ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿಷೇಧಿತ ವಸ್ತು ಸೇವಿಸಿ ಹದಿಹರೆಯದ ಬಾಲಕ ಸಾವು: ಮೀಶೋ ವಿರುದ್ಧ ಎಫ್‌ಐಆರ್ ದಾಖಲು

Teenager dies: 12ನೇ ತರಗತಿಯ ವಿದ್ಯಾರ್ಥಿಯೊಬ್ಬ ನಿಷೇಧಿತ ವಸ್ತುವನ್ನು ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇ-ಕಾಮರ್ಸ್ ವೇದಿಕೆ ಮೀಶೋ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ಸಮಯದಲ್ಲಿ ಹದಿಹರೆಯದ ಬಾಲಕ, ಮೀಶೋದಿಂದ ವಿಷಕಾರಿ ವಸ್ತುವನ್ನು ಆರ್ಡರ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ನಿಷೇಧಿತ ವಸ್ತು ಸೇವಿಸಿ ಬಾಲಕ ಸಾವು: ಮೀಶೋ ವಿರುದ್ಧ ಎಫ್‌ಐಆರ್

ಸಾಂದರ್ಭಿಕ ಚಿತ್ರ -

Priyanka P
Priyanka P Aug 21, 2026 2:01 PM

ಗುರುಗ್ರಾಮ, ಆ.21: 12ನೇ ತರಗತಿಯ ವಿದ್ಯಾರ್ಥಿಯೊಬ್ಬ ನಿಷೇಧಿತ ವಸ್ತುವನ್ನು ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇ-ಕಾಮರ್ಸ್ ವೇದಿಕೆ ಮೀಶೋ (Meesho) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹರಿಯಾಣದ ಟಿಕ್ಲಿ ಗ್ರಾಮದ ನಿವಾಸಿ ಅನುರಾಧ ಮೆಹ್ರಾ ಸಲ್ಲಿಸಿದ ದೂರಿನ ಪ್ರಕಾರ, ಅವರ 17 ವರ್ಷದ ಮಗ ಯುವಿ ಏಪ್ರಿಲ್ 28ರಂದು ವಿಷಕಾರಿ ವಸ್ತುವನ್ನು ಸೇವಿಸಿದ್ದರಿಂದ ಮೃತಪಟ್ಟಿದ್ದಾನೆ. ಅವನು ಇತ್ತೀಚೆಗೆ ತನ್ನ 12 ನೇ ತರಗತಿ ಪರೀಕ್ಷೆ ಬರೆದಿದ್ದ (crime news).

ತನಿಖೆಯ ಸಮಯದಲ್ಲಿ ಹದಿಹರೆಯದ ಬಾಲಕ, ಮೀಶೋದಿಂದ ವಿಷಕಾರಿ ವಸ್ತುವನ್ನು ಆರ್ಡರ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. ತನ್ನ ಮಗನ ಮರಣದ ನಂತರ, ಅನುರಾಧಾ ಅವರು ಯುವಿಯ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ, ಏಪ್ರಿಲ್ 11 ರಂದು ಮೀಶೋ ಮೂಲಕ 'ಸಲ್ಫಾಸ್' ಆರ್ಡರ್ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ. ನಿಷೇಧಿತ ವಸ್ತು ಸಲ್ಫಾಸ್ ಮಾರಾಟದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ತನ್ನ ಮಗ ಅದನ್ನು ಸೇವಿಸಿದ ನಂತರ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

ಮೇಲ್ನೋಟಕ್ಕೆ ಅಪರಾಧದ ಸಾಕ್ಷ್ಯಾಧಾರಗಳು ಕಂಡುಬಂದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ಬಾದ್‌ಶಹಪುರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 106 (ನಿರ್ಲಕ್ಷ್ಯದಿಂದ ಸಾವು) ಮತ್ತು ಸೆಕ್ಷನ್ 286 (ವಿಷಪೂರಿತ ವಸ್ತುಗಳ ಬಳಕೆಯಲ್ಲಿ ನಿರ್ಲಕ್ಷ್ಯದ ನಡವಳಿಕೆಯಿಂದ ಸಾವು) ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ.

ಪ್ರಯಾಣಿಕರ ಗಮನಕ್ಕೆ: ಕರ್ನಾಟಕದ ರೈಲು ನಿಲ್ದಾಣಗಳಲ್ಲಿ ಫಂಗಸ್ ಬಂದ, ಅವಧಿ ಮೀರಿದ ಆಹಾರ ಮಾರಾಟ

17 ವರ್ಷದ ಯುವಿ ಏಪ್ರಿಲ್ 11 ರಂದು ಮೀಶೋದಲ್ಲಿ 'ಸಲ್ಫಾಸ್' ಆರ್ಡರ್ ಮಾಡಿದ್ದಾನೆ. ಇದರ ಇನ್‌ವಾಯ್ಸ್‌ನಲ್ಲಿ (ಬಿಲ್) ಗುಜರಾತ್‌ನ ಸೂರತ್‌ನಲ್ಲಿರುವ 'ಎವರ್‌ಗ್ರೀನ್ ಆಗ್ರೋ ಅಂಡ್ ಗಾರ್ಡನಿಂಗ್ ಮಾಲ್'ನ ಆಪರೇಟರ್ ಪಂಕಜ್ ಭರತ್‌ಭಾಯ್ ಪರ್ಮಾರ್ ಅವರ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ (FIR) ದಾಖಲಿಸಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ. ಪೊಲೀಸರು ಈಗ ಸಲ್ಫಾಸ್‌ನ ಆನ್‌ಲೈನ್ ಮಾರಾಟ, ಅದನ್ನು ಆರ್ಡರ್ ಮಾಡಿದ ಪ್ರಕ್ರಿಯೆ ಮತ್ತು ಸಂಬಂಧಪಟ್ಟ ಮಾರಾಟಗಾರನ ಪಾತ್ರದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಶೀಘ್ರದಲ್ಲೇ ಮೀಶೋ ಮತ್ತು ಸಂಬಂಧಿತ ಸಂಸ್ಥೆಯ ಪ್ರತಿನಿಧಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.