Car Accident: ಕಾರು ಡಿಕ್ಕಿ ಹೊಡೆಸಿದ್ದಲ್ಲದೇ ಜೀವ ಬೆದರಿಕೆ... ಶಾಸಕನ ಪುತ್ರನ ಅಟ್ಟಹಾಸಕ್ಕೆ ಜನ ಫುಲ್ ಶಾಕ್!
Car Accident: ಶಾಸಕ, ಮಾಜಿ ಸಚಿವನ ಮಗನೊಬ್ಬ ಚಲಾಯಿಸುತ್ತಿದ್ದ ಕಾರು ಬೇರೆ ಎರಡು ಕಾರುಗಳಿಗೆ ಡಿಕ್ಕಿಯಾಗಿದ್ದು, ಇಬ್ಬರು ಗಾಯಗೊಂಡ ಘಟನೆ ಜೈಪುರದಲ್ಲಿ ನಡೆದಿದೆ. ಬಳಿಕ ಶಾಸಕನ ಪುತ್ರನು ಇನ್ನೊಂದು ಕಾರಿನಲ್ಲಿದ್ದ ವ್ಯಕ್ತಿ ಮತ್ತು ಆತನ ಸ್ನೇಹಿತರ ಮೇಲೆ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ರಾಜಸ್ಥಾನದ ಮಾಜಿ ಸಚಿವ ರಾಜ್‌ಕುಮಾರ್ ಶರ್ಮಾ ಅವರ ಪುತ್ರ ಯುವರಾಜ್ ಎಂದು ಗುರುತಿಸಲಾಗಿದೆ.

-

ಜೈಪುರ: ಶಾಸಕ, ಮಾಜಿ ಸಚಿವರೊಬ್ಬರ (MLA, former minister) ಪುತ್ರ ಚಲಾಯಿಸುತ್ತಿದ್ದ ಕಾರು ಬೇರೆ ಕಾರುಗಳಿಗೆ ಡಿಕ್ಕಿಯಾಗಿದ್ದು (Car accident), ಘಟನೆಯಲ್ಲಿ ಇಬ್ಬರು ಗಾಯಗೊಂಡ ಘಟನೆ ಜೈಪುರದಲ್ಲಿ (Jaipur) ನಡೆದಿದೆ. ಕಾಂಗ್ರೆಸ್ (Congress) ಶಾಸಕ, ರಾಜಸ್ಥಾನದ ಮಾಜಿ ಸಚಿವ ರಾಜ್‌ಕುಮಾರ್ ಶರ್ಮಾ (MLA Rajkumar Sharma) ಅವರ ಪುತ್ರ ಯುವರಾಜ್ ಚಲಾಯಿಸುತ್ತಿದ್ದ ಕಾರು ಬೇರೆ ಎರಡು ಕಾರುಗಳಿಗೆ ಡಿಕ್ಕಿಯಾಗಿದೆ. ಬಳಿಕ ಯುವರಾಜ್ ಇನ್ನೊಂದು ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಅಪ್ರಾಪ್ತ ವಿದ್ಯಾರ್ಥಿಯಾಗಿರುವ ಯುವರಾಜ್, ಚಲಯಿಸುತ್ತಿದ್ದ ಕಾರು ಮಂಗಳವಾರ ಜೈಪುರದಲ್ಲಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಆತ ಪೊಲೀಸರಿಗೆ ಕರೆ ಮಾಡಿ ತಾನು ಕಾಂಗ್ರೆಸ್ ಶಾಸಕ ರಾಜ್‌ಕುಮಾರ್ ಶರ್ಮಾ ಅವರ ಮಗ ಎಂದು ಹೇಳಿದ್ದಾನೆ. ಅಲ್ಲದೇ ತನ್ನ ಕಾರಿನಿಂದ ಡಿಕ್ಕಿಯಾದ ಇನ್ನೊಂದು ಕಾರಿನ ಚಾಲಕನ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವರಾಜ್ ಚಲಾಯಿಸುತ್ತಿದ್ದ ಆಡಿ ಕಾರು, ಇನ್ನೊಂದು ಮಾರುತಿ ಸ್ವಿಫ್ಟ್‌ಗೆ ಡಿಕ್ಕಿ ಹೊಡೆದು ಅದನ್ನು ವಿಭಜಕದ ಮೇಲೆ ತಳ್ಳಿತು. ಸ್ವಿಫ್ಟ್‌ನಲ್ಲಿದ್ದ ಪುಲ್ಕಿತ್ ಪರೀಕ್ ಮತ್ತು ಆತನ ಸ್ನೇಹಿತ ಗಾಯಗೊಂಡಿದ್ದು, ಪರೀಕ್ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: Physical Abuse: ಬೆಂಗಳೂರಿನಲ್ಲಿ ಮಹಿಳೆ ಮೇಲೆ ಎರಗಿದ ಮೂವರು ಕಾಮುಕರ ಸೆರೆ
ಪರೀಕ್ ತನ್ನ ಸೋದರ ಮಾವನ ರಕ್ತನಿಧಿಯಿಂದ ರಕ್ತವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಜೈಪುರದ ಮಹಾರಾಣಾ ಪ್ರತಾಪ್ ವೃತ್ತದ ಬಳಿ ಯುವರಾಜ್ ಚಲಾಯಿಸುತ್ತಿದ್ದ ಹರಿಯಾಣ ನಂಬರ್ ಪ್ಲೇಟ್ ಹೊಂದಿದ್ದ ಕಾರು ಸುಮಾರು 150 ಕಿ.ಮೀ. ವೇಗದಲ್ಲಿ ಬಂದು ಅವರ ವಾಹನಕ್ಕೆ ಡಿಕ್ಕಿಯಾಗಿತ್ತು. ಇದರಿಂದ ಅವರ ಕಾರು ವಿಭಜಕದ ಮೇಲೆ ನಿರ್ಮಿಸಲಾದ ಪ್ಲಾಟ್‌ಫಾರ್ಮ್‌ಗೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ತನಗೂ ಮತ್ತು ತನ್ನ ಸ್ನೇಹಿತನಿಗೂ ಗಾಯಗಳಾಗಿವೆ ಎಂದು ಪರೀಕ್ ತಿಳಿಸಿದ್ದಾರೆ.
ಶಾಸಕರ ಮಗ ತಮಗೆ ಬೆದರಿಕೆ ಹಾಕಿದ್ದಾನೆ. ಸ್ವಲ್ಪ ಹಣ ತೆಗೆದುಕೊಂಡು ನಿಮ್ಮ ಕಾರನ್ನು ರಿಪೇರಿ ಮಾಡಿಸಿ ಎಂದು ಹೇಳಿದ್ದಾನೆ ಎಂದು ಪರೀಕ್ ಆರೋಪಿಸಿದ್ದಾರೆ. ಪೊಲೀಸರು ಹೇಳಿಕೆಯನ್ನು ದಾಖಲಿಸಿದ್ದಾರೆ. ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಯುವರಾಜ್ ಗೆ ಸುಮಾರು 15- 16 ವರ್ಷ ಆಗಿರಬಹುದು ಎಂದು ಪರೀಕ್ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Haveri News: ಹಾವೇರಿಯ ರಾಘವೇಂದ್ರ ಮಠದಲ್ಲಿ 10.67 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳವು
ಅಪಘಾತದ ಬಳಿಕ ಒಂದು ಕಾರು ಸ್ಥಳದಿಂದ ಹೊರಟುಹೋಗಿದೆ. ಅದಕ್ಕೆ ಹೆಚ್ಚಿನ ಹಾನಿ ಏನೂ ಆಗಿಲ್ಲ. ಹೀಗಾಗಿ ಚಾಲಕ ದೂರು ದಾಖಲಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್‌ಕುಮಾರ್ ಶರ್ಮಾ ಅವರ ಪುತ್ರ ಯುವರಾಜ್ ಮಾಡಿರುವ ಅಪಘಾತಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.