಂದಂತಾಯಿತು. ಇದರಿಂದ ಅವುಗಳನ್ನು ಕಾರ್ಯಕ್ಷಮತೆಯ ಮೇಲೆ ನಿಗಾ ವಹಿಸುವುದು ಸಾಧ್ಯವಿಲ್ಲದ ಮಾತು. ಯಾವುದೇ ಮ್ಯಾನ್‌ಹೋಲ್, ಯಾವ ಕ್ಷಣದಲ್ಲಾದರೂ ಕಟ್ಟಿಕೊಳ್ಳಬಹುದು ಅಥವಾ ಬಾಂಬ್‌ನಂತೆ ಸಿಡಿಯಬಹುದು ಅಥವಾ ನೆಲಬಾಂಬಿನಂತೆ ಸ್ಫೋಗೊಳ್ಳಬಹುದು. ಪ್ರತಿ ಮ್ಯಾನ್ ಹೋಲ್ ಸಹ ಒಂದು ಲೈವ್(ಸಜೀವ) ಬಾಂಬ್ ಇದ್ದಂತೆ!

ಇಲ್ಲಿ ತನಕ ಸ್ಫೋಗೊಂಡಿಲ್ಲ ಅಂದ್ರೆ ಅದು ಸುರಕ್ಷಿತ ಎಂದಲ್ಲ ಅಥವಾ ಮುಂದೊಂದು ದಿನ ಸ್ಫೋಗೊಳ್ಳುವುದಿಲ್ಲ ಎಂದಲ್ಲ. ಅದು ಯಾವಾಗ ಬೇಕಾದರೂ ಸಿಡಿಯಬಹುದು. ಮ್ಯಾನ್‌ ಹೋಲ್ ಒಳಗೆ ಇಳಿದವರನ್ನು ಮಾತ್ರ ಅದು ಬಲಿ ತೆಗೆದುಕೊಳ್ಳುತ್ತದೆ ಎಂದಲ್ಲ. ಅದರೊಳಗೆ ಬಿದ್ದವರೂ ಗೋತಾ. ದಾರಿಹೋಕರ ಮೇಲೂ ಮೃತ್ಯುವಾಗಿ ಎರಗಬಹುದು.

ಬೆಂಗಳೂರಿನ ಗರ್ಭದೊಳಗೆ ಹೊಟ್ಟೆಯೊಳಗಿನ ಕರುಳಿನಂತೆ ಸುಮಾರು ಏಳು ಸಾವಿರ ಕಿಮೀ ಉದ್ದದ ಒಳಚರಂಡಿ ಕೊಳವೆಗಳು ಹಾದು ಹೋಗಿವೆ. ಈ ಎಲ್ಲ ಕೊಳವೆಗಳು ಎರಡು ಲಕ್ಷದ ಮೂವತ್ತು ಸಾವಿರ ಮ್ಯಾನ್‌ಹೋಲ್ ಗಳೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಸಂಪರ್ಕ, ಸಂಬಂಧ ವನ್ನು ಹೊಂದಿವೆ.

ಹೀಗಾಗಿ ಮ್ಯಾನ್‌ಹೋಲ್‌ಗಳು ಕಟ್ಟಿಕೊಳ್ಳುವುದು, ಹೀಗೆ ಕಟ್ಟಿಕೊಂಡ ಮ್ಯಾನ್ ಹೋಲ್ ಒಳಗೆ ವಿಷಾನಿಲ ಉತ್ಪತ್ತಿಯಾಗುವುದು, ಒಲೆಯ ಮೇಲಿನ ಕುಕ್ಕರ್ ನಂತೆ ಸಿಡಿಯಲು ಸಿದ್ಧವಾಗುವುದು ತೀರಾ ತೀರಾ ಸಾಮಾನ್ಯ. ಈ ಮ್ಯಾನ್‌ಹೋಲ್ ಗಳನ್ನು ನಿತ್ಯವೂ ಪರೀಕ್ಷಿಸುವ, ತಪಾಸಣೆ ಮಾಡುವ ಪದ್ಧತಿಯೂ ಇಲ್ಲ, ಅದು ಕಾರ್ಯಸಾಧುವೂ ಅಲ್ಲ. ಸಮಸ್ಯೆ ಎದುರಾದಾಗಲೇ ಅದು ಗಮನಕ್ಕೆ ಬರುತ್ತದೆ. ಅಂಥ ಸಮಸ್ಯೆ ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆ ಈ ಕಾರಣಗಳಿಂದ ಹೆಚ್ಚು.

ಬೆಂಗಳೂರಿನಲ್ಲಿ ಸುಮಾರು ಒಂಬತ್ತು ಲಕ್ಷ ಮನೆಗಳು ಒಳಚರಂಡಿ ಸಂಪರ್ಕ ಪಡೆದಿವೆ ಹಾಗೂ ದಿನದಿಂದ ದಿನಕ್ಕೆ ಹೊಸ ಸಂಪರ್ಕ ಪಡೆಯುವ ಮನೆಗಳು ಹೆಚ್ಚುತ್ತಿರುವುದರಿಂದ, ಮ್ಯಾನ್‌ ಹೋಲ್‌ಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಅವು ಮೃತ್ಯುಕೂಪವಾಗುತ್ತಿರುವ ಸಾಧ್ಯತೆಯೂ ಹೆಚ್ಚುತ್ತಿದೆ. ಈ ಇಳಿಗುಂಡಿಗಳೊಂದಿಗೆ ಬದುಕುವುದೂ ಒಂದು ಗಂಡಾಗುಂಡಿಯೇ!