ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru theft case: ಬೆಂಗಳೂರಿನ ಕಾಂಟ್ರಾಕ್ಟರ್ ಮನೆಯಲ್ಲಿ 25 ಲಕ್ಷ ರೂ. ಕಳ್ಳತನ; ನೇಪಾಳ ಮೂಲದ ಚಾಲಾಕಿ ದಂಪತಿ ಅರೆಸ್ಟ್

ಬೆಂಗಳೂರಿನ ಅಮೃತಹಳ್ಳಿಯ ಅರ್ಕಾವತಿ ಲೇಔಟ್‌ನ ಕಾಂಟ್ರಾಕ್ಟರ್ ಮನೆಯಲ್ಲಿ 25 ಲಕ್ಷ ನಗದು ಕಳ್ಳತನವಾಗಿತ್ತು. ಮನೆಕೆಲಸಕ್ಕೆ ಸೇರಿದವರೇ ಕೃತ್ಯ ಎಸಗಿದ್ದು, ಪರಾರಿಯಾಗಲು ಯತ್ನಿಸುತ್ತಿದ್ದ ನೇಪಾಳ ಮೂಲದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಗದು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿನ ಕಾಂಟ್ರಾಕ್ಟರ್ ಮನೆಯಲ್ಲಿ 25 ಲಕ್ಷ ಕಳ್ಳತನ; ದಂಪತಿ ಅರೆಸ್ಟ್

ಬೆಂಗಳೂರಿನಲ್ಲಿ ಬಂಧನವಾದ ದಂಪತಿ. -

Prabhakara R
Prabhakara R Jun 10, 2026 11:36 PM

ಬೆಂಗಳೂರು: ತಾವು ಕೆಲಸ ಮಾಡುತ್ತಿದ್ದ ಮನೆಗೇ ಕನ್ನ ಹಾಕಿದ (Bengaluru theft case) ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 25 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಕಾಂಟ್ರಾಕ್ಟರ್ ಒಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ನೇಪಾಳಿ ಮೂಲದ ದಂಪತಿ, 25 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದರು. ಈ ನಡುವೆ ಚಾಲಾಕಿ ದಂಪತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ನೇಪಾಳ ಮೂಲದ ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ ಬಂಧಿತ ಆರೋಪಿಗಳು. ಈ ದಂಪತಿ ಅಮೃತಹಳ್ಳಿಯ ಅರ್ಕಾವತಿ ಲೇಔಟ್‌ನಲ್ಲಿರುವ ಕಾಂಟ್ರಾಕ್ಟರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಮನೆಕೆಲಸಕ್ಕೆ, ಪತಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿಕೊಂಡಿದ್ದರು. ಕೇವಲ ಒಂದು ತಿಂಗಳಲ್ಲೇ, ಮನೆಯ ಮಾಲೀಕರು ಹಣವನ್ನು ಎಲ್ಲಿ ಇಟ್ಟಿರುತ್ತಾರೆ, ಕೀ ಎಲ್ಲಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದ ದಂಪತಿ, ಮಾಲೀಕ ಹೊರಗೆ ತೆರಳಿದ್ದ ವೇಳೆ 25 ಲಕ್ಷ ನಗದು ಕದ್ದು ಪರಾರಿಯಾಗಿದ್ದರು.

ಕಾಂಟ್ರಾಕ್ಟರ್ ತಮ್ಮ ಕೆಲಸಗಾರರಿಗೆ ಸಂಬಳ ನೀಡಲು ಬ್ಯಾಂಕ್‌ನಿಂದ 25 ಲಕ್ಷ ರೂಪಾಯಿ ಡ್ರಾ ಮಾಡಿ, ಮನೆಯ ಕಬೋರ್ಡ್‌ನಲ್ಲಿ ಇಟ್ಟಿದ್ದರು. ಮನೆಯ ಮಾಲೀಕರು ಇಲ್ಲದ ಸಮಯವನ್ನು ನೋಡಿಕೊಂಡ ದಂಪತಿ, ಸುಲಭವಾಗಿ ಕಬೋರ್ಡ್ ತೆರೆದು, 25 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ಸಮೇತ ಪರಾರಿಯಾಗಿದ್ದರು. ಕೆಲಸದ ನಿಮಿತ್ತ ಮನೆಯ ಮಾಲೀಕರು ಒಂದು ವಾರದ ಹಿಂದೆ ಹೊರಗೆ ತೆರಳಿದ್ದ ಮಾಲೀಕ, ವಾಪಸ್ ಬಂದಾಗ ನೇಪಾಳಿ ದಂಪತಿಗಳಿಬ್ಬರೂ ಕಾಣೆಯಾಗಿದ್ದರು. ತಕ್ಷಣ ಅನುಮಾನ ಬಂದ ಅವರು ಕಬೋರ್ಡ್ ಪರಿಶೀಲಿಸಿದಾಗ, ಅದರಲ್ಲಿದ್ದ ಸಂಪೂರ್ಣ 25 ಲಕ್ಷ ರೂಪಾಯಿ ನಗದು ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿಗಳು ಬೆಂಗಳೂರು ತೊರೆಯುವ ಮುನ್ನವೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೆಂಗೇರಿ ಬಳಿ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ದಂಪತಿ ನೇಪಾಳಕ್ಕೆ ಪರಾರಿಯಾಗುವ ಯೋಜನೆಯಲ್ಲಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ ಕಳ್ಳತನ ಮಾಡಿದ್ದ 25 ಲಕ್ಷ ರೂಪಾಯಿ ನಗದನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ಕಳ್ಳತನವಾದ ಎರಡೇ ದಿನಗಳಲ್ಲಿ ಪೊಲೀಸರು ಹಣವನ್ನು ಸುರಕ್ಷಿತವಾಗಿ ಮರಳಿ ಪಡೆದುಕೊಂಡಿದ್ದಾರೆ. ಸದ್ಯ ಬಂಧಿತ ಪವನ್ ಮತ್ತು ಸೀತಾ ಬಿಸ್ತಾ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.