ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Upendra: ಉಪೇಂದ್ರ- ಪ್ರಿಯಾಂಕಾ ದಂಪತಿಯ ಹಣ ಲಪಟಾಯಿಸಿದ್ದ ಬಿಹಾರ ಮೂಲದ ವಂಚಕ ಆರೆಸ್ಟ್!

ಹಣ ಕಳೆದುಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಪ್ರಿಯಾಂಕಾ ಉಪೇಂದ್ರ ಅವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ಇದರ ಸುಳಿವು ಬಿಹಾರದ ದಶರಥಪುರದಲ್ಲಿ ಸಿಕ್ಕಿದೆ. ಅಲ್ಲಿನ ವಿಕಾಸ್ ಕುಮಾರ್ ಎಂಬ ಯುವಕನನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

ಉಪೇಂದ್ರ- ಪ್ರಿಯಾಂಕಾ ದಂಪತಿಯ ಹಣ ಲಪಟಾಯಿಸಿದ್ದ ಬಿಹಾರ ಮೂಲದ ವಂಚಕ ಆರೆಸ್ಟ್!

ವಂಚಕ ವಿಕಾಸ್‌; ರಿಯಲ್‌ ಸ್ಟಾರ್‌ ಉಪೇಂದ್ರ- ಪ್ರಿಯಾಂಕ -

ಹರೀಶ್‌ ಕೇರ
ಹರೀಶ್‌ ಕೇರ Feb 7, 2026 8:55 AM

ಬೆಂಗಳೂರು, ಫೆ.07: ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಮತ್ತು ಪ್ರಿಯಾಂಕ ದಂಪತಿ ಕಳೆದ ವರ್ಷ ಸೈಬರ್ ವಂಚಕರ (cyber crime) ಬಲೆಗೆ ಬಿದ್ದಿದ್ದರು. ಹ್ಯಾಕರ್‌ಗಳ ಕೈಚಳಕಕ್ಕೆ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಸುಮಾರು 1.5 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದು ಅಗ ದೊಡ್ಡ ಸುದ್ದಿಯಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಬಿಹಾರ ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಈ ರೋಚಕ ವಂಚನೆಯ ಕಥೆ ಶುರುವಾಗಿದ್ದು ಕಳೆದ ಸೆಪ್ಟೆಂಬರ್ 15ರಂದು. ನಟಿ ಪ್ರಿಯಾಂಕಾ ಉಪೇಂದ್ರ ಅವರು ಆನ್‌ಲೈನ್‌ನಲ್ಲಿ ಒಂದು ವಸ್ತುವನ್ನು ಬುಕ್ ಮಾಡಿದ್ದರು. ಅದರ ಬೆನ್ನಲ್ಲೇ ಅವರ ಮೊಬೈಲ್‌ಗೆ ಒಂದು ಲಿಂಕ್ ಬಂದಿದೆ. ಅದು ಬುಕ್ ಮಾಡಿದ ವಸ್ತುವಿನ ಮಾಹಿತಿಯೇ ಇರಬಹುದು ಎಂದು ಭಾವಿಸಿ ಪ್ರಿಯಾಂಕಾ ಅವರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಅಷ್ಟೇ, ಅವರ ವಾಟ್ಸಾಪ್ (WhatsApp) ಖಾತೆ ಹ್ಯಾಕರ್‌ಗಳ ವಶವಾಗಿತ್ತು.

ಮಗನಿಂದಲೇ ಹಣ ದೋಚಿದ ಹ್ಯಾಕರ್ಸ್!

ಪ್ರಿಯಾಂಕಾ ಅವರ ವಾಟ್ಸಾಪ್ ಹ್ಯಾಕ್ ಮಾಡಿದ ಕಿಲಾಡಿಗಳು, ಅವರ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರಿಗೆ "ತುರ್ತಾಗಿ 55,000 ರೂಪಾಯಿ ಹಣ ಬೇಕು" ಎಂದು ಮೆಸೇಜ್ ಕಳುಹಿಸಿದ್ದಾರೆ. ಇದನ್ನು ನಂಬಿದ ಉಪೇಂದ್ರ ಅವರ ಮಗ, ತನ್ನ ತಾಯಿಯೇ ಹಣ ಕೇಳುತ್ತಿದ್ದಾರೆಂದು ಭಾವಿಸಿ ತಕ್ಷಣವೇ 50,000 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಿಯಾಂಕಾ ಅವರು ಉಪೇಂದ್ರ ಮತ್ತು ಮ್ಯಾನೇಜರ್‌ಗೆ ಕರೆ ಮಾಡಲು ಪ್ರಯತ್ನಿಸಿದಾಗ ಅವರ ಫೋನ್‌ಗಳೂ ಸಹ ಹ್ಯಾಕ್ ಆಗಿವೆ ಎಂದು ಹೇಳಲಾಗಿದೆ. ಹೀಗೆ ಹಂತ ಹಂತವಾಗಿ ಸುಮಾರು 1.5 ಲಕ್ಷ ರೂಪಾಯಿಗಳು ಖದೀಮರ ಪಾಲಾಗಿದೆ.

ಹಣ ಕಳೆದುಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಪ್ರಿಯಾಂಕಾ ಉಪೇಂದ್ರ ಅವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ಇದರ ಸುಳಿವು ಬಿಹಾರದ ದಶರಥಪುರದಲ್ಲಿ ಸಿಕ್ಕಿದೆ. ಅಲ್ಲಿನ ವಿಕಾಸ್ ಕುಮಾರ್ ಎಂಬ ಯುವಕನನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ತನಿಖೆಯ ವೇಳೆ ಪೊಲೀಸರಿಗೆ ಒಂದು ಬೆಚ್ಚಿಬೀಳಿಸುವ ಸತ್ಯ ತಿಳಿದುಬಂದಿದೆ. ಆ ಭಾಗದ ಸುಮಾರು 150ಕ್ಕೂ ಹೆಚ್ಚು ಯುವಕರು ಇಂತಹದ್ದೇ ಸೈಬರ್ ಕ್ರೈಂ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರಂತೆ!

ಸದ್ಯ ಸದಾಶಿವನಗರ ಪೊಲೀಸರು ಮತ್ತು ಸೆಂಟ್ರಲ್ ಡಿವಿಷನ್ ಸೈಬರ್ ಪೊಲೀಸರು ಜಂಟಿಯಾಗಿ ಈ ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಮತ್ತು ಹಣ ವರ್ಗಾಯಿಸುವ ಮುನ್ನ ಹತ್ತು ಬಾರಿ ಯೋಚಿಸುವುದು ಒಳಿತು ಎಂಬ ಪಾಠವನ್ನು ಈ ಘಟನೆ ನಮಗೆ ಕಲಿಸಿಕೊಟ್ಟಿದೆ. ರಿಯಲ್ ಸ್ಟಾರ್ ಅಭಿಮಾನಿಗಳು ಈ ಸುದ್ದಿ ಕೇಳಿ ಆತಂಕಗೊಂಡಿದ್ದರೂ, ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.