Hassan News: ಅಮ್ಮನ ಜತೆ ನಗುತ್ತಾ ಮಾತನಾಡುತ್ತಿದ್ದಾಗಲೇ ಬ್ರೈನ್ ಸ್ಟ್ರೋಕ್; ಹಾಸನದಲ್ಲಿ ಟೆಕ್ಕಿ ಯುವತಿ ಸಾವು
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಟೆಕ್ಕಿ ಯುವತಿ ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟಿದ್ದಾರೆ. ತಾಯಿಯ ಜತೆ ನಗುತ್ತಾ ಮಾತನಾಡುತ್ತಿದಾಗ ಏಕಾಏಕಿ ಕುಸಿದು ಬಿದ್ದಿದ್ದ ಯುವತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದಾರೆ.
ಮೃತ ಟೆಕ್ಕಿ ಯುವತಿ ಶ್ವೇತಾ. -
ಹಾಸನ: ತಾಯಿ ಜತೆ ನಗುತ್ತಾ ಮಾತನಾಡುತ್ತಿರುವಾಗಲೇ ಬ್ರೈನ್ ಸ್ಟ್ರೋಕ್ (Brain Stroke) ಆಗಿ ಟೆಕ್ಕಿ ಯುವತಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿ ದಿಢೀರ್ ಕುಸಿದು ಬಿದ್ದಿದ್ದ ಯುವತಿ, ಚಿಕಿತ್ಸೆ ಫಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಚಂದ್ರ ನಾಯಕ್ ಹಾಗೂ ಸರೋಜಾ ದಂಪತಿಯ ಏಕೈಕ ಪುತ್ರಿ ಶ್ವೇತಾ (25) ಮೃತ ಯುವತಿ.
ಏ.25ರಂದು ಶನಿವಾರ ಕೆಲಸ ಮುಗಿಸಿ ಮನೆಗೆ ಬಂದ ಶ್ವೇತಾ ತಾಯಿಯ ಜತೆ ನಗುನಗುತ್ತಾ ಮಾತನಾಡುತ್ತಿದಾಗ ಏಕಾಏಕಿ ಕುಸಿದು ಬಿದ್ದು, ಮಾತನಾಡಲಾರದ ಸ್ಥಿತಿ ತಲುಪಿದ್ದರು. ಹೀಗಾಗಿ ಅವರನ್ನು ಬೆಂಗಳೂರಿಗೆ ಕರೆತರುವಾಗಲೇ ಕೋಮಾಗೆ ಜಾರಿದ್ದರು. ದುಃಖದ ಮಧ್ಯೆಯೇ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು.ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಶ್ವೇತಾ ಮೃತಪಟ್ಟಿದ್ದಾರೆ. ಹೀಗಾಗಿ ಅಂಗಾಂಗ ದಾನ ನಡೆಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಒಬ್ಬಳೇ ಪುತ್ರಿಯನ್ನು ಕಳೆದುಕೊಂಡು ಹೆತ್ತವರು ಕಂಗಾಲಾಗಿದ್ದಾರೆ.
ಶ್ವೇತಾ ಅವರಿಗೆ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಪೋಷಕರು ಮುಂದಾಗಿದ್ದರು. ಆದರೆ ಅಂಗಾಂಗ ದಾನ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಯುವತಿ ಅಂತ್ಯಕ್ರಿಯೆ ನಡೆದಿದೆ.
ಈ ಬಗ್ಗೆ ಚಂದ್ರ ನಾಯಕ್ ಪ್ರತಿಕ್ರಿಯಿಸಿ, ಮಗಳು ಸಂಜೆ 7 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದಳು. ಊಟ ಮಾಡಿದ ಬಳಿಕ ಸುಸ್ತಾಗುತ್ತಿದೆ ಎಂದಳು. ನಂತರ ವಾಂತಿ ಮಾಡಿಕೊಂಡವಳಿಗೆ ಪ್ರಜ್ಞೆ ತಪ್ಪಿತು. ಬಳಿಕ ಎಚ್ಚರವಾಗಲಿಲ್ಲ. ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮಗಳ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿಗೆ ಕರೆದೊಯ್ಯಲು ತಿಳಿಸಿದರು. ಆಂಬ್ಯುಲೆನ್ಸ್ನಲ್ಲಿ ಬೆಂಗಳೂರಿಗೆ ಕರೆದೊಯ್ದೆವು. ಅಲ್ಲಿನ ವೈದ್ಯರು ಪರಿಶೀಲಿಸಿ, ರಕ್ತಸ್ರಾವವಾಗಿದೆ ಚಿಕಿತ್ಸೆ ಕೊಡುತ್ತೇವೆ ಎಂದರು. ಒಂದು ದಿನವಾದ ಬಳಿಕ ಬದುಕುವುದಿಲ್ಲ ಎಂದು ಹೇಳಿದ್ದರು ಎಂದು ನೋವು ತೋಡಿಕೊಂಡಿದ್ದಾರೆ.