Yagati Raghu Naadig Column: ಅನ್ನ ಬೋಗುಣಿಯ ತಳದಲ್ಲಿತ್ತು ತಣ್ಣನೆಯ ಕ್ರೌರ್ಯ !
“ಕಿರೀಟಿಯನ್ನು ತರಬೇತಿ ಕೇಂದ್ರಕ್ಕೆ ಬಿಡಲೆಂದು ಬರುತ್ತಿದ್ದಾಗ ಆ ತಾಯಿ ‘ಪೃಥೆ’ಯನ್ನು ನೋಡಿದ್ದ ನೆನಪಿತ್ತು, ಹಾಗಾಗಿ ನಮಸ್ಕರಿಸಿದೆ. ನನ್ನ ಕೈಯಲ್ಲಿನ ಟ್ರಂಕನ್ನೂ, ಮುಖದಲ್ಲಿನ ಮಂಕನ್ನೂ ಕಣ್ಣ ಅಳೆದ ಕಾವಲುಗಾರ ರಾಜಣ್ಣ, “ಎಲ್ಲಿಗೆ ಹೊಂಟೆ ಮಗಾ?" ಎಂದ. “ಇನ್ನೆಲ್ಲಿಗೆ ರಾಜಣ್ಣಾ... ಸಾಕು ತಾಯಿಯ ಬಳಿಗೆ" ಎಂದೆ ಗದ್ಗದಿತನಾಗಿ. ಆಗ ನನ್ನನ್ನು ಬಾಚಿ ತಬ್ಬಿದ ರಾಜಣ್ಣ, “ನಿನ್ನ ನೋವು ಅರ್ಥವಾಯ್ತದೆ ಮಗಾ. ಮಾಡೋ ಊಟವ, ಓಡೋ ಓಟವ ಅರ್ಧಕ್ಕೇ ನಿಲ್ಲಿಸ್ತಾರಾ ಮಗಾ? ನೀನು ಬಿಲ್ವಿದ್ಯೆನಾಗೆ ರಾಜ್ಯಕ್ಕೆ ಎಸರು ತರಬೇಕು ಅಂತಲ್ವಾ ದಣಿಗಳು ಆಸೆ ಪಟ್ಟಿದ್ದೂ? ನೀನೂ ಒಂಟೋದ್ರೆ ಅವರ ಆತ್ಮ ಆ ಸ್ವರ್ಗದಾಗೂ ನರಳಾಕಿಲ್ವಾ?" ಎಂದು ಜಿಜ್ಞಾಸೆ ತೋಡಿಕೊಂಡ.


ರಸದೌತಣ
naadigru@gmail.com
ಶ್ರಮಜೀವಿಯ ವೃತ್ತಾಂತವನ್ನು ಕೇಳುತ್ತ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದ ಕಥೆಗಾರನಿಗೆ, ಆತ ಇದ್ದಕ್ಕಿದ್ದಂತೆ ಮೌನವಾಗಿದ್ದು ಅರಿವಾಗಿ ಕಣ್ಣು ತೆರೆದ. ಶ್ರಮಜೀವಿ ಕಥೆಗಾರನನ್ನೇ ನೋಡುತ್ತಿದ್ದ. ಅದಕ್ಕೆ ಕಥೆಗಾರ, “ನಿಮ್ಮ ವೃತ್ತಾಂತವನ್ನು ಒಂದೇ ಓಘದಲ್ಲಿ ಹೇಳಬೇಕು, ಕಮರ್ಷಿಯಲ್ ‘ಬ್ರೇಕ್’ ಕೊಟ್ಟರೆ ನಿಮ್ಮ ಮೂಳೆಯನ್ನೂ ‘ಬ್ರೇಕ್’ ಮಾಡಿಬಿಡ್ತೇನೆ ಅಂದಿದ್ದೆ. ಆದ್ರೂ ‘ಬ್ರೇಕ್’ ಕೊಟ್ಟಿದ್ದೇಕೆ?" ಎಂದ ಹುಸಿಮುನಿಸಿನಲ್ಲಿ.
ಅದಕ್ಕೆ ಶ್ರಮಜೀವಿ, “ಸರ್, ಇಲ್ಲಿಯವರೆಗೂ ಅಂಗಾತನಾಗಿ ಮಲಗಿದ್ರಿ. ಈಗ ಮಕಾಡೆ ಮಲಗಿದ್ರೆ, ಬೆನ್ನಿಗೆ ಮಾಲೀಶ್ ಮಾಡ್ತಾ ಕಥೆ ಮುಂದುವರಿಸುವೆ" ಎಂದ. ಭಾವುಕತೆಯ ನಡುವೆಯೂ ಕಾಯಕ ಮರೆಯದ ಆತನ ವೃತ್ತಿಪರತೆಯನ್ನು ಮೆಚ್ಚಿದ ಕಥೆಗಾರ ಹಾಗೇ ಮಲಗಿದ, ಶ್ರಮಜೀವಿ ವೃತ್ತಾಂತ ವನ್ನು ಮುಂದುವರಿಸಿದ....
“ಕಿರೀಟಿಯನ್ನು ತರಬೇತಿ ಕೇಂದ್ರಕ್ಕೆ ಬಿಡಲೆಂದು ಬರುತ್ತಿದ್ದಾಗ ಆ ತಾಯಿ ‘ಪೃಥೆ’ಯನ್ನು ನೋಡಿದ್ದ ನೆನಪಿತ್ತು, ಹಾಗಾಗಿ ನಮಸ್ಕರಿಸಿದೆ. ನನ್ನ ಕೈಯಲ್ಲಿನ ಟ್ರಂಕನ್ನೂ, ಮುಖದಲ್ಲಿನ ಮಂಕನ್ನೂ ಕಣ್ಣ ಅಳೆದ ಕಾವಲುಗಾರ ರಾಜಣ್ಣ, “ಎಲ್ಲಿಗೆ ಹೊಂಟೆ ಮಗಾ?" ಎಂದ. “ಇನ್ನೆಲ್ಲಿಗೆ ರಾಜಣ್ಣಾ... ಸಾಕುತಾಯಿಯ ಬಳಿಗೆ" ಎಂದೆ ಗದ್ಗದಿತನಾಗಿ. ಆಗ ನನ್ನನ್ನು ಬಾಚಿ ತಬ್ಬಿದ ರಾಜಣ್ಣ, “ನಿನ್ನ ನೋವು ಅರ್ಥವಾಯ್ತದೆ ಮಗಾ. ಮಾಡೋ ಊಟವ, ಓಡೋ ಓಟವ ಅರ್ಧಕ್ಕೇ ನಿಲ್ಲಿಸ್ತಾರಾ ಮಗಾ? ನೀನು ಬಿಲ್ವಿದ್ಯೆನಾಗೆ ರಾಜ್ಯಕ್ಕೆ ಎಸರು ತರಬೇಕು ಅಂತಲ್ವಾ ದಣಿಗಳು ಆಸೆ ಪಟ್ಟಿದ್ದೂ? ನೀನೂ ಒಂಟೋದ್ರೆ ಅವರ ಆತ್ಮ ಆ ಸ್ವರ್ಗದಾಗೂ ನರಳಾಕಿಲ್ವಾ?" ಎಂದು ಜಿಜ್ಞಾಸೆ ತೋಡಿ ಕೊಂಡ. ಆದರೆ ನನ್ನ ಚಿಂತೆ ಬೇರೆಯೇ ಇತ್ತು- ‘ಬಿಲ್ಲು ಹಿಡ್ಕೊಂಡುಬಿಟ್ರೆ ಸಾಕೇ? ಅದಕ್ಕೆ ಶಕ್ತಿ ದಕ್ಕೋದು ಹೇಗೆ? ‘ಅಜ’ ಇರೋವರೆಗೂ ಊಟಕ್ಕೆ ಕೊರತೆಯಿರಲಿಲ್ಲ... ಆದರೀಗ? ಅದನ್ನು ರಾಜಣ್ಣನಲ್ಲಿ ಹೇಳಿಕೊಳ್ಳಲಿಕ್ಕಾಗುವುದೇ?’...
ಇದನ್ನೂ ಓದಿ: Yagati Raghu Naadig Column: ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...
“ಆದರೆ, ನನ್ನ ತೊಳಲಾಟ ಗ್ರಹಿಸಿದ ಪೃಥೆ ಮುಂದೆ ಬಂದು ಡಬ್ಬಿಯಲ್ಲಿ ತಂದಿದ್ದ ಚಿತ್ರಾನ್ನ ಕೊಟ್ಟರು. ಮೊದಲೇ ರಣಹಸಿವು, ಟ್ರಂಕನ್ನು ಕೆಳಗಿಟ್ಟು ಗಬಗಬನೆ ತಿಂದುಬಿಟ್ಟೆ. ನಂತರ ಮಾತಿಗಿಳಿದ ‘ಪೃಥೆ’, ‘ಊಟದ ಬಗ್ಗೆ ಚಿಂತಿಸಬೇಡ. ನಿನಗೆ ದಿನವೂ ನಮ್ಮ ಮನೆಯಿಂದಲೇ ಕಳಿಸುವೆ. ಕ್ರೀಡಾಕೂಟದ ನಂತರ ಸಾಕುತಾಯಿ ಬಳಿಗೆ ಹೋಗುವೆಯಂತೆ’ ಎಂದರು. ನನಗೆ ಒಪ್ಪಲು ಮನಸ್ಸಾಗದೆ ರಾಜಣ್ಣನನ್ನು ನೋಡಿದಾಗ, ‘ಒಪ್ಪಿಕೋ’ ಎಂದ ಕಣ್ಣಲ್ಲೇ. ಆಕೆಗೆ ನಮಸ್ಕರಿಸಿ ಫಾರ್ಮ್‌ಹೌಸಿಗೆ ಮರಳಿದೆ....
“ಬಿಲ್ಲುಗಾರಿಕೆ ಅಭ್ಯಾಸ ಮುಂದುವರಿಯಿತು, ‘ಪೃಥೆ’ ಕಡೆಯಿಂದ ಊಟೋಪಚಾರವೂ ಅಬಾಧಿತ ವಾಗಿತ್ತು. ಕ್ರೀಡಾಕೂಟ ಹತ್ತಿರ ಬಂದೇಬಿಟ್ಟಿತು. ‘ಅಜ’ರಿಲ್ಲದೆ ಅನಾಥ ಪ್ರಜ್ಞೆಯಿಂದ ಬಳಲುತ್ತಿದ್ದ ನಾನು ಕ್ರೀಡಾಕೂಟಕ್ಕೆ ತೆರಳುವ ಮುನ್ನ ಸಾಕುತಾಯಿಯ ಆಶೀರ್ವಾದ ಪಡೆಯಲು ಅವಳಿದ್ದ ಮನೆಗೆ ಬಂದೆ. ಆದರೆ ಕಾಯಕದಿಂದ ಅವಳಿನ್ನೂ ಮರಳಿರಲಿಲ್ಲ. ಹೀಗಾಗಿ ಹೊರಜಗುಲಿಯಲ್ಲಿ ಕಾಯುತ್ತಾ ಕೂತೆ. ಕೆಲಕ್ಷಣದ ‘ಭರ್’ ಎಂದು ಧೂಳೆಬ್ಬಿಸಿಕೊಂಡು ಕಾರೊಂದು ಬಂತು. ಅದರ ಮುಂಬಾಗಿಲಿಂದ ಕಾವಲುಗಾರ ರಾಜಣ್ಣ ಇಳಿದ, ಹಿಂಬಾಗಿಲಿನಿಂದ ‘ಪೃಥೆ’! ಇವರು ಇಲ್ಲಿಗೇಕೆ ಬಂದರು? ಎಂಬ ಗೊಂದಲದಲ್ಲಿದ್ದೆ. ಅದನ್ನರಿತ ಪೃಥೆ, ‘ಮರೀ, ನಿನ್ನೊಂದಿಗೆ ಮಾತಾಡಬೇಕ?’ ಎಂದರು. ಗೋಣು ಹಾಕಿದೆ. ಸಂದರ್ಭ ಅರಿತ ರಾಜಣ್ಣ ದೂರಕ್ಕೆ ಹೋಗಿ ನಿಂತ. ಪೃಥೆ ಮಾತು ಮುಂದುವರಿಸಿ, ‘ಮರೀ, ನೀನು ಬಿಲ್ಲು ವಿದ್ಯೆಯಲ್ಲಿ ಚಾಲಾಕಿ ಅಂತ ಕಿರೀಟಿಯಿಂದ ತಿಳಿಯಿತು. ಈ ಬಾರಿಯ ಕ್ರೀಡಾಕೂಟಕ್ಕೆ ನಿನ್ನನ್ನು ಅಥವಾ ಕಿರೀಟಿಯನ್ನು ಆಯ್ಕೆ ಮಾಡ್ತಾ ರಲ್ಲವೇ? ನೀನು ತೆರಳಿದರೆ ರಾಜ್ಯಕ್ಕೆ ಪ್ರಶಸ್ತಿ ತಂದೇ ತರುತ್ತೀಯ ಅಂತ ರಾಜಣ್ಣ ಕೂಡ ಹೇಳಿದ. ಆದರೆ, ಅದಕ್ಕೂ ಮುಂಚೆ ನನ್ನದೊಂದು ಕೋರಿಕೆಯಿದೆ, ನಡೆಸಿಕೊಡ್ತೀಯಾ?’ ಎಂದರು....

“ಅಯ್ಯೋ ಶಿವನೇ, ಸಾವಿನ ಮನೆಯ ರಣಹಸಿವಿನಲ್ಲಿದ್ದ ಈ ಅನಾಥನಿಗೆ ಒಂದು ತಿಂಗಳು ಅನ್ನವಿಟ್ಟ ಅನ್ನಪೂರ್ಣೇಶ್ವರಿ ನೀವು, ಇಷ್ಟೊಂದು ಕೋರಿಕೊಳ್ಳೋದೇ? ಅದೇನು ಕೇಳಿ, ಪ್ರಾಣ ಒತ್ತೆಯಿಟ್ಟಾದ್ರೂ ನಡೆಸಿಕೊಡ್ತೀನಿ ಎಂದುಬಿಟ್ಟೆ. ಅದಕ್ಕೆ ಪೃಥೆ, ‘ನಿನ್ನೆದೆ ಅಕ್ಷಯಪಾತ್ರೆ ಮರೀ, ಅದಕ್ಕೇ ಭಿಕ್ಷೆಗೆ ಬಂದಿರುವೆ. ಗುರಿಗಾರಿಕೆಯಲ್ಲಿ ನಿನಗಿರೋ ಜನ್ಮಜಾತ ಪ್ರತಿಭೆಯ ಮುಂದೆ ತನ್ನ ಪರಿಣತಿ ‘ಪುಸ್ತಕದ ಬದನೇಕಾಯಿ’ ಅಂತ ಕಿರೀಟಿಗೆ ಗೊತ್ತಾಗಿದೆ. ಈ ಕ್ರೀಡಾಕೂಟದಲ್ಲಿ ಮಿಂಚಬೇಕು ಅಂತ ಕನಸುಕಟ್ಟಿದ್ದ ಆತ. ಆಯ್ಕೆಪಟ್ಟಿಯಲ್ಲಿ ನೀನೂ ಇರೋದ್ರಿಂದ ಅಲ್ಲಿಗೆ ನೀನೇ ತೆರಳೋದು ಅಂತ ಖಾತ್ರಿಯಾಗಿ ಅವನೀಗ ಹಾಸಿಗೆಪಾಲು. ಊಟವನ್ನೂ ಮಾಡ್ತಿಲ್ಲ. ಎಷ್ಟೋ ವರ್ಷಗಳ ನಂತರ ದೇವರಿತ್ತ ಪ್ರಸಾದ ಅವನು. ನೀನು ಆಯ್ಕೆಪಟ್ಟಿಯಿಂದ ಹಿಂದೆ ಸರಿದರೆ, ಮುಂದಿನ ಕ್ರಮಾಂಕ ದಲ್ಲಿರೋ ಅವನೇ ಆಯ್ಕೆಯಾಗಿ ಕ್ರೀಡಾಕೂಟಕ್ಕೆ ಹೋಗ್ತಾನೆ. ನನಗೆ ನಿನ್ನ ತ್ಯಾಗಭಿಕ್ಷೆ ನೀಡ್ತೀಯಾ ಮರೀ?’ ಎಂದು ಸೆರಗೊಡ್ಡಿದರು ಪೃಥೆ....
“ಅಯ್ಯೋ ವಿಧಿಯೇ, ನನಗೆ ಅನ್ನವುಣಿಸಿದ್ದ ಕೈ ಈಗ ತನ್ನ ಮಗನಿಗಾಗಿ ಭಿಕ್ಷೆ ಬೇಡುತ್ತಿದೆ... ಮತ್ತೊಂದೆಡೆ ನನಗೆ ಬಿಲ್ಲುಗಾರಿಕೆಯ ಶಾಸವನ್ನು ಧಾರೆಯೆರೆದ ‘ಅಜ’ರ ಆಸೆಯನ್ನು ಈಡೇರಿಸ ಬೇಕೆಂಬ ನನ್ನ ಸಂಕಲ್ಪ... ಏನು ಮಾಡಲಿ ಎಂದು ತೊಳಲಾಡಿ ಕಣ್ಣುಮುಚ್ಚಿ, ಎರಡೂ ಆಯ್ಕೆಯನ್ನು ತಕ್ಕಡಿಗೆ ಹಾಕಿದೆ. ನನ್ನ ಸಂಕಲ್ಪಕ್ಕಿಂತ, ‘ಪೃಥೆ’ ಒಂದು ತಿಂಗಳವರೆಗೆ ಹಾಕಿದ ಅನ್ನದ ತೂಕವೇ ಜಾಸ್ತಿಯಾಗಿ ತೂಗಿತು. ರೆಪ್ಪೆ ತೆರೆದರೆ ಒಳಗೆ ತುಂಬಿರುವ ನೀರು ತುಳುಕೀತು ಅಂತ ಕಣ್ಣು ಮುಚ್ಚಿಕೊಂಡೇ ‘ಹಾಗೇ ಆಗಲಿ ಆಂಟೀ’ ಎಂದುಬಿಟ್ಟೆ... ಪೃಥೆ ಸಂತಸದಿಂದ ‘ನಿಂಗೆ ಒಳ್ಳೇದಾಗ್ಲೀ ಮರೀ’ ಎಂದು ಹರಸಿ ಜೇಬಿಗೆ 100 ರುಪಾಯಿ ತುರುಕಿ ಹೊರಟರು. ಆಕೆ ಇನ್ನೇನು ಕಾರು ಹತ್ತಬೇಕಿತ್ತು, ಕಾಯಕ ಮುಗಿಸಿಕೊಂಡು ನನ್ನ ಸಾಕುತಾಯಿ ಮನೆಗೆ ಬಂದವಳು, ಕಾರಿನೆಡೆಗೆ ಸಾಗುತ್ತಿದ್ದ ಪೃಥೆಯನ್ನೇ ದಿಟ್ಟಿಸುತ್ತಾ, ‘ಪಾಪಿ ಹೆಂಗಸೇ.... ಹಿಂದೆ ಮಾಡಿದ್ದ ಅನ್ಯಾಯ ಸಾಲದು ಅಂತ ಈಗ ಇಲ್ಲೀವರೆಗೂ ಬಂದ್ಯಾ? ನಿಂಗೇನು ಕೆಲಸ ಈ ಜೋಪಡಿಯ ಹತ್ರ?’ ಎಂದು ಅರಚುತ್ತಾ, ಮೀನಿನ ಗಾಳದಿಂದಲೇ ಆಕೆಗೆ ಅಪ್ಪಳಿಸಲು ಹೋದಳು. ಅದು ನಾನು ಅದುವರೆಗೂ ಕಾಣದಿದ್ದ ಸಾಕುತಾಯಿಯ ದುರ್ಗಾವತಾರ! ‘ಅಮ್ಮಾ, ಇದೇನು ಮಾಡ್ತಿದ್ದೀಯಾ?’ ಎನ್ನುತ್ತಾ ಕಾರಿನ ಬಳಿಗೆ ಓಡಿದೆ. ಆಘಾತದಿಂದ ಇನ್ನೂ ಚೇತರಿಸಿಕೊಳ್ಳದಿದ್ದ ಪೃಥೆ, ರಾಜಣ್ಣನೊಂದಿಗೆ ಕಾರು ಹತ್ತಿ ಅಲ್ಲಿಂದ ನಿರ್ಗಮಿಸಿದರು....
“ಸಾಕುತಾಯಿಯನ್ನು ಸಮಾಧಾನಿಸಿ ಮನೆಯೊಳಗೆ ಕರೆತಂದು, ‘ಅವರೆಷ್ಟು ದೊಡ್ಡ ಮನುಷ್ಯರು ಗೊತ್ತಾ? ಅವರಿಗೇ ಹೊಡೆಯಲು ಹೋದ್ಯ, ಅವರೇನು ತಪ್ಪು ಮಾಡಿದ್ರು?’ ಎಂದೆ. ಅದಕ್ಕೆ ಸಾಕು ತಾಯಿ, ‘ಅವಳ ತಪ್ಪು ಗೊತ್ತಾದ್ರೆ ನಿನ್ ಹೊಟ್ಟೆ ಬೆಂಕಿಯಾಗುತ್ತೆ ಮಗಾ... ಇವರೆ ಗಾಳಕ್ಕೆ ಚಿಕ್ಕ ಹುಳು ಸಿಕ್ಕಿಸಿ ದೊಡ್ಡ ಮೀನು ಹಿಡಿಯೋ ನಮ್ಮ ಕಸುಬನ್ನೂ ಮೀರಿಸಿದ ಕಿಲಾಡಿಗಳು...’ ಎಂದು ಬಡಬಡಿಸತೊಡಗಿದಳು. ಅದಕ್ಕೆ ನಾನು, ‘ಅದಿರಲಿ, ಆಕೆ ಅದೇನೋ ತಪ್ಪು ಮಾಡಿದ್ರು ಅಂದ್ಯ ಅದೇನು? ಹೇಳದಿದ್ರೆ ನನ್ನ ಮೇಲಾಣೆ’ ಎಂದುಬಿಟ್ಟೆ. ಆಗ ಸಾಕುತಾಯಿ, ‘ಅಯ್ಯೋ, ಆಣೆಹಾಕಿ ಸಿಕ್ಕಿಸಿಬಿಟ್ಯಲ್ಲೋ ಕಂದಾ... ಈಗ ಬಂದಿದ್ದೋಳು ಮತ್ತಿನ್ನಾರೂ ಅಲ್ಲ, ಮದುವೆಗೆ ಮುಂಚೆಯೇ ಗರ್ಭಧರಿಸಿದ್ದಕ್ಕೆ ಲೋಕನಿಂದೆಗೆ ಹೆದರಿ, ಕರುಳಿನ ಕುಡಿ ಎಂಬ ಮಮಕಾರವೂ ಇಲ್ಲದೆ, ಆಗಷ್ಟೇ ಹುಟ್ಟಿದ ಕೂಸನ್ನು ವರ್ಷಗಳ ಹಿಂದೆ ಉದ್ಯಾನದಲ್ಲಿ ಮಲಗಿಸಿ ಪರಾರಿಯಾಗಿದ್ದ ಪುಣ್ಯಾತ್ಗಿತ್ತಿ, ಅವಳೇ ನಿನ್ನ ಹೆತ್ತತಾಯಿ ಕಣಪ್ಪಾ. ಅವಳು ಹಾಗೆ ಉದ್ಯಾನದಲ್ಲಿ ಮಲಗಿಸಿದ್ದನ್ನು ಮರೆಯಿಂದಲೇ ನೋಡ್ತಿದ್ದ ನಾನು, ಅವಳು ಈಗ ಬರ್ತಾಳೆ ಆಮೇಲೆ ಬರ್ತಾಳೆ ಅಂತ ಕಾದಿದ್ದೇ ಕಾದಿದ್ದು. ಅವಳು ಬರಲೇ ಇಲ್ಲ, ನಂತರ ದೇವರ ಪ್ರಸಾದ ಅಂದ್ಕೊಂಡು ನಿನ್ನನ್ನು ಮನೆಗೆ ಕರೆತಂದೆ’ ಎಂದು ಪೂರ್ವವೃತ್ತಾಂತ ಬಿಚ್ಚಿಟ್ಟಳು....
“ನಾನು ದಿಗ್ಭ್ರಾಂತನಾಗಿದ್ದೆ. ಅಂದ್ರೆ... ಅಂದ್ರೆ... ಕಿರೀಟಿಯ ತಾಯಿಯೇ ನನ್ನ ಹೆತ್ತವ್ವ... ದೇವರೇ ಇದೆಂಥಾ ಆಟ ನಿನ್ನದು! ಹೆತ್ತವ್ವನೇ ಎದುರಿದ್ದರೂ ಬಾಯಿ ತುಂಬಾ ‘ಅಮ್ಮಾ’ ಎನ್ನದೆ ‘ಆಂಟಿ’ ಎಂದು ಕರೆಯುವಂತಾಯಿತ? ಎಂದು ಮರುಗಿದೆ. ನಂತರ ಸಾಕುತಾಯಿ, ‘ಅದ್ಸರಿ ಮಗಾ, ಅವಳು ಇಲ್ಲಿಗೇಕೆ ಬಂದಿದ್ಲು? ನಿನ್ನ ಹತ್ರ ಅವಳಿಗೇನು ಕೆಲಸವಿತ್ತು?’ ಎಂದಿದ್ದಕ್ಕೆ ನಡೆದಿದ್ದನ್ನೆ ವಿವರಿಸಿದೆ. ಆಗ ವ್ಯಂಗ್ಯವಾಗಿ ನಕ್ಕ ಅವಳು, ‘ನಾನು ಈಗಷ್ಟೇ ಹೇಳಲಿಲ್ಲವೇ ಮಗಾ? ಆ ಘನವಂತೆ ಕೊನೆಗೂ ಗಾಳಕ್ಕೆ ಸಣ್ಣಹುಳ ಪೋಣಿಸಿ ನಿನ್ನ ಬೇಟೆಯಾಡೇಬಿಟ್ಟಳು, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲ್ಲ ಅಂತ ನೀನೂ ಮಾತು ಕೊಟ್ಟುಬಿಟ್ಟೆ. ಆಗಿದ್ದಾಯ್ತು ಬಿಡು... ನಿನ್ನ ಧಣಿ ಸತ್ತೋಗಿದ್ದು ಗೊತ್ತಾಯ್ತು, ನಾನಿನ್ನೂ ಗುಂಡುಕಲ್ಲಿನ ಹಾಗಿದ್ದೀನಿ ಮಗಾ, ಹೆದರಬೇಡ’ ಎಂದು ತಲೆ ನೇವರಿಸಿದಳು. ಅದನ್ನು ಕೇಳುತ್ತಿದ್ದಂತೆ, ‘ಅನಾಥನನ್ನು ಮಗನೆಂದು ತಿಳಿಯುತ ಆಡಿಸಿದ ಆ ಯಶೋದೆ’ಯನ್ನು ಬಿಗಿದಪ್ಪಿ ಬಿಟ್ಟೆ... ರಾತ್ರಿಯೂಟಕ್ಕೆ ಒಬ್ಬಟ್ಟು ಮಾಡಿದಳು ಯಶೋದೆ.. ‘ಇದ್ಯಾವ ಸಂಭ್ರಮಕ್ಕೆ?’ ಎಂದು ಕೇಳಿದೆ. ಅದಕ್ಕೆ ಸಾಕುತಾಯಿ, ‘ಇಂದು ನೀನು ನನಗೆ ಉದ್ಯಾನದಲ್ಲಿ ಸಿಕ್ಕಿದ ದಿನ, ನನ್ನ ಪಾಲಿಗೆ ಇಂದೇ ನಿನ್ನ ಹುಟ್ಟುಹಬ್ಬ; ಇವತ್ತು ನೀನು ಮನೇಲಿ ಇದ್ದಿದ್ರೆ ಎಷ್ಟು ಚೆನ್ನಾಗಿತ್ತು ಅಂತ ಕರುಳು ಒಂದೇ ಸಮನೆ ಕೂಗ್ತಾ ಇತ್ತು. ಕೇಳಿಸಿಕೊಂಡ ದೇವರು ನಿನ್ನನ್ನು ಕಳಿಸಿಬಿಟ್ಟ’ ಎಂದಳು. ಹಾಗೆಂದವಳ ಮುಖವನ್ನು ಒಮ್ಮೆ ತೃಪ್ತಿಯಾಗಿ ನೋಡಿಬಿಡೋಣ ಅಂದುಕೊಂಡೆ, ಆಗಲೇ ಇಲ್ಲ, ಕಾರಣ ನನ್ನ ಕಣ್ಣು ಜಲಾಶಯವಾಗಿತ್ತು! ಒಬ್ಬಟ್ಟಿನ ಜತೆಗೆ ಅವಳ ಕೈತುತ್ತನ್ನು ಪುಷ್ಕಳವಾಗಿ ಉಂಡೆ. ‘ಇವತ್ತು ನಿನ್ನನ್ನು ತಬ್ಬಿ ಮಲಕ್ಕೋಬೇಕು ಅನ್ನಿಸ್ತಿದೆ’ ಎಂದೆ, ‘ಅಯ್ಯೋ ಬಾರೋ ನನ್ನ ಕೂಸೇ’ ಎನ್ನುತ್ತಾ ಮಮತೆಯ ಕಡಲಾದಳು, ಅಪ್ಪಿ ಮಲಗಿಸಿಕೊಂಡಳು...
“ಕಣ್ಣಿಗೆ ಸೂರ್ಯಕಿರಣ ಚುಚ್ಚಿದಾಗಲೇ ನನಗೆ ಬೆಳಗಾಗಿದ್ದು ಗೊತ್ತಾಗಿದ್ದು. ಸೂರ್ಯ ಹುಟ್ಟೋಕೆ ಮುಂಚೆಯೇ ಏಳುತ್ತಿದ್ದಾಕೆ ಇನ್ನೂ ಮಲಗಿರೋದು ನೋಡಿ, ‘ಸಾಕಷ್ಟು ದಿನ ನನ್ನನ್ನು ಬಿಟ್ಟಿದ್ದ ಯಶೋದೆಗೆ ನಾನು ಬಂದಿದ್ದು ನಿಧಿಯೇ ಸಿಕ್ಕಂತಾಗಿರಬೇಕು’ ಎಂದುಕೊಂಡೆ. ಎಷ್ಟು ಅಲುಗಾಡಿಸಿ ದರೂ ಆಕೆ ಏಳಲಿಲ್ಲ, ಎದೆಗೆ ಕಿವಿಯಾನಿಸಿದರೆ ಸದ್ದಿಲ್ಲ... ನನ್ನ ಅಪ್ಪುಗೆಯ ಅಮರಳಾಗಿಬಿಟ್ಟಿ ದ್ದಳು! ಕೆಲವೇ ದಿನಗಳ ಅಂತರದಲ್ಲಿ ಎರಡೆರಡು ಸಾವನ್ನು ದಕ್ಕಿಸಿಕೊಳ್ಳುವಷ್ಟು ಶಕ್ತಿಯಾಗಲೀ ಸ್ಥಿತಪ್ರಜ್ಞತೆ ಯಾಗಲೀ ನನಗಿರಲಿಲ್ಲ. ಆದರೂ ಮತ್ತೊಂದು ಅಂತ್ಯಸಂಸ್ಕಾರಕ್ಕೆ ಹೆಗಲಾದೆ. ಮತ್ತೊಂದು ಸಾವಿನ ಮನೆ, ಮತ್ತದೇ ರಣಹಸಿವು. ನನಗೆ ಅನ್ನ, ಅರಿವು, ಅರಿವೆ, ಆಶ್ರಯ ನೀಡಿದ್ದ ‘ಅಜ’ ನನ್ನ ಬಿಟ್ಟುಹೋದರು, ಇತ್ತ ಸಾಕುತಾಯಿಯೂ ಸ್ವರ್ಗ ಸೇರಿದಳು. ನನ್ನ ಹೆತ್ತವ್ವ ಯಾರೆಂದು ಈಗ ಗೊತ್ತಾಗಿದ್ದರೂ, ಆಕೆಯ ಸಾಮಾಜಿಕ ಅಂತಸ್ತಿಗೆ ಒದಗುವ ಧಕ್ಕೆ ಮತ್ತು ಲೋಕಾಪವಾದದ ಭಯದ ಕಾರಣಕ್ಕೆ ನಾನು ಅವರಲ್ಲಿಗೆ ಹೋಗಲಾಗದು. ಇನ್ನು ಯಾವ ಪುರುಷಾರ್ಥಕ್ಕೆ ಬದುಕಿರಬೇಕು ಎಂದುಕೊಂಡು, ರೈಲಿಗೆ ತಲೆಕೊಟ್ಟು ಸಾಯಲು ರೈಲುಹಳಿಯತ್ತ ಸಾಗತೊಡಗಿದೆ....
“ಹಿಂದಿನಿಂದ ಚಪ್ಪಾಳೆ ಸದ್ದು ಕೇಳಿತು. ತಿರುಗಿನೋಡಿದರೆ ಚೌರದ ಅಂಗಡಿ ಚಂದ್ರಣ್ಣ..!
(ಮುಂದುವರಿಯುವುದು)