Muhurat trading 2025 Timings: ದೀಪಾವಳಿಯ ಸಂಭ್ರಮ ಸೆನ್ಸೆಕ್ಸ್ 412 ಅಂಕ ಜಿಗಿತ, ಸಂವತ್ 2082 ಮುನ್ನೋಟ
ದೇಶದೆಲ್ಲೆಡೆ ದೀಪಾವಳಿಯ (Deepavali) ಸಂಭ್ರಮ ಮನೆ ಮಾಡಿದೆ. ಷೇರು ಮಾರುಕಟ್ಟೆಯಲ್ಲಿ ಕೂಡ ಸೋಮವಾರ ಶುಭಾರಂಭವಾಗಿದೆ. ಷೇರು ಹೂಡಿಕೆದಾರರು ಮತ್ತು ಟ್ರೇಡರ್ಸ್‌ಗೆ ಮಂಗಳವಾರ ವಿಶೆಷ ದಿನವಾಗಿದೆ. ಅಕ್ಟೋಬರ್ 21ಕ್ಕೆ ಹೊಸ ವಿಕ್ರಮ ಸಂವತ್ಸರ 2082 ಆರಂಭವಾಗಲಿದೆ.

-

ಮುಂಬೈ: ದೇಶದೆಲ್ಲೆಡೆ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಷೇರು ಮಾರುಕಟ್ಟೆಯಲ್ಲಿ ಕೂಡ ಸೋಮವಾರ ಶುಭಾರಂಭವಾಗಿದೆ. ಷೇರು ಹೂಡಿಕೆದಾರರು ಮತ್ತು ಟ್ರೇಡರ್ಸ್‌ಗೆ ಮಂಗಳವಾರ ವಿಶೆಷ ದಿನವಾಗಿದೆ. ಅಕ್ಟೋಬರ್ 21ಕ್ಕೆ ಹೊಸ ವಿಕ್ರಮ ಸಂವತ್ಸರ 2082 ಆರಂಭವಾಗಲಿದೆ. ವಿಶೇಷ ಮುಹೂರ್ತ ಟ್ರೇಡಿಂಗ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇವತ್ತು ಸೆನ್ಸೆಕ್ಸ್ ಮತ್ತು ನಿಫ್ಟಿ ಏರುಗತಿಯಲ್ಲಿತ್ತು. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 412 ಅಂಕ ಏರಿಕೆಯಾಗಿ 84,364 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 134 ಅಂಕ ಕಳೆದುಕೊಂಡು 25,844 ಅಂಕಗಳಿಗೆ ಸ್ಥಿರವಾಯಿತು.
ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರ ಏರಿಕೆ ದಾಖಲಿಸಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತುಐಸಿಐಸಿಐ ಬ್ಯಾಂಕ್‌ನ ತ್ರೈಮಾಸಿಕ ರಿಸಲ್ಟ್ ಸಕಾರಾತ್ಮಕ ಪ್ರಭಾವ ಬೀರಿತ್ತು. ಅಮೆರಿಕ-ಚೀನಾ ನಡುವಣ ವಾಣಿಜ್ಯ ಸಂಘರ್ಷ ಕೂಡ ತಿಳಿಯಾಗುವ ಹಂತದಲ್ಲಿರುವುದು ಪ್ರಭಾವ ಬೀರಿತು.
ದೀಪಾವಳಿಗೆ ಲಕ್ಷ್ಮೀಪೂಜೆ ಮಹತ್ವಪೂರ್ಣವಾಗಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಕೂಡ ಇದನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಅಕ್ಟೋಬರ್ 21ರಂದು ಸ್ಟಾಕ್ ಮಾರ್ಕೆಟ್‌ನಲ್ಲಿ ಎಂದಿನ ವಹಿವಾಟು ನಡೆಯುವುದಿಲ್ಲ. ಜತೆಗೆ ಅಕ್ಟೋಬರ್ 22ರಂದು ಬಲಿಪಾಡ್ಯಮಿ ಪ್ರಯುಕ್ತ ರಜೆ ಇರಲಿದೆ. ಅಕ್ಟೋಬರ್ 21ರಂದು ಮುಹೂರ್ತ ಟ್ರೇಡಿಂಗ್ ಎಂಬ ವಿಶೇಷ ವಹಿವಾಟು 1 ಗಂಟೆ ಕಾಲ ನಡೆಯಲಿದೆ. ಇದು ನೂತನ ಹಿಂದೂ ಆರ್ಥಿಕ ವರ್ಷದ ಆರಂಭದ ಸಂಕೇತವನ್ನು ತೋರಿಸುತ್ತದೆ. ಸಾಮಾನ್ಯವಾಗಿ ಸಂಜೆ ನಡೆಯುತ್ತದೆ. ಆದರೆ ಈ ವರ್ಷ ಮಧ್ಯಾಹ್ನ 1:45ರಿಂದ 2:45 ತನಕ ನಡೆಯುತ್ತದೆ.
ಈ ಸಲ ದೀಪಾವಳಿಯ ಮುಹೂರ್ತ ಟ್ರೇಡಿಂಗ್ ಟರ್ನಿಂಗ್ ಪಾಯಿಂಟ್ ಥರ ಇದೆ ಎನ್ನಬಹುದು. ದೇಶೀಯ ವಿದ್ಯಮಾನಗಳು ಎಂದಿನಂತೆ ಸಕಾರಾತ್ಮಕವಾಗಿದ್ದರೆ, ಜಾಗತಿಕ ತಲ್ಲಣಗಳೂ ಉಪಶಮನವಾಗುತ್ತಿವೆ. ಇದು ಮಾರುಕಟ್ಟೆಯಲ್ಲಿ ಉತ್ಸಾಹ ಹೆಚ್ಚಿಸಿದೆ. ಆಟೊಮೊಬೈಲ್, ಬ್ಯಾಂಕಿಂಗ್, ಮೂಲಸೌಕರ್ಯ, ಮೆಟಲ್ ಸೆಕ್ಟರ್ ಷೇರುಗಳು ಸಕಾರಾತ್ಮಕವಾಗಿವೆ.
ಭಾರತದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಎಚ್ ಡಿಎಫ್‌ಸಿ ಬ್ಯಾಂಕ್ ಎರಡನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಬ್ಯಾಂಕ್ 18,642 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಎನ್‌ಎಸ್‌ಇನಲ್ಲಿ ಇವತ್ತು ಷೇರಿನ ದರ 1000/- ಮಟ್ಟದಲ್ಲಿ ಇತ್ತು. ಐಸಿಐಸಿಐ ಬ್ಯಾಂಕ್ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, 12,359 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ಷೇರಿನ ದರ 1,395 ರುಪಾಯಿಯಷ್ಟಿತ್ತು. ಇವತ್ತು ನಿಫ್ಟಿ ಬ್ಯಾಂಕ್ ಇಂಡೆಕ್ಸ್ 58,000 ಅಂಕಗಳ ಗಡಿ ದಾಟಿತು.
ಇಂದು ಲಾಭ ಗಳಿಸಿದ ಷೇರುಗಳು:
ರಿಲಯನ್ಸ್ ಇಂಡಸ್ಟ್ರೀಸ್: 1,467/-
ಬಜಾಜ್ ಫಿನ್ ಸರ್ವ್: 2,140/-
ಎಕ್ಸಿಸ್ ಬ್ಯಾಂಕ್: 1,226/-
ಡಾ ರೆಡ್ಡೀಸ್ : 1282/-
ಶ್ರೀರಾಮ್ ಫೈನಾನ್ಸ್ : 694/-
ಸಿಪ್ಲಾ: 1,640/-
ಇಂದು ನಷ್ಟಕ್ಕೀಡಾದ ಷೇರುಗಳು:
ಐಸಿಐಸಿಐ ಬ್ಯಾಂಕ್: 1,393/-
ಜೆಎಸ್‌ಡಬ್ಲ್ಯು ಸ್ಟೀಲ್: 1,145/-
M&M : 3,599/-
ಎಟರ್ನಲ್: 338/-
ಎಚ್ ಡಿಎಫ್ ಸಿ ಲೈಫ್: 742/
ಜೆಎಸ್‌ಡಬ್ಲ್ಯು ಸ್ಟೀಲ್: 1,145/-
ಕಳೆದ ವರ್ಷದ ದೀಪಾವಳಿಯಿಂದ ಈ ವರ್ಷದ ದೀಪಾವಳಿಯ ತನಕ ಒಂದು ವರ್ಷ ಷೇರು ಮಾರುಕಟ್ಟೆ ಮಂದಗತಿಯಲ್ಲಿತ್ತು. ನಿಫ್ಟಿ ಅಂಥ ರಿಟರ್ನ್ ಕೊಟ್ಟಿಲ್ಲ. ಬದಲಿಗೆ ಬಂಗಾರ-ಬೆಳ್ಳಿಯ ರಿಟರ್ನ್ ಹೆಚ್ಚು ಸುದ್ದಿಯಲ್ಲಿತ್ತು. ನಿಫ್ಟಿ ಕೇವಲ 1 ಪರ್ಸೆಂಟ್ ರಿಟರ್ನ್ ಕೊಟ್ಟು ನೆಲಕಚ್ಚಿತ್ತು. ಆದರೆ ಈ ಸಲ ದೀಪಾವಳಿ ಸಂದರ್ಭ ಮಾರುಕಟ್ಟೆ ಚೇತರಿಸಿದೆ. ಜಿಎಸ್‌ಟಿ ದರ ಇಳಿಕೆ, ಆರ್‌ಬಿಐ ರೆಪೊ ರೇಟ್ ಕಡಿತ, ವೈಯಕ್ತಿಕ ಆದಾಯ ತೆರಿಗೆ ರಿಲೀಫ್ ಪರಿಣಾಮ ಮುಂಬರುವ ದಿನಗಳಲ್ಲಿ ಷೇರು ಸೂಚ್ಯಂಕಗಳು ಚೇತರಿಸುವ ನಿರೀಕ್ಷೆ ಇದೆ. ಏಕೆಂದರೆ ಈ ಎಲ್ಲ ಕಾರಣಗಳಿಂದ ಕಾರ್ಪೊರೇಟ್ ವಲಯದ ಕಂಪನಿಗಳ ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ.
ಈ ಸುದ್ದಿಯನ್ನೂ ಓದಿ: Stock Market: ಷೇರು ಮಾರುಕಟ್ಟೆ ಇಂಡೆಕ್ಸ್ ಕುಸಿತದ ವೇಳೆ ಯಾವ ಷೇರು ಬೆಸ್ಟ್?
ಸಾಮಾನ್ಯವಾಗಿ ಮುಹೂರ್ತ್ ಟ್ರೇಡಿಂಗ್ ಸಂದರ್ಭ ರಿಸಲ್ಟ್ ಪಾಸಿಟಿವ್ ಆಗಿರುತ್ತದೆ. ಇತಿಹಾಸದ ಪ್ರಕಾರ ಕಳೆದ 10 ಮುಹೂರ್ತ್ ಟ್ರೇಡಿಂಗ್‌ನಲ್ಲಿ 8 ಸಲ ಸೂಚ್ಯಂಕ ಏರಿಕೆಯಾಗಿದೆ.