Self Harming: ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಮಾಡಿ ಆತ್ಮಹತ್ಯೆ ಕೇಸ್‌ಗೆ ತಿರುವು; ಗಂಡನ ಅನೈತಿಕ ಸಂಬಂಧದಿಂದ ಪತ್ನಿ ಸೂಸೈಡ್
ಭೀಮನ ಅಮವಾಸ್ಯೆಯಂದು ಗಂಡನಿಗೆ ಪೂಜೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಬಹುದೊಡ್ಡ ಸತ್ಯವೊಂದು ಬಯಲಾಗಿದೆ. ಬೆಂಗಳೂರಿನ ಉತ್ತರ ತಾಲೂಕಿನ ಅಂಚೆಪಾಳ್ಯ ಗ್ರಾಮದಲ್ಲಿ ಕಳೆದ ಗುರುವಾರ ಸ್ಪಂದನಾ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದಳು. ಸ್ಪಂದನಾ ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ಅಭಿಷೇಕ್ ಎಂಬಾತನನ್ನು ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು.


ಬೆಂಗಳೂರು: ಭೀಮನ ಅಮವಾಸ್ಯೆಯಂದು ಗಂಡನಿಗೆ ಪೂಜೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಬಹುದೊಡ್ಡ ಸತ್ಯವೊಂದು ಬಯಲಾಗಿದೆ. ಬೆಂಗಳೂರಿನ ಉತ್ತರ ತಾಲೂಕಿನ ಅಂಚೆಪಾಳ್ಯ ಗ್ರಾಮದಲ್ಲಿ ಕಳೆದ ಗುರುವಾರ ಸ್ಪಂದನಾ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದಳು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪತಿಯ ಅನೈತಿಕ ಸಂಬಂಧದಿಂದ ಬೇಸತ್ತು ಪತ್ನಿ ಸ್ಪಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸ್ಪಂದನಾ ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ಅಭಿಷೇಕ್ ಎಂಬಾತನನ್ನು ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು. ಆದರೆ ಇವರಿಬ್ಬರ ಪ್ರೀತಿಗೆ ಆಕೆಯ ಮನೆಯಲ್ಲಿ ಒಪ್ಪಿರಲಿಲ್ಲ. ಪೋಷಕರ ವಿರೋಧದ ನಡುವೆಯೇ ಇಬ್ಬರು ಮದುವೆಯಾಗಿದ್ದರು.
ಹಲವು ದಿನಗಳಿಂದ ಅಭಿಷೇಕ್ ಬೇರೊಬ್ಬಳ ಸಹವಾಸಕ್ಕೆ ಬಿದ್ದಿದ್ದ. ಅಪರಿಚಿತ ಯುವತಿ ಆತನೊಂದಿಗೆ ಸ್ನೇಹ ಬೆಳೆಸಿದ್ದಳು. ಜೊತೆಗೆ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಹಲವು ಬಾರಿ ಗಲಾಟೆಯಾಗಿತ್ತು. ಆ ಸಮಯದಲ್ಲಿ ಇನ್ಮುಂದೆ ಆಕೆಯ ಜೊತೆಗೆ ಮಾತಾಡುವುದಿಲ್ಲ ಎಂದು ಅಭಿಷೇಕ್ ಹೇಳಿದ್ದ. ಆದರೆ ಮೊನ್ನೆ ಭೀಮನ ಅಮಾವಾಸ್ಯೆ ದಿನ ಸ್ಪಂದನಾ ಪತಿ ಅಭಿಷೇಕ್‌ಗೆ ಪೂಜೆ ಮಾಡುವ ವೇಳೆಯೇ ಆ ಯುವತಿಯಿಂದ ಮತ್ತೆ ಕರೆ ಬಂದಿತ್ತು. ಇದರಿಂದ ನೊಂದ ಸ್ಪಂದನಾ ಕೋಣೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಮದುವೆಯಾದಾಗಿನಿಂದಲೂ ಗಂಡನ ಮನೆಯವರು ಸ್ಪಂದನಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. 5 ಲಕ್ಷ ರೂ. ಹಣವನ್ನ ಕೊಟ್ಟು ರಾಜಿ ಸಂಧಾನ ಮಾಡಿಸಿದ್ದರು ಎನ್ನಲಾಗಿತ್ತು. ಆರೋಪಿ ಕೂಡ ವರದಕ್ಷಿಣೆ ನೀಡುತ್ತಿದ್ದ. ಈ ಕುರಿತು ಸ್ಪಂದನಾ ತನ್ನ ತಾಯಿಗೆ ಫೋನ್ ಮಾಡಿ ತಿಳಿಸಿದ್ದಳು. ಅದಾದ ಬಳಿಕ ಸ್ಪಂದನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಪಂದನಾ ಕುಟುಂಬಸ್ಥರು ಪತಿ ಅಭಿಷೇಕ್ ಮತ್ತು ಅತ್ತೆ ಲಕ್ಷ್ಮಮ್ಮ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ FIR ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Murder Case: ಅನೈತಿಕ ಸಂಬಂಧ, ಗಂಡನನ್ನು ಕೊಲ್ಲಿಸಿ, ಆತ್ಮಹತ್ಯೆ ಎಂದು ಬಿಂಬಿಸಿದ ಗ್ರಾ.ಪಂ ಸದಸ್ಯೆ!
ಇತ್ತೀಚೆಗೆ ತಮಿಳುನಾಡಿನ ತಿರುಪ್ಪೂರಿನಲ್ಲಿ ಗಂಡನ ಮನೆಯವರ ಕಿರುಕುಳ ತಾಳಲಾರದೇ ನವವಿಹಾತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. 70 ಲಕ್ಷ ರೂ. ಮೌಲ್ಯದ ಕಾರು, 800 ಗ್ರಾಂ ಚಿನ್ನ ನೀಡಿದ ಬಳಿಕವೂ ವರದಕ್ಷಿಣೆಗಾಗಿ ಆಕೆಗೆ ಕಿರುಕುಳ ನೀಡಲಾಗಿತ್ತು. ಮೃತ ಮಹಿಳೆಯನ್ನು ರಿಧನ್ಯಾ (27) ಎಂದು ಗುರುತಿಸಲಾಗಿದ್ದು, ಗಾರ್ಮೆಂಟ್ಸ್ ಕಂಪನಿಯನ್ನು ನಡೆಸುತ್ತಿರುವ ಅಣ್ಣಾದೊರೈ ಅವರ ಮಗಳು ಎಂದು ತಿಳಿದು ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಕಳೆದ ಏಪ್ರಿಲ್‌ನಲ್ಲಿ ರಿಧನ್ಯಾ ಹಾಗೂ ಕವಿನ್ ಕುಮಾರ್ (28) ಮದುವೆಯಾಗಿದ್ದರು. ರಿಧನ್ಯಾ ಸಾಯುವ ಮುನ್ನ ತನ್ನ ತಂದೆಗೆ ವಾಟ್ಸಾಪ್‌ನಲ್ಲಿ ಏಳು ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿದ್ದರು, ಮೆಸೇಜ್‌ನಲ್ಲಿ ನನ್ನ ಈ ನಿರ್ಧಾರಕ್ಕಾಗಿ ಕ್ಷಮಿಸಿ, ಪ್ರತಿದಿನ ನನ್ನ ಪತಿ, ಅತ್ತೆ ಹಾಗೂ ಮಾವ ನೀಡುತ್ತಿರುವ ಕಿರುಕುಳ ತಾಳಲಾಗದೇ ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಹೇಳಿದ್ದರು. ಸದ್ಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.