Kiran Upadhyay Column: ವಿಮಾನಯಾನದಲ್ಲಿ ಘನತೆ ಕಾಯ್ದುಕೊಳ್ಳದಿದ್ದರೆ ಹೇಗೆ ?
ವಿಮಾನಯಾನ ಎಂದರೆ ಅಲ್ಲಿ ಸ್ವಲ್ಪ ಗಂಭೀರವಾಗಿರಬೇಕು, ಘನತೆ ಕಾಯ್ದುಕೊಳ್ಳಬೇಕು, ಇತರರಿಗೆ ತೊಂದರೆಯಾಗದಂತೆ ವರ್ತಿಸಬೇಕು ಎಂಬ ಎಲ್ಲ ಪಾಠಗಳ ನಡುವೆಯೂ ಕೆಲವೊಮ್ಮೆ ವಿಚಿತ್ರ ಘಟನೆ ಗಳು ನಡೆದುಹೋಗುತ್ತವೆ. ಯಾವ ಕಾರಣಕ್ಕೂ ಪ್ರಯಾಣಿಕ ತನ್ನ ಜವಾಬ್ದಾರಿಯನ್ನು ಮರೆಯ ಬಾರದು, ಅಸಭ್ಯವಾಗಿ ವರ್ತಿಸಬಾರದು.


ವಿದೇಶವಾಸಿ
dhyapaa@gmail.com
ಇದು ಸುಮಾರು 27 ವರ್ಷದ ಹಿಂದೆ ನಡೆದ ಘಟನೆ. ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದೆ. ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಇನ್ನೂ ಐದು ಜನ ಅಂದು ನನ್ನ ಜತೆ ಇದ್ದರು. ನಾವೆಲ್ಲ ಸೌದಿ ಅರೇಬಿಯಾದ ದಮಾಮ್ ನಿಂದ ಬಹ್ರೈನ್‌ಗೆ ಬಂದು ಅಲ್ಲಿಂದ ಮುಂಬೈವರೆಗೆ ವಿಮಾನ, ನಂತರ ನಮ್ಮ ನಮ್ಮ ಊರಿಗೆ ಪ್ರಯಾಣ ಮಾಡಬೇಕಿತ್ತು. ಗಲ್ಫ್ ಏರ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದುದರಿಂದ ಬಹ್ರೈನ್‌ಗೆ ಹೋಗುವುದು ಅನಿವಾರ್ಯವಾಗಿತ್ತು. ದಮಾಮ್‌ನಿಂದ ಮುಂಬೈಗೆ ಹೋಗಲು ಸೌದಿಯಾ ಏರ್‌ಲೈ (ಸೌದಿ ಅರೇಬಿಯಾದ ರಾಷ್ಟ್ರೀಯ ವಿಮಾನ ಸಂಸ್ಥೆ) ಇದ್ದರೂ ನಾವು ಗಲ್ಫ್ ಏರ್ ಆರಿಸಿಕೊಂಡಿದ್ದೆವು. ಅದಕ್ಕೆ ಪ್ರಮುಖವಾಗಿ ಎರಡು ಕಾರಣಗಳಿದ್ದವು. ಮೊದಲನೆಯದು, ದಮಾಮ್‌ನಿಂದ ಬಹ್ರೈನ್‌ಗೆ ಕಾರಿನಲ್ಲಿ ಹೋಗಬಹು ದಾಗಿದ್ದು, ಈ ನೆಪದಲ್ಲಿ ಬಹ್ರೈನ್ ದೇಶ ನೋಡಬಹುದು ಎಂದು.
ಎರಡನೆಯದು, ಸೌದಿಯಾ ಏರ್‌ಲೈನ್ಸ್‌ನಲ್ಲಿ ದೊರಕದ ಗುಂಡು (ಮದ್ಯ) ಗಲ್ಫ್ ಏರ್‌ನಲ್ಲಿ ಸಿಗುತ್ತದೆ ಎಂಬುದಾಗಿತ್ತು. ಈ ಏರ್‌ಲೈನ್ ವ್ಯವಹಾರಗಳು ಕೆಲವೊಮ್ಮೆ ನಮ್ಮ ಬಸ್‌ಗಳಂತೆಯೇ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಬಸ್‌ಗಳು ತಮ್ಮ ಊರಿನ ಡಿಪೋದಲ್ಲಿ ಒಮ್ಮೆ ನಿಂತು, ತಪಾಸಣೆಗೊಳಪಟ್ಟು, ಡೀಸೆಲ್ ತುಂಬಿಸಿಕೊಂಡು, ಚಾಲಕರು ಬದಲಾಗುವ ಅವಶ್ಯಕತೆ ಇದ್ದರೆ ಬದಲಾಯಿಸಿಕೊಂಡು ಮುಂದೆ ಹೋಗುತ್ತವಲ್ಲ (ಇತ್ತೀಚೆಗೆ ಕೆಲವು ರಾಜ್ಯಗಳು ಇದಕ್ಕೆ ಹೊರತಾ ದರೂ, ಕೆಲವು ರಾಜ್ಯಗಳಲ್ಲಿ ಈ ಪರಿಪಾಠ ಇಂದಿಗೂ ಮುಂದುವರಿದಿದೆ) ಹಾಗೆ.
ಇದನ್ನೂ ಓದಿ: Kiran Upadhyay Column: ಗಗನದಲ್ಲಿ ಸಖಿ; ಬದುಕಿನಲ್ಲಿ ಅಸುಖಿ
ಮೂಲಸ್ಥಾನದಿಂದ ಹೊರಡುವ ನೇರ ವಿಮಾನ ಬಿಟ್ಟರೆ, ಬೇರೆ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಬೇಕೆಂದರೆ, ಮೂಲಸ್ಥಾನಕ್ಕೆ ಹೋಗಿಯೇ ಮುಂದುವರಿಯಬೇಕು. ಇಂಥ ಸಂದರ್ಭ ದಲ್ಲಿ ಹೆಚ್ಚಿನಂಶ ಬೇರೆ ವಿಮಾನದಲ್ಲಿ ಪ್ರಯಾಣ ಮುಂದುವರಿಸಬೇಕು. ಅಂದು ಬಹ್ರೈನ್‌ನಿಂದ ವಿಮಾನ ಅಕಾಶಕ್ಕೆ ಹಾರಿ ಒಂದು ಗಂಟೆಗಿಂತಲೂ ಸ್ವಲ್ಪ ಹೆಚ್ಚೇ ಆಗಿತ್ತು. ನನಗಿಂತ ಮೂರೋ ನಾಲ್ಕೋ ಸಾಲು ಹಿಂದೆ ಕುಳಿತವನೊಬ್ಬ ಇದ್ದಕ್ಕಿದ್ದಂತೆ ಏರಿದ ಧ್ವನಿಯಲ್ಲಿ ಮಾತನಾಡಲು ಆರಂಭಿಸಿದ.
ನೋಡ ನೋಡುತ್ತಿದ್ದಂತೆ ಆತನ ಧ್ವನಿ ತಾರಕಕ್ಕೆ ಏರಿತ್ತು. ಎಲ್ಲರಿಗೂ ಕೇಳುವಂತೆ ಗಲ್ಫ್ ಏರ್ ಸಂಸ್ಥೆ, ಗಗನಸಖಿಯರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ. ಅದು ಗಗನಸಖಿಯರಿಗಷ್ಟೇಅಲ್ಲ, ಉಳಿದ ಪ್ರಯಾಣಿಕರಿಗೂ ಕಿರಿಕಿರಿಯಾಗತೊಡಗಿತು. ಗಗನಸಖಿಯೊಬ್ಬಳು ನನ್ನ ಬಳಿ ಬಂದಾಗ ಆತನ ಕಿರುಚುವಿಕೆಗೆ ಕಾರಣ ಏನೆಂದು ಕೇಳಿದೆ. ‘ಆತ ಈಗಾಗಲೇ ನಾವು ಉಚಿತವಾಗಿ ಕೊಡುವ ಎರಡು ಪೆಗ್ ಮುಗಿಸಿ, ಮೇಲಿಂದ ಎರಡು ಪೆಗ್ ಹಣಕೊಟ್ಟುಕೊಂಡು, ಒಟ್ಟೂ ನಾಲ್ಕು ಸುತ್ತು ಮುಗಿಸಿzನೆ, ಇನ್ನೂ ಬೇಕೆಂದು ಕೇಳುತ್ತಿದ್ದಾನೆ. ನಾವು ಕೊಡುವುದಿಲ್ಲ ಎಂದಿದ್ದಕ್ಕೆ ಈ ರಂಪಾಟ’ ಎಂದಳು.

ಮನಸ್ಸಿನಲ್ಲಿಯೇ ‘ಇದ್ದಿದ್ದರಲ್ಲಿ ಈತ ವಾಸಿ, ದುಡ್ಡು ಕೊಟ್ಟು ಖರೀದಿಸಿದ್ದಾನೆ, ಬದಿಗೆ ಕುಳಿತವರಲ್ಲಿ ಕೇಳಲಿಲ್ಲ’ ಅಂದುಕೊಂಡೆ (ಏಕೆ ಎಂದು ನಂತರ ಹೇಳುತ್ತೇನೆ). ‘ಹಣ ಕೊಟ್ಟು ಕುಡಿಯುವುದಾದರೆ ಕೊಡಬಹುದಲ್ಲ, ನಿಮಗೇನು ತೊಂದರೆ?’ ಎಂದೆ. ‘ಆತ ತನ್ನ ವಿವರದಲ್ಲಿ ಸಕ್ಕರೆ ಕಾಯಿಲೆ ಇದೆಯೆಂದೂ, ಡಯಾಬೆಟಿಕ್ ತಿನಿಸು ನೀಡಬೇಕೆಂದೂ ಕೇಳಿಕೊಂಡಿದ್ದಾನೆ.
ಅಲ್ಲದೆ, ವಿಮಾನದ ಒಳಗೆ ಬರುವುದಕ್ಕಿಂತ ಮೊದಲೇ ಮದ್ಯಪಾನ ಮಾಡಿ ಬಂದಿದ್ದಾನೆ ಎಂಬ ಅನುಮಾನವಿದೆ. ಏನಾದರೂ ಹೆಚ್ಚು ಕಮ್ಮಿ ಆದರೆ ನಾವು ಜವಾಬುದಾರರಾಗುತ್ತೇವೆ, ಆದ್ದರಿಂದ ಇನ್ನೂ ಹೆಚ್ಚು ನೀಡಲು ಸಾಧ್ಯವಿಲ್ಲ, ಇದನ್ನು ಹೇಳಿದರೆ ಆತ ಕೇಳುತ್ತಿಲ್ಲ, ಏನು ಮಾಡೋಣ?’ ಎಂದು ಮುಂದೆ ನಡೆದಳು. ನನಗೆ ಪರಿಸ್ಥಿತಿ ಅರ್ಥವಾಗಿತ್ತು.
ನನ್ನ ಜತೆಗೆ ಇನ್ನೂ ಐದು ಜನ ಇದ್ದ ಧೈರ್ಯ ಬೇರೆ ಇತ್ತಲ್ಲ, ಎದ್ದು ನಿಂತು ಅವನೆಡೆಗೆ ತಿರುಗಿ, ‘ನಮಗೆಲ್ಲ ಬಹಳ ಕಿರಿಕಿರಿಯಾಗುತ್ತಿದೆ, ಬಾಯಿ ಮುಚ್ಚಿ ಸುಮ್ಮನೆ ಕುಳಿತುಕೊಳ್ಳದಿದ್ದರೆ ನಿನ್ನನ್ನು ವಿಮಾನದಿಂದ ಕೆಳಗೆ ಎಸೆಯುತ್ತೇವೆ’ ಎಂದು ಏರಿದ ದನಿಯಲ್ಲಿಯೇ ಹೇಳಿದೆ. ಮುಂಬೈ ಬರು ವವರೆಗೂ ಆಸಾಮಿ ಗಪ್ಚುಪ್!
ಅದಾಗಿ 3-4 ವರ್ಷವಾಗಿರಬೇಕು, ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನನ್ನ ಪಕ್ಕದಲ್ಲಿ ಒಬ್ಬ ಬಂದು ಕುಳಿತ. ಆಗಲೇ ಮದ್ಯೋನ್ಮತ್ತನಾಗಿದ್ದುದರಿಂದ, ಕುಳಿತವನೇ ನಿದ್ರಿಸಲು ಆರಂಭಿ ಸಿದ. ಅರ್ಧಗಂಟೆಯ ನಂತರ ವಿಮಾನ ಹೊರಡಲು ಸಿದ್ಧವಾಯಿತು. ಆ ಕ್ಷಣಕ್ಕೆ ಸರಿಯಾಗಿ ನನ್ನ ಪಕ್ಕದಲ್ಲಿದ್ದವನಿಗೆ ಎಚ್ಚರವಾಯಿತು. ಆತ ಕಣ್ಣು ಬಿಡುವಾಗ ವಿಮಾನ ನೋಸ್-ಇನ್ ಪಾರ್ಕಿಂಗ್ (ವಿಮಾನ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲುವ ಸ್ಥಳ) ನಿಂದ ರನ್‌ವೇಗೆ ಹೋಗುವುದಕ್ಕಾಗಿ ಹಿಂದೆ ಚಲಿಸಲು (ಪುಶ್‌ಬ್ಯಾಕ್) ಆರಂಭಿಸಿತು.
ಕೂಡಲೇ ನನ್ನ ಪಕ್ಕದಲ್ಲಿದ್ದವ ಎದ್ದು ನಿಂತು ‘ವಿಮಾನ ಹಿಂದಕ್ಕೆ ಹೋಗುತ್ತಿದೆ, ಪೈಲಟ್‌ಗೆ ಹೇಳಿ, ಯಾರಾದರೂ ನಿಲ್ಲಿಸಿ’ ಎಂದು ಕೂಗಾಡಲು ಆರಂಭಿಸಿದ. ಗಗನಸಖಿಯರು ಅವನ ಬಳಿ ಬಂದು ಅವನಿಗೆ ಸಾಂತ್ವನ ಹೇಳಿ ವಿವರಿಸಿದ ನಂತರವೇ ಆತ ಶಾಂತನಾಗಿದ್ದು. ಅದಕ್ಕಿಂತ ಮೊದಲು ಗಾಬರಿಗೊಂಡ ಆತ 5-6 ಸಲ ಕೂಗಿ ಆಗಿತ್ತು.
ಅದರಿಂದಾಗಿ ವಿಮಾನದಲ್ಲಿ ಉಚಿತವಾಗಿ ಸಿಗಬೇಕಾಗಿದ್ದ ಮದ್ಯವನ್ನು ಕಳೆದುಕೊಂಡಿದ್ದ. ಆತನೇನೂ ಬಹಳ ತಲೆಕೆಡಿಸಿಕೊಳ್ಳಲಿಲ್ಲ, ಐದೇ ನಿಮಿಷದಲ್ಲಿ ಪುನಃ ನಿದ್ರೆಗೆ ಜಾರಿದ್ದ. ಅದು ಆತನ ಮೊದಲ ವಿಮಾನ ಪ್ರಯಾಣವಾಗಿತ್ತು ಎಂದು ನಂತರ ತಿಳಿಯಿತು.
ಮೊದಲೆಲ್ಲ ಒಂದು ವರ್ಗದ ಜನ ಸಿಗುತ್ತಿದ್ದರು. ಬಂದು ಕುಳಿತುಕೊಳ್ಳುತ್ತಿದ್ದಂತೆ ಪರಿಚಯ ಮಾಡಿ ಕೊಂಡು, ‘ನೀವು ಕುಡಿಯುತ್ತೀರಾ?’ ಎಂದು ಕೇಳುತ್ತಿದ್ದರು. ಇಲ್ಲ ಎಂದರೆ ಸಾಕು, ‘ನಿಮಗೆ ಉಚಿತ ವಾಗಿ ಸಿಗುವುದನ್ನು ಪಡೆದು ನನಗೆ ಕೊಡಿ’ ಎಂದು ಕೇಳುತ್ತಿದ್ದರು. ಹಾಗೆ ಕೇಳಿದವರಿಗೆಲ್ಲ ನಾನು ಕೊಟ್ಟಿದ್ದೂ ಇದೆ. ಒಂದೆರಡು ಬಾರಿ ಹೆಂಡತಿಯ ಜತೆ ಪ್ರಯಾಣಿಸುವಾಗ ಆಕೆಯ ಪಾಲಿ ನದ್ದನ್ನೂ ಕೇಳಿ ಪಡೆದವರಿದ್ದಾರೆ. ತ್ರಾಸು ಯಾವಾಗ ಎಂದರೆ, ಅವರು ಕಿಟಕಿಯ ಬಳಿ ಕುಳಿತಿದ್ದು, ನಾವು ಪಕ್ಕದಲ್ಲಿದ್ದರೆ. ಅವರು ಮೂತ್ರ ವಿಸರ್ಜನೆಗೆ ಹೋಗುವಾಗಲೆಲ್ಲ ನಾವೂ ಏಳಬೇಕು. ಆ ಕಾರಣಕ್ಕಾದರೂ ‘ವಿಂಡೋ ಸೀಟ್’ ಪಡೆಯುವುದು ಅನಿವಾರ್ಯವಾಗಿತ್ತು!
ನಂತರದ ದಿನಗಳಲ್ಲಿ ನಾನು ಕುಡಿಯುವುದೂ ಇಲ್ಲ, ಕೊಡುವುದೂ ಇಲ್ಲ ಎಂದು ಖಡಾಖಡಿ ಹೇಳುತ್ತಿದ್ದೆ. ಈಗ ಊಟದ ಜತೆಗೇ ಪಾನೀಯವನ್ನೂ ಕೊಡುವುದರಿಂದ, ಮದ್ಯದ ಬದಲಿಗೆ ಟೀ-ಕಾಫಿ ಅಥವಾ ಹಣ್ಣಿನ ರಸವನ್ನು ಆಯ್ದುಕೊಳ್ಳುವ ಅವಕಾಶವೂ ಇರುವುದರಿಂದ ಆ ಪ್ರಮೇಯ ಎದುರಾಗುತ್ತಿಲ್ಲ. ಈ ಹಳೆಯ ವಿಷಯಗಳೆಲ್ಲ ಈಗ ನೆನಪಾಗಿದ್ದಕ್ಕೆ ಕಾರಣ ಏನೆಂದು ಕೇಳಿದರೆ, ಈ ಮೊದಲು ಹೇಳಿದ ಘಟನೆಗಳನ್ನೆಲ್ಲ ಸಹಿಸಿಕೊಳ್ಳಬಹುದು.
ಕೆಲವೊಮ್ಮೆ ಅರಗಿಸಿಕೊಳ್ಳಲಾಗದ ಘಟನೆಗಳು ವಿಮಾನದಲ್ಲಿ ಘಟಿಸುತ್ತವೆ. 2 ವರ್ಷದ ಹಿಂದೆ ಏರ್ ಇಂಡಿಯಾದಲ್ಲಿ ನಡೆದ ಒಂದು ಘಟನೆ ದೇಶದಾದ್ಯಂತ ಸುದ್ದಿ ಮಾಡಿತ್ತು. ಅಮೆರಿಕದ ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ನ್ಯೂಯಾರ್ಕ್‌ನಿಂದ ದೆಹಲಿಗೆ ಪ್ರಯಾಣ ಮಾಡುತ್ತಿದ್ದ, ಅದೂ ಬಿಜಿನೆಸ್ ಕ್ಲಾಸ್ (ವ್ಯಾಪಾರ ದರ್ಜೆ) ನಲ್ಲಿ. ಆದರೆ ಆತ ಮಾಡಿದ ಕೆಲಸ ಮಾತ್ರ ಥರ್ಡ್ ಕ್ಲಾಸ್ ನದ್ದು.
74 ವರ್ಷದ ವೃದ್ಧೆಯ ಮೈಮೇಲೆ ಆತ ಮೂತ್ರ ವಿಸರ್ಜನೆ ಮಾಡಿದ್ದ. ಅಂದಿನ ಮಟ್ಟಿಗೆ ಆತ ‘ಪೀ’-ಮ್ಯಾನ್ ಆಗಿದ್ದ. ಇದನ್ನು ನೀವು ಹಿಂದಿ ಭಾಷೆಯ ಪೀ (ಕುಡಿಯುವುದು) ಎಂದಾದರೂ ತಿಳಿಯಿರಿ ಅಥವಾ ಇಂಗ್ಲಿಷ್ ಭಾಷೆಯ ಪೀ (ಮೂತ್ರ ವಿಸರ್ಜನೆ) ಎಂದಾದರೂ ತಿಳಿಯಿರಿ, ಅದು ನಿಮಗೆ ಬಿಟ್ಟಿದ್ದು.
ಆತ ಮಾಡಿದ ‘ದ್ರವ’ ಕಾರ್ಯದಿಂದ ವೃದ್ಧೆಯ ಬಟ್ಟೆ, ಪಾದರಕ್ಷೆ, ಸಣ್ಣ ಚೀಲ ಎಲ್ಲವೂ ಮೂತ್ರ ಮಯವಾಗಿತ್ತು. ಅಷ್ಟೇ ಅಲ್ಲ, ಇಡೀ ಬಿಜಿನೆಸ್ ಕ್ಲಾಸ್ ಮೂತ್ರದ ವಾಸನೆಯಿಂದ ತುಂಬಿ ಹೋಗಿತ್ತು. ವೃದ್ಧೆ ವಿಮಾನದಲ್ಲಿರುವ ಕರ್ಮಚಾರಿಗಳ ಬಳಿ ಬದಲಿ ಆಸನ ಕೊಡುವಂತೆ ಕೇಳಿ ಕೊಂಡಳು. ಪ್ರಥಮ ದರ್ಜೆಯಲ್ಲಿ (- ಕ್ಲಾಸ್) ಆಸನಗಳು ಖಾಲಿ ಇದ್ದರೂ ಅಲ್ಲಿ ಪೈಲಟ್ ವಿಶ್ರಾಂತಿ ಪಡೆಯುತ್ತಿದ್ದಾನೆ ಎಂಬ ಕಾರಣ ನೀಡಿ, ಆಕೆ ಕುಳಿತಿದ್ದ ಆಸನದ ಮೇಲೆಯೇ ಕಂಬಳಿ ಹಾಸಿ ಆಕೆಯನ್ನು ಕೂರಿಸಲಾಯಿತು.
ಸಾಲದು ಎಂಬಂತೆ, ಸಹ ಪ್ರಯಾಣಿಕರು ಲಿಖಿತ ದೂರು ನೀಡಿದರೂ ಮೂತ್ರ ವಿಸರ್ಜಿಸಿದವನನ್ನು ವಿಚಾರಣೆಗೆ ಒಳಪಡಿಸದೇ ಬಿಟ್ಟು ಕಳುಹಿಸಲಾಯಿತು. ಪ್ರಕರಣ ದೊಡ್ಡದಾಗಿ ದೆಹಲಿ ಪೊಲೀಸರು ಆತನನ್ನು ಹುಡುಕಲು ಆರಂಭಿಸಿ, ನಂತರ ಬೆಂಗಳೂರಿನಲ್ಲಿ ಆತನನ್ನು ಬಂಧಿಸಿದರು. ಆತನನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಆತ ಕೆಲಸ ಮಾಡುತ್ತಿದ್ದ ಸಂಸ್ಥೆ ಹೇಳಿತು.
ಇದಿಷ್ಟು ವಿಷಯ. ಹಾಗಂತ ಈ ರೀತಿಯ ಘಟನೆ ಇದೇ ಮೊದಲಲ್ಲ. ಕೆಲ ವರ್ಷದ ಹಿಂದೆ ಬ್ರಿಟಿಷ್ ಏರ್‌ವೇಸ್‌ನಲ್ಲಿ ವ್ಯಕ್ತಿಯೊಬ್ಬ ವಿಮಾನದ ತುಂಬೆಲ್ಲ ಮಲವಿಸರ್ಜನೆ ಮಾಡಿಕೊಂಡು ಓಡಾಡಿದ್ದ ಎನ್ನುವುದನ್ನೂ ನೆನಪಿಸಿಕೊಳ್ಳಬಹುದು. ಇಂಥ ಕೆಲವು ತೀರಾ ಅತಿರೇಕವಲ್ಲದ ಘಟನೆಗಳನ್ನು ನಾನು ವಿಮಾನ ಪ್ರಯಾಣದಲ್ಲಿ ಕಂಡಿದ್ದೇನೆ. ಕೆಲವು ವಿಮಾನದ ಸಿಬ್ಬಂದಿಗಳೊಂದಿಗೆ ಮಾತನಾಡಿ, ಅವರ ಅನುಭವ ಕೇಳಿದ್ದೇನೆ. ಅವರ ಪ್ರಕಾರ, ಇಂಥ ಘಟನೆಗಳು ಪ್ರತಿನಿತ್ಯ ನಡೆಯುವಂಥವಲ್ಲ. ಎಲ್ಲಾ ಅಪರೂಪಕ್ಕೊಮ್ಮೆ ಈ ರೀತಿಯ ಘಟನೆಗಳು ನಡೆದಾಗ ಅವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನೂ ಅವರಿಗೆ ತಿಳಿಸಿಕೊಡಲಾಗಿರುತ್ತದೆ.
ವಿಮಾನಯಾನ ಎಂದರೆ ಅಲ್ಲಿ ಸ್ವಲ್ಪ ಗಂಭೀರವಾಗಿರಬೇಕು, ಘನತೆ ಕಾಯ್ದುಕೊಳ್ಳಬೇಕು, ಇತರರಿಗೆ ತೊಂದರೆಯಾಗದಂತೆ ವರ್ತಿಸಬೇಕು ಎಂಬ ಎಲ್ಲ ಪಾಠಗಳ ನಡುವೆಯೂ ಕೆಲವೊಮ್ಮೆ ಇಂಥ ಘಟನೆಗಳು ನಡೆದುಹೋಗುತ್ತವೆ. ವಿಮಾನದಲ್ಲಿ ಪ್ರಯಾಣಿಸುವಾಗ ಮದ್ಯಪಾನ ಮಾಡುವುದು ತಪ್ಪೂ ಅಲ್ಲ, ಅಪರಾಧವೂ ಅಲ್ಲ.
ಹಾಗೇನಾದರೂ ಇದ್ದಿದ್ದರೆ ಅದನ್ನು ವಿಮಾನದಲ್ಲಿ ಪೂರೈಸುತ್ತಲೂ ಇರಲಿಲ್ಲ, ಅಥವಾ ಅಂಥವ ರನ್ನು ಒಳಗೆ ಬಿಟ್ಟುಕೊಳ್ಳುತ್ತಲೂ ಇರಲಿಲ್ಲ. ಆದರೆ ಏರ್ ಇಂಡಿಯಾ ವಿ(ಪೀ)ಮಾನದ ಘಟನೆ ಯಲ್ಲಿ ಪೀ-ಮ್ಯಾನ್ ಎಷ್ಟು ತಪ್ಪಿತಸ್ಥನೋ, ಅಷ್ಟೇ ತಪ್ಪು ಕರ್ಮಚಾರಿಗಳದ್ದೂ ಇತ್ತು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಇಂಥ ಘಟನೆಗಳಿಂದ ಸಂಸ್ಥೆಯ ಹೆಸರು ಕುಲಗೆಡುವ ಸಾಧ್ಯತೆಯೂ ಇರುತ್ತದೆ.
ಕೊನೆಯದಾಗಿ, ಯಾವ ಕಾರಣಕ್ಕೂ ಪ್ರಯಾಣಿಕ ತನ್ನ ಜವಾಬ್ದಾರಿಯನ್ನು ಮರೆಯಬಾರದು, ಅಸಭ್ಯವಾಗಿ ವರ್ತಿಸಬಾರದು. ಅದರಲ್ಲೂ ಆಕಾಶದಲ್ಲಿ ಇಂಥ ಘಟನೆ ನಡೆದರೆ ವಿಮಾನಯಾನ ದಲ್ಲಿ ಮಾನ ಹಾನಿಯಾಗುವುದಕ್ಕೆ ಎಷ್ಟು ಹೊತ್ತೂ ಬೇಡ. ಅದು ರಾಷ್ಟ್ರೀಯ, ಕೆಲವೊಮ್ಮೆ ಅಂತಾರಾಷ್ಟ್ರೀಯ ಸುದ್ದಿಯೂ ಆಗುತ್ತದೆ. ಇದು ವಿಮಾನ ಪ್ರಯಾಣಕ್ಕೆ ಮಾತ್ರ ಸೀಮಿತವಲ್ಲ. ಯಾವ ಪ್ರಯಾಣವಾದರೂ ಸರಿ, ಸುರಕ್ಷತೆಯ ಜತೆ ಪ್ರಯಾಣ ಸುಖಕರವೂ ಆಗಿರಬೇಕು. ಪ್ರಯಾಣ ದಲ್ಲಿ ನಮ್ಮ ಸುರಕ್ಷತೆ ವಾಹನ ನಡೆಸುವವನ ಕೈಯಲ್ಲಿದ್ದರೆ, ನಮ್ಮ ಸುಖ ಸಹಪ್ರಯಾಣಿಕರನ್ನು ಅವಲಂಬಿಸಿರುತ್ತದೆ.