ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಓಶೋ ಹೇಳಿದ ದಾರಿ ತಪ್ಪಿದವರ ಕಥೆ

ಎಲ್ಲರಿಗೂ ಇರುವುದು ಒಂದೇ ಬದುಕು. ಈ ಬದುಕಿನಲ್ಲಿ ನಮ್ಮ ನಿಲುವುಗಳಿಗೆ, ಕನಸುಗಳಿಗೆ ಪೂರಕ ವಾಗಿರುವ ಸ್ನೇಹಗಳು ದೊರೆತಾಗ ನಾವು ಮತ್ತಷ್ಟು ಉತ್ಸಾಹದಿಂದ ಮುನ್ನಡೆಯುತ್ತೇವೆ. ಅದೇ ಸ್ನೇಹ ಪ್ರತಿಯೊಂದು ವಿಚಾರಕ್ಕೂ ಕಾಲಿಗೆ ಬೇಲಿಯಾದಾಗ ನಾವು ನಮ್ಮ ಗಮನ ಪೂರ್ತಿ ಅದನ್ನು ಸರಿ ಮಾಡುವಲ್ಲಿ ನೀಡಬೇಕಾಗುತ್ತದೆ. ತಪ್ಪಿಲ್ಲ ಆದರೆ ಜೀವನದಲ್ಲಿ ನಮಗೆ ಯಾವುದು ಮುಖ್ಯ ಎಂದು ಒಮ್ಮೆ ನಿಂತು ಯೋಚಿಸಬೇಕು.

ಓಶೋ ಹೇಳಿದ ದಾರಿ ತಪ್ಪಿದವರ ಕಥೆ

ಒಂದೊಳ್ಳೆ ಮಾತು

rgururaj628@gmail.com

ಒಮ್ಮೆ ಒಬ್ಬ ಬೇಟೆಗಾರ ಕಾಡಿನಲ್ಲಿ ದಾರಿ ತಪ್ಪಿಸಿಕೊಂಡ. ಮೂರು ದಿನ ಕಾಡೆಲ್ಲ ಸುತ್ತಾಡಿದ ಆದರೆ ಅವನಿಗೆ ದಾರಿ ತೋರಿಸುವವರು ಯಾರೂ ಕಾಣಲಿಲ್ಲ. ಅವನ ಆತಂಕ ಹೆಚ್ಚಾಗುತ್ತ ಹೋಯಿತು. ಮೂರು ದಿನ ಆಹಾರವಿಲ್ಲದೇ, ನಿರಂತರವಾಗಿ ಕಾಡು ಪ್ರಾಣಿಗಳ ಭಯದಲ್ಲಿ ಬೇಟೆಗಾರ ನಿತ್ರಾಣ ನಾದ. ಯಾವಾಗ ಕಾಡು ಮೃಗಗಳು ಆಕ್ರಮಣ ಮಾಡುತ್ತವೋ ಎನ್ನುವ ಭಯದಲ್ಲಿ ಮರದ ಮೇಲೆ ನಿದ್ದೆಯಿಲ್ಲದೇ ಆ ಮನುಷ್ಯ ಕಾಲ ಕಳೆದ.

ಕಾಡಿನಲ್ಲಿ ಹಾವು, ಸಿಂಹ, ಚಿರತೆಗಳು ಓಡಾಡುವುದನ್ನ ಗಾಬರಿಯಿಂದ ಗಮನಿಸುತ್ತ ಭಯಭೀತ ನಾಗಿ ತನಗೆ ದಾರಿ ತೋರುವವರ ನಿರೀಕ್ಷೆಯಲ್ಲಿ ಬೇಟೆಗಾರ ಕಾಲ ಕಳೆಯುತ್ತಿದ್ದ.

ನಾಲ್ಕನೇಯ ದಿನ ಮುಂಜಾನೆ, ಅವನಿಗೆ ಎಚ್ಚರವಾದಾಗ ಮರದ ಕೆಳಗೆ ಒಬ್ಬ ಮನುಷ್ಯ ಕುಳಿತಿದ್ದು ಅವನಿಗೆ ಕಾಣಿಸಿತು. ಸರಸರನೇ ಬೇಟೆಗಾರ ಮರ ಇಳಿದವನೇ ಓಡಿ ಹೋಗಿ ಆ ಮನುಷ್ಯನನ್ನು ಅಪ್ಪಿಕೊಂಡ. ಅವನ ಕಣ್ಣುಗಳಲ್ಲಿ ಧಾರಾಕಾರವಾಗಿ ಆನಂಧ ಭಾಷ್ಪ ತುಂಬಿ ಹರಿಯುತ್ತಿತ್ತು. “ಎಂಥ ಖುಶಿ ಇದು’ ಬೇಟೆಗಾರ ಹೃದಯತುಂಬಿ ಉದ್ಗರಿಸಿದ. ಬೇಟೆಗಾರನನ್ನು ನೋಡಿ ಆ ಇನ್ನೊಬ್ಬ ಮನುಷ್ಯನಿಗೂ ತುಂಬ ಖುಶಿಯಾಯಿತು.

ಇದನ್ನೂ ಓದಿ: Roopa Gururaj Column: ಬೇಟೆಗಾರನ ಅಚಲ ವಿಶ್ವಾಸಕ್ಕೆ ಒಲಿದ ಶ್ರೀ ಕೃಷ್ಣ

ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಭಾವುಕರಾದರು. “ಯಾಕೆ ಇಷ್ಟು ಖುಶಿ ನಿನ್ನ ಕಣ್ಣಲ್ಲಿ?’ ಆ ಇನ್ನೊಬ್ಬ ಮನುಷ್ಯ ಬೇಟೆಗಾರನನ್ನು ಕೇಳಿದ. “ಮೂರು ದಿನಗಳ ಹಿಂದೆ, ನಾನು ಈ ದುರ್ಗಮ ಕಾಡಿನಲ್ಲಿ ದಾರಿ ತಪ್ಪಿಸಿಕೊಂಡಿದ್ದೆ , ಯಾರಾದರೂ ನನಗೆ ದಾರಿ ತೋರಿಸುವವರು ಸಿಗುತ್ತಾರಾ ಎಂದು ಕಾಡಿನಲ್ಲೆಲ್ಲ ಸುತ್ತಾಡಿದೆ, ಈಗ ನಿನ್ನನ್ನು ಇಲ್ಲಿ ಕಂಡು ನನಗೆ ಬಹಳ ಖುಶಿಯಾಗಿದೆ. ’

ಬೇಟೆಗಾರ ಆ ಮನುಷ್ಯನಿಗೆ ತನ್ನ ಖುಶಿಯ ಕಾರಣ ತಿಳಿಸಿದ. “ಓಹ್ ! ನಾನು ಕೂಡ ಹಾದಿ ತಪ್ಪಿಸಿ ಕೊಂಡವನೇ, ನಾನೂ ಒಂಟಿಯಾಗಿ ಈ ಕಾಡಿನಲ್ಲಿ ನನಗೆ ದಾರಿ ತೋರಿಸುವವರನ್ನು ಹುಡುಕುತ್ತ ಅಲೆಯುತ್ತಿದ್ದೇನೆ. ನಿನ್ನ ಇಲ್ಲಿ ನೋಡಿದಾಗ, ನೀನು ನನಗೆ ದಾರಿ ತೋರಿಸಬಹುದೆಂದು ಖುಶಿ ಯಾಯಿತು. ಆದರೆ ನಮ್ಮಿಬ್ಬರ ಖುಶಿ ಎಂಥ ಮೂರ್ಖತನದ್ದು. ನಾವಿಬ್ಬರೂ ದಾರಿ ಹುಡುಕು ತ್ತಿರುವ ಒಂಟಿ ಮನುಷ್ಯರೇ. ಈಗ ನಾವಿಬ್ಬರೂ ಈ ಕಾಡಿನಲ್ಲಿ ಕಳೆದುಕೊಂಡವರು’ ಆ ಮನುಷ್ಯ ನಿರಾಶೆಯ ಮಾತುಗಳನ್ನಾಡಿದ.

ಒಮ್ಮೆ ಯೋಚಿಸಿ ನೋಡಿ , ಈ ರೀತಿಯ ಸಂದರ್ಭಗಳು ನಮಗೆ ಜೀವನದಲ್ಲೂ ಎದುರಾಗುತ್ತವೆ. ನಾವು ಯಾವುದೋ ಒಂದು ರೀತಿಯಲ್ಲಿ ನಿರೀಕ್ಷೆಯಲ್ಲಿ ಮತ್ತೊಬ್ಬರ ಸ್ನೇಹ ಮಾಡುತ್ತೇವೆ. ಕೆಲವೊಮ್ಮೆ ಅಲ್ಲಿ ಅನಾಯಾಸವಾಗಿ ಮನಸುಗಳು ಅರಳಿ ಆ ಸ್ನೇಹ ಮುಂದುವರಿಯುತ್ತದೆ. ಕೆಲವೊಮ್ಮೆ ನಮ್ಮ ಇಷ್ಟಗಳು, ಅಪೇಕ್ಷೆಗಳು, ನಿರೀಕ್ಷೆಗಳು ಎಲ್ಲವೂ ತದ್ವಿರುದ್ಧವಾಗಿ ನಮ್ಮ ಬದುಕಿನ ನಿಲುವುಗಳು ಸಹ ಪೂರಕವಾಗಿರದೆ ಕಸಿವಿಸಿ ಆರಂಭವಾಗುತ್ತದೆ.

ಕೆಲವರಿಗೆ ಇದು ಬಹುಬೇಗ ಅರ್ಥವಾಗುತ್ತದೆ. ಮತ್ತೆ ಕೆಲವರು ಅರ್ಥವಾದರೂ ಸಹ ಏನಾದರೂ ಹೊಂದಾಣಿಕೆ ಮಾಡಿಕೊಳ್ಳಬಹುದೇ ಎಂದು ಆ ಸ್ನೇಹಕ್ಕೆ ಬಹಳಷ್ಟು ಸಮಯ ಕೊಡುತ್ತಾರೆ. ಇಬ್ಬರು ಒಂಟಿತನವನ್ನು ಅನುಭವಿಸುತ್ತಿರುವವರು ಸಹಮತವಿಲ್ಲದ ವಿಚಾರಗಳೊಡನೆ ಬಹಳ ಕಾಲ ಸ್ನೇಹವನ್ನು ಮುಂದುವರೆಸಲು ಸಾಧ್ಯವಿಲ್ಲ. ಇಲ್ಲಿ ಒಂದಲ್ಲ ಒಂದು ವಿಷಯಕ್ಕೆ ಅಸಮಾ ಧಾನ ಇಣುಕುತ್ತಲೇ ಇರುತ್ತದೆ. ನೀವು ಎಷ್ಟೇ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿದರು ಸಹ ಎಲ್ಲೋ ಏನೋ ತಾಳ ತಪ್ಪುತ್ತಲೇ ಇರುತ್ತದೆ.

ಎಲ್ಲರಿಗೂ ಇರುವುದು ಒಂದೇ ಬದುಕು. ಈ ಬದುಕಿನಲ್ಲಿ ನಮ್ಮ ನಿಲುವುಗಳಿಗೆ, ಕನಸುಗಳಿಗೆ ಪೂರಕ ವಾಗಿರುವ ಸ್ನೇಹಗಳು ದೊರೆತಾಗ ನಾವು ಮತ್ತಷ್ಟು ಉತ್ಸಾಹದಿಂದ ಮುನ್ನಡೆಯುತ್ತೇವೆ. ಅದೇ ಸ್ನೇಹ ಪ್ರತಿಯೊಂದು ವಿಚಾರಕ್ಕೂ ಕಾಲಿಗೆ ಬೇಲಿಯಾದಾಗ ನಾವು ನಮ್ಮ ಗಮನ ಪೂರ್ತಿ ಅದನ್ನು ಸರಿ ಮಾಡುವಲ್ಲಿ ನೀಡಬೇಕಾಗುತ್ತದೆ. ತಪ್ಪಿಲ್ಲ ಆದರೆ ಜೀವನದಲ್ಲಿ ನಮಗೆ ಯಾವುದು ಮುಖ್ಯ ಎಂದು ಒಮ್ಮೆ ನಿಂತು ಯೋಚಿಸಬೇಕು.

ನಮ್ಮ ಬದುಕಿನ ನಮ್ಮ ನಿಲುವುಗಳ ಗುರಿ ಸಾಧನೆಯೋ? ಅಥವಾ ದಿನದಿಂದ ದಿನಕ್ಕೆ ನಮ್ಮ ಚೈತನ್ಯವನ್ನು ಹೀರುತ್ತಿರುವ ಸ್ನೇಹವೋ? ಉತ್ತರ ಸಿಕ್ಕಿಬಿಡುತ್ತದೆ. ನೆನಪಿರಲಿ ಒಳ್ಳೆ ಸ್ನೇಹ ಸಂಬಂಧ ದಲ್ಲಿ ಮನಸ್ಸು ಹಕ್ಕಿಯ ಹಾಗೆ ಹಾರಾಡುತ್ತದೆ. ಅದಕ್ಕೆ ಬಂಧನದ ಭೀತಿ ಇರುವುದಿಲ್ಲ.