Crime News: ಗುರುಗ್ರಾಮ ಮೇದಾಂತ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಮಹಿಳೆ ಮೇಲೆ ಡಿಜಿಟಲ್ ರೇಪ್; ಹಾಗೆಂದರೇನು? ಇಲ್ಲಿದೆ ವಿವರ
Digital Rape: ಇತ್ತೀಚೆಗೆ ಹರಿಯಾಣದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿದ್ದ ವಿಮಾನ ಸಿಬ್ಬಂದಿರೋರ್ವರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದು ಇಡೀ ದೇಶವೇ ಬೆಚ್ಚಿಬಿದ್ದಿದೆ. ಕೃತ್ಯ ಎಸಗಿದ ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿಯನ್ನು ಇದೀಗ ಬಂಧಿಸಲಾಗಿದ್ದು, ಈ ಕೃತ್ಯವನ್ನು 'ಡಿಜಿಟಲ್ ಅತ್ಯಾಚಾರ' ಎಂದು ಕರೆಯಲಾಗಿದೆ. ಹಾಗಾದರೆ 'ಡಿಜಿಟಲ್ ಅತ್ಯಾಚಾರʼ ಎಂದರೇನು? ಇಲ್ಲಿದೆ ವಿವರ.

ಸಾಂದರ್ಭಿಕ ಚಿತ್ರ.

ಚಂಡೀಗಢ: ಇತ್ತೀಚೆಗೆ ಹರಿಯಾಣದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯ (Medanta Hospital) ವೆಂಟಿಲೇಟರ್‌ನಲ್ಲಿದ್ದ ವಿಮಾನ ಸಿಬ್ಬಂದಿರೋರ್ವರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದು ಇಡೀ ದೇಶವೇ ಬೆಚ್ಚಿಬಿದ್ದಿದೆ. ಕೃತ್ಯ ಎಸಗಿದ ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿಯನ್ನು ಇದೀಗ ಬಂಧಿಸಲಾಗಿದೆ. ಈ ಪ್ರಕರಣದ ಕುರಿತು ವರದಿ ಮಾಡಿರುವ ಪಿಟಿಐ, ಈ ಆರೋಪಿಯು ಐಸಿಯು ರೂಮ್‌ನಲ್ಲಿ 'ಡಿಜಿಟಲ್ ಅತ್ಯಾಚಾರ' (Digital Rape) ಎಸಗಿದ್ದಾನೆ ಎಂದು ತಿಳಿಸಿದೆ. ಅತ್ಯಾಚಾರ ನಡೆಯುವ ವೇಳೆ ಇಬ್ಬರು ನರ್ಸ್‌ಗಳು ಸ್ಥಳದಲ್ಲಿದ್ದರೂ ಅವರು ತಡೆಯಲಿಲ್ಲ ಎಂದೂ ವರದಿ ಮಾಡಿದೆ.
ಅಪರಾಧಿಯನ್ನು ಮೇದಾಂತ ಆಸ್ಪತ್ರೆಯ ಉದ್ಯೋಗಿ 25 ವರ್ಷದ ದೀಪಕ್ ಎಂದು ಗುರುತಿಸಲಾಗಿದೆ. ಈತ ಬಿಹಾರದ ಮುಝಫರ್‌ಪುರ್ ಮೂಲದವನಾಗಿದ್ದು, ಉದ್ಯೋಗಕ್ಕಾಗಿ ಗುರುಗ್ರಾಮದಲ್ಲಿ ನೆಲೆಸಿದ್ದಾನೆ. ಆತ ಅರೆ ಪ್ರಜ್ಞಾವಸ್ಥೆಯಲ್ಲಿದ್ದ 46 ವರ್ಷದ ಮಹಿಳೆ, ಫ್ಲೈಟ್ ಅಟೆಂಡರ್ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ಮಹಿಳೆ ಏ. 14ರಂದು ದೂರು ದಾಖಲಿಸಿದ್ದರು. ಇದೊಂದು ಡಿಜಿಟಲ್ ರೇಪ್ ಎಂದು ವರ್ಗೀಕರಿಸಬಹುದಾದ ಅಪರಾಧವಾಗಿದ್ದು, ಈ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ. ಈ ಮೂಲಕ ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ಮೂಡಿದೆ.
ಪ್ರತಿಭಟಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿ ವೆಂಟಿಲೇಟರ್‌ನಲ್ಲಿ ಮಲಗಿದ್ದ ಸಂತ್ರಸ್ತೆಯ ಮೇಲೆ ಬೆರಳುಗಳನ್ನು ಉಪಯೋಗಿಸಿ ದೀಪಕ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
Can you believe 'digital rape' is actually a term used legally? We are so messed up! She was raped while she was on a ventilator.
— Shivam Singh (@PoeticShivam) April 19, 2025
Why do we have such stupid prefixes to subdue the barbarism of the crime?
She was touched inappropriately while she was unconscious -that's rape! pic.twitter.com/260ZgSGa3Z
ಈ ಸುದ್ದಿಯನ್ನೂ ಓದಿ: Physical Abuse: ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿದ್ದ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ
ಏನಿದು ಡಿಜಿಟಲ್ ರೇಪ್?
ಸಂತ್ರಸ್ತೆಯ ಸಮ್ಮತವಿಲ್ಲದೆ ಆಕೆಯ ಜನನಾಂಗಕ್ಕೆ ಕೈ, ಕಾಲ್ಬೆರಳು ಅಥವಾ ಸೆಕ್ಸ್ ಟಾಯ್ ನುಗ್ಗಿಸುವುದನ್ನು ಡಿಜಿಟಲ್ ರೇಪ್ ಅಥವಾ ಡಿಜಿಟಲ್ ಅತ್ಯಾಚಾರ ಎಂದು ಕರೆಯಲಾಗುತ್ತದೆ. ಇಲ್ಲಿ ಡಿಜಿಟಲ್ ಎಂದರೆ ಕೈ ಅಥವಾ ಕಾಲು; ತಂತ್ರಜ್ಞಾನ ಎಂದರ್ಥವಲ್ಲ. ಡಿಜಿಟಲ್ ಎಂಬ ಪದಕ್ಕೆ ಬೆರಳು, ಹೆಬ್ಬೆರಳು, ಕಾಲ್ಬೆರಳು ಎಂಬ ಅರ್ಥವೂ ಇದೆ.
ಬಾಹ್ಯ ಸಂಪರ್ಕವನ್ನು ಒಳಗೊಂಡಿರುವ ಲೈಂಗಿಕ ದೌರ್ಜನ್ಯದ ರೂಪಕ್ಕಿಂತ ಭಿನ್ನವಾಗಿ, ಡಿಜಿಟಲ್ ಅತ್ಯಾಚಾರವು ಆಂತರಿಕ, ಒಮ್ಮತವಿಲ್ಲದ ದೌರ್ಜನ್ಯವನ್ನು ಒಳಗೊಂಡಿದೆ. ʼʼಸಾಮಾನ್ಯವಾಗಿ ಕೈ ಬೆರಳುಗಳು ಅಥವಾ ಕಾಲ್ಬೆರಳನ್ನು ಗುಪ್ತಾಂಗಕ್ಕೆ ತೂರಿಸುವುದನ್ನು ಡಿಜಿಟಲ್ ರೇಪ್ ಎನ್ನಲಾಗುತ್ತದೆ. ಇದು ಲೈಂಗಿಕ ಹಿಂಸಾಚಾರದ ಆಳವಾದ ಮತ್ತು ಗಂಭೀರ ಕೃತ್ಯ. ಇಂತಹ ದಾಳಿ ಸಾಮಾನ್ಯವಾಗಿ ಆಸ್ಪತ್ರೆ, ಮನೆ, ಸಾರ್ವಜನಿಕ ಸ್ಥಳಗಳು ಅಥವಾ ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸುತ್ತದೆ. ಡಿಜಿಟಲ್ ಅತ್ಯಾಚಾರದಿಂದ ಉಂಟಾಗುವ ಆಘಾತವು ದೈಹಿಕ ಗಾಯದ ಜತೆಗೆ ದೀರ್ಘಕಾಲೀನ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮವನ್ನುಂಟು ಮಾಡುತ್ತದೆ. ಮೇದಾಂತ ಆಸ್ಪತ್ರೆಯ ಘಟನೆಯಂತೆ ಸಂತ್ರಸ್ತೆ ಪ್ರಜ್ಞಾಹೀನನಾಗಿದ್ದಾಗ, ದೈಹಿಕವಾಗಿ ಬಳಲಿದ್ದಾಗ, ನಶೆಯಲ್ಲಿದ್ದಾಗ ಅಥವಾ ತೀವ್ರ ವೈದ್ಯಕೀಯ ಆರೈಕೆಯಲ್ಲಿದ್ದಾಗ ಈ ರೂಪದ ಅತ್ಯಾಚಾರ ನಡೆಯುತ್ತದೆʼʼ ಎಂದು ತಜ್ಞರು ಹೇಳಿದ್ದಾರೆ.
2021ರಲ್ಲಿ ನಡೆದ ಇದೇ ರೀತಿಯ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯವು 2 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ 25 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣವು ಅತ್ಯಂತ ಕ್ರೂರವಾಗಿರುವ ಕಾರಣ ಯಾವುದೇ ಅಪರಾಧಿಗೆ ಯಾವುದೇ ದಯೆ ತೋರುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಅಪರಾಧಿಯನ್ನು ಪತ್ತೆ ಹಚ್ಚಿದ್ದು ಹೇಗೆ?
ಆಪರೇಷನ್ ಥಿಯೇಟರ್ ತಂತ್ರಜ್ಞಾನದಲ್ಲಿ ಪದವಿ ಪಡೆದ ದೀಪಕ್ 5 ತಿಂಗಳ ಹಿಂದೆ ಮೇದಾಂತ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತನ ವಿರುದ್ಧ ತನಿಖೆ ನಡೆಯುತ್ತಿದೆ. ʼʼಆಸ್ಪತ್ರೆಯ 50ಕ್ಕೂ ಹೆಚ್ಚು ಸಿಬ್ಬಂದಿ, ವೈದ್ಯರ ಹೇಳಿಕೆ, 800 ಸಿಸಿಟಿವಿ ಕ್ಯಾಮೆರಾದ ಫೂಟೇಜ್ ಪರಿಶೀಲಿಸಿ ಅಪರಾಧಿಯನ್ನು ಬಂಧಿಸಲಾಗಿದೆ. ಆತ ತಪ್ಪೊಪ್ಪಿಕೊಂಡಿದ್ದಾನೆʼʼ ಎಂದು ಡಿಸಿಪಿ ಡಾ. ಆರ್ಪಿತ್ ಜೈನ್ ತಿಳಿಸಿದ್ದಾರೆ.