Bengaluru Crime: ಬೆಂಗಳೂರಿನ ರಸ್ತೆಯಲ್ಲಿ ಮಾರಕಾಸ್ತ್ರ ಝಳಪಿಸಿ ರೌಡಿಯ ದಾಂಧಲೆ, ಸ್ಥಳೀಯರ ಆತಂಕ
Crime news: ಗೂಡ್ಸ್ ಆಟೋ ಚಾಲಕನ ಮೇಲೆ ಕಿಡಿಗೇಡಿಯೊಬ್ಬ ಕತ್ತಿಯಂತಹ ಉದ್ದನೆಯ ಮಾರಕಾಸ್ತ್ರವನ್ನು ಹಿಡಿದು ಆತನ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ತಡೆಯಲು ಯತ್ನಿಸಿದಾಗ ಗೂಡ್ಸ್ ಆಟೋದ ಗಾಜುಗಳನ್ನು ಜಖಂಗೊಳಿಸಿದ್ದಾನೆ. ನಂತರ ಬೈಕ್ ಹತ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

-

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru crime news) ಕಿಡಿಗೇಡಿಗಳ ಉಪಟಳ ಹೆಚ್ಚಾಗಿದೆ. ಲಿಂಗರಾಜಪುರ ಫ್ಲೈಓವರ್‌ನ ಕೆಳಗೆ ಕಿಡಿಗೇಡಿಯೊಬ್ಬ (Rowdy sheeter) ಕೈಯಲ್ಲಿ ಮಾರಕಾಸ್ತ್ರ ಹಿಡಿದು ಝಳಪಿಸುತ್ತಾ ದಾಂಧಲೆ ನಡೆಸಿದ್ದಾನೆ. ಗೂಡ್ಸ್ ಆಟೋ ಚಾಲಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೆ (Assault case) ಯತ್ನಿಸಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹಳೇ ದ್ವೇಷವೇ ಈ ದಾಂಧಲೆಗೆ ಕಾರಣ ಎಂದು ಶಂಕಿಸಲಾಗಿದ್ದು, ಆರೋಪಿಯ ಪುಂಡಾಟವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಲಿಂಗರಾಜಪುರ ಫ್ಲೈಓವರ್‌ನ ಕೆಳಗೆ ಸಂಜೆ ಸಮಯದಲ್ಲಿ ಈ ಘಟನೆ ನಡೆದಿದೆ. ಗೂಡ್ಸ್ ಆಟೋ ಚಾಲಕನ ಮೇಲೆ ಕಿಡಿಗೇಡಿಯೊಬ್ಬ ಕತ್ತಿಯಂತಹ ಉದ್ದನೆಯ ಮಾರಕಾಸ್ತ್ರವನ್ನು ಹಿಡಿದು ಆತನ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ತಡೆಯಲು ಯತ್ನಿಸಿದಾಗ ಗೂಡ್ಸ್ ಆಟೋದ ಗಾಜುಗಳನ್ನು ಜಖಂಗೊಳಿಸಿದ್ದಾನೆ. ನಂತರ ಬೈಕ್ ಹತ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆರೋಪಿಯು ಚಾಲಕನೊಂದಿಗೆ ಹಿಂದಿನಿಂದಲೂ ದ್ವೇಷ ಹೊಂದಿದ್ದ ಎಂದು ಶಂಕಿಸಲಾಗಿದೆ.
ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಆರೋಪಿಯ ದಾಂಧಲೆಯನ್ನು ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ, ಆರೋಪಿಯು ಕೈಯಲ್ಲಿ ಉದ್ದನೆಯ ಆಯುಧವನ್ನು ಹಿಡಿದು ಗೂಡ್ಸ್ ಆಟೋ ಚಾಲಕನಿಗೆ ಬೆದರಿಕೆ ಒಡ್ಡುತ್ತಿರುವ ದೃಶ್ಯ ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ರೌಡಿಶೀಟರ್‌ಗಳ ಹಾವಳಿಯನ್ನು ಎತ್ತಿ ಹೇಳುತ್ತಿದೆ.
ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲಿಂಗರಾಜಪುರ ಪೊಲೀಸರು ಆರೋಪಿಯನ್ನು ಗುರ್ತಿಸಲು ವಿಡಿಯೋ ಫುಟೇಜ್ ಪರಿಶೀಲಿಸಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಿಸಿಟಿವಿ ಫುಟೇಜ್‌ಗಳು ಮತ್ತು ಸ್ಥಳೀಯರಿಂದ ಸಿಕ್ಕ ಮಾಹಿತಿಯ ಆಧಾರದ ಮೇಲೆ ತನಿಖೆ ಮುಂದುವರಿಸಲಾಗಿದೆ. ಮಾರಕಾಸ್ತ್ರದೊಂದಿಗೆ ಆರೋಪಿಯ ದರ್ಪವನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದು, ʼಈ ಘಟನೆಗಳು ನಗರದಲ್ಲಿ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆʼ ಎಂದು ಆತಂಕ ಹೊರಹಾಕಿದ್ದಾರೆ.