Yagati Raghu Naadig Column: ಮಬ್ಬಾಗಿ ಮುಸುಕಿತ್ತು ಮಠದೊಳಗಿನ ಮಾರ್ಜಾಲ..!
‘ಎಲ್ಲರಲ್ಲೂ ಇರುವುದು ಜೀವಾತ್ಮನೇ... ಪರಮಾತ್ಮನೇ...’ ಎಂಬ ಚಿಂತನೆ ಯೊಂದಿಗೆ ನಿಮ್ಮ ಸಂಸ್ಥೆಯಲ್ಲಿ ಸಾಕಷ್ಟು ಮನುಜರಿಗೆ, ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡಿರುವುದು ಸಂತಸದ ವಿಷಯವೇ. ಆದರೆ, ಇಂಥ ಆಶ್ರಿತರ ಪೈಕಿ ಒಂದು ‘ಕಳ್ಳಬೆಕ್ಕು’ ಸೇರಿಕೊಂಡು ಬಿಟ್ಟಿದ್ದು, ಅದು ಅಲ್ಲಿನ ವಾತಾವರಣವನ್ನು ಕಲುಷಿತ ಗೊಳಿಸುತ್ತಿದೆ. ಅದನ್ನು ಅಲ್ಲಿಂದ ವಿಲೇವಾರಿ ಮಾಡಿ ದಲ್ಲಿ, ನಿಮ್ಮ ಸಮಸ್ಯೆ ಬಗೆಹರಿಯುತ್ತೆ. ಆ ಕೆಲಸ ವನ್ನು ಮುಗಿಸಿ ಮತ್ತೊಮ್ಮೆ ನನ್ನಲ್ಲಿಗೆ ಬನ್ನಿ, ನೀವಿನ್ನು ಹೊರಡಬಹುದು.." ಎಂದು ಹೇಳಿ ಕೈಮುಗಿದರು


ರಸದೌತಣ (ಭಾಗ-೧)
naadigru@gmail.com
ಅವಧೂತರನ್ನು ಒಮ್ಮೆ ಕಂಡು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಪರಿಹಾರವನ್ನು ಪಡೆ ಯಲು ಅವರ ಮನೆಯ ಹಜಾರದಲ್ಲಿ ಅದಾಗಲೇ ಸಾಕಷ್ಟು ಜನ ಸೇರಿದ್ದರು. ಮಗಳಿಗೆ ಹೆಣ್ಣು
ಸಿಗುತ್ತಿಲ್ಲ ಎಂಬುದರಿಂದ ಮೊದಲ್ಗೊಂಡು ವ್ಯಾಪಾರ ಕೈಗೆ ಹತ್ತುತ್ತಿಲ್ಲ ಎಂಬುದರವರೆಗಿನ ವೈವಿಧ್ಯ ಮಯ ಸಮಸ್ಯೆಗಳನ್ನು ಹೊತ್ತು ತಂದಿದ್ದ ಜನ ಅವರಾಗಿದ್ದರು. ಅವರಲ್ಲಿ ಕೆಲವರು ಬೆಳ್ಳಂಬೆಳಗ್ಗೆ ಯೇ ಬಂದವರಾಗಿದ್ದರೆ, ಮತ್ತೆ ಕೆಲವರು ಆಗಷ್ಟೇ ಬಂದವರಾಗಿದ್ದು ದೇಗುಲಕ್ಕೆ ತೆರಳಿದ್ದ ಅವಧೂತರಿಗಾಗಿ ಕಾಯುತ್ತಿದ್ದರು.
ಕೆಲ ಹೊತ್ತಿನ ನಂತರ ಮನೆಗೆ ಆಗಮಿಸಿದ ಅವಧೂತರು ಒಬ್ಬೊಬ್ಬರ ಸಮಸ್ಯೆಗಳನ್ನೇ ಆಲಿಸುತ್ತಾ, ತಮ್ಮದೇ ವಿಶಿಷ್ಟ ರೀತಿಯಲ್ಲಿ ಪರಿಹಾರ ಸೂಚಿಸತೊಡಗಿದರು. ಈ ಮಧ್ಯೆ, ಪ್ರತಿಷ್ಠಿತರಂತೆ ಕಾಣು ತ್ತಿದ್ದ ಜನರ ಗುಂಪಿನ ಮುಖ್ಯಸ್ಥರೊಬ್ಬರು ತಾವಾಗಿಯೇ ಅವಧೂತರ ಬಳಿ ಸಮಸ್ಯೆ ತೋಡಿ ಕೊಳ್ಳಲು ಮುಂದಾದರು. ಎಲ್ಲರಿಗಿಂತ ಮುಂಚೆಯೇ ಬಂದಿದ್ದರೂ, ತಡವಾಗಿ ಬಂದವರನ್ನು ಅವಧೂತರು ಮೊದಲು ವಿಚಾರಿಸಿಕೊಂಡು ಪರಿಹಾರ ಸೂಚಿಸುತ್ತಿದ್ದಾರಲ್ಲಾ ಎಂಬ ಅಸಹನೆ ಯೂ ಅದಕ್ಕೆ ಕೊಂಚ ಕಾರಣವಾಗಿತ್ತು. ಆದರೆ ಅವಧೂತರ ನಡೆಯೇ ವಿಶೇಷ, ಅವರು ಏನೋ ಒಂದು ಉದ್ದೇಶವಿಲ್ಲದೆ ಹಾಗೆಲ್ಲ ನಡೆದು ಕೊಳ್ಳುವವರಲ್ಲ. ಹೀಗಾಗಿ, ಪ್ರಶ್ನಿಸಲು ಮುಂದಾದ ‘ಪ್ರತಿಷ್ಠಿತರ ಗುಂಪಿನ’ ಮುಖ್ಯಸ್ಥರನ್ನು ಕಣ್ಸನ್ನೆಯಲ್ಲೇ ಕೂರಿಸಿದರು. ‘ಕರ್ಮ ಕಳೆದು, ನಿಮ್ಮ ಸರದಿ ಬರೋವರೆಗೂ ಕಾಯಲೇಬೇಕು’ ಎಂಬುದು ಅದರ ಸೂಚ್ಯರ್ಥ.
ಇದನ್ನೂ ಓದಿ: Yagati Raghu Naadig Column: ಬೆನ್ನಿಗಿರಿಯಲು ಬಂದ ಟರ್ಕಿಗೆ ʼಮೈಸೂರ್ ಗುನ್ನʼ
ಹೀಗೆ ಸಾಕಷ್ಟು ಜನರನ್ನು ವಿಚಾರಿಸಿಕೊಂಡ ನಂತರ, ಆ ‘ಪ್ರತಿಷ್ಠಿತ’ ವ್ಯಕ್ತಿಗಳ ಕಡೆಗೆ ತಿರುಗಿದ ಅವಧೂತರು, “ಹೇಳಿ ಸ್ವಾಮಿ, ಏನ್ ಇಲ್ಲೀವರೆಗೂ ಪಾದ ಬೆಳೆಸಿದ್ದೂ? ಏನ್ ಸಮಾಚಾರಾ?" ಎಂದು ನಗೆಮಿಶ್ರಿತ ತುಂಟದನಿಯಲ್ಲೇ ಕೇಳಿದರು. ಆಗ ಅವರಲ್ಲೊಬ್ಬರು, “ಬುದ್ಧೀ, ನಮ್ಮೂರಲ್ಲಿ ಸಮಾಜಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಿದ್ದೇವೆ. ನಾನು ಅದರ ಮ್ಯಾನೇಜರ್. ನಮ್ಮ ಸದಾಶಯದ ಭಾಗವಾಗಿ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕೆಂದು ಸಂಸ್ಥೆಯ ಆವರಣದಲ್ಲಿ ಒಂದು ವಿದ್ಯಾರ್ಥಿ ನಿಲಯ, ಜತೆಗೊಂದು ಪುಟ್ಟ ದೇಗುಲ ಮತ್ತು ಮಠವನ್ನು ಕಟ್ಟಿ, ಅದಕ್ಕೊಬ್ಬರು ಸ್ವಾಮೀಜಿಗಳನ್ನೂ ತಂದು ಕೂರಿಸಿದ್ದೇವೆ. ಗೋವು ಸೇರಿದಂತೆ ಪಶುಸಂಪತ್ತು, ಧನ-ಧಾನ್ಯ-ವಸ್ತ್ರ, ಆಳು-ಕಾಳು ಹೀಗೆ ಯಾವುದಕ್ಕೂ ಸಂಸ್ಥೆಯಲ್ಲಿ ಕೊರತೆಯಿಲ್ಲ. ಆದರೆ..." ಎಂದು ತಡವರಿಸಿದರು.
ಅವರ ಮಾತನ್ನೇ ಕಣ್ಮುಚ್ಚಿ ತದೇಕಚಿತ್ತರಾಗಿ ಆಲಿಸುತ್ತಿದ್ದ ಅವಧೂತರು ಕಣ್ಣು ತೆರೆದು, “ಆದರೆ...? ಆದರೇನಾಯಿತು? ವಿದ್ಯಾರ್ಥಿನಿಲಯ-ದೇಗುಲ-ಮಠಗಳ ತ್ರಿವೇಣಿ ಸಂಗಮಕ್ಕೆ ಬೇಕಾದ ಸಂಪ ನ್ಮೂಲ ವೆಲ್ಲಾ ಇದೆ ಅಂದರೂ ಮತ್ತೇನು ಸಮಸ್ಯೆ?" ಎಂದು ಕೇಳಿದರು.

ಅದಕ್ಕೆ ಆ ಮ್ಯಾನೇಜರ್, “ಬುದ್ಧೀ, ಎಲ್ಲವೂ ಇದ್ದರೂ ಏನೂ ಇಲ್ಲ ಅನ್ನೋ ಭಾವ ಕಾಡುತ್ತೆ. ಸಂಸ್ಥೆಯ ಆವರಣ ಪ್ರವೇಶಿಸಿದರೆ, ಅದೇನೋ ಒಂಥರಾ ಸ್ಮಶಾನಸದೃಶ ಕಳೆ ಮುಖಕ್ಕೆ ರಾಚುತ್ತೆ. ವಿದ್ಯಾರ್ಥಿ ನಿಲಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳಿದ್ದರೂ ಯಾರ ಮುಖದಲ್ಲೂ ನಗುವಿಲ್ಲ, ದೇಗುಲಕ್ಕೆ ಭಕ್ತರು ದಂಡಿಯಾಗಿ ಬಂದರೂ ಅವರ ಮನದಲ್ಲಿ ನೆಮ್ಮದಿಯಿಲ್ಲ. ಒಂದಿಡೀ ವಾತಾ ವರಣದಲ್ಲಿ ಅದೇನೋ ಅನಾರೋಗ್ಯಕರ ಸ್ಪಂದನಗಳು ಅನುಭವಕ್ಕೆ ಬರ್ತವೆ. ಸಂಸ್ಥೆಯನ್ನು ಕಟ್ಟುವಾಗ ನಾವೇನಾದರೂ ಅಪಚಾರ ಮಾಡಿದ್ದೀವಾ, ಅದಕ್ಕೇ ಹೀಗಾಗುತ್ತಿದೆಯಾ? ಅಂತ ನಿಮ್ಮನ್ನು ಕೇಳಿಕೊಂಡು ಹೋಗೋಣಾ ಅಂತ ಬಂದೆವು ಬುದ್ಧೀ. ತಾವು ಕೃಪೆ ತೋರಿ ಈ ಸಮಸ್ಯೆ ಯನ್ನು ಬಗೆಹರಿಸಬೇಕು" ಎಂದು ಹೇಳಿ ಕಾಲಿಗೆ ಬಿದ್ದರು.
ಅರೆಕ್ಷಣ ಕಣ್ಣುಮುಚ್ಚಿ ಭಗವಂತನೊಂದಿಗೆ ಅನುಸಂಧಾನ ನಡೆಸಿದ ಅವಧೂತರು ನಂತರ ಕಣ್ತೆರೆದು, “ಮಠ, ದೇಗುಲ, ವಿದ್ಯಾರ್ಥಿ ನಿಲಯ ಸೇರಿದಂತೆ ನಿಮ್ಮ ಸಂಸ್ಥೆಯ ಆವರಣದಲ್ಲಿ ಏನೆಲ್ಲಾ ಪ್ರಾಣಿಗಳನ್ನು ಸಾಕಿಕೊಂಡಿದ್ದೀರಿ?" ಎಂದು ಮ್ಯಾನೇಜರ್‌ರನ್ನು ಪ್ರಶ್ನಿಸಿದರು.
ಅದಕ್ಕೆ ಮ್ಯಾನೇಜರ್, “ಬುದ್ಧೀ, ಗೋಶಾಲೆಯಲ್ಲಿನ ಹಸು-ಕರುಗಳು ಮಾತ್ರವಲ್ಲದೆ, ಸರಕಾರದ
ಅನುಮತಿ ಪಡೆದು ಒಂದು ಜಿಂಕೆ ಮತ್ತು ಆನೆಯನ್ನೂ ಸಾಕಿದ್ದೇವೆ, ಅಪರೂಪದ ಪ್ರಭೇದದ ವರ್ಣರಂಜಿತ ಪಕ್ಷಿಗಳೂ ಇವೆ. ಮಿಕ್ಕಂತೆ, ಒಂದಷ್ಟು ನಾಯಿಗಳು, ಬೆಕ್ಕುಗಳು ಅಲ್ಲಲ್ಲಿ ಓಡಾಡಿ ಕೊಂಡಿರುತ್ತವೆ.."ಎಂದರು.
ಈ ಮಾತು ಕೇಳುತ್ತಿದ್ದಂತೆ ಅವಧೂತರ ಕಣ್ಣುಗಳು ಬೆಳಗಿ, “ನೋಡಿ ಸ್ವಾಮೀ, ನನ್ನ ಮಾತನ್ನು ಗಮನವಿಟ್ಟು ಕೇಳಿ. ‘ಎಲ್ಲರಲ್ಲೂ ಇರುವುದು ಜೀವಾತ್ಮನೇ... ಪರಮಾತ್ಮನೇ...’ ಎಂಬ ಚಿಂತನೆ ಯೊಂದಿಗೆ ನಿಮ್ಮ ಸಂಸ್ಥೆಯಲ್ಲಿ ಸಾಕಷ್ಟು ಮನುಜರಿಗೆ, ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡಿರುವುದು ಸಂತಸದ ವಿಷಯವೇ. ಆದರೆ, ಇಂಥ ಆಶ್ರಿತರ ಪೈಕಿ ಒಂದು ‘ಕಳ್ಳಬೆಕ್ಕು’ ಸೇರಿಕೊಂಡು ಬಿಟ್ಟಿದ್ದು, ಅದು ಅಲ್ಲಿನ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಅದನ್ನು ಅಲ್ಲಿಂದ ವಿಲೇವಾರಿ ಮಾಡಿ ದಲ್ಲಿ, ನಿಮ್ಮ ಸಮಸ್ಯೆ ಬಗೆಹರಿಯುತ್ತೆ. ಆ ಕೆಲಸವನ್ನು ಮುಗಿಸಿ ಮತ್ತೊಮ್ಮೆ ನನ್ನಲ್ಲಿಗೆ ಬನ್ನಿ, ನೀವಿನ್ನು ಹೊರಡಬಹುದು.." ಎಂದು ಹೇಳಿ ಕೈಮುಗಿದರು. ‘ಮತ್ತಷ್ಟು ಜನರನ್ನು ನಾನು ವಿಚಾರಿಸಿ ಕೊಳ್ಳಲಿಕ್ಕಿದೆ, ನೀವು ಬಂದ ಕಾರ್ಯ ಮುಗಿಯಿತು. ನಾನು ಹೇಳಿದ ಕೆಲಸವನ್ನು ಮಾಡಿ’ ಎಂಬುದು ಅವಧೂತರ ಆ ದೇಹಭಾಷೆಯ ಅರ್ಥ. ಅದನ್ನರಿತ ಮ್ಯಾನೇಜರ್ ಮತ್ತು ಅವರ ತಂಡದವರು ಅವಧೂತರ ಕಾಲಿಗೆರಗಿ ಅಲ್ಲಿಂದ ತೆರಳಿದರು.
ಇದಾಗಿ ಒಂದು ತಿಂಗಳಾಗಿರಬೇಕು, ಮನೆಯಲ್ಲಿ ಅವಧೂತರ ಒಡ್ಡೋಲಗ ಸೇರಿತ್ತು. ಮತ್ತದೇ ಸಮಸ್ಯೆಗಳನ್ನು ಹೊತ್ತು ತಂದಿದ್ದ ಜನಜಂಗುಳಿ. ಒಬ್ಬೊಬ್ಬರ ಸಮಸ್ಯೆಯನ್ನೂ ಆಲಿಸುತ್ತಾ ಪರಿಹಾರ ಹೇಳುತ್ತಾ ಬಂದ ಅವಧೂತರಿಗೆ, ಹಿಂದಿನ ಬಾರಿ ಬಂದಿದ್ದ ಸಂಸ್ಥೆಯ ಮ್ಯಾನೇಜರ್ ದೂರದಲ್ಲಿ ಕೂತಿದ್ದು ಕಾಣಿಸಿತು. ಕಣ್ಸನ್ನೆ ಮಾಡಿ ಹತ್ತಿರ ಬರುವಂತೆ ಕರೆದ ಅವಧೂತರು, “ಏನಾಯ್ತು ಕಳ್ಳಬೆಕ್ಕಿನ ಕಥೆ?" ಎಂದರು.
ಅದಕ್ಕೆ ಮ್ಯಾನೇಜರ್, “ಬುದ್ಧೀ, ಸಂಸ್ಥೆಯ ವಾತಾವರಣವನ್ನು ಆಹ್ಲಾದಕರವಾಗಿಸಲು ಆವರಣದ ಶುದ್ಧೀಕರಣವನ್ನೂ ಕೈಗೊಂಡೆವು, ಆಶ್ರಿತ ಪ್ರಾಣಿಗಳನ್ನೆಲ್ಲಾ ಕೂಲಂಕಷವಾಗಿ ಪರಿಶೀಲಿಸಿದೆವು. ಆದರೆ ನೀವಂದಂತೆ, ಆ ಕಳ್ಳಬೆಕ್ಕನ್ನು ಗುರುತಿಸುವುದು ಮಾತ್ರ ನಮ್ಮ ಕೈಲಾಗಲಿಲ್ಲ. ಹೀಗಾಗಿ, ಸಂಸ್ಥೆಯ ಆವರಣದಲ್ಲಿ ನಿರೀಕ್ಷಿತ ಸಕಾರಾತ್ಮಕ ಬದಲಾವಣೆಯಿನ್ನೂ ಕಂಡಿಲ್ಲ. ಅಲ್ಲಿನ ವಾತಾ ವರಣಕ್ಕೆ ರಾವು ಬಡಿದಂತಾಗಿ ಕಳೆಯೇ ಇಲ್ಲವಾಗಿದೆ, ದಯೆ ತೋರಬೇಕು. ಬುದ್ಧೀ, ಜತೆಗೆ ನಿಮ್ಮ ನಿಗೂಢ ಮಾತುಗಳನ್ನು ಅರ್ಥಮಾಡಿಕೊಳ್ಳುವ ತಾಕತ್ತು ನಮಗಿಲ್ಲ. ನಿಜಕ್ಕೂ ಏನಾಗಿದೆ, ಎಲ್ಲಿ ತಪ್ಪಾಗಿದೆ ಎಂಬುದನ್ನು ನೇರವಾಗಿ ಹೇಳಿಬಿಡಿ. ಅದೆಷ್ಟೇ ಘೋರ ವಾಗಿದ್ದರೂ ಒಪ್ಪಿಕೊಂಡು ಸರಿಪಡಿಸಲು ಯತ್ನಿಸುತ್ತೇವೆ" ಎಂದರು.
ಅದಕ್ಕೆ ಅವಧೂತರು ಅರೆಕ್ಷಣ ಕಣ್ಣುಮುಚ್ಚಿ, “ಕೆಲವೊಂದು ಸಂಗತಿಗಳನ್ನು ನೇರವಾಗಿ ಹೇಳಲಾ ಗದು, ಹಾಗೆ ಹೇಳದಂತೆ ಒಂದು ‘ಮುಗ್ಧಜೀವ’ ನಮ್ಮನ್ನು ತಡೆಯುತ್ತಿದೆ. ಒಂದು ಕೆಲಸ ಮಾಡಿ, ಮುಂದಿನ ತಿಂಗಳು ಶಿವರಾತ್ರಿಯ ಜಾಗರಣೆಯನ್ನು ನಿಮ್ಮ ಸಂಸ್ಥೆಯ ಆವರಣದಲ್ಲೇ ಆಚರಿ ಸೋಣ. ನಂತರ ಎಲ್ಲವೂ ಸರಿಯಾಗುತ್ತೆ. ಪ್ರಸಾದ ಸ್ವೀಕರಿಸಿ ನೀವಿನ್ನು ಹೊರಡಿ" ಎಂದು ಆಗ್ರಹಿಸಿ ದರು. ಮ್ಯಾನೇಜರ್ ಹಾಗೇ ನಡೆದುಕೊಂಡರು.
ಶಿವರಾತ್ರಿ ಬಂತು, ಅವಧೂತರು ಆಗಮಿಸುತ್ತಾರೆಂಬ ಕಾರಣಕ್ಕೋ ಏನೋ ಸಂಸ್ಥೆಯ ಆವರಣ ದಲ್ಲಿ ಸಡಗರ ಮನೆಮಾಡಿತ್ತು. ಹೇಳಿದಂತೆಯೇ ಆಗಮಿಸಿದ ಅವಧೂತರು ಕೇಂದ್ರಭಾಗದಲ್ಲೊಂದು ವೇದಿಕೆಯನ್ನು ಸಜ್ಜುಗೊಳಿಸುವಂತೆ, ಅದರ ಮೇಲೊಂದು ಕುರ್ಚಿಯಿರಿಸಿ ಮಠದ ಸ್ವಾಮೀಜಿ ಯನ್ನು ಅಲ್ಲಿ ಕೂರಿಸಿ ಆಶೀರ್ವಚನ ಕೊಡಿಸುವಂತೆ ಸೂಚಿಸಿದರು. ತದನಂತರ, ರಾತ್ರಿಯಿಡೀ ಜಾಗರಣೆಯ ನಿಮಿತ್ತ ಎಲ್ಲರೂ ಶಿವಭಜನೆ ಮಾಡಬೇಕೆಂದೂ ಸೂಚಿಸಿದರು. ಅಂತೆಯೇ ಇವೆಲ್ಲವೂ ನಡೆದವು. ತಡರಾತ್ರಿಯಲ್ಲಿ ವೇದಿಕೆಯೇರಿದ ಅವಧೂತರು, “ನಿಮಗೆ ಇದುವರೆಗೂ ಭಜನೆ ಹೇಳಿ ಕೊಟ್ಟು, ಆಶೀರ್ವಚನ ನೀಡಿದ ಪೂಜ್ಯ ಸ್ವಾಮಿಗಳು ದೈವ ಪ್ರೇರಣೆಯಂತೆ ಸಂಸ್ಕೃತ ಭಾಷೆಯಲ್ಲಿನ ಉನ್ನತ ವ್ಯಾಸಂಗಕ್ಕೆಂದು, ಸನಾತನ ಧರ್ಮದ ಪರಂಪರೆಯ ಹೆಚ್ಚುವರಿ ಅಧ್ಯಯನಕ್ಕೆಂದು ಹಾಗೂ ಮಠ, ವಿದ್ಯಾರ್ಥಿನಿಲಯ, ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ದೇವರನ್ನು ಪ್ರಾರ್ಥಿಸಲು ವಿದ್ಯಾನಗರಿ ವಾರಾಣಸಿಗೆ ತೆರಳಬೇಕಿದೆ, ನಾಳೆ ಬೆಳಗ್ಗೆಯೇ ಅವರು ಹೊರಡಬೇಕಿದೆ. ಮುಂದಿನ ವರ್ಷ ಅವರು ಬರುವುದರೊಳಗಾಗಿ, ನೀವೆಲ್ಲರೂ ಸೇರಿಕೊಂಡು ನಿಮ್ಮೆಲ್ಲರನ್ನೂ ಪೊರೆಯುತ್ತಿರುವ ಈ ಸಮಾಜ ಸೇವಾ ಸಂಸ್ಥೆಗೆ ಒಳ್ಳೆಯದಾಗಲಿ ಎಂದು ಮನದಲ್ಲೇ ಸಂಕಲ್ಪಿಸಿ ದಿನವೂ ಅರ್ಧಗಂಟೆ ಧ್ಯಾನ ಮಾಡಬೇಕು. ಅದರ ಸಕಾರಾತ್ಮಕ ಸ್ಪಂದನಗಳಿಂದಾಗಿ ಸಂಸ್ಥೆಗೆ ಒಳ್ಳೆಯದಾಗುತ್ತದೆ" ಎಂದು ಹೇಳಿದರು. ಅಷ್ಟೊತ್ತಿಗೆ ಜಾಗರಣೆ ಕಳೆದು ಮುಂಜಾನೆಯಾಯಿತು. ಅವಧೂತರ ಪೂರ್ವಭಾವಿ ಸೂಚನೆಯಂತೆ ಸಜ್ಜಾಗಿದ್ದ ಸ್ವಾಮೀಜಿ, ವಾರಾಣಸಿಗೆ ಹೊರಡಲು ಅನುವಾದರು. ಅವರನ್ನು ಬೀಳ್ಕೊಟ್ಟ ಅವಧೂತರು, ಸಂಸ್ಥೆಯ ಮ್ಯಾನೇಜರ್ ಕಡೆಗೆ ತಿರುಗಿ, “ಅಖಂಡ ಶಿವಭಜನೆಯಾಗಿದೆ, ಸಂಸ್ಥೆಯ ಆವರಣವು ನೀವಂದುಕೊಂಡಂತೆ ಸಕಾರಾತ್ಮಕವಾಗಿ ಬದಲಾಗಲಿದೆ, ಚಿಂತಿಸದಿರಿ" ಎಂದು ಅಭಯವಿತ್ತು ಸಂಸ್ಥೆಯ ಹೊರದ್ವಾರದ ಕಡೆಗೆ ಹೆಜ್ಜೆ ಹಾಕಿದರು. ಆ ವೇಳೆ ವಿದ್ಯಾರ್ಥಿ ನಿಲಯದ ಪಕ್ಕದಲ್ಲೇ ಅವರು ಸಾಗಬೇಕಿತ್ತು. ಹಾಗೆ ಸಾಗುವಾಗ, ಅದರ ಒಂದು ಕೋಣೆಯ ಕಿಟಕಿಯ ಬಾಗಿಲು ‘ಕಿರ್’ ಎಂದು ಸದ್ದು ಮಾಡಿದಾಗ ಅವಧೂತರು ಅಪ್ರಯತ್ನವಾಗಿ ಅದೆರೆಡೆಗೆ ತಿರುಗಿನೋಡಿದರು, ಅಷ್ಟೇ! ಕಿಟಕಿಯೊಳಗಿಂದಲೇ ಪುಟ್ಟ ಕೈಗಳೆರಡು ಅವಧೂತರಿಗೆ ನಮಸ್ಕರಿಸಿ ದವು. ಹಾಗೆ ನಮಸ್ಕರಿಸಿದ ಆ ಕೈಗಳಿಗೆ ನಿಂತಲ್ಲಿಂದಲೇ ಎರಡೂ ಕೈಗಳಲ್ಲಿ ಆಶೀರ್ವಾದದ ಭಂಗಿ ಯನ್ನು ತೋರಿಸಿ ಹರಸಿ ಅಭಯವನ್ನಿತ್ತ ಅವಧೂತರು, ಒಮ್ಮೆ ನಸುನಕ್ಕು ಶಿಷ್ಯಗಣದೊಡನೆ ಕಾರನ್ನೇರಿದರು...
ವಿದ್ಯಾರ್ಥಿ ನಿಲಯದ ಕಿಟಕಿಯೊಳಗಿಂದಲೇ ಅವಧೂತರಿಗೆ ಹಾಗೆ ನಮಸ್ಕರಿಸಿದ್ದು 14 ರ ಹರೆಯದ ಒಬ್ಬ ಹೆಣ್ಣು ಮಗಳು...!!
***
ಕಾರಿನೊಳಗೆ ದಿವ್ಯಮೌನ. ಕಾರಣ, ಅವಧೂತರ ನಡೆಯು ಅವರ ಶಿಷ್ಯಗಣಕ್ಕೆ ಅಯೋಮಯವಾಗಿ ಕಂಡಿತ್ತು. ಶಿಷ್ಯರಲ್ಲೊಬ್ಬರು ಧೈರ್ಯಮಾಡಿ, “ಗುರುಗಳೇ, ನಿಮ್ಮ ಮಾತಷ್ಟೇ ಒಗಟು ಅಂದು ಕೊಂಡಿದ್ವಿ, ನಿಮ್ಮ ನಡೆಯೂ ಕೆಲವೊಮ್ಮೆ ಒಗಟೇ. ಸಂಸ್ಥೆಯ ಮ್ಯಾನೇಜರ್ ಮೊದಲ ಸಲ ಬಂದಾಗಲೇ, ‘ಶಿವರಾತ್ರಿಯಂದು ಅಖಂಡ ಭಜನೆ ಮಾಡಿಸಿ’ ಅಂತ ನೀವು ಹೇಳಬಹುದಿತ್ತಲ್ವಾ? ಆದರೆ ಬದಲಿಗೆ, ‘ಮಠದೊಳಗಿನ ಕಳ್ಳಬೆಕ್ಕನ್ನು ಹುಡುಕಿ’ ಅಂತ ಗೂಢಮಾತಲ್ಲಿ ಹೇಳಿದರೆ ಆ ಮ್ಯಾನೇಜರ್‌ಗಾದ್ರೂ ಹೇಗೆ ಅರ್ಥವಾಗ ಬೇಕು? ‘ಚಂಚಲ ಮನಸ್ಸು’ ಎಂಬ ಕಳ್ಳಬೆಕ್ಕನ್ನು ಸಂಸ್ಥೆ ಯಿಂದ ಓಡಿಸಿ, ದೈವಸ್ಮರಣೆಗೆ ಓಗೊಡುವ ‘ಸ್ಥಾಯಿ ಮನಸ್ಸನ್ನು’ ಗಟ್ಟಿಯಾಗಿ ಅಪ್ಪಿದರೆ ಸಂಸ್ಥೆಯ ವಾತಾವರಣ ಶುದ್ಧಿಯಾಗುತ್ತೆ ಎಂದು ನೇರವಾಗಿ ಅವತ್ತೇ ಹೇಳಿದ್ದಿದ್ದರೆ ಆ ಮ್ಯಾನೇಜರ್ ಹಾಗೇ ಮಾಡ್ತಿದ್ದರೋ ಏನೋ? ಒಗಟನ್ನು ಇನ್ನಾದ್ರೂ ಬಿಡಿಸಿ ಗುರುಗಳೇ.." ಎಂದು ಕೈಮುಗಿದರು.
ಈ ಮಾತಿಗೆ ಅವಧೂತರು ಇನ್ನೇನು ಉತ್ತರಿಸಬೇಕು ಎನ್ನುವಷ್ಟರಲ್ಲಿ, ಕಾರಿನ ಬಳಿ ಬಂದ ಜೀವ ವೊಂದು ಕಿಟಕಿಯ ಪಕ್ಕದಲ್ಲಿ ಕೂತಿದ್ದ ಅವಧೂತರಿಗೆ ನಮಸ್ಕರಿಸಿತು. ಅದು ಮತ್ತಾರೂ ಅಲ್ಲ, ಕೆಲ ಕ್ಷಣದ ಮುಂಚೆ ವಿದ್ಯಾರ್ಥಿ ನಿಲಯದ ಕೋಣೆಯೊಂದರ ಕಿಟಕಿಯೊಳಗಿಂದಲೇ ನಮಸ್ಕರಿಸಿದ್ದ ಹುಡುಗಿ. ಆಕೆಯ ಕಂಗಳಲ್ಲಿ ಆನಂದಬಾಷ್ಪ ತುಂಬಿತ್ತು... ಮುಖದಲ್ಲಿ ಧನ್ಯತಾ ಭಾವ ಕಳೆಗಟ್ಟಿತ್ತು. ಅವಧೂತರ ದರ್ಶನವಾಗಿದ್ದು ಅದಕ್ಕೆ ಕಾರಣವಾ? ಧರ್ಮಸಂಸ್ಥೆಯ ಆವರಣದಲ್ಲಿ ಮಡುಗಟ್ಟಿದ್ದ ನಕಾರಾತ್ಮಕ ಶಕ್ತಿಯನ್ನು ಕಿತ್ತೊಗೆಯುವ ಮಾರ್ಗವನ್ನು ಅವಧೂತರು ತೋರಿದ್ದೇ ಅದಕ್ಕೆ ಕಾರಣವಾ?...
(ಮುಂದುವರಿಯುವುದು)