ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Surma S Column: ಆತ್ಮಹತ್ಯೆಯ ತಡೆಗೆ ಪರಿಹಾರಗಳು...

ಆತ್ಮಹತ್ಯೆಯ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಸಂಸ್ಥೆಯು ಪ್ರತಿ ವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನವನ್ನು ಆಚರಿಸುತ್ತಿದೆ. ಆತ್ಮಹತ್ಯೆಗೆ ಹಲವಾರು ಮನೋ ಸಾಮಾಜಿಕ ಕಾರಣಗಳಿವೆ.

Dr Surma S Column: ಆತ್ಮಹತ್ಯೆಯ ತಡೆಗೆ ಪರಿಹಾರಗಳು...

-

Ashok Nayak Ashok Nayak Sep 10, 2025 5:58 AM

ತನ್ನಿಮಿತ್ತ

ಡಾ.ಸುರ್ಮ ಎಸ್.

ಆತ್ಮಹತ್ಯೆಯು ಜಗತ್ತನ್ನು ಕಾಡುತ್ತಿರುವ ಗಂಭೀರವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಪ್ರತಿ ವರ್ಷ ಸುಮಾರು ಒಂದು ಮಿಲಿಯನ್ ಜನರು ಜಗತ್ತಿನಾದ್ಯಂತ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ.

ಆತ್ಮಹತ್ಯೆಯ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಸಂಸ್ಥೆಯು ಪ್ರತಿ ವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನವನ್ನು ಆಚರಿಸುತ್ತಿದೆ. ಆತ್ಮಹತ್ಯೆಗೆ ಹಲವಾರು ಮನೋಸಾಮಾಜಿಕ ಕಾರಣಗಳಿವೆ. ಅವುಗಳೆಂದರೆ ಮಾನಸಿಕ ಖಿನ್ನತೆ, ಪರೀಕ್ಷೆಯಲ್ಲಿನ ಸೋಲು, ಹಣಕಾಸಿನ ತೊಂದರೆ, ವೈವಾಹಿಕ ಸಮಸ್ಯೆಗಳು, ಕೌಟುಂಬಿಕ ದೌರ್ಜನ್ಯ, ತೀವ್ರ ಬಡತನ, ಕೆಲಸದ ಒತ್ತಡ, ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಮತ್ತು ನೋವು, ಭಾವನಾತ್ಮಕ ಸಂಬಂಧ ಗಳಲ್ಲಿ ಬಿರುಕು, ಹತಾಶೆ, ಜೀವನದ ಬಗೆಗಿನ ಜುಗುಪ್ಸೆ, ಒಂಟಿತನ, ಪ್ರೀತಿಪಾತ್ರರನ್ನು ಕಳೆದುಕೊಳ್ಳು ವಿಕೆ, ಭವಿಷ್ಯದ ಬಗೆಗೆ ಅನಿಶ್ಚಿತತೆ, ಭಯ ಮತ್ತು ಆತಂಕ, ಜೀವನದಲ್ಲಿ ಹಠಾತ್ ಸಂಭವಿಸುವ ಕಷ್ಟನಷ್ಟಗಳು ಮುಂತಾದವು.

ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಗಳಲ್ಲಿ ಕಂಡುಬರುವ ವರ್ತನಾ ಮುನ್ಸೂಚನೆಗಳು ಹೀಗಿವೆ:

- ಸದಾ ಖಿನ್ನತೆಯ ಭಾವದಿಂದ ಬಳಲುವುದು ಮತ್ತು ದುಃಖಿತರಾಗಿ ಕಾಣಿಸಿಕೊಳ್ಳುವುದು

- ವಿಪರೀತ ಹತಾಶೆಯ ಭಾವನೆಗಳನ್ನು ವ್ಯಕ್ತಪಡಿಸುವುದು.

- ಊಟ, ನಿದ್ರೆ, ಔಷಧಿಗಳನ್ನು ತ್ಯಜಿಸುವಂಥ ವಿನಾಶಕಾರಿ ವರ್ತನೆಗಳನ್ನು ವ್ಯಕ್ತಪಡಿಸುವುದು.

- ಸ್ವ-ನಿಂದನೆ ಮತ್ತು ಸ್ವ-ದ್ವೇಷಿಸುಕೆಯನ್ನು ನಿರಂತರವಾಗಿ ಅಭಿವ್ಯಕ್ತಪಡಿಸುವುದು.

- ಕುಟುಂಬ, ಸ್ನೇಹಿತರಿಂದ ದೂರವಿರಲು ಬಯಸುವುದು.

- ಜೀವನವೇ ಸಾಕಾಗಿದೆ, ಬದುಕಲು ಇಷ್ಟವಿಲ್ಲ ಎಂಬ ಬಹಿರಂಗ ಹೇಳಿಕೆ ಇತರರೊಂದಿಗೆ ಹಂಚಿಕೊಳ್ಳುವುದು.

- ಜೀವನದಲ್ಲಿನ ಕಷ್ಟಗಳನ್ನು ನಿಯಂತ್ರಿಸಲಾಗದೆ ಅಸಹಾಯಕತೆಯನ್ನು ತೋರ್ಪಡಿಸುವುದು. ನಾನು ನಿಮಗೆ ಹೆಚ್ಚುಕಾಲ ಸಮಸ್ಯೆಯಾಗಿ ಉಳಿಯು ವುದಿಲ್ಲ ಎಂದು ಕುಟುಂಬದ ಸದಸ್ಯ ರೊಂದಿಗೆ ಹೇಳಿಕೊಳ್ಳುವುದು.

- ಬದುಕು ಶೂನ್ಯವಾಗಿದೆ, ಬದುಕುವ ಆಸಕ್ತಿ ಇನ್ನು ಉಳಿದಿಲ್ಲ ಎಂದು ಪದೇ ಪದೆ ಹೇಳುವುದು.

- ಜೀವನವೇ ಸಾಕಾಗಿದೆ, ಯಾರಾದರೂ ಸಹಾಯ ಮಾಡಲಿ ಎಂದು ನಿರೀಕ್ಷಿಸುವುದು.

ಇದನ್ನೂ ಓದಿ: ‌Ravi Hunj Column: ಇದು ವಿಡಂಬನೆಯಾಚೆಗಿನ ಸತ್ಯ, ಗುರುತು ಹಾಕಿಕೊಳ್ಳಿ...

ಮನೋವೈಜ್ಞಾನಿಕ ಪರಿಹಾರಗಳು: ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಗಳಲ್ಲಿ ಕಂಡುಬರುವಂಥ ವರ್ತನಾ ಮುನ್ಸೂಚನೆಗಳನ್ನು ಪ್ರಾರಂಭದಲ್ಲೇ ಗುರುತಿಸಿ ಗಂಭೀರವಾಗಿ ಪರಿಗಣಿಸಬೇಕು. ನಂತರ, ಇಲ್ಲಿ ನೀಡಿರುವ ಮನೋವೈಜ್ಞಾನಿಕ ಪರಿಹಾರಗಳನ್ನು ಅನುಸರಿಸುವ ಮೂಲಕ ಆತ್ಮಹತ್ಯೆ ಯನ್ನು ತಡೆಗಟ್ಟಬಹುದು.

- ಮಾನಸಿಕ ಆರೋಗ್ಯ ಸಹಾಯವಾಣಿ ನೆರವು: ಖಿನ್ನತೆ, ಒತ್ತಡ, ಕೌಟುಂಬಿಕ ಸಮಸ್ಯೆಗಳು, ಆತ್ಮಹತ್ಯೆ ಆಲೋಚನೆಗಳು, ಮಾದಕವಸ್ತು ವ್ಯಸನ ಮುಂತಾದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ‘ಮುಕ್ತ ಮಾನಸಿಕ ಆರೋಗ್ಯ ಸಹಾಯವಾಣಿ’, ‘ಓನ್‌ಲೈ- ಸಹಾಯವಾಣಿ’, ‘ಟೆಲಿ-ಮನಸ್’ ಸಹಾಯವಾಣಿಗಳು ಉಚಿತ ಆಪ್ತಸಮಾಲೋಚನೆಯ ಸೇವೆಯನ್ನು ಒದಗಿಸುತ್ತವೆ.

ಆತ್ಮಹತ್ಯೆಯ ಆಲೋಚನೆಗಳಿಂದ ಬಳಲುತ್ತಿರುವವರು ಈ ಸಹಾಯವಾಣಿಗಳಿಗೆ ಕರೆಮಾಡಿ ಉಚಿತ ಆಪ್ತ ಸಮಾಲೋಚನೆಯನ್ನು ಪಡೆದುಕೊಂಡು ಮಾನಸಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳ ಬಹುದು.

- ಪರಿಣತರಿಂದ ಮನೋಚಿಕಿತ್ಸೆಗಳನ್ನು ಪಡೆಯುವುದು: ಮನೋಚಿಕಿತ್ಸೆಗಳು ಮಾತಿನ ಚಿಕಿತ್ಸೆ ಗಳಾಗಿರುತ್ತವೆ. ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಗಳಲ್ಲಿ ನಕಾರಾತ್ಮಕ ಆಲೋಚನೆಗಳು, ಭಾವನೆಗಳು ಮತ್ತು ವರ್ತನೆಗಳ ವಿನ್ಯಾಸಗಳು ಕಂಡುಬರುತ್ತವೆ. ಇವನ್ನು ಸಂಜ್ಞಾನಾತ್ಮಕ ವರ್ತನಾ ಚಿಕಿತ್ಸೆಯ ಮುಖಾಂತರ ತೊಡೆದುಹಾಕಬಹುದು. ಇದರಿಂದ ಆತ್ಮಹತ್ಯೆಯಂಥ ಆಲೋಚನೆಗಳು ಕಡಿಮೆ ಯಾಗಿ ವ್ಯಕ್ತಿಯಲ್ಲಿ ಬದುಕಿನ ಬಗೆಗೆ ಸಕಾರಾತ್ಮಕ ಆಲೋಚನೆ ಮತ್ತು ಭಾವನೆಗಳು ಉಂಟಾಗುತ್ತವೆ.

ಹಾಗೆಯೇ ಆತ್ಮಹತ್ಯೆಯ ಆಲೋಚನೆಗಳು ಮತ್ತು ಭಾವನೆ ಗಳನ್ನು ನಿಯಂತ್ರಿಸುವಲ್ಲಿ ಮನೋ ಚಾಲಿತ ಚಿಕಿತ್ಸೆಯು ಪರಿಣಾಮಕಾರಿಯಾಗಿದೆ. ಈ ಚಿಕಿತ್ಸೆಯಲ್ಲಿ ಭಾವರೇಚನೆ ತಂತ್ರವನ್ನು ಬಳಸಲಾಗುತ್ತದೆ. ತನ್ನ ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳು, ದುಃಖ, ನಿರಾಶೆ, ಆತಂಕ, ದ್ವಂದ್ವ, ಘರ್ಷಣೆಗಳನ್ನು ವ್ಯಕ್ತಿಯು ಮಾತಿನ ಮುಖಾಂತರ ವ್ಯಕ್ತಪಡಿಸುವುದರಿಂದ ಮನಸ್ಸು ಹಗುರವಾಗುತ್ತದೆ ಹಾಗೂ ಚಿಕಿತ್ಸಕರು ಅದಕ್ಕೆ ಸೂಕ್ತ ಸ್ವಾಂತನ ನೀಡಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಮಾರ್ಗಗಳನ್ನು ಸೂಚಿಸುತ್ತಾರೆ.

ಮನೋಚಿಕಿತ್ಸೆಯಲ್ಲಿ ತಾರ್ಕಿಕ ಸಂವೇಗಾತ್ಮಕ ವರ್ತನಾತ್ಮಕ ಚಿಕಿತ್ಸೆಯು ಅತಾರ್ಕಿಕ ಆಲೋಚನೆ ಗಳು ಮತ್ತು ಭಾವನೆಗಳನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಆತ್ಮಹತ್ಯೆಯ ಆಲೋಚನೆಯುಳ್ಳ ವ್ಯಕ್ತಿಗಳು ಪರಿಣತರಿಂದ ಮನೋಚಿಕಿತ್ಸೆಗಳನ್ನು ಪಡೆದುಕೊಂಡು ಸಮಸ್ಯೆ ಗಳನ್ನು ಪರಿಹರಿಸಿಕೊಳ್ಳಬಹುದು.

- ಮನೋಸಾಮಾಜಿಕ ಬೆಂಬಲ ಪಡೆಯುವುದು: ಪ್ರತಿಯೊಬ್ಬರ ಬದುಕಿನಲ್ಲಿ ಅತ್ಯಂತ ಸಂಕಷ್ಟದ ದಿನಗಳು ಮತ್ತು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ವಿರುತ್ತದೆ. ಸಮಸ್ಯೆಗಳು ಎದುರಾದಾಗ ಜೀವನವನ್ನು ಕೊನೆಗಾಣಿಸಿಕೊಳ್ಳುವ ನಕಾರಾತ್ಮಕ ಆಲೋಚನೆಗೆ ಬರಬಾರದು.

ಇಂಥ ಸಂಕಷ್ಟದ ಸನ್ನಿವೇಶದಲ್ಲಿ ವ್ಯಕ್ತಿಯು ಕುಟುಂಬ, ಗೆಳೆಯರು, ಆರೋಗ್ಯಸೇವೆ ವೃತ್ತಿಪರರಿಂದ ಮನೋಸಾಮಾಜಿಕ ಬೆಂಬಲವನ್ನು ಪಡೆದುಕೊಂಡು ಆತ್ಮಹತ್ಯೆಯ ಆಲೋಚನೆಯ ಅಪಾಯ ಗಳಿಂದ ಪಾರಾಗಬಹುದು.

- ಆಪ್ತಸಮಾಲೋಚನಾ ಕೇಂದ್ರಗಳಲ್ಲಿ ಆಪ್ತಸಮಾಲೋಚನೆಯನ್ನು ಪಡೆಯುವುದು: ಆತ್ಮಹತ್ಯೆಯ ಆಲೋಚನೆಯಿಂದ ಬಳಲುವ ವ್ಯಕ್ತಿಗಳಲ್ಲಿ ಕಂಡುಬರುವ ಮೂಲಭೂತ ಸಮಸ್ಯೆ ಯೆಂದರೆ ತಾವು ಬಯಸುವ ಜೀವನವನ್ನು ನಡೆಸಲು ತಮ್ಮಲ್ಲಿ ಸಾಮರ್ಥ್ಯವಿಲ್ಲ ಎಂಬ ನಕಾರಾ ತ್ಮಕ ಭಾವನೆಯನ್ನು ಇವರು ಹೊಂದಿರುತ್ತಾರೆ.

ಇವರಲ್ಲಿ ಹತಾಶೆ ಮತ್ತು ದುಃಖದ ದೀರ್ಘಕಾಲದ ಭಾವನೆಗಳು ಕಂಡುಬರುತ್ತವೆ. ದುಃಖವು ಜೀವನದಲ್ಲಿ ಶಾಶ್ವತವಾಗಿರುತ್ತವೆ ಎಂದು ಇವರು ಭಾವಿಸುತ್ತಾರೆ. ಇವರಿಗೆ ಆಪ್ತ ಸಮಾಲೋಚನೆ ಯು ತುಂಬಾ ಅಗತ್ಯವಾಗಿರುತ್ತದೆ. ಆದ ಕಾರಣ ಹತ್ತಿರವಿರುವ ಆಪ್ತಸಮಾಲೋಚನಾ ಕೇಂದ್ರಕ್ಕೆ ಭೇಟಿ ಕೊಟ್ಟು ವಿಷಯ ಪರಿಣತರಿಂದ ಸೂಕ್ತವಾದ ಸಲಹೆ ಮತ್ತು ಆಪ್ತಸಮಾಲೋಚನೆಯನ್ನು ಪಡೆಯುವುದರಿಂದ ಆತ್ಮಹತ್ಯೆಯ ಆಲೋಚನೆಗಳು ಮತ್ತು ದುಃಖದ ಭಾವನೆಗಳು ದೂರವಾಗು ತ್ತವೆ.

- ಸಹಾನುಭೂತಿಯಿಂದ ಆಲಿಸುವಿಕೆ: ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಯೊಂದಿಗೆ ಮುಖಾ ಮುಖಿಯಾಗಿ ಆತನ ಸಮಸ್ಯೆಯನ್ನು ಸಹಾನುಭೂತಿಯಿಂದ ಆಲಿಸಿ ಮತ್ತು ಭಾವನೆಗಳಿಗೆ ಸ್ಪಂದಿಸಿ, ಅರ್ಥಮಾಡಿಕೊಂಡು ಸಮಸ್ಯೆಗೆ ಪರಿಹಾರದ ಮಾರ್ಗಗಳನ್ನು ಸೂಚಿಸುವ ಮೂಲಕ ಆತನಲ್ಲಿ ಬದುಕಿನ ಬಗೆಗೆ ಭರವಸೆಯನ್ನುಂಟುಮಾಡಿ ಆತ್ಮಹತ್ಯೆಯ ಪ್ರಯತ್ನವನ್ನು ತಡೆಗಟ್ಟಬಹುದು.

- ಮಾನಸಿಕ ಆರೋಗ್ಯದ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸುವುದು: ಮಾನಸಿಕ ಖಿನ್ನತೆ, ಹತಾಶೆ, ಜೀವನದ ಬಗೆಗಿನ ಜುಗುಪ್ಸೆ, ಒಂಟಿತನ, ಭಾವನಾತ್ಮಕ ಅಸಮತೋಲನ, ಜೀವನದ ಬಗೆಗಿನ ನಕರಾತ್ಮಕ ಆಲೋಚನೆಗಳು, ಆತ್ಮಹತ್ಯೆಗೆ ಪ್ರಮುಖ ಮಾನಸಿಕ ಕಾರಣ ಗಳಾಗಿರುವುದರಿಂದ ಸಮುದಾಯಕ್ಕೆ ಮಾನಸಿಕ ಆರೋಗ್ಯದ ಬಗೆಗೆ ಅರಿವಿನ ಕಾರ್ಯಕ್ರಮಗಳನ್ನು ಶಾಲಾ ಕಾಲೇಜು ಗಳಲ್ಲಿ, ಆರೋಗ್ಯ ಕ್ಷೇತ್ರಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಸಮುದಾಯ ಶಿಬಿರಗಳಲ್ಲಿ ಆಯೋಜಿಸ ಬೇಕು. ಇದರಿಂದ ಆತ್ಮಹತ್ಯೆಯ ಪ್ರಯತ್ನಗಳನ್ನು ನಿಯಂತ್ರಿಸಬಹುದು.

- ವಿಷಯ ಪರಿಣತರುಗಳ ಸೇವೆ ಪಡೆಯುವುದು: ಮನೋ ವೈದ್ಯರು, ಮನೋಶಾಸ್ತ್ರಜ್ಞರು, ಆಪ್ತ ಸಮಾಲೋಚಕರು, ಸಮುದಾಯ ಆರೋಗ್ಯ ಪರಿಣತರು, ಆತ್ಮಹತ್ಯೆಯನ್ನು ತಡೆಗಟ್ಟಲು ಮಧ್ಯ ಪ್ರವೇಶಿಸುವಿಕೆಯ ಕಾರ್ಯಕ್ರಮಗಳನ್ನು ಆಯೋಜಿಸಿ ವ್ಯಕ್ತಿಗಳಲ್ಲಿ ಮನೋಸ್ಥೈರ್ಯವನ್ನು ಹೆಚ್ಚಿಸುವುದರ ಮುಖಾಂತರ ಆತ್ಮಹತ್ಯೆಯನ್ನು ತಡೆಗಟ್ಟಬಹುದು.

- ಜೀವನ ಕೌಶಲಗಳ ತರಬೇತಿ ನೀಡುವುದು: ವಿದ್ಯಾರ್ಥಿ ಮತ್ತು ಯುವ ಸಮುದಾಯಕ್ಕೆ ಸ್ವ-ಪ್ರಜ್ಞೆ, ಒತ್ತಡ ನಿರ್ವಹಣೆ, ಭಾವನಾತ್ಮಕ ನಿರ್ವಹಣೆ, ದೃಢವರ್ತನೆ, ಸಮಸ್ಯೆ ಬಗೆಹರಿಸುವಿಕೆ, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ, ಸಕಾರಾತ್ಮಕ ಆಲೋಚನೆ ಮತ್ತು ವಿಮರ್ಶಾತ್ಮಕ ಚಿಂತನೆ ಮುಂತಾದ ಜೀವನ ಕೌಶಲಗಳನ್ನು ಕಲಿಸುವುದರಿಂದ ಸದೃಢ ಮಾನಸಿಕ ಸಾಮರ್ಥ್ಯಗಳು ಅಭಿವೃದ್ಧಿಯಾಗುತ್ತವೆ.

ಪರಿಣಾಮವಾಗಿ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸುವ ಸಾಮರ್ಥ್ಯಗಳು ಅವರಲ್ಲಿ ರೂಢಿಗತವಾಗುತ್ತವೆ. ಇದರಿಂದ ಆತ್ಮಹತ್ಯೆಯ ಪ್ರಯತ್ನಗಳು ನಿಯಂತ್ರಿಸಲ್ಪಡುತ್ತವೆ.

ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜೀವವೂ ಆತ್ಯಮೂಲ್ಯವಾದುದ್ದು. ಪ್ರತಿಯೊಂದು ಜೀವವನ್ನು ಸಂರಕ್ಷಿಸುವುದು ಸಾಮಾಜಿಕ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆಯ ಧ್ಯೇಯವಾಕ್ಯವು ‘ಆತ್ಮಹತ್ಯೆ ಬಗೆಗಿನ ಕಥನಗಳನ್ನು ಬದಲಿಸೋಣ’ ಎಂಬುದಾಗಿದೆ.

ಆದ್ದರಿಂದ ಆತ್ಮಹತ್ಯೆಗೆ ಪ್ರಯತ್ನಿಸುವಂಥ ವ್ಯಕ್ತಿಗಳನ್ನು ಸಮಾಜ, ಆರೋಗ್ಯ ಕ್ಷೇತ್ರದ ವೃತ್ತಿಪರರು, ಸಂಸ್ಥೆಗಳು ಗುರುತಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಅನುಕಂಪ ಮತ್ತು ಸಹಾನುಭೂತಿಯನ್ನು ನೀಡುವ ಮೂಲಕ ಅವರುಗಳಲ್ಲಿ ಬದುಕಿನ ಬಗ್ಗೆ ಭರವಸೆ ಮೂಡಿಸಿ, ಜೀವಗಳನ್ನು ಉಳಿಸುವುದು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆಯ ಉದ್ದೇಶವಾಗಿರುತ್ತದೆ.

(ಲೇಖಕಿ ಮನೋಶಾಸ್ತ್ರಜ್ಞರು)