ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Ravi Hunj Column: ಇದು ವಿಡಂಬನೆಯಾಚೆಗಿನ ಸತ್ಯ, ಗುರುತು ಹಾಕಿಕೊಳ್ಳಿ...

ಏನೇ ಬಳಿದು ಪೂಸಿಸಿದರೂ ಮಲತ್ರಯಗಳು ಜಲತ್ರಯವಾಗಬಲ್ಲವೇ? ಇನ್ನು ಹಾನಗಲ್ ಕುಮಾರ ಸ್ವಾಮಿಗಳ ಕುರಿತಾಗಿ, “...ಪರಳಿ ವೈಜನಾಥ ದೇವಸ್ಥಾನಕ್ಕೆ ಅಂದಿನ ಮುಖಂಡರಾದ ವಾರದ ಮಲ್ಲಪ್ಪನ ವರಿಂದ ಸಿದ್ಧರಾಮಪ್ಪ ಪಾವಟೆ ಅವರ ಕಾನೂನಿನ ನೆರವಿನಿಂದ ಲಿಂಗಾಯತರು ‘ಲಿಂಗಿ ಬ್ರಾಹ್ಮಣ’ ಎಂದು ಶೂದ್ರರಲ್ಲ ಅಂತಾ ಸಾಧಿಸಿದರು.

ಇದು ವಿಡಂಬನೆಯಾಚೆಗಿನ ಸತ್ಯ, ಗುರುತು ಹಾಕಿಕೊಳ್ಳಿ...

-

Ashok Nayak Ashok Nayak Sep 9, 2025 6:52 PM

ಬಸವ ಮಂಟಪ (ಭಾಗ-2)

ರವಿ ಹಂಜ್

ಇತ್ತ ‘ವೀರಶೈವ ಲಿಂಗಾಯತ ಪ್ರತ್ಯೇಕ ಭಾಗ-2’ ಅನ್ನು ಮೊದಲಿಗಿಂತ ಹೆಚ್ಚು ವ್ಯವಸ್ಥಿತವಾಗಿ ಒಂದು ಜಾತಿಪೀಠಿ ನಾಟಕ ಸೂತ್ರಧಾರಿಯ ಮೂಲಕ ಜಾರಿಗೊಳಿಸಲಾಗುತ್ತಿದೆ. ಆದರೆ ಸತ್ಯದ ಬಲವಿರದ ಇವರ ಯತ್ನಗಳೆಲ್ಲವೂ ಒಂದರ ಹಿಂದೆ ಒಂದರಂತೆ ತೋಪೆದ್ದು ಹೋಗುವ ಗುಡಿಗೇರಿ ಹನುಮವ್ವಳ ನಾಟಕಗಳಂತೆ ತೋಪೆದ್ದು ಹೋಗುತ್ತಿವೆ.

ನಾಟಕದ ಆರಂಭದಲ್ಲಿ ಗಣಪತಿಯ ಭಜನೆಯೇ ಇಲ್ಲದ ಮೇಲೆ ಅಲ್ಲಿ ವಿಘ್ನ ಭಗ್ನಗಳಲ್ಲದೇ ಇನ್ನೇನಿರಲು ಸಾಧ್ಯ? ಹೀಗೆ ಗಣಭಂಜನೆಯಿಂದ ಆರಂಭವಾದ ಇವರ ನಾಟಕದ ಪ್ರತಿ ಚಮತ್ಕಾರಿ ದೃಶ್ಯಗಳನ್ನೂ ‘ವಿಶ್ವವಾಣಿ’ ಬಯಲು ಬಯಲಾಗಿಸಿ ಬಿಟ್ಟಿದೆ.

ಇರಲಿ, ಬುದ್ಧಿಜೀವಿಗಳ ಆದಿನ ಈದಿನ ಓದಿನ ಪತ್ರಿಕೆ ಯುಟ್ಯೂಬ್ ಚಾನಲ್ಲುಗಳಲ್ಲಿ ಹಿಂದೂ-ಅಹಿಂದೂ, ವೈದಿಕ- ಅವೈದಿಕ, ಆರ್ಯ-ದ್ರಾವಿಡ, ಹಿಂದಿ-ಕನ್ನಡ ಎಂಬ ವಿಭಜನೆಗಳು ನಡೆದಂತೆ ಯೇ ಈಗ ಭಂಜಕ ವೃಂದದ ಕೃಪಾಪೋಷಣೆಯಲ್ಲಿ ಲಿಂಗಾಹತಿಗಳು ‘ಬಸವ ಭಾರತ’ ಎಂಬ ಪತ್ರಿಕೆ ಮತ್ತು ‘ವಚನ ಟಿವಿ’ ಎಂಬ ಯುಟ್ಯೂಬ್ ಚಾನಲ್ ಆರಂಭಿಸಿದ್ದಾರೆ.

ಚಾನಲ್ಲಿನಲ್ಲಿ ಜಾಗತಿಕ ಲಿಂಗಾಹತ ಮಹಾಸಭಾದ ಪ್ರಮುಖ ಪ್ರೊ.ಯಾಪಲಪರವಿಯವರು ತಾವು ಮತ್ತು ತಮ್ಮ ಸಮಾಜ ಬಾಂಧವರು ‘ಹೋಗಬಾರದ ಜಾಗ’ಗಳಿಗೆ ಹೋಗುವ ಕಾರಣ ಮತ್ತದನ್ನು ಧಾರ್ಮಿಕವಾಗಿ ಪ್ರೋತ್ಸಾಹಿಸಲು ಇಷ್ಟಲಿಂಗವನ್ನು ಸರಳೀಕರಿಸಿ ಎಂದು ಅಧರ್ಮದ ಆದೇಶ ಗಳನ್ನು ಒಂದರ್ಥ ದಲ್ಲಿ ತಮ್ಮ ವಿರಕ್ತ ಸ್ವಾಮಿಗಳಿಗೆ ಅನುರಕ್ತರಾಗಿ ಆಜ್ಞಾಪಿಸಿದ್ದಾರೆ.

ಇದನ್ನೂ ಓದಿ: Ravi Hunj Column: ತಾಯ್ನಾಡನ್ನು ಪ್ರೀತಿಸುವುದು ನಿನ್ನ ಧರ್ಮದ ಭಾಗ..

ಅಂದರೆ ಅಲ್ಲಿಗೆ ವೀರಶೈವ (ಲಿಂಗಾಯತ)ದ ಆದ್ಯ ನಿಯಮವಾದ ಗುರುವೇ ದೈವ ಎಂಬುದನ್ನು ಬದಿಗೊತ್ತಿ, ಗುರುವೇ ಸೇವಕ ಎಂದು ಆಜ್ಞಾಪಿಸಿ ಧಾರ್ಮಿಕ ಸ್ವೇಚ್ಛಾಚಾರದ ಆದೇಶಪೂರ್ವಕ ಬೇಡಿಕೆ ಮಂಡಿಸಲಾಗಿದೆ. ಎಷ್ಟೇ ಆಗಲಿ ಅವರು ‘ಢುಂ ಢುಂ ಡೋಲ್, ರಾಕ್ ಎನ್ ರೋಲ್’ ಇಂಗ್ಲಿಷ್ ಪ್ರೊಫೆಸರರಲ್ಲವೇ! ಇರಲಿ, ಎಲ್ಲಾ ವಿಡಂಬನೆಯಾಚೆಗೆ ಈ ಪ್ರತ್ಯೇಕ ಧರ್ಮ ಎಂದು ಬೇಡುವ ಗುಂಪಿನ ವಕ್ತಾರರು ಎಷ್ಟರ ಮಟ್ಟಿಗೆ ನೈತಿಕಶೂನ್ಯರಾಗಿದ್ದಾರೆ ಎಂದು ಅವರದೇ ಸಮಾಜದ ನೈತಿಕಿಗಳು ತಮ್ಮಲ್ಲಿಲ್ಲದ ಆತ್ಮವನ್ನು ಆವಾಹಿಸಿಕೊಂಡು ಆಲೋಚಿಸಬೇಕು.

ಇನ್ನುಳಿದಂತೆ ಈ ಗುಂಪಿನಲ್ಲಿ ಯಾವುದೇ ಪ್ರೌಢ ಸಂಶೋಧನೆ, ತರ್ಕಗಳಿಲ್ಲದೆ ಇವರ ಬೇಡಿಕೆಯ ಪ್ರತ್ಯೇಕ ಧರ್ಮ ಎಂಬುದು ಕುಸಿದು ಪುಟದಿಂದ ಪುಟಕ್ಕೆ ರದ್ದಾಗುವ ಕಲಬುರ್ಗಿ, ಜಾಮದಾರ್, ಥಾಯ್ಲೆಂಡ್ ಪಾಟೀಲರ ಸಂಶೋಧನೆಗಳಂತೆ ನಿಶ್ಶೂನ್ಯವಾಗುತ್ತಿರುವುದು ವಾಸ್ತವ. ಆದರೆ ಸದ್ಯಕ್ಕೆ ಮನರಂಜನೆ ಮಾತ್ರ ವಿಪುಲವಾಗಿದೆ. ಅಷ್ಟರ ಮಟ್ಟಿಗೆ ರಂಗಜಂಗಮ ವೃಂದದ ಈ ಪ್ರಯೋಗ ವನ್ನು ಯಶಸ್ವಿ ಪ್ರಯೋಗ ಎನ್ನಬಹುದು.

ಇನ್ನು ‘ಬಸವ ಭಾರತ’ ಪತ್ರಿಕೆಯಂತೂ ಆರಂಭದಲ್ಲಿಯೇ ತಾನೆಷ್ಟು ಪೊಳ್ಳು ಎಂದು ಸಂತೆಯಲ್ಲಿ ಬಟಾಬಯಲಾಗಿದೆ. ಅಲ್ಲಮನ ಬಯಲಾಗುವಿಕೆಯು ಹೀಗೆಯೂ ಉಂಟೆಂದು ಅದು ತೋರಿಸಿ ಕೊಟ್ಟಿದೆ. ಅದು ತನ್ನ ಆಗ ಸಂಚಿಕೆಯಲ್ಲಿ ತನ್ನ ಗೌರವ ಸಂಪಾದಕರು ಪೂಜ್ಯ ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಎಂದು ಸ್ವಾಮಿಗಳನ್ನು ಕೇಳದೇ ಹಾಕಿಕೊಂಡಿತ್ತು.

ಯಾವಾಗ ಅವರು ಅದಕ್ಕೆ ಆಕ್ಷೇಪಿಸಿದರೋ ತಕ್ಷಣ ಅದನ್ನು ಬದಲಾಯಿಸಿ ಈಗ ಗೌರವ ಸಂಪಾದಕ ರಾಗಿ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದದೇವರು ಎಂದು ಹಾಕಿಕೊಂಡಿದೆ. ಈ ಪತ್ರಿಕೆಯಲ್ಲಿ ವಿರಾಟಪುರ ವಿರಾಗಿಯಾದ ಹಾನಗಲ್ ಕುಮಾರಸ್ವಾಮಿಗಳನ್ನು ಅವಹೇಳಿಸಿ ಡಾ.ಶಶಿಕಾಂತ್ ಪಟ್ಟಣ ಎನ್ನುವವರು ದಿವಂಗತ ಕಲಬುರ್ಗಿಯವರ ಪುಟದಿಂದ ಪುಟಕ್ಕೆ ರದ್ದಾಗುವ ಸಂಶೋಧನೆ ಗಳ ಆಧಾರದಲ್ಲಿ ಒಂದು ಕಳ್ಳೆಪುರಿ ಪೊಟ್ಟಣದ ಲೇಖನ ಬರೆದಿದ್ದರು.

ಇದರಲ್ಲಿ ಯಾವ ಸಾಕ್ಷಿ ಪುರಾವೆಯಿಲ್ಲದೆ ತಾನೇ ಆಧುನಿಕ ಧರ್ಮ ಸಂಸ್ಥಾಪಕ ಎನ್ನುವ ಹುಕಿ ಯಲ್ಲಿ ಅದೇ ಹಳಸಲು ಪ್ರತ್ಯೇಕ ಪ್ರತ್ಯೇಕ ಎಂಬ ಫರ್ಮಾನು ಹೊರಡಿಸಿದ್ದಾರೆ ಎಂಬುವಲ್ಲಿಗೆ ಶ್ರೀಮಾನ್ ಪಟ್ಟಣಿಗರು ಕಡ್ಡಿ ಗೀರುವ ಕಿಡಿ ಪೊಟ್ಟಣವಾಗುತ್ತಾರೆಯೇ ಹೊರತು ‘ಸಂ’ಸೋಧಕ ಯಾ ‘ಸಂ’ಸ್ಥಾಪಕ ಅಲ್ಲ ಎಂದು ಸಾಬೀತುಪಡಿಸಿದ್ದಾರೆ.

ಅಂದ ಹಾಗೆ, ಅವರ ಲೇಖನದ ಕೆಲ ವಾಕ್ಯಗಳು ಹೀಗಿವೆ: “ವೀರಶೈವ ಪದವು ಬಸವೋತ್ತರ ಕಾಲದ 15ನೆಯ ಶತಮಾನದಲ್ಲಿ ಸೇರ್ಪಡೆಗೊಂಡಿದೆ. ಬಸವಣ್ಣನವರ ನಂತರದ ಹರಿಹರ ಪಾಲ್ಕುರಿಕೆ ಸೋಮನಾಥ ಕೆರೆ ಪದ್ಮರಸ ಕೆರೆಯ ಪದ್ಮಣಾಂಕರ ಕೃತಿಗಳಲ್ಲಿ ಎಲ್ಲಿಯೂ ವೀರಶೈವ ಪದ ಬಂದಿಲ್ಲ" ಇತ್ಯಾದಿ ವಿಚಾರಗಳು ರದ್ದಾದ ಕಲಬುರ್ಗಿ ಸಂಶೋಧನೆಗೆ ಪ್ರಸಾಧನ ಬಳಿದು ಪುನುಗು ಪೂಸಿಸಿ ಮರುಸ್ಥಾಪಿಸುವ ಸಂಗತಿಯೇ ಆಗಿವೆ.

ಏನೇ ಬಳಿದು ಪೂಸಿಸಿದರೂ ಮಲತ್ರಯಗಳು ಜಲತ್ರಯವಾಗಬಲ್ಲವೇ? ಇನ್ನು ಹಾನಗಲ್ ಕುಮಾರ ಸ್ವಾಮಿಗಳ ಕುರಿತಾಗಿ, “...ಪರಳಿ ವೈಜನಾಥ ದೇವಸ್ಥಾನಕ್ಕೆ ಅಂದಿನ ಮುಖಂಡರಾದ ವಾರದ ಮಲ್ಲಪ್ಪನವರಿಂದ ಸಿದ್ಧರಾಮಪ್ಪ ಪಾವಟೆ ಅವರ ಕಾನೂನಿನ ನೆರವಿನಿಂದ ಲಿಂಗಾ ಯತರು ‘ಲಿಂಗಿ ಬ್ರಾಹ್ಮಣ’ ಎಂದು ಶೂದ್ರರಲ್ಲ ಅಂತಾ ಸಾಧಿಸಿದರು.

ಇದು ಲಿಂಗಾಯತ ಧರ್ಮಕ್ಕೆ ಬಿದ್ದ ಇನ್ನೊಂದು ದೊಡ್ಡ ಪೆಟ್ಟು. 1904ರಲ್ಲಿ ಹಾನಗಲ್ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ್ದು ಲಿಂಗಾಯತ ಧರ್ಮಕ್ಕೆ ಕೊನೆಯ ಏಟು. 1910ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಸ್ಥಾಪಿಸಿದ ಶಿವಯೋಗ ಮಂದಿರ ಮತ್ತು ಸಂಸ್ಕೃತ ಶಾಲೆ ಬಸವ ಧರ್ಮೀಯರಿಗೆ ಮಾಡಿದ ಘೋರ ಅನ್ಯಾಯ..." ಇತ್ಯಾದಿಯಾಗಿ ತೀರ್ಪು ನೀಡಿದ್ದಾರೆ. ಯಾ

ವುದೇ ತರ್ಕ, ಪುರಾವೆಯಿಲ್ಲದ ಕಂಪನಿ ನಾಟಕದ ಪ್ರಯೋಗದ ‘ಮಕ್ಕಿ ಕಾ ಮಕ್ಕಿ’ ಮಾತಿನ ಈ ಲೇಖನವೂ ರಂಗಜಂಗಮ ವೃಂದದ ನಿರ್ದೇಶಿತ ಪ್ರಯೋಗದಂತಿದೆ. ಈಗ ಇಂಥ ಚಿಲ್ಟಾರಿ ಚಿನ್ನಾರಿ ಮುತ್ತುಗಳು ರಂಗಜಂಗಮರ ಮುಂದಿನ ಭರವಸೆಯ ಸಂಶೋಧಕ ಪಾತ್ರಧಾರಿಗಳು! ಒಟ್ಟಾರೆ ಸಿದ್ಧಾಂತವೇ ಸುಳ್ಳಿನ ಸಂಕಥನವಾಗಿರುವಾಗ ಇಂಥ ಲೇಖನಗಳು ಸುಳ್ಳುಗಳ ಹೊರತಾಗಿ ಇನ್ನೇನಾ ಗಿರಲು ಸಾಧ್ಯ? ಹಾಗಾಗಿಯೇ ಇದರ ಅಗ ತಿಂಗಳ ಗೌರವ ಸಂಪಾದಕರು ಇವರಿಗೆ ತಕ್ಕ ಗೌರವ ಸಲ್ಲಿಸಿ ಗೌರವಾನ್ವಿತರಾದರು.

ಯಾವ ಮಠಕ್ಕೆ ಈ ಪತ್ರಿಕೆಯ ಹಾಲಿ ಗೌರವ ಸಂಪಾದಕರಾದ ಡಾ. ಬಸವಲಿಂಗ ಪಟ್ಟದದೇವರು ಸ್ವಾಮಿಗಳಾಗಿರುವರೋ ಅವರಿಗೆ ಪಟ್ಟ ಕಟ್ಟಿದ ಅದೇ ಮಠದ ಹಿರಿಯ ಮಹಾಸ್ವಾಮಿಗಳು, ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಶಿವಯೋಗಾಶ್ರಮದಲ್ಲಿ ಶಿಕ್ಷಣ ಪಡೆದು ಸ್ವಾಮಿಗಳಾದ ಜಂಗಮೇತರ ಸಾಧಕರು! ಅಲ್ಲಿಗೆ ಇವರ ಅವಹೇಳನದ ಲೇಖನ ಎಂಥ ಸತ್ವವನ್ನು ಹೊಂದಿದೆ ಎಂದು ಧರ್ಮೀಯರು ಮನಗಾಣಬೇಕು.

ಒಂದು ವೇಳೆ ಡಾ. ಶಶಿಕಾಂತ್ ಪಟ್ಟಣ ಅವರ ಲೇಖನವು ಗಟ್ಟಿ ಪೊಟ್ಟಣವಾಗಿದ್ದರೆ ಈ ಪತ್ರಿಕೆಯ ಗೌರವ ಸಂಪಾದಕ ಡಾ. ಬಸವಲಿಂಗ ಪಟ್ಟದದೇವರು ತಮ್ಮ ಮಠದಲ್ಲಿನ ಹಾನಗಲ್ ಕುಮಾರ ಸ್ವಾಮಿಗಳ ಹೆಸರಿನಲ್ಲಿರುವ ಪ್ರಸಾದ ನಿಲಯದ ಹೆಸರನ್ನು ಏಕೆ ಇನ್ನೂ ಬದಲಾಯಿಸಿಲ್ಲ? ಈ ಪ್ರಶ್ನೆಯೊಂದಿಗೆ ಜಾಗತಿಕ ಲಿಂಗಾಹತ ಮಹಾಸಭಾ ಎಂಬ ನಾಟಕ ಕಂಪನಿಯ ಎರಡನೇ ಮಹಾ ರಂಗಪ್ರಯೋಗವಾದ ‘ಲಿಂಗಾಯತ ಪ್ರತ್ಯೇಕ ಧರ್ಮ’ ಎಂಬ ನಾಟಕ, ಸೂತ್ರಧಾರಿ, ಮತ್ತದರ ಪಾತ್ರಧಾರಿಗಳು ಎಂಥ ಶೂನ್ಯವನ್ನು ಸಾಧಿಸಿದ್ದಾರೆ ಎಂದು ನಿಶ್ಶೂನ್ಯವಾಗುತ್ತದೆ.

ಅಲ್ಲಮನ, “ಬಯಲು ಬಯಲನೇ ಬಿತ್ತಿ, ಬಯಲು ಬಯಲನೇ ಬೆಳೆದು, ಬಯಲು ಬಯಲಾಗಿ ಹೋಯಿತಯ್ಯ" ಎಂಬುದನ್ನು ಹೀಗೂ ‘ಛೂ ಮಂತರ್’ ಎಂದು ಸಾಕ್ಷಾತ್ಕಾರಗೊಳಿಸಬಹುದು ಎಂಬ ಸಾಧ್ಯತೆಗೆ ಬುದ್ಧಿಜೀವಿಗಳೆ ತಲೆದೂಗುತ್ತಿzರೆ. ಇವರುಗಳ ಹೆಸರಿಗೆ ತಗುಲಿಕೊಂಡಿರುವ ಡಾಕ್ಟರೇಟ್, ಪ್ರೊಫೆಸರ್‌ಗಿರಿಗಳು ನಿಜಕ್ಕೂ ಅಭಿನಂದನೀಯ! ಅಂದ ಹಾಗೆ, ಮುಂದಿನ ಸಂಚಿಕೆ ಯಲ್ಲಿ ಈ ಹಾಲಿ ಗೌರವ ಸಂಪಾದಕರೂ ಪತ್ರಿಕೆಯಿಂದ ಬಯಲಾಗಿ ವಿರಕ್ತಿ ಪಡೆದಿರುತ್ತಾರೆ ಎಂಬುದು ಕಾಲಜ್ಞಾನ ಸತ್ಯ.

ಅಸಲಿಗೆ, ಈ ಗುಂಪಿನ ಕಾವಿ ರಂಗಕರ್ಮಿಯು ಯಾವ ಖಾದಿಗಿಂತಲೂ ಕಡಿಮೆ ಇಲ್ಲದಂತೆ ಈ ಬಾರಿ ತಮ್ಮ ರಂಗಜಾಲವನ್ನು ಹೆಣೆದಿzರೆ. ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಯಾವ ವೀರಶೈವ ಮಹಾಸಭಾವನ್ನು ಸ್ಥಾಪಿಸಿದ್ದರೋ ಅದು ತನ್ನನ್ನು ಸ್ಥಾಪಿಸಿದ ಪೂಜ್ಯರ ಅವಹೇಳನಕಾರಿ ಲೇಖನದ ಬಗ್ಗೆ ತುಟಿಪಿಟಿಕ್ ಎಂದಿಲ್ಲ. ಏಕೆಂದರೆ ಅಲ್ಲಿ ರಂಗಕರ್ಮಿಯ ಏಜೆಂಟರೇ ತುಂಬಿದ್ದಾರೆ.

ದಾವಣಗೆರೆಯ ಶೃಂಗಸಭೆಯಲ್ಲಿ ಪಂಚಪೀಠಾಧೀಶರ ಸಮ್ಮುಖದಲ್ಲಿ ‘ವೀರಶೈವ ಲಿಂಗಾಯತ’ ಎಂದು ಗಣತಿಯಲ್ಲಿ ಬರೆಸಲು ಜೈ ಎಂದಿದ್ದ ಅಣಬೇರು ರಾಜಣ್ಣ ಮತ್ತು ಅಥಣಿ ವೀರಣ್ಣ ಎನ್ನುವ ವೀರಶೈವ ಮಹಾಸಭಾದ ಪದಾಧಿಕಾರಿಗಳು ರಂಗಜಂಗಮನ ಸಮ್ಮುಖದಲ್ಲಿ ‘ಲಿಂಗಾಯತ’ಕ್ಕೆ ಜೈ ಎಂದಿದ್ದಾರೆ!

ಇಂಥ ನಿಷ್ಕ್ರಿಯ ಸಿರಿವಂತರ ಥೈಲಿಯಲ್ಲಿ ಭಸ್ಮ ಇರಬಲ್ಲದೆ? ಇವರಿಂದ ಧರ್ಮ ರಕ್ಷಿಸಲ್ಪಟ್ಟೀತೆ? ವೀರಶೈವ ಮಹಾಸಭಾ ಮತ್ತದರ ಸಾಮಾಜಿಕ ಬಾಂಧವರು ಅವಲೋಕನ ಮಾಡಿಕೊಳ್ಳಬೇಕು! ಶ್ರೀಗುರು ಚೆನ್ನಬಸವಣ್ಣನೇ ಸಿದ್ಧರಾಮನಿಗೆ, “ಪರಶಿವನು ತ್ರಿವಿಧ ಭೇದದಿಂದ ಗುರುಲಿಂಗ ಜಂಗಮವೆನಿಸಿ ತನ್ನ ವಿನೋದದಲ್ಲಿ ಪಂಚಸಾದಾಖ್ಯದಿಂದ ಪಂಚಕಲೆಗಳನ್ನೈದಲು, ಆ ಗುರುವು ಸದಾಶಿವ, ಈಶ್ವರ, ಮಹೇಶ, ರುದ್ರ ಎಂಬ ನಾಲ್ವರಿಗೆ ಶಿವದೀಕ್ಷೆಯನ್ನು ದಯಪಾಲಿಸಿದನು.

ಇವರು ಆರ್ಯರಾಗಿ ಸಕಲಗಣಕುಲ, ಹರಿ, ಅಜ ಮುಂತಾದವರಿಗೆ ದೀಕ್ಷೆಯನ್ನು ಮಾಡಿದರಂ ಮರ್ತ್ಯರ ಭವ ಬಂಧನ ಕಳೆಯಲೆಂದು ಇವರ ಅಂಶದಿಂದ ರೇವಣಸಿದ್ಧ, ಮರುಳಸಿದ್ದ, ಏಕೋ ರಾಮ, ಪಂಡಿತಾರಾಧ್ಯ ಎಂಬವರುದಿಸಿ ಚತುರಾಜಾರ್ಯರಾದರಂ. ಇವರು ಯುಗಯುಗಗಳಲ್ಲಿ ಬಂದು, ಧರೆಯ ಭಕ್ತರಿಗೆ ದೀಕ್ಷೆಯನ್ನಿತ್ತು ರಕ್ಷಿಸುವರು. ಆ ವಂಶದ ಹಿರಿಯರಾದ ಆಚಾರ್ಯರು ನಾಲ್ದೆಸೆಗಳಲ್ಲಿ ನಾಲ್ಕು ಕಲಶಗಳನ್ನಿರಿಸಿ, ಅವುಗಳ ಮಧ್ಯದಲ್ಲಿ ಗುರು ಕಲಶವೊಂದನ್ನಿಟ್ಟು, ಅದನ್ನು ಗುರುಭಾವದಿಂದ ಪೂಜಿಸಿ......ದೀಕ್ಷಾತ್ರಯವನ್ನು ಅನುಗ್ರಹಿಸುವರು" ಎಂದು ಹೇಳಿದ್ದಾನೆ (ಚನ್ನಬಸವ ಪ್ರರಾಣ ಸಂಧಿ 59, ಪ 19ರಿಂದ 30).

ಚತುರಾಚಾರ್ಯರೊಟ್ಟಿಗೆ ಇಲ್ಲಿ ಮಧ್ಯದಲ್ಲಿರುವ ಜ್ಞಾನಕಲಶವೇ ಕಾಶಿಪೀಠವಾಗಿ ಪಂಚಪೀಠ ಗಳಾಗಿವೆ ಎಂಬುದು ಅನಾದಿ ಸಾರ್ವತ್ರಿಕ ಸಮ್ಮತ ಅಭಿಪ್ರಾಯವಾಗಿದೆ. ಹೀಗೆ ಸೆಕ್ಯುಲರ್ ಸ್ಕೀಮಿ ನಲ್ಲಿ ಹೇಗೆ ರಾಷ್ಟ್ರಗೀತೆ ನಾಡಗೀತೆಗಳು ಅಪಥ್ಯ ಎನಿಸುವವೋ ಅದೇ ರೀತಿ ಚೆನ್ನಬಸವಣ್ಣ, ಅಲ್ಲಮ, ಮಹಾದೇವಿ, ಪದ್ಮರಸರೆ ಅಪಥ್ಯರೂ ಅಪ್ರಸ್ತುತರೂ ಆಗುವರೇನೋ!

ಆಡಳಿತ ನಿರ್ವಹಣೆಯಲ್ಲಿ Six Sigma Lean ಎಂಬ ತಂತ್ರವಿದೆ. ಇದನ್ನು ಬಳಸಿ ದೋಷ ಪೂರಿತ ವೆಚ್ಚದಾಯಕ ನಿರ್ವಹಣೆಗಳನ್ನು ನಿವಾರಿಸಿ ಶ್ರಮ, ವೆಚ್ಚ ಮತ್ತು ಸಮಯವನ್ನು ಸಮರ್ಥ ವಾಗಿ ನಿರ್ವಹಿಸಬಹುದು. ಈಗ ಹೇಗೂ ಆಡಳಿತ ಮತ್ತು ತಂತ್ರಜ್ಞಾನದ ಶೈಕ್ಷಣಿಕ ಕೋರ್ಸುಗಳಲ್ಲಿ ಬಸವಣ್ಣನ ಕುರಿತಾದ ಸಂಶೋಧನೆಗಳನ್ನು ಸೇರಿಸುವ ಉದ್ದೇಶವಿದೆ.

ಹಾಗಾಗಿ ಅದನ್ನು ಲಿಂಗಾಹತಿಗಳು ಖಂಡಿತವಾಗಿ Six ಎಂಬ ಷಡುದರ್ಶನದಲ್ಲಿ Sigma ಎಂಬ ಲ್ಯಾಟಿನ್ ಪದದಂತಿರುವ ವೀರಶೈವ, ಸಂಸ್ಕೃತ ಪದಗಳಿರುವ ವಚನಗಳನ್ನು ತೆಗೆದು ಅಥವಾ ತಿದ್ದಿ, ಕರಣಹಸುಗೆ, ಮಂತ್ರಗೋಪ್ಯ, ಸೃಷ್ಟಿ ವಚನಗಳನ್ನು ಪ್ರಕ್ಷಿಪ್ತವೆಂದು ಕೇವಲ ಇವನಾರವ ಇವನಾರವ ಎಂಬ Lean ಗೆ ಷಡುದರ್ಶನ ಧರ್ಮವನ್ನು ಕತ್ತರಿಸಿ ಹಸುಗೆ ಮಾಡಿ ತೆಳ್ಳಗಾಗಿಸಿ ತಮ್ಮ ಗ್ರಹಿಕೆಯ Six Sigma Lean ಅನ್ವಯಿಸಿ ‘ಫ್ಯಾಟ್-ಫ್ರೀ ಝೀರೋ ಫಿಗರ್’ ಮಾಡಿ ರಂಗಮಂಚ ದಿಂದ ಸಿನಿಮಾಸ್ಕೋಪಿಗೆ ಲಂಘಿಸಿ ಬಿಡುವರು ಎಂಬುದು ಇವರ ಈವರೆಗಿನ ಸ್ವರೂಪದಿಂದ ತಿಳಿದು ಬರುತ್ತದೆ.

ಇದು ವಿಡಂಬನೆಯಾಚೆಗಿನ ಸತ್ಯ ಎಂಬುದು ಧರ್ಮೀಯರು ಗುರುತು ಹಾಕಿಕೊಳ್ಳಬೇಕಾದ ಅಂಶ. ಹಾಗಾಗಿ ಸದ್ಯದ ನಿರ್ಣಾಯಕ ಕಾಲದಲ್ಲಿ ಅಖಂಡ ವೀರಶೈವ (ಲಿಂಗಾಯತ) ಸಮಾಜವು ಅಖಂಡ ವಾಗಿ ನಿಂತು, “ಅಯ್ಯಾ ಜಾತಿಪೀಠಿಗ ಭಂಜಕ ಅಧಮರೇ, ನೀವು ಮೊದಲಿಗೆ ಚೆನ್ನಬಸವಣ್ಣನ ಅಣತಿಯಂತೆ ಮಲತ್ರಯಗಳ ಕಳೆದುಕೊಳ್ಳಿರಿ. ನಂತರ ಸರಿಯಾದ ದೀಕ್ಷಾ ವಿಧಾನಗಳ ರೀತ್ಯಾ ದೀಕ್ಷೆ ಪಡೆದುಕೊಂಡು ವಿರಕ್ತರಾಗಿ ಸಾಧನೆ ಮಾಡಿ. ಇಲ್ಲದಿದ್ದರೆ ನಿಮ್ಮ ಜಾತಿಗಷ್ಟೇ ಸೀಮಿತರಾಗಿ ತೆಪ್ಪಗಿರಿ.

ಇನ್ನು ನಿಮ್ಮಗಳ ನಾಟಕ, ಆಶುಭಾಷಣ, ಸ್ಟ್ಯಾಂಡ್ ಅಪ್ ಕಾಮೆಡಿ ಹವ್ಯಾಸಗಳನ್ನು ಬಿಟ್ಟು ಸದಾಚಾರ, ಸತ್ಯನಿಷ್ಠೆ, ಅಧ್ಯಾತ್ಮದ ಸಾಧನೆಯಲ್ಲಿ ತೊಡಗಿ. ಇಲ್ಲದಿದ್ದರೆ ನಿಮ್ಮ ಹವ್ಯಾಸವು ಜಾತ್ರೆಯಲ್ಲಿ, ಸಂತೆಯಲ್ಲಿ ಕಣಿ ಹೇಳುವ ‘ಟಿಂವ್ ಟಿಂವ್ ಮಾಮ, ಟಿಂವ್ ಟಿಂವ್ ಮಾಮ’ ಎಂದಾಗುತ್ತದೆ.

‘ಟಿಂವ್ ಟಿಂವ್’ ಮೀಟುವುದಕ್ಕೂ ಬಸವಣ್ಣನ ಬತ್ತೀಸು ರಾಗವ ನುಡಿಸುವುದಕ್ಕೂ ಇರುವ ಅಂತರ, ಅಜಗಜಾಂತರ! ಕೇವಲ ಶಿಶುವಿಹಾರದ ‘ಕಳಬೇಡ ಕೊಲಬೇಡ’ ವಚನಗಳ ಹಾಡುವ ರಂಗಕರ್ಮಿ ಯಾಗದೆ ಮುಂಚಲಿಸಿ ಬೆಡಗು, ಸೃಷ್ಟಿ, ಕಾಲeನ ವಚನಗಳೆಡೆ ಚಲಿಸಿ ನಿಜ ಜಂಗಮರಾಗಿ" ಎನ್ನ ಬೇಕು.

ಏಕೆಂದರೆ ಇಂಥ ನರರ ಕುರಿತಾಗಿಯೇ ಇರುವ ದೇಶಿಕೇಂದ್ರ ಸಂಗನಬಸವಯ್ಯನ ವಚನ ಹೀಗಿದೆ: “ಅನುಭಾವಿ ಅನುಭಾವಿಗಳೆಂದು ನುಡಿದುಕೊಂಬ ಬಿನುಗುನರರುಗಳನೇನೆಂಬೆನಯ್ಯಾ? ಅನುಭಾವಿಯಂಗದಲ್ಲಿ ಆಶೆ ಆಮಿಷಯಿರಲುಂಟೆ? ಅನುಭಾವಿಯ ಮನದಲಿ ಮಲತ್ರಯದ ಮೋಹವುಂಟೆ? ಅನುಭಾವಿಯ ಪ್ರಾಣದಲ್ಲಿ ದುರ್ವಂಚನೆ ಸಂಕಲ್ಪವುಂಟೆ? ಅನುಭಾವಿಯ ಭಾವದಲ್ಲಿ ಕರಣೇಂದ್ರಿಯ ವಿಷಯಭ್ರಾಂತಿ ಯುಂಟೆ? ಇಂತು ದುರ್ಗುಣಾನುಭಾವಿತನಾಗಿ ಶಿವಾನುಭಾವಿಯೆಂದೊಡೆ ಬಾಯಲ್ಲಿ ಬಾಲ್ವುಳ ಸುರಿಯವೆ ಗುರುನಿರಂಜನ ಚನ್ನಬಸವಲಿಂಗಾ?". ಇನ್ನುಳಿದಂತೆ ಇಂಥ ಗುರುಗಳಿಂಗೆ ಇನ್ನೆಂಥ ಶಿಷ್ಯರಿರಲು ಸಾಧ್ಯ? ಇನ್ನಾವ ಧರ್ಮವಿರಲು ಸಾಧ್ಯ? ಎಂದು ಸಮಾಜವು ಮನಗಾಣಬೇಕು!

ವೀರಶೈವವಾಗಲಿ, ಹಿಂದೂವಾಗಲಿ ಒಟ್ಟಾರೆ ನೆಲಮೂಲದ ಹಿಂದೂ ಸಂಸ್ಕೃತಿ, ಹಿಂದೂ ಪ್ರಭೇದದ ಮತಧರ್ಮಗಳು ಹಿಂದೆಂದಿಗಿಂತಲೂ ಇಂದು ಅಪಾಯಕಾರಿ ಆಕ್ರಮಣದಲ್ಲಿವೆ. ಇದಕ್ಕೆ ಪರಧರ್ಮ ಕಾರಣವೇ ಅಲ್ಲ. ಇದಕ್ಕೆ ಕಾರಣ ನಮ್ಮಲ್ಲಿಯೇ ಕಾವಿ, ಖಾದಿ, ಸೂಟಿನಲ್ಲಿರುವ ಜಯಚಂದ, ಮೀರ್ ಸಾದಿಕ್ ಅಂಥ ಭಂಜಕರು!

ಹಾಗಾಗಿ ಪಾರಂಪರಿಕ ಭಾರತವ ಈ ಬುದ್ಧಿಜೀವಿ ಚಿಂತಕ ಮಾಯಾವಿಗಳ ಸೊಬಗಿನ ಮಾತು, ರಂಗುರಂಗಿನ ಪ್ರಸಾಧನ, ಮಿಣಿಮಿಣಿ ವೈಯಾರದ ಕಮ್ಯುನಿ ಬಿನ್ನಾಣಕ್ಕೆ ಹುಳುವಾಗಿ ಉರಿದು ಹೋಗದೆ ತಮ್ಮತನವನ್ನು ಕಾಪಾಡಿಕೊಳ್ಳುವುದು ಇಂದಿನ ತುರ್ತಾಗಿದೆ. ಏಕೆಂದರೆ ಕಮ್ಯುನಿಸಂ ಎಡೆ ಸತ್ತು ಸಮಾಧಿ ಸೇರಿರುವ ಒಂದು ಜನಾಂಗೀಯ ಹತ್ಯೆಯ ಅಸ.

ಏಕೆಂದರೆ ನಾಡು-ನುಡಿಗಳನ್ನು ಆರಾಧಿಸುವುದನ್ನು ಯಾವ ಧರ್ಮಗಳೂ ಅಲ್ಲಗಳೆಯದೇ ಕಮ್ಯೂ ನಿಸಂ ಮಾತ್ರ ನಿರಾಕರಿಸುತ್ತದೆ. ಇಂಥ ಮಾಯಾವಿಗಳ ಕುರಿತಾಗಿ ಜಕ್ಕಣಯ್ಯನು ತನ್ನ ವಚನ ವೊಂದರಲ್ಲಿ, “ದೇಶಕ್ಕೆ ಹೋಗುವ ಮಾರ್ಗದಲ್ಲಿ ಒಬ್ಬ ಭಾಷೆಗಳ್ಳ ಕುಳಿತು ಕಂಡಕಂಡವರ ಹಾಸ್ಯ ಮಾಡುತಿಪ್ಪ ನೋಡಾ. ಇದು ಕಾರಣ ಹೆತ್ತ ತಾಯ ಶಿಶುವು ನುಂಗಿ ಆ ಭಾಷೆಗಳ್ಳನ ಕೊಂದು, ದೇಶಕ್ಕೆ ಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ" ಎಂದಿದ್ದಾನೆ.

ಇಂದಿನ ಬುದ್ಧಿಜೀವಿ ಭಾಷೆಗಳ್ಳರ, ವನಪಿನ ಕಾವಿಗಳ, ವೈಯಾರದ ಶ್ವೇತಾಂಗಿಗಳ, ರಾಜಕಾರಣಿ ಪ್ರಾಯೋಜಕರ ನಾಟಕವನ್ನು ದಾಟಿ ನಿಮ್ಮ ಆಧ್ಯಾತ್ಮಿಕ ಅಸ್ಮಿತೆಯನ್ನು ಕಾಪಾಡಿಕೊಳ್ಳಿ ಎಂದು ಕಾಲeನಿಯಾಗಿ ಹೇಳಿzನೆ ಎನಿಸುತ್ತದೆ. ಒಟ್ಟಾರೆ, ಪ್ರಜಾಪ್ರಭುತ್ವದ ಅಡಿಯಲ್ಲಿ ಸಂವಿಧಾನದ ಮಾರ್ಗದನುಸಾರವಾಗಿಯೇ ಹೇಗೆ ದೇಶವನ್ನು ದಾರಿ ತಪ್ಪಿಸಬಹುದು ಎಂಬುದಕ್ಕೆ ಇಂದಿನ ವರ್ತಮಾನ ತಾಜಾ ಸಾಕ್ಷಿಭೂತವಾಗಿದೆ.

ಇದಕ್ಕೆ ನಮ್ಮ ಶೈಕ್ಷಣಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ ವಲಯದ ಆಯಕಟ್ಟಿನ ಜಾಗದಲ್ಲಿ ಜನ ಮೀಸಲಿದ್ದಾರೆ. ಗಾಢನಿದ್ದೆಯಲ್ಲಿರುವ ಸಮಾಜ ಇಪ್ಪತ್ತೊಂದನೇ ಶತಮಾನದಿಂದ ಬಹು ಹಿಂದೆ ಉಳಿದುಬಿಟ್ಟಿದೆ.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)