ಜೆನ್ ಝೀ ಪ್ರತಿಭಟನೆ: ಯುವ ಸಮುದಾಯ ನೇಪಾಳದಲ್ಲಿ ಬದಲಾವಣೆ ತಂದಿದ್ದು ಹೇಗೆ?
ಹತ್ತು ದಿನಗಳ ಮೊದಲು ಎಲ್ಲವೂ ಚೆನ್ನಾಗಿದೆ ಎನ್ನುವಂತೆ ಭಾಸವಾಗುತ್ತಿತ್ತು. ಅಲ್ಲಿ ಯಾವುದೇ ಅಸ್ಥಿರತೆಯ ಮುನ್ಸೂಚನೆಯೂ ಇರಲಿಲ್ಲ. ಆದರೆ ಕೇವಲ ಹತ್ತು ದಿನಗಳಲ್ಲಿ ಎಲ್ಲವೂ ಬದಲಾಯಿತು. ಹಮಿ ನೇಪಾಳದ ಅಧ್ಯಕ್ಷ ಸುಡಾನ್ ಗುರುಂಗ್ ನೇತೃತ್ವದಲ್ಲಿ ಪ್ರಾರಂಭವಾದ ಜೆನ್ ಝೀ ದಂಗೆ ಇದೀಗ ದೇಶದ ಆಡಳಿತವನ್ನು ಬದಲಾಯಿಸಿದೆ. ಇದಕ್ಕೆ ಕಾರಣವೇನು, ಭವಿಷ್ಯವೇನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

-

ಕಠ್ಮಂಡು: ಏಕಾಏಕಿ ನೇಪಾಳದಲ್ಲಿ ಸರ್ಕಾರವೇ (Nepal Violence) ಬದಲಾಗಿದೆ. ನೇಪಾಳದ ಆಡಳಿತಾರೂಢ ಕೆ.ಪಿ. ಶರ್ಮಾ ಓಲಿ (K.P. Sharma Oli) ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ (Communist Party of Nepal) ಉರುಳಿದ್ದು, ನೇಪಾಳದ (Nepal) ರಾಜಕೀಯ ಪಕ್ಷಗಳು ಹಾಗೂ ಯುವ ನೇತೃತ್ವದ ಜೆನ್ ಝೀ (Gen Z protest) ಪ್ರತಿಭಟನಾಕಾರರ ಬೆಂಬಲದಿಂದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ (Sushila Karki) ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಹಮಿ ನೇಪಾಳ ಎಂಬ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಸುಡಾನ್ ಗುರುಂಗ್ (Sudan Gurung) ನೇತೃತ್ವದಲ್ಲಿ ಪ್ರಾರಂಭವಾದ ಜೆನ್ ಝೀ ತೆಲೆಮಾರಿನ ದಂಗೆ ಇದೀಗ ದೇಶದ ಆಡಳಿತವನ್ನು ಸಂಪೂರ್ಣವಾಗಿ ಬದಲಾಯಿಸಿದೆ.
ಸರ್ಕಾರ ಉರುಳಲು ಕಾರಣ ಏನು?
ನೇಪಾಳದಲ್ಲಿ ಸೆಪ್ಟೆಂಬರ್ 4ರಂದು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಾರ್ಟಿಯ (ಯುನೈಟೆಡ್ ಮಾರ್ಕ್ಸ್ ವಾದಿ ಲೆನಿನಿಸ್ಟ್) ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರವು ನೋಂದಣಿ ಮಾಡದ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿತು. ಇದು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಯಿತು.
ಇದನ್ನು ವಿರೋಧಿಸಿ ಭೂಕಂಪದ ಬಳಿಕ ಪುನರ್ವಸತಿ ಮತ್ತು ತುರ್ತು ಪ್ರತಿಕ್ರಿಯೆಗಳಿಗೆ ಸಹಾಯ ಮಾಡುವ ಹಮಿ ನೇಪಾಳದ ಅಧ್ಯಕ್ಷ ಸುಡಾನ್ ಗುರುಂಗ್ ನೇತೃತ್ವದಲ್ಲಿ ಜೆನ್ ಝೀ ತೀವ್ರ ಪ್ರತಿಭಟನೆಯನ್ನು ಪ್ರಾರಂಭಿಸಿತು. ಆರಂಭದಲ್ಲಿ ಇದು ಕೇವಲ ಭಿನ್ನಾಭಿಪ್ರಾಯದಿಂದ ಹುಟ್ಟಿಕೊಂಡ ಪ್ರತಿಭಟನೆಯಾಗಿ ಕಂಡರೂ ಬಳಿಕ ಇದು ದೇಶದ ಸರ್ಕಾರವನ್ನೇ ಉರುಳಿಸಿತು.
ಏನಾಯಿತು?
ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಗಳ ವಿರುದ್ಧ ಕಠ್ಮಂಡುವಿನಲ್ಲಿ ಶಾಂತಿಯುತ ಪ್ರತಿಭಟನೆ ಪ್ರಾರಂಭವಾಗಿತ್ತು. ನೂರಾರು ಪ್ರತಿಭಟನಾಕಾರರು ಸಂಸತ್ತಿನ ಕಡೆಗೆ ಮೆರವಣಿಗೆ ಹೊರಟಿದ್ದರು. ಆದರೆ ಇದು ಹಿಂಸಾತ್ಮಕ ರೂಪ ತಾಳಿ ಸುಮಾರು 51 ಮಂದಿ ಸಾವನ್ನಪ್ಪಿದರು. 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ಘರ್ಷಣೆಯ ಬಳಿಕ ತೀವ್ರಗೊಂಡ ಪ್ರತಿಭಟನೆಯಿಂದಾಗಿ ಮರುದಿನ ಸಂಸತ್ತು, ಸುಪ್ರೀಂ ಕೋರ್ಟ್ ಮತ್ತು ಪ್ರಧಾನ ಮಂತ್ರಿಗಳ ಕಚೇರಿ ಸಂಕೀರ್ಣ ಸೇರಿ ಹಲವು ಸರ್ಕಾರಿ ಕಟ್ಟಡಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದರು. ರಾಜಕಾರಣಿಗಳ ಮನೆಗಳನ್ನು ಸುಟ್ಟು ಹಾಕಲಾಯಿತು, ಬಂಧಿತ ರಾಜಕಾರಣಿ ಮತ್ತು ರಾಷ್ಟ್ರೀಯ ಸ್ವತಂತ್ರ ಪಕ್ಷದ (RSP) ಮಾಜಿ ಸಚಿವ ರಬಿ ಲಾಮಿಚಾನೆ ಸೇರಿದಂತೆ ಅನೇಕ ಕೈದಿಗಳನ್ನು ಜೈಲುಗಳಿಂದ ಬಿಡುಗಡೆ ಮಾಡಲಾಯಿತು.
ಪರಿಣಾಮ?
ತೀವ್ರಗೊಂಡ ಜೆನ್ ಝೀ ದಂಗೆಯ ಪರಿಣಾಮ ಸೆಪ್ಟೆಂಬರ್ 9ರಂದು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ಇದಾದ 4 ದಿನಗಳ ಬಳಿಕ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ದೇಶದ ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
ದೇಶದ ಅಧ್ಯಕ್ಷರು, ಸೇನಾ ಮುಖ್ಯಸ್ಥ ಜನರಲ್ ಅಶೋಕ್‌ರಾಜ್ ಸಿಗ್ಡೆಲ್ ಮತ್ತು ಜೆನ್ ಝೀ ನಾಯಕರನ್ನು ಒಳಗೊಂಡ ಮೂರು ದಿನಗಳ ಮಾತುಕತೆಯ ಬಳಿಕ ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು 2026ರ ಮಾರ್ಚ್ ಒಳಗೆ ಚುನಾವಣೆ ನಡೆಸುವ ಆದೇಶ ನೀಡಿ ಮಧ್ಯಂತರ ಪ್ರಧಾನಿಯಾಗಿ ನೇಮಕ ಮಾಡಿತು. ಇದರೊಂದಿಗೆ ತಕ್ಷಣ ಸಂಸತ್ತನ್ನು ವಿಸರ್ಜಿಸಲು ಅವರಿಗೆ ಶಿಫಾರಸು ಮಾಡಲಾಗಿದೆ.
ಈ ದಂಗೆ ಏಕೆ ನಡೆಯಿತು?
ಜೆನ್ ಝೀ ದಂಗೆಗೆ ಕಿಡಿ ಕೊಟ್ಟಿದ್ದು ಸಾಮಾಜಿಕ ಮಾಧ್ಯಮ ವೇದಿಕೆಗಳ ನಿಷೇಧವಾದರೂ ಇದು ಇಂದು ನಿನ್ನೆಯಿಂದ ಪ್ರಾರಂಭವಾಗಿದ್ದಲ್ಲ. ಸರಿಸುಮಾರು 1990ರಲ್ಲಿ ಪ್ರಾರಂಭವಾಗಿತ್ತು. ನಿರಂತರ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧದ ಈ ದಂಗೆ ನಡೆದಿದೆ. ಓಲಿ ಸರ್ಕಾರದ ವಿರುದ್ಧ ಬಹಳ ಸಮಯದಿಂದ ದೇಶಾದ್ಯಂತ ಉದ್ವಿಗ್ನತೆಗಳು ಹೆಚ್ಚಾಗುತ್ತಿತ್ತು. ದೇಶದ ಜನಸಂಖ್ಯೆಯ ಶೇ. 40ರಷ್ಟು ಮಂದಿ ಶಿಕ್ಷಣ, ಉದ್ಯೋಗ ಅಥವಾ ಮೂಲಸೌಕರ್ಯಗಳಿಲ್ಲದೆ ಹತಾಶರಾಗಿದ್ದರು. ಬದಲಾವಣೆಗೆ ಕಾಯುತ್ತಿದ್ದರು. ಅಂತಿಮವಾಗಿ ಇದು ಹಿಂಸಾಚಾರಕ್ಕೆ ಕಾರಣವಾಯಿತು.
ಇಲ್ಲಿನ ಕೆಲವರು ಬಲವಾದ ಪ್ರಜಾಪ್ರಭುತ್ವ ಸುಧಾರಣೆಗಳಿಗೆ ಒತ್ತಾಯಿಸುತ್ತಿದ್ದರು. ಇವರಲ್ಲಿ ಮಾಜಿ ರ‍್ಯಾಪರ್, ಎಂಜಿನಿಯರ್, ರಾಜಕಾರಣಿ ಕಠ್ಮಂಡು ಮೇಯರ್ ಬಾಲೇಂದ್ರ ಶಾ, ನೇಪಾಳ ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ಕೂಡ ಸೇರಿದ್ದಾರೆ. ಇವರು ಪ್ರತಿಭಟನೆಗಳನ್ನು ಶ್ಲಾಘಿಸಿ ನೇಪಾಳಿ ಭಾಷೆಯಲ್ಲಿ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದರು.
ಈ ರೀತಿಯ ಪ್ರತಿಭಟನೆ ನೇಪಾಳದಲ್ಲಿ ಇದು ಮೊದಲ ಬಾರಿ ಏನಲ್ಲ. ಈ ಹಿಂದೆ 1990ರಲ್ಲಿ ಜನ ಆಂದೋಲನ ಎಂಬ ಜನ ಚಳವಳಿಯು ನೇಪಾಳದ ಸಂಪೂರ್ಣ ರಾಜಪ್ರಭುತ್ವವನ್ನು ಕೊನೆಗೊಳಿಸಿತು. ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ನಾಗರಿಕ ಸಮಾಜ ಒಟ್ಟಾಗಿ ಮುಷ್ಕರಗಳು ಮತ್ತು ಪ್ರತಿಭಟನೆಗಳನ್ನು ನಡೆಸಿದ್ದವು.
ಪ್ರತಿಭಟನೆಗೆ ಕಾರಣ ಯಾರು?
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಮಿ ನೇಪಾಳದ ಅಧ್ಯಕ್ಷ ಸುಡಾನ್ ಗುರುಂಗ್ ಸುಮಾರು ಒಂದು ದಶಕದಿಂದ ತಮ್ಮ ಎನ್‌ಜಿಒ ಮೂಲಕ ಅಸಹಾಯಕರಿಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದಾರೆ. 2015ರ ಭೂಕಂಪನದಲ್ಲಿ ತಮ್ಮ ಮಗುವನ್ನು ಕಳೆದುಕೊಂಡ ಅವರು ದೇಶದಲ್ಲಿ ಪರಿಣಾಮಕಾರಿ ತುರ್ತು ಪ್ರತಿಕ್ರಿಯೆ ತಂಡದ ಕೊರತೆಯಿದೆ ಎಂದು ಅರಿತು ಹಮಿ ನೇಪಾಳ ಅನ್ನು ರೂಪಿಸಿದರು. ಇದು ಲಾಭರಹಿತ ಸಂಸ್ಥೆಯಾಗಿದ್ದು, 1,600ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಈ ಹಿಂದೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಸರ್ಕಾರದ ನಿರ್ಧಾರದ ವಿರುದ್ಧ ಗುರುಂಗ್ ಮತ್ತು ಹಮಿ ನೇಪಾಳದ ಸದಸ್ಯರು ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗಳಿಗೆ ಕರೆ ನೀಡಿದ್ದರು. ಆದರೆ ಇದಕ್ಕೆ ಓಲಿ ಸರ್ಕಾರ ಬಗ್ಗದೇ ಇದ್ದುದರಿಂದ ಪ್ರತಿಭಟನೆ ತೀವ್ರಗೊಳಿಸಿದರು. ಹೀಗಾಗಿ ಓಲಿ ಸರ್ಕಾರ ತನ್ನ ನಿರ್ಧಾರವನ್ನು ಮರಳಿ ಪಡೆಯಿತಾದರೂ ದೇಶಾದ್ಯಂತ ಸರ್ಕಾರದ ವಿರುದ್ಧ ಹೋರಾಟ ಹೆಚ್ಚಾಗಿ ಸರ್ಕಾರ ಉರುಳಲು ಕಾರಣವಾಯಿತು.
ಇದನ್ನೂ ಓದಿ: Anti Immigration Rally: ಅತ್ತ ನೇಪಾಳ ಹೊತ್ತಿ ಉರಿಯುತ್ತಿದ್ದರೆ... ಇತ್ತ ಲಂಡನ್ ಧಗ ಧಗಿಸುತ್ತಿದೆ!
ಮುಂದಿನ ಸವಾಲು ಏನು?
ಮಧ್ಯಂತರ ಪ್ರಧಾನಿಯಾಗಿ ದೇಶದ ಆಡಳಿತ ಅಧಿಕಾರ ವಹಿಸಿಕೊಂಡಿರುವ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರ ಮುಂದೆ ಸಾಕಷ್ಟು ಸವಾಲುಗಳಿವೆ. ಮೊದಲನೆಯದಾಗಿ ನೇಪಾಳದ ಹಾಲಿ ಸಂಸತ್ತನ್ನು ವಿಸರ್ಜಿಸಿ ಹೊಸ ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಅಲ್ಲದೇ ಜನರ ಆಶೋತ್ತರ ಸರಿಯಾಗಿ ಬಿಂಬಿಸುವ ರೀತಿಯಲ್ಲಿ ಅಂದರೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲು ದೇಶಾದ್ಯಂತ ಒತ್ತಾಯ ಹೆಚ್ಚಾಗಿದೆ. ಇವೆಲ್ಲವನ್ನೂ ಯಾವ ರೀತಿ ಕರ್ಕಿ ನಿರ್ವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.