Brat Movie: ಡಾರ್ಲಿಂಗ್ ಕೃಷ್ಣ ನಟನೆಯ ಬ್ರ್ಯಾಟ್ ಚಿತ್ರದ ʼಗಂಗಿ ಗಂಗಿʼ ಹಾಡು ರಿಲೀಸ್
Gangi Gangi song: ನಟ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಹಾಗೂ ಮಂಜುನಾಥ್ ಕಂದಕೂರ್ ನಿರ್ಮಾಣದ ʼಬ್ರ್ಯಾಟ್ʼ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದೆ.

-

ಬೆಂಗಳೂರು: ಖ್ಯಾತ ನಿರ್ದೇಶಕ ಶಶಾಂಕ್ ನಿರ್ದೇಶನದ, ಜನಪ್ರಿಯ ನಟ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಹಾಗೂ ಮಂಜುನಾಥ್ ಕಂದಕೂರ್ ನಿರ್ಮಾಣದ ʼಬ್ರ್ಯಾಟ್ʼ (Brat Movie) ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದೆ. ಪ್ರಸ್ತುತ ಈ ಚಿತ್ರದ ಮತ್ತೊಂದು ಮನಮೋಹಕ ಹಾಡು ʼಗಂಗಿ ಗಂಗಿʼ ಇತ್ತೀಚೆಗೆ ಮಂತ್ರಿ ಮಾಲ್ ನಲ್ಲಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಹಾಗೂ ಚಿತ್ರತಂಡದ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಉತ್ತರ ಕರ್ನಾಟಕದ ಪ್ರತಿಭೆ ಬಾಳು ಬೆಳಗುಂದಿ ಹಾಗೂ ಇಂದು ನಾಗರಾಜ್ ಹಾಡಿರುವ ಈ ಹಾಡನ್ನು ಬಾಳು ಬೆಳಗುಂದಿ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಅನೈರಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಾಳು ಬೆಳಗುಂದಿ ಅವರ ಗಾಯನಕ್ಕೆ ಹಾಗೂ ಸಾಹಿತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಗಾಯಕ ಹಾಗೂ ಗೀತರಚನೆಕಾರ ಬಾಳು ಬೆಳಗುಂದಿ ಮಾತನಾಡಿ, ಕುರಿಗಾಹಿಯಾಗಿದ್ದ ನಾನು, ಅನೇಕ ಜನಪದ ಗೀತೆಗಳನ್ನು ರಚಿಸಿ ಹಾಡುತ್ತಿದ್ದೆ. ಆನಂತರ ʼಸರಿಗಮಪʼ ಸ್ಪರ್ಧಿಯಾದೆ. ಆ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಅವರು ನಿನ್ನಿಂದ ನನ್ನ ಸಿನಿಮಾವೊಂದರಲ್ಲಿ ಹಾಡಿಸುತ್ತೇನೆ ಅಂತ ಹೇಳಿದ್ದರು. ಈ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. ಅವರಿಗೆ, ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು.
ಉಟ್ಟದಿ ನೀನು ತೆಳ್ಳನೆ ಲಂಗ ನೋಡಿರೆ ಸಾಕು ಬೆನ್ಹತ್ತಂಗ #ಗಂಗಿ..
— aanandaaudio (@aanandaaudio) September 13, 2025
TURN UP THE VOLUME!!! THE PARTY NOW BEGINS WITH SIZZLING #GANGI
Instagram Reels Link https://t.co/y7hKUiZynH
YT Link: https://t.co/bhpxIjzJS6#GangiGangi (Kannada | Hindi | Malayalam) #RangiRangi (Telugu) #SingeeSingee… pic.twitter.com/xxfRj6y7Ni
ನಿರ್ದೇಶಕ ಶಶಾಂಕ್ ಮಾತನಾಡಿ, ʼಬ್ರ್ಯಾಟ್ʼ ಎಂದರೆ ತರ್ಲೆ ಹುಡುಗ ಹಾಗೂ ದಾರಿ ತಪ್ಪಿದ ಮಗ ಎನ್ನಬಹುದು. ನಮ್ಮ ಚಿತ್ರ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದರು, ಅಪ್ಪ - ಮಗನ ಸ್ಟೋರಿಯೂ ಹೌದು. ಒಟ್ಟಿನಲ್ಲಿ ಇಡೀ ಚಿತ್ರದಲ್ಲಿ ನೋಡುಗರಿಗೆ ಬೇಸರವಾಗದ ಹಾಗೆ ಭರಪೂರ ಮನೋರಂಜನೆಯಿದೆ ಎಂದು ಹೇಳಬಹುದು. ಇನ್ನು ಸಿದ್ ಶ್ರೀರಾಮ್ ಹಾಡಿರುವ ʼನಾನೇ ನೀನಂತೆʼ ಹಾಡಂತೂ ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿ ಜನಪ್ರಿಯವಾಗಿದೆ. ಈಗ ʼಗಂಗಿ ಗಂಗಿʼ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಬಾಳು ಬೆಳಗುಂದಿ ಹಾಗೂ ಇಂದು ನಾಗರಾಜ್ ಅದ್ಭುತವಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಕೂಡ ಅಷ್ಟೇ ಚೆನ್ನಾಗಿದೆ. ನನ್ನ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್ ನಲ್ಲಿ ಬಂದಿದ್ದ ʼಕೌಸಲ್ಯ ಸುಪ್ರಜಾ ರಾಮʼ ಎಲ್ಲರ ಮನ ಗೆದ್ದಿತ್ತು. ʼಬ್ರ್ಯಾಟ್ʼ ಚಿತ್ರ ಕೂಡ ನವೆಂಬರ್ 14 ರಂದು ಬಿಡುಗಡೆಯಾಗುತ್ತಿದ್ದು, ಎಲ್ಲರಿಗೂ ಪ್ರಿಯವಾಗಲಿದೆ ಎಂದರು
ನಾಯಕ ಡಾರ್ಲಿಂಗ್ ಕೃಷ್ಣ ಮಾತನಾಡಿ, ನಾನು ನೃತ್ಯ ಮಾಡಿ ಮೂರ್ನಾಲ್ಕು ವರ್ಷಗಳೇ ಆಗಿತ್ತು. ಈ ಹಾಡಿಗೆ ಈ ರೀತಿ ನೃತ್ಯ ಮಾಡಿದ್ದೇನೆ ಅಂದರೆ ಅದಕ್ಕೆ ನಿರ್ದೇಶಕ ಶಶಾಂಕ್ ಅವರೆ ಕಾರಣ. ಈ ಚಿತ್ರದಲ್ಲಿ ನನ್ನ ಲುಕ್ ಕೂಡ ಹೊಸತಾಗಿದೆ . ಈ ಎಲ್ಲಾ ಕ್ರೆಡಿಟ್ ನಿರ್ದೇಶಕರಿಗೆ ಸೇರಬೇಕು. ಇನ್ನೂ ʼಗಂಗಿ ಗಂಗಿʼ ಹಾಡು ಇಷ್ಟು ಅದ್ಧೂರಿಯಾಗಿ ಮೂಡಿ ಬರಲು ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರಿಗಿರುವ ಸಿನಿಮಾ ಪ್ರೀತಿ. ಇಡೀ ಸಿನಿಮಾ ಇಷ್ಟೇ ಅದ್ದೂರಿಯಾಗಿ ಮೂಡಿಬಂದಿದೆ. ಬಾಳು ಬೆಳಗುಂದಿ ಅವರ ಸಾಹಿತ್ಯ, ಗಾಯನ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಸೊಗಸಾಗಿದೆ ಎಂದು ತಿಳಿಸಿದರು.
ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾತನಾಡಿ, ʼಫಸ್ಟ್ ರ‍್ಯಾಂಕ್ ರಾಜುʼ ಚಿತ್ರದ ನಂತರ ನಾವು ನಿರ್ಮಿಸಿರುವ ಚಿತ್ರ ʼಬ್ರ್ಯಾಟ್.. ಶಶಾಂಕ್ ಅವರ ಕಥೆ ಕೇಳಿ ಬಹಳ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಅವರ ಕಾಂಬಿನೇಶನ್ ನ ಮತ್ತೊಂದು ಸೂಪರ್ ಹಿಟ್ ಚಿತ್ರ ಇದಾಗಲಿದೆ ಎಂದರು ನಾನು ಕನ್ನಡದವಳು. ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ. ಈ ಚಿತ್ರದಲ್ಲಿ ನನ್ನದು ಮಧ್ಯಮವರ್ಗದ ಹುಡುಗಿ ಪಾತ್ರ. ಚಿತ್ರದಲ್ಲೂ ನನ್ನ ಪಾತ್ರದ ಹೆಸರು ಮನಿಶಾ. ಇಂದು ಬಿಡುಗಡೆಯಾಗಿರುವ "ಗಂಗಿ ಗಂಗಿ" ಹಾಡು ಬಹಳ ಚೆನ್ನಾಗಿದೆ ಎಂದು ನಾಯಕಿ ಮನಿಶಾ ಕಂದಕೂರ್ ಹೇಳಿದರು.
ಚಿತ್ರದಲ್ಲಿ ನಟಿಸಿರುವ ಡ್ರ್ಯಾಗನ್ ಮಂಜು ಅವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಿದ್ವಾಯ್ ಸಂಸ್ಥೆಯ ವೈದ್ಯ ರಾಮಚಂದ್ರ ಹಾಗೂ ಬದರಿನಾಥ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು. ಆನಂದ್ ಆಡಿಯೋ ಮೂಲಕ ʼಬ್ರ್ಯಾಟ್ʼ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.