ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಸಮ್ಮೋಹನಗೊಳಿಸಿ 300 ಶಸ್ತ್ರಚಿಕಿತ್ಸೆಗಳನ್ನು ಮಾಡಿದ !

ಮೆಸ್ಮರ್ ನಡೆಸುತ್ತಿದ್ದ ಸಮ್ಮೋಹನವನ್ನು ಅಧ್ಯಯನ ಮಾಡಿದ ಇಸಡೈಲ್, 1845ರಲ್ಲಿ ಆಶ್ಚರ್ಯ ಕರ ಫಲಿತಾಂಶಗಳೊಡನೆ ಅದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದ. 300 ಶಸ್ತ್ರಚಿಕಿತ್ಸೆಗಳನ್ನು ತನ್ನ ಸಮ್ಮೋಹನದಿಂದ ನಡೆಸಿದ. ರೋಗಿಗಳಿಗೆ ಸ್ವಲ್ಪವೂ ನೋವಾಗಲಿಲ್ಲ. ರಕ್ತಸ್ರಾವವು ಕನಿಷ್ಠ ಪ್ರಮಾಣ ದಲ್ಲಿತ್ತು ಹಾಗೂ ರೋಗಿಗಳು ಸಾಂಪ್ರದಾಯಿಕ ಚಿಕಿತ್ಸಾ ಅವಽಗಿಂತ ತ್ವರಿತವಾಗಿ ಚೇತರಿಸಿ ಕೊಂಡರು.

ಸಮ್ಮೋಹನಗೊಳಿಸಿ 300 ಶಸ್ತ್ರಚಿಕಿತ್ಸೆಗಳನ್ನು ಮಾಡಿದ !

ಹಿಂದಿರುಗಿ ನೋಡಿದಾಗ

ಸಮ್ಮೋಹನ, ವಶೀಕರಣ, ವಶ್ಯಸುಪ್ತಿ ಎನ್ನುವ ಹೆಸರಿನಲ್ಲಿ ಪ್ರಸಿದ್ಧವಾಗಿರುವ ‘ಹಿಪ್ನಾಟಿಸಂ’ ಇಂದಿಗೂ ಒಂದು ಕುತೂಹಲಕರ ವಿದ್ಯೆಯಾಗಿದೆ. ದೇಹ ಮತ್ತು ಮನಸ್ಸುಗಳ ನಡುವೆ ಇರುವ ಸಂಬಂಧಗಳನ್ನು ಅರಿತುಕೊಳ್ಳಲು ಇದು ನೆರವಾಗುತ್ತಿದೆ. 19ನೆಯ ಶತಮಾನ. ವೈದ್ಯವಿಜ್ಞಾನವು ಮಧ್ಯಯುಗದ ಕಗ್ಗತ್ತಲೆಯಿಂದ ಹೊರಗೆ ಬಂದು, ಆಧುನಿಕ ವೈದ್ಯಕೀಯದತ್ತ ದಾಪುಗಾಲು ಹಾಕು ತ್ತಿದ್ದ ಕಾಲ.

ಮನಸ್ಸಿನ ಅಸ್ತಿತ್ವದ ಬಗ್ಗೆ ಅತೀವ ಕುತೂಹಲವನ್ನು ಕೆರಳಿಸಿ, ಮನಸ್ಸಿನ ವಿವಿಧ ಆಯಾಮಗಳನ್ನು ಅರಿಯುವ, ವಿಶೇಷವಾಗಿ ದೇಹ ಮತ್ತು ಮನಸ್ಸಿನ ನಡುವೆ ಇರುವ ಘನಿಷ್ಠ ಸಂಬಂಧವನ್ನು ಅನಾವರಣ ಮಾಡುತ್ತಿದ್ದಂಥ ಕಾಲ. ಈ ಒಂದು ಕ್ಷೇತ್ರದಲ್ಲಿ ಮೊದಲ ಬಾರಿಗೆ ಕೆಲಸ ಮಾಡಿದವನು ಜರ್ಮನಿಯ ಫ್ರಾಂಜ಼್ ಆಂಟನ್ ಮೆಸ್ಮರ್ (1734-1815).ಈತ ಓರ್ವ ವೈದ್ಯ. ಆಧುನಿಕ ಸಮ್ಮೋಹನ ಚಿಕಿತ್ಸೆಗೆ ತಳಪಾಯವನ್ನು ಹಾಕಿದವನು. ಇವನು ‘ಮ್ಯಾಗ್ನೆಟಿಸ್ಮಸ್ ಅನಿಮಾಲಿಸ್’ ಅಥವಾ ‘ಅನಿಮಲ್ ಮ್ಯಾಗ್ನೆಟಿಸಮ್’ ಎಂಬ ‘ಜೈವಿಕ ಅಯಸ್ಕಾಂತತ್ವದ ಅಸ್ತಿತ್ವ’ವನ್ನು ಪ್ರತಿಪಾದಿಸಿದ.

ಆದರೆ ಜೀವಿಗಳ ಒಡಲಿನಲ್ಲಿ ಯಾವುದೇ ಅಯಸ್ಕಾಂತೀಯ ದ್ರವವು ಹರಿಯುವುದಿಲ್ಲ ಎಂದು ನಿರೂಪಿತವಾದಾಗ, ‘ಮೆಸ್ಮರಿಸಂ’ ಎಂಬ ಹೆಸರಿನಲ್ಲಿ ಜನಪ್ರಿಯವಾಗಿದ್ದ ಈತನ ಸಮ್ಮೋಹನ ಚಿಕಿತ್ಸೆಯು ಜನರ ಆದರವನ್ನು ಕಳೆದುಕೊಂಡಿತು. ಈ ಹಿನ್ನೆಲೆಯಲ್ಲಿ ಸಮ್ಮೋಹನ ವಿದ್ಯೆಯನ್ನು ಅರ್ಥಮಾಡಿಕೊಳ್ಳಲು ಹಾಗೂ ಅದನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಕಾರಣ ರಾದ ಮೂವರು ವೈದ್ಯರನ್ನು ಸ್ಮರಿಸಿಕೊಳ್ಳಬೇಕು.

ಅವರೇ ಡಾ.ಜಾನ್ ಇಲಿಯೋಟ್ಸನ್ (1791-1868), ಡಾ.ಜೇಮ್ಸ್ ಬ್ರೈಡ್ (1795-1860) ಹಾಗೂ ಡಾ. ಜೇಮ್ಸ್ ಇಸಡೈಲ್ (1808-1859). ಡಾ.ಜಾರ್ಜ್ ಇಲಿಯೋಟ್ಸನ್ ಓರ್ವ ಗೌರವಾನ್ವಿತ ಬ್ರಿಟಿಷ್ ವೈದ್ಯನಾಗಿದ್ದ. ಜತೆಗೆ ಲಂಡನ್ ವಿಶ್ವವಿದ್ಯಾಲಯದಲ್ಲಿ ಪ್ರಾಚಾರ್ಯನಾಗಿದ್ದ. ಇಲಿಯೋಟ್ಸನ್, ಮೆಸ್ಮರಿಸಂ ವಿದ್ಯೆಯನ್ನು ಬ್ರಿಟನ್ನಿಗೆ ತಂದ. ಬ್ರಿಟಿಷ್ ಸಮಾಜದಲ್ಲಿ ಅದಕ್ಕೊಂದು ಸ್ಥಾನವನ್ನು ಕಲ್ಪಿಸಿದ. ಬ್ರಿಟನ್ ಸಮಾಜದಲ್ಲಿ ಇಲಿಯೋಟ್ಸನನ್ನಿಗೆ ಬಹುದೊಡ್ಡ ಹೆಸರು ಮತ್ತು ಗೌರವವಿತ್ತು.

6 R

ಏಕೆಂದರೆ ಈತನು ಮೊದಲ ಬಾರಿಗೆ ಸ್ಟೆಥೋಸ್ಕೋಪನ್ನು ಬಳಸಿದ. ರೋಗನಿದಾನದಲ್ಲಿ ಈ ಸರಳ ಉಪಕರಣವು ಎಷ್ಟು ಪರಿಣಾಮಕಾರಿ ಎನ್ನುವುದನ್ನು ವೈದ್ಯಕೀಯ ರಂಗದಲ್ಲಿ ನಿರೂಪಿಸಿದ್ದ. ಜನಸಾಮಾನ್ಯರು ಸಹ ಈ ಉಪಕರಣದ ಬಗ್ಗೆ ಮಾರು ಹೋಗಿದ್ದರು. ಇಲಿಯೋಟ್ಸನ್, ರಕ್ತನಾಳ ದ್ರಾವಣ ಪೂರೈಕೆ ಅಥವಾ ಇಂಟ್ರಾವೀನಸ್ ಥೆರಪಿಯನ್ನು ಜನಪ್ರಿಯಗೊಳಿಸಿದ. ತೀವ್ರ ವಾಂತಿ-ಬೇಧಿಗೆ ಒಳಗಾದವರು ಕಣ್ಣ ಮುಂದೆಯೇ ಸಾಯುವುದನ್ನು ಎಲ್ಲರೂ ನೋಡುತ್ತಿದ್ದರು.

ಅಂಥವರ ರಕ್ತನಾಳದೊಳಗೆ ವಿಶೇಷ ದ್ರಾವಣವನ್ನು ನೀಡಿ, ಅವರನ್ನು ಬದುಕಿಸುವ ‘ಪವಾಡ ಚಿಕಿತ್ಸೆ’ಯನ್ನು ಇಲಿಯೋಟ್ಸನ್ ಮಾಡುತ್ತಿದ್ದ. ಹಾಗಾಗಿ ಅವನ ಬಗ್ಗೆ ಗೌರವದ ಜತೆಯಲ್ಲಿ ವಿಶ್ವಾಸವು ಗಣನೀಯವಾಗಿತ್ತು. ಫ್ರಾನ್ಸ್ ದೇಶದಲ್ಲಿ ‘ಮೆಸ್ಮರಜ್ಞ’ರಾಗಿದ್ದ ಮಾರ್ಕ್ವಿಸ್ ಡಿ ವೀಸೆಗ್ಯೂರ್ (1751-1825) ಮತ್ತು ಅಲೆಗ್ಸಾಂಡರ್ ಬೆರ್ಟ್ರಾಂಡ್ (1795-1831) ಮುಂತಾದವರ ಜತೆಯಲ್ಲಿ ಇಲಿಯೋಟ್ಸನ್ ಒಡನಾಡಿದ. ಅವರ ಬರಹಗಳನ್ನು ಓದಿದ.

ಅವರು ಸಮ್ಮೋಹನ ಚಿಕಿತ್ಸೆಯನ್ನು ನೀಡುವುದನ್ನು ನೋಡಿದ. ಅದರಿಂದ ಪ್ರಭಾವಿತನಾಗಿ ತಾನು ಬ್ರಿಟನ್ನಿನಲ್ಲಿ ಸಮ್ಮೋಹನ ಚಿಕಿತ್ಸೆಯ ಬಗ್ಗೆ ಮಾತನಾಡಲು ಆರಂಭಿಸಿದ. ವೈದ್ಯರು ಹಾಗೂ ಜನ ಸಾಮಾನ್ಯರು ಒಂದು ರೀತಿಯ ಮಿಶ್ರ ಪ್ರತಿಕ್ರಿಯೆಯನ್ನು ತೋರಿದರು. ಇಲಿಯೋಟ್ಸನ್ ಸಾರ್ವ ಜನಿಕವಾಗಿ ಸಮ್ಮೋಹನ ವಿದ್ಯೆಯನ್ನು ಪ್ರದರ್ಶಿಸಲಾರಂಭಿಸಿದ. ಸಮ್ಮೋಹನದಿಂದ ಜನರ ವಿವಿಧ ರೀತಿಯ ನೋವುಗಳನ್ನು ಶಮನಗೊಳಿಸಿದ. ಸಮಾಜಘಾತುಕರಾಗಿದ್ದವರ ವರ್ತನೆಗಳನ್ನು ಬದಲಿಸುತ್ತಿದ್ದ.

ಇದನ್ನೂ ಓದಿ: Dr N Someshwara Column: ಕೋಪನ್‌ ಹೇಗನ್‌ ಹಿಪ್ನಾಸಿಸ್‌ ಡಬಲ್‌ ಮರ್ಡರ್‌ ಕೇಸ್‌

ಕೆಲವು ನರಜನ್ಯ ಕಾಯಿಲೆಗಳನ್ನು ಗುಣಪಡಿಸುತ್ತಿದ್ದ. ಈತನು ಓಕೀ ಸೋದರಿಯರ ಸಹಭಾಗಿತ್ವ ದಲ್ಲಿ ನಡೆಸುತ್ತಿದ್ದ ಪ್ರದರ್ಶನಗಳು ವೈದ್ಯರನ್ನು ಮಾತ್ರವಲ್ಲದೆ ಸಾರ್ವಜನಿಕರನ್ನೂ ಆಕರ್ಷಿಸು ತ್ತಿದ್ದವು. ಓಕೀ ಸೋದರಿಯರು- ಎಲಿಜ಼ಬೆತ್ (17) ಮತ್ತು ಜೇನ್ (15)- ಕಾರ್ಮಿಕ ವರ್ಗಕ್ಕೆ ಸೇರಿದ್ದ ಹದಿಹರೆಯದ ಹೆಣ್ಣು ಮಕ್ಕಳು. ಇವರು ಅಪಸ್ಮಾರ ಚಿಕಿತ್ಸೆಗಾಗಿ ಇಲಿಯೋಟ್ಸನ್ ಬಳಿ ಬಂದಿದ್ದರು. ಇವರನ್ನು ಬಳಸಿಕೊಂಡು ಪ್ರದರ್ಶನವನ್ನು ನೀಡಲಾರಂಭಿಸಿದ.

ಅವರನ್ನು ಮೊದಲು ಸಮ್ಮೋಹನಗೊಳಿಸಿದ. ನಂತರ ‘ಸಿಲ್ಕ್ ದಾರ ಸಮೇತ ಸೀಟನ್ ಸೂಜಿ’ಯನ್ನು ಹಿರಿಯಳಾದ ಎಲಿಜ಼ಬೆತ್‌ಳ ಕುತ್ತಿಗೆಯಲ್ಲಿ ಪೋಣಿಸಿದ. ಆಕೆಗೆ ಸ್ವಲ್ಪವೂ ನೋವಾಗಲಿಲ್ಲ. ಇಂದ್ರಿ ಯಗಳನ್ನು ‘ಪಲ್ಲಟ’ಗೊಳಿಸಿದ. ಅಂದರೆ ಆಕೆಯು ತನ್ನ ಕೈ ಬೆರಳುಗಳಿಂದ ಎಲ್ಲವನ್ನೂ ‘ನೋಡಲಾರಂಭಿಸಿದಳು’. ಜತೆಗೆ ‘ಅತೀಂದ್ರಿಯ ದೃಷ್ಟಿ’ (ಕ್ಲೇರ್ವಾಯನ್ಸ್) ಪ್ರದರ್ಶಿಸಿದಳು.

ಇಲಿಯೋಟ್ಸನ್, ಎಲಿಜ಼ಬೆತಳನ್ನು ರಾತ್ರಿ ಆಸ್ಪತ್ರೆಗೆ ಕರೆದೊಯ್ದ. ಪ್ರತಿಯೊಂದು ರೋಗಿಯನ್ನು ತೋರಿಸಿದ. ಆಕೆಯು ತನ್ನ ‘ದಿವ್ಯದೃಷ್ಟಿ’ಯಿಂದ ರೋಗನಿದಾನವನ್ನು ಮಾಡುವುದರ ಜತೆಯಲ್ಲಿ ಚಿಕಿತ್ಸೆಯನ್ನೂ ಸೂಚಿಸುತ್ತಿದ್ದಳು. ಇಲಿಯೋಟ್ಸನ್ ಸಮ್ಮೋಹನಕ್ಕೆ ಸಂಬಂಧಿಸಿದಂತೆ ‘ದಿ ಜ಼ೋಯಿಸ್ಟ್’ ಎನ್ನುವ ಪತ್ರಿಕೆಯನ್ನು ಪ್ರಕಟಿಸಿದ.

ಇದರ ಜತೆಗೆ ಇಲಿಯೋಟ್ಸನ್ನಿನ ಶತ್ರುಗಳು ಹೆಚ್ಚಿದರು. ವಿಶ್ವವಿದ್ಯಾಲಯದ ಮೇಲೆ ಒತ್ತಡವನ್ನು ತಂದು ಅವನನ್ನು ಪ್ರಾಚಾರ್ಯ ಪದವಿಯಿಂದ ಬಿಡಿಸಿದರು. ಇಲಿಯೋಟ್ಸನ್ ಮಾಡಿದ ಅಷ್ಟೂ ಪ್ರಯೋಗಗಳನ್ನು ನಾವು ಒಪ್ಪಬೇಕಿಲ್ಲ. ಆದರೆ ದೇಹ ಮತ್ತು ಮನಸ್ಸಿನ ಮೇಲೆ ನಡೆಸಿದ ಪ್ರಯೋಗ ಗಳನ್ನು ಮರೆಯುವ ಹಾಗಿಲ್ಲ. ಪರವಶ ಸ್ಥಿತಿಯಲ್ಲಿ ಮನಸ್ಸಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಈತ ಅವಕಾಶವನ್ನು ಮಾಡಿಕೊಟ್ಟ.

ಮುಂದೆ ಬಂದ ಇಸಡೈಲ್, ಇಲಿಯೋಟ್ಸನ್ ನಡೆಸಿದ ಪ್ರಯೋಗಗಳಿಂದ ಪ್ರಭಾವಿತನಾದ ಹಾಗೂ ಅವನ ತಥ್ಯಗಳ ಮೇಲೆ ತನ್ನ ಅಧ್ಯಯನವನ್ನು ಮುಂದುವರಿಸಿದ. ಡಾ.ಜೇಮ್ಸ್ ಬ್ರೈಡ್ ಸ್ಕಾಟಿಶ್ ಸರ್ಜನ್ ಆಗಿದ್ದ. ಇವನು ಮೊದಲ ಬಾರಿಗೆ ಸಮ್ಮೋಹನ ವಿದ್ಯೆಗೆ ‘ಹಿಪ್ನಾಟಿಸಮ್’ ಎಂದು ನಾಮ ಕರಣವನ್ನು ಮಾಡಿದ. ಇದೊಂದು ತಪ್ಪು ಶಬ್ದ. ಗ್ರೀಕ್ ಭಾಷೆಯಲ್ಲಿ ‘ಹಿಪ್ನೋಸ್’ ಎಂದರೆ ನಿದ್ರೆ. ಸಮ್ಮೋಹನಕ್ಕೆ ಒಳಗಾದವನು ನಿದ್ರೆಯನ್ನು ಮಾಡುವುದಿಲ್ಲ.

ಪರವಶನಾಗಿರುತ್ತಾನೆ. ಆದರೂ ಈ ತಪ್ಪು ಶಬ್ದವೇ ಇಂದಿಗೂ ಬಳಕೆಯಲ್ಲಿ ಉಳಿದಿದೆ. ಬ್ರೈಡನಿಗೆ ಸಮ್ಮೋಹನ ವಿದ್ಯೆಯಲ್ಲಿ ನಂಬಿಕೆಯಿರಲಿಲ್ಲ. ಆದರೆ ಆತನು 1841ರಲ್ಲಿ ಸಮ್ಮೋಹನ ವಿದ್ಯೆಯ ಒಂದು ಪ್ರಾತ್ಯಕ್ಷಿಕೆಯನ್ನು ನೋಡಿದ. ಅವನಿಗೆ ಅತೀವ ಕುತೂಹಲವುಂಟಾಯಿತು. ತನ್ನದೇ ಆದ ಅಧ್ಯಯನಗಳನ್ನು ಆರಂಭಿಸಿದ. ಬ್ರೈಡ್, ಮೆಸ್ಮರ್ ಮಂಡಿಸಿದ್ದ ಅಯಸ್ಕಾಂತೀಯ ದ್ರವ ಸಿದ್ಧಾಂತ ವನ್ನು ಸಂಪೂರ್ಣವಾಗಿ ಅಲ್ಲಗಳೆದ. ಅಂಗಕ್ರಿಯಾ ವಿಜ್ಞಾನದ ತತ್ತ್ವಗಳನ್ನು ಬಳಸಿಕೊಂಡ. ಸಮ್ಮೋಹನ ಚಿಕಿತ್ಸೆಯಲ್ಲಿ ಮನಸ್ಸಿನ ಏಕಾಗ್ರತೆಯು ಮುಖ್ಯವೆಂದ.

1843ರಲ್ಲಿ ‘ನ್ಯೂರಿಪ್ಟಾಲಜಿ’ ಎಂಬ ಪುಸ್ತಕವನ್ನು ಬರೆದ. ಇದು ಮನುಕುಲದ ತಿಳಿವನ್ನು ಹೆಚ್ಚಿಸಿದ ಸಾರ್ವಕಾಲಿಕ ಗ್ರಂಥಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಈ ಪುಸ್ತಕದಲ್ಲಿ ಸಮ್ಮೋಹನ ವಿದ್ಯೆಗೆ ಸಂಬಂಧಿಸಿದ ಎಲ್ಲ ಸಿದ್ಧಾಂತಗಳನ್ನು ಹಾಗೂ ಪ್ರಾಯೋಗಿಕ ಬಳಕೆಯನ್ನು ವಿವರಿಸಿದ.

ಇಂದು ಸಮ್ಮೋಹನ ವಿಜ್ಞಾನದಲ್ಲಿ ಬಳಸುವ ಕೆಲವು ಪಾರಿಭಾಷಿಕ ಶಬ್ದಗಳನ್ನು ಈತನೇ ನೀಡಿದ. ಉದಾಹರಣೆಗೆ ಸಮ್ಮೋಹನ ಪರವಶ (ಹಿಪ್ನಾಟಿಕ್ ಟ್ರಾನ್ಸ್) ಸೂಚ್ಯ (ಸಜೆಸ್ಟಬಿಲಿಟಿ), ಏಕಾಗ್ರತೆ (ಮಾನಾಯ್ಡಿಸಂ). ಇವನು ತನ್ನ ಸಮ್ಮೋಹನ ಚಿಕಿತ್ಸೆಯ ಮೂಲಕ ಮನೋದೈಹಿಕ ಬೇನೆಗಳನ್ನು ಗುಣಪಡಿಸಿದ. ನರರೋಗಗಳನ್ನು (ನ್ಯೂರೋಸಿಸ್) ಹಾಗೂ ದೈಹಿಕ ನೋವುಗಳನ್ನು ಶಮನ ಗೊಳಿಸಿದ. ಇವನ ಅಚ್ಚುಕಟ್ಟಾದ ಕೆಲಸವು ಸಮ್ಮೋಹನವು ಒಂದು ವಿಜ್ಞಾನವಾಗಿ ಅರಳಲು ನೆರವಾಯಿತು.

ಇವನು ಹಾಕಿದ ಆಸ್ತಿಭಾರದ ಮೇಲೆ ಮುಂದೆ ಬಂದ ಫ್ರಾಯ್ಡ್, ಷಾರ್ಕಾಟ್ ಮತ್ತು ಬೆರ್ನ್ ಹೀಮ್ ಮುಂತಾದವರು ಸುಪ್ತಮನಸ್ಸಿನ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡಲು ಸಾಧ್ಯವಾಯಿತು. ಡಾ.ಜೇಮ್ಸ್ ಇಸಡೈಲ್ ಸ್ಕಾಟಿಶ್ ಸರ್ಜನ್ ಆಗಿದ್ದ. ಇವನು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಸೇವೆಯಲ್ಲಿದ್ದ. ಬಂಗಾಳ ಪ್ರಾಂತದ ಹೂಗ್ಲಿ ಮತ್ತು ಕಲಕತ್ತ ನಗರಗಳಲ್ಲಿ ಸೇವೆಯನ್ನು ಸಲ್ಲಿಸಿದ.

ಅಂದಿನ ದಿನಗಳಲ್ಲಿ ಅರಿವಳಿಕೆಯು ಭಾರತದಲ್ಲಿ ಲಭ್ಯವಿರಲಿಲ್ಲ. ಹಾಗಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸುವುದು ಸವಾಲಿನ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ಇಸಡೈಲ್‌ ನನ್ನು ಮೆಸ್ಮರ್ ಆರಂಭಿ ಸಿದ್ದ ಮೆಸ್ಮೆರಿಸಂ ಅಥವ ಸಂಮೋಹನ ವಿದ್ಯೆಯು ಆಕರ್ಷಿಸಿತು. ಇಸಡೈಲ್, ಮೆಸ್ಮರ್ ನಡೆಸುತ್ತಿದ್ದ ಸಮ್ಮೋಹನವನ್ನು ಅಧ್ಯಯನ ಮಾಡಿದ.

1845ರಲ್ಲಿ ಆಶ್ಚರ್ಯಕರ ಫಲಿತಾಂಶಗಳೊಡನೆ ಅದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದ. 300 ಶಸ್ತ್ರಚಿಕಿತ್ಸೆಗಳನ್ನು ತನ್ನ ಸಮ್ಮೋಹನದಿಂದ ನಡೆಸಿದ. ರೋಗಿಗಳಿಗೆ ಸ್ವಲ್ಪವೂ ನೋವಾಗಲಿಲ್ಲ. ರಕ್ತಸ್ರಾವವು ಕನಿಷ್ಠ ಪ್ರಮಾಣದಲ್ಲಿತ್ತು ಹಾಗೂ ರೋಗಿಗಳು ಸಾಂಪ್ರದಾಯಿಕ ಚಿಕಿತ್ಸಾ ಅವಧಿಗಿಂತ ತ್ವರಿತವಾಗಿ ಚೇತರಿಸಿಕೊಂಡರು. ಈ 300 ಶಸ್ತ್ರಚಿಕಿತ್ಸಾ ಪ್ರಕರಣಗಳು ದಾಖಲಾಗಿವೆ. ಸ್ತನ ಛೇದನ, ಬಾಹುಛೇದನ ಮುಂತಾದ ಶಸ್ತ್ರಚಿಕಿತ್ಸೆಗಳ ಜತೆಯಲ್ಲಿ ಆನೆಕಾಲುರೋಗ ಬಂದು ಬೃಹತ್ತಾಗಿ ಬೆಳೆದಿದ್ದ ವೃಷಣ ಗಂತಿಯನ್ನೂ ಛೇದಿಸಿ ತೆಗೆದಿದ್ದ. ಇವೆಲ್ಲವನ್ನು ಸೇರಿಸಿ ‘ಮೆಸ್ಮರಿಸಂ ಇನ್ ಇಂಡಿಯ ಆಂಡ್ ಇಟ್ಸ್ ಪ್ರಾಕ್ಟಿಕಲ್ ಅಪ್ಲಿಕೇಶನ್ ಇನ್ ಸರ್ಜರಿ ಅಂಡ್ ಮೆಡಿಸಿನ್’ ಎಂಬ ಪುಸ್ತಕವನ್ನು 1846ರಲ್ಲಿ ಪ್ರಕಟಿಸಿದ. ಈ ಪುಸ್ತಕವು ಇಂದಿಗೂ ಅಂತರ್ಜಾಲದಲ್ಲಿ ದೊರೆಯುತ್ತದೆ.

ಈ ಪುಸ್ತಕದಲ್ಲಿ ಪ್ರತಿಯೊಂದು ಪ್ರಕರಣದ ವಿವರಗಳನ್ನು ನೀಡಿ, ತಾನು ಹೇಗೆ ಅವರನ್ನು ಸಮ್ಮೋ ಹನಗೊಳಿಸಿ ಚಿಕಿತ್ಸೆಯನ್ನು ನೀಡಿದೆ ಎನ್ನುವ ವಿವರಗಳನ್ನು ಹಂಚಿಕೊಂಡಿದ್ದಾನೆ. ಇಸಡೈಲ್ ತಾನು ತನ್ನ ರೋಗಿಗಳನ್ನು ‘ಮೆಸ್ಮರಿಕ್ ಕೋಮ’ಕ್ಕೆ ಒಳಪಡಿಸಿ ಶಸ್ತ್ರಚಿಕಿತ್ಸೆಯನ್ನು ನಡೆಸುವುದಾಗಿ ಹೇಳಿದ. ಫ್ರೆಂಜ಼್ ಮೆಸ್ಮರ್, ಜೀವಿಗಳ ದೇಹದಲ್ಲಿ ಅಯಸ್ಕಾಂತೀಯ ದ್ರವವು ಹರಿಯುತ್ತದೆ. ಈ ದ್ರವವು ಸರಿಯಾಗಿ ಹರಿಯಲಿಲ್ಲವೆಂದರೆ ಅಥವಾ ಅಡಚಣೆಯುಂಟಾದರೆ ರೋಗಗಳು ಬರುತ್ತವೆ ಎಂದ.

ತಾನು ತನ್ನ ಸಮ್ಮೋಹನ ವಿದ್ಯೆಯಿಂದ ಕಟ್ಟಿಕೊಂಡ ಅಯಸ್ಕಾಂತೀಯ ವಾಹಿನಿಗಳನ್ನು ಮುಕ್ತಗೊಳಿಸುವುದಾಗಿ ಹೇಳಿದ್ದ. ಆದರೆ ಇಸಡೈಲ್, ಮೆಸ್ಮರ್ ಹೇಳಿದ ಹಾಗೆ ಯಾವುದೇ ಕಲ್ಪನೆ ಗಳನ್ನು ಜನರ ಮುಂದಿಡಲಿಲ್ಲ. ಬದಲು ರೋಗಿಯ ದೇಹದಲ್ಲಿ ಸಹಜವಾಗಿ ನಡೆಯುವ ಜೈವಿಕ ಕೆಲಸ ಕಾರ್ಯಗಳನ್ನೇ ಉಪಯೋಗಿಸಿಕೊಂಡು ಚಿಕಿತ್ಸೆಯನ್ನು ನೀಡುವುದಾಗಿ ಹೇಳಿದ.

ಇವನ ಸಮ್ಮೋಹನಾ ತಂತ್ರವು ಸರಳವಾಗಿತ್ತು. ದೃಷ್ಟಿಯನ್ನು ಒಂದೆಡೆ ಕೇಂದ್ರೀಕರಿಸುವಂತೆ ಹೇಳುತ್ತಿದ್ದ. ತಾನು ಹೇಳುವುದನ್ನೆಲ್ಲ ಕೇಳುವಂತೆ ತಾಕೀತು ಮಾಡುತ್ತಿದ್ದ. ಆಗಾಗ್ಗೆ ತನ್ನ ಅಂಗೈ ಯನ್ನು ರೋಗಿಯ ದೇಹದ ಮೇಲೆ, ಮೇಲಿನಿಂದ ಕೆಳಗಿನವರೆಗೆ, ಗಾಳಿಯಲ್ಲಿ ಹಾಯಿಸುತ್ತಿದ್ದ. ಆಗ ರೋಗಿಗಳು ಸಂಪೂರ್ಣ ಪರವಶ (ಟ್ರಾನ್ಸ್) ವಾಗುತ್ತಿದ್ದರು. ಈ ರೀತಿಯ ಚಿಕಿತ್ಸೆಯನ್ನು ಭಾರತೀ ಯರು ಸಂಪೂರ್ಣವಾಗಿ ಒಪ್ಪಿದರು. ಭಾರತೀಯ ಸಂಸ್ಕೃತಿಯ ಯೋಗ, ಧ್ಯಾನ, ಸಮಾಧಿ, ಅಷ್ಟ ಸಿದ್ಧಿಗಳು ಇತ್ಯಾದಿ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಅವರು ಇಸಡೈಲ್ ನೀಡುತ್ತಿದ್ದ ಚಿಕಿತ್ಸೆಯನ್ನು ಒಪ್ಪುತ್ತಿದ್ದರು. ಇಸಡೈಲ್ ನ ಮಾರ್ಗದರ್ಶನವನ್ನು ಕರಾರುವಾಕ್ಕಾಗಿ ಪರಿಪಾಲಿಸುತ್ತಿದ್ದರು. ಇಲ್ಲಿ ಒಂದು ಅಂಶ ಗಮನೀಯ- ಇಸಡೈಲ್ ಸಮ್ಮೋಹನದಿಂದ ನಡೆಸಿದ 300 ಶಸ್ತ್ರಚಿಕಿತ್ಸೆಗಳಲ್ಲಿ ಒಬ್ಬರೇ ಒಬ್ಬರು ಬ್ರಿಟಿಷ್ ವ್ಯಕ್ತಿ ಇರಲಿಲ್ಲ.

ಇಸಡೈಲ್ ನೀಡುವ ಸಮ್ಮೋಹನ ಶಸ್ತ್ರಚಿಕಿತ್ಸೆಯನ್ನು ಭಾರತದಲ್ಲಿದ್ದ ಹಲವು ಬ್ರಿಟಿಷ್ ಅಧಿಕಾರಿ ಗಳು ಒಪ್ಪಿದರು ಹಾಗೂ ಶ್ಲಾಸಿದರು. ಆದರೆ ಬ್ರಿಟನ್ನಿನಲ್ಲಿದ್ದ ವೈದ್ಯರು ಇಸಡೈಲ್ ವಿಧಾನವನ್ನು ಒಪ್ಪಲಿಲ್ಲ. ಪ್ರತಿಭಟಿಸಿದರು. ಜತೆಗೆ ಆಗಷ್ಟೇ ‘ಈಥರ್’ ಮತ್ತು ‘ಕ್ಲೋರೋಫಾರಂ’ ಅರಿವಳಿಕೆಗಳು ಬ್ರಿಟನ್ನನ್ನು ಪ್ರವೇಶಿಸಿದ್ದವು. ಹಾಗಾಗಿ ಪ್ರಮಾಣಬದ್ದವಾದ ರಾಸಾಯನಿಕ ಅರಿವಳಿಕೆಗೆ ಜನರು ಒಲವನ್ನು ತೋರಿದರು. ಇಸಡೈಲ್ ನಡೆಸಿದ ಪ್ರಯೋಗವು ಅವನೊಡನೆ ಕೊನೆಗೊಂಡಿತು. ಆದರೆ ಸಮ್ಮೋಹನ ಚಿಕಿತ್ಸೆಯ ಮೂಲಕ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದೆಂಬ, ಅವನ ದಾಖಲೆಯ ಸಹಿತದ ಪುರಾವೆಯು ಹಿಪ್ನೋಥೆರಪಿಯಲ್ಲಿ ಒಂದು ಮೈಲಿಗಲ್ಲಾಗಿದೆ ಎನ್ನಬಹುದು.

ಇಲಿಯೋಟ್ಸನ್, ಜೇಮ್ಸ್ ಬ್ರೈಡ್ ಮತ್ತು ಇಸಡೈಲ್ ಇವರ ಸಾಮೂಹಿಕ ಪ್ರಯತ್ನದಿಂದ ಸಮ್ಮೋಹನ ಚಿಕಿತ್ಸೆಯು ಒಂದು ‘ವಿಜ್ಞಾನ’ ಎಂದೆನಿಸಿಕೊಂಡು, ಜಗತ್ತಿನ ಬಹುಪಾಲು ದೇಶಗಳಲ್ಲಿ ಒಂದು ಪೂರಕ ಚಿಕಿತ್ಸಾ ವಿಜ್ಞಾನವಾಗಿ ಬಳಕೆ ಯಲ್ಲಿದೆ. ಇವರ ಸಮಷ್ಟಿ ಸಂಶೋಧನೆ ಹಾಗೂ ಅಧ್ಯಯನಗಳಿಂದ ದೇಹ ಮತ್ತು ಮನಸ್ಸಿನ ನಡುವಿನ ಸಂಬಂಧಗಳು, ಮನಸ್ಸು ಹೇಗೆ ದೇಹದ ನೋವನ್ನು ನಿವಾರಿಸಬಲ್ಲದು, ಶಸ್ತ್ರಚಿಕಿತ್ಸೆಯಿಂದ ಹೇಗೆ ಬೇಗ ಚೇತರಿಸಿಕೊಳ್ಳಬಹುದು,
ನೋದೈಹಿಕ ಬೇನೆಗಳನ್ನು ಸೂಕ್ತ ಸಲಹೆಗಳ ಮೂಲಕ ಹೇಗೆ ಗುಣಪಡಿಸಬಹುದು ಎನ್ನುವುದನ್ನು ತಿಳಿಸುವುದರ ಜತೆಯಲ್ಲಿ ಪ್ರಜ್ಞೆ ಅಥವಾ ಕಾನ್ಷಿಯಸ್ನೆಸ್ ಎಂದರೆ ಏನು ಎನ್ನುವುದನ್ನು ತಿಳಿಯು ವಲ್ಲಿ ತುಂಬಾ ನೆರವಾಗಿವೆ.