Health Tips: ಹೊಟ್ಟೆ ಸರಿಯಾಗಿದೆಯೇ? ಈ ವಿಷಯಗಳ ಬಗ್ಗೆ ಗಮನಕೊಡಿ!
ಹೊಟ್ಟೆ ಉಬ್ಬರ, ನೋವು, ಎದೆ ಉರಿ, ಹುಳಿತೇಗು ಇಂಥವೆಲ್ಲಾ ನಮ್ಮ ಹೊಟ್ಟೆಯ ಅನಾರೋಗ್ಯದ ರಿಪೋರ್ಟ್ ಕಾರ್ಡ್ ನೀಡಿದಂತೆ. ಹೊಟ್ಟೆಯಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ಅನಾರೋಗ್ಯ ಕ್ಕೀಡಾದರೆ ಉಂಟಾಗುವ ಸಮಸ್ಯೆಗಳಿವು. ಹಾಗಾದರೆ ಯಾವೆಲ್ಲಾ ಲಕ್ಷಣಗಳು ಕಂಡುಬಂದರೆ ಎಚ್ಚರ ವಹಿಸಬೇಕು ಎನ್ನುವ ಒಂದಿಷ್ಟು ಮಾಹಿತಿ ಇಲ್ಲಿದೆ


ನವದೆಹಲಿ: 'ಎಲ್ಲಾರೂ ಮಾಡುವುದು ಹೊಟ್ಟೆಗಾಗಿ…ʼ ಎಂದು ದಾಸವರೇಣ್ಯರೇ ಹೇಳಿದ್ದಾರೆ. ನಮ್ಮ ಹೊಟ್ಟೆ ಎಷ್ಟು ಮುಖ್ಯ ಎಂಬುದು ಇದರಲ್ಲೇ ವೇದ್ಯವಾಗಬೇಕು ನಮಗೆ. ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವ ಹೊಟ್ಟೆ (Stomach) ಸರಿಯಾಗಿರಬೇಕೆಂದರೆ ಅದಕ್ಕೆ ನೀಡುವ ಆಹಾರವೂ ಸರಿಯಾಗಿರಬೇಡವೆ? ಜಠರ ಅನಾರಾಗ್ಯಕ್ಕೆ ಒಳಗಾದರೆ ಸಂಪೂರ್ಣ ಆರೋಗ್ಯವೇ ಏರುಪೇರು. ಹೆಚ್ಚಿನ ಸಾರಿ ʻನನ್ನ ಬಗ್ಗೆ ಗಮನ ಕೊಡಿʼ ಎಂದು ಹೊಟ್ಟೆ ಹೇಳುತ್ತಿದ್ದರೂ ನಾವು ಕೇಳಿಸಿ ಕೊಂಡಿರುವುದಿಲ್ಲ. ಬೇಕಾದ್ದು-ಬೇಡದ್ದು ಎಲ್ಲವನ್ನೂ ತಿಂದಿರುತ್ತೇವೆ. ಹಾಗಾದರೆ ಯಾವೆಲ್ಲಾ ಲಕ್ಷಣಗಳು ಕಂಡುಬಂದರೆ ಎಚ್ಚರ ವಹಿಸಬೇಕು ಎನ್ನುವ ಒಂದಿಷ್ಟು ಮಾಹಿತಿ ಇಲ್ಲಿದೆ
ಹೊಟ್ಟೆಯಲ್ಲಿ ತಳಮಳ: ಇದು ಅಪರೂಪಕ್ಕೆ ಎಲ್ಲರಿಗೂ ಆಗುವಂಥದ್ದೇ. ಆದರೆ ಹೀಗಾಗ ದಿರುವುದು ಅಪರೂಪ ಎನ್ನುವಂತಾದರೆ ಮಾತ್ರ ಕಷ್ಟ. ಹೊಟ್ಟೆ ಉಬ್ಬರ, ನೋವು, ಎದೆ ಉರಿ, ಹುಳಿತೇಗು ಇಂಥವೆಲ್ಲಾ ನಮ್ಮ ಹೊಟ್ಟೆಯ ಅನಾರೋಗ್ಯದ ರಿಪೋರ್ಟ್ ಕಾರ್ಡ್ ನೀಡಿದಂತೆ. ಹೊಟ್ಟೆಯಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ಅನಾರೋಗ್ಯಕ್ಕೀಡಾದರೆ ಉಂಟಾಗುವ ಸಮಸ್ಯೆಗಳಿವು. ಅದಕ್ಕಾಗಿಯೇ ಅಲ್ಲವೇ ಔಷಧಿ ಅಂಗಡಿಗಳಲ್ಲಿ ಇಂಥ ಔಷಧಿಗಳಿಗಾಗಿ ದೊಡ್ಡ ರ್ಯಾಕ್‌ಗಳೇ ಇರುವುದು. ವೈದ್ಯರ ಸಲಹೆ ಮೇರೆಗೆ ಔಷಧೋಪಚಾರ ಸರಿಯೇ. ಆದರೆ ತೀವ್ರ ಆಸಿಡಿಟಿಯ ಸಮಸ್ಯೆಯಿರುವವರು ಆಹಾರದಲ್ಲಿ ಸೂಕ್ತ ಬದಲಾವಣೆ ಮಾಡುವುದು ಅಗತ್ಯ ವಾಗುತ್ತದೆ. ಹುಳಿಯಿಲ್ಲದ ಹಣ್ಣುಗಳು, ಹಸಿ ತರಕಾರಿಗಳು, ಮಜ್ಜಿಗೆಯಂಥ ಆಹಾರಗಳು ನೆರವಾಗಬಲ್ಲವು.
ಮೂಡ್ ಏರುಪೇರು: ಇಂದಿನ ಜೀವನದಲ್ಲಿ, ನಾನಾ ಕಾರಣಗಳಿಗಾಗಿ, ಎಲ್ಲರೂ ಪದೇಪದೆ ಅನುಭವಿಸುವ ತಾಪತ್ರಯವಿದು. ನಮ್ಮ ಜೀರ್ಣಾಂಗ ಸರಿಯಿಲ್ಲದಿರುವಾಗಲೂ ಈ ಸಮಸ್ಯೆ ತಲೆದೋರಬಹುದು. ಶರೀರದಲ್ಲಿ ಏನಾಗುತ್ತಿದೆ ಮತ್ತು ಯಾಕಾಗುತ್ತಿದೆ ಎಂಬುದನ್ನು ಅರಿ ಯುವುದು ಬಹಳ ಮಹತ್ವದ್ದು. ನಮ್ಮನ್ನು ಸಂತೋಷವಾಗಿಡುವ ಸೆರೋಟೋನಿನ್ ಚೋದ ಕದ ಹೆಚ್ಚಿನ ಭಾಗ ಉತ್ಪತ್ತಿಯಾಗುವುದು ಜಠರದಲ್ಲೇ. ಹಾಗಾಗಿ ಜಠರಕ್ಕೆ ಸಂತೋಷ ವಾಗುವಂಥ ಆಹಾರ ಒದಗಿಸಿ. ಚಳಿಗಾಲದಲ್ಲಿ ತಣ್ಣನೆಯ ಆಹಾರ, ಬೇಸಿಗೆಯಲ್ಲಿ ಖಾರದ ಆಹಾರ… ಇಂಥವೆಲ್ಲ ಜಠರಕ್ಕೆ ಬೇಕಾಗುವುದಿಲ್ಲ.
ತೂಕ ವ್ಯತ್ಯಾಸ: ಹೆಚ್ಚಿನವರಿಗೆ ತೂಕದ ಮಿಷನ್ ಅಂದರೆ ಶತ್ರುವಿನ ಹಾಗೆ, ಸದಾ ನಮಗೆ ಬೇಡದ ಮಾಹಿತಿಯನ್ನೇ ನೀಡುತ್ತದೆ ಎಂಬ ಕಾರಣಕ್ಕೆ. ಆದರೆ ನಿಮ್ಮ ಆಹಾರ ಮತ್ತು ಚಟು ವಟಿಕೆ- ಎರಡೂ ವ್ಯತ್ಯಾಸವಾಗದೆ, ತೂಕ ಮಾತ್ರ ಏರುಪೇರಾಗುತ್ತಿದೆ ಎಂದರೆ ಎಚ್ಚರಿಕೆ ವಹಿಸಿ. ಪೌಷ್ಟಿಕ ಆಹಾರ ಸೇವಿಸುವುದು ಒಂದು ಹಂತ, ಸೇವಿಸಿದ ಆಹಾರ ಜೀರ್ಣ ವಾಗುವುದು ನಂತರದ ಹಂತ. ಆಹಾರ ಸರಿಯಾಗಿ ಪಚನವಾಗದಿರುವಾಗಲೂ ಇಂಥ ಸೂಚನೆಗಳು ಕಾಣ ಬಹುದು. ಹಾಗಂತ, ಅಲ್ಪಸ್ವಲ್ಪ ತೂಕ ವ್ಯತ್ಯಾಸ ಎಲ್ಲರಿಗೂ ಆಗುವಂಥದ್ದೇ.
ಇದನ್ನು ಓದಿ:Health Tips: ಮಳೆಗಾಲದಲ್ಲಿ ಅಲರ್ಜಿ ನಿಯಂತ್ರಣ ಹೇಗೆ?
ಮಲಬದ್ಧತೆ: ಗ್ರಹಿಸಲೇಬೇಕಾದ ಸೂಚನೆಯಿದು. ಹಾಗಂತ ಅಪರೂಪಕ್ಕೆ ಎಲ್ಲರ ಹೊಟ್ಟೆಯೂ ಹಠ ಮಾಡುವುದಂಟು! ಆದರೆ ಮಲಬದ್ಧತೆ ಸಾಮಾನ್ಯ ಎಂಬಂತಾದರೆ, ಹೊಟ್ಟೆಗೇನು ಹಾಕು ತ್ತಿದ್ದೀರಿ ಎನ್ನುವ ಬಗ್ಗೆ ಖಂಡಿತಾ ನಿಮ್ಮ ಆಯ್ಕೆ ಸರಿಯಿಲ್ಲ. ಮಾತ್ರವಲ್ಲ, ಶರೀರಕ್ಕೆ ಸಾಕಷ್ಟು ಚಟುವಟಿಕೆ ಇಲ್ಲದಿದ್ದರೂ ಹೀಗಾಗುವ ಸಾಧ್ಯತೆಯಿದೆ. ಇಂಥವರಿಗೆ ಸಾಕಷ್ಟು ನಾರಿ ನಂಶ ವಿರುವ ಆಹಾರ ಅಗತ್ಯವಾಗಿ ಬೇಕು. ಹಸಿ ತರಕಾರಿ, ಹಣ್ಣು ಮತ್ತು ಕೆಲವು ಸೊಪ್ಪುಗಳು, ಔಷಧಿಯ ಅವಲಂಬನೆಯನ್ನು ಬಹುಮಟ್ಟಿಗೆ ಕಡಿಮೆ ಮಾಡುತ್ತವೆ.
ಸಿಹಿಯೇ ಬೇಕೆನಿಸುತ್ತಿದೆಯೇ?: ಹೀಗಾಗುವುದುಂಟು. ಹೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದ ಆರೋಗ್ಯವಂತ ಬ್ಯಾಕ್ಟೀರಿಯಾ ಇಲ್ಲದಿದ್ದರೆ ವಿಪರೀತ ಸಿಹಿ ತಿನ್ನುವ ಆಸೆ ಯಾಗಬಹುದು. ಹಾಗಂತ ಸಿಹಿ ತಿನ್ನುವವರಿಗೆಲ್ಲಾ ಇದನ್ನೇ ಹೇಳುವಂತಿಲ್ಲ. ಸಮಸ್ಯೆಯೇನೆಂದರೆ, ಸಕ್ಕರೆ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತಿದೆ. ಹೀಗೆ ಹೆಚ್ಚಿದ ಉರಿಯೂತದಿಂದ ಜಠರದ ಬ್ಯಾಕ್ಟೀರಿಯಾಗಳು ಏರುಪೇರಾಗುತ್ತವೆ. ಈ ಏರುಪೇರಿನಿಂದಾಗಿ ಸಿಹಿ ತಿನ್ನುವ ಆಸೆ ಹೆಚ್ಚಲೂಬಹುದು. ಅಂತೂ ಸಕ್ಕರೆಯಿಂದ ಸುಖವಿಲ್ಲ ಎನ್ನಿ. ಬದಲಿಗೆ, ಮಜ್ಜಿಗೆ-ಮೊಸರಿನಲ್ಲಿರುವ ಪ್ರೊಬಯಾಟಿಕ್ ಅಂಶಗಳು ನೆರವಾಗಬಲ್ಲವು.
ಅತಿ ಆಯಾಸ: ಸಾವಿಲ್ಲದವರ ಮನೆಯ ಸಾಸಿವೆ ತರುವುದು, ಆಯಾಸ ಆಗದವರನ್ನು ಹುಡು ಕುವುದು- ಎರಡೂ ಒಂದೇ ಎನ್ನುವಿರಾ? ನಿಜ, ಕೆಲಸ, ಒತ್ತಡ ಹೆಚ್ಚಿದಂತೆ ಆಯಾಸ ತಪ್ಪು ವುದಿಲ್ಲ. ತೀರಾ ಸುಸ್ತಾದಾಗ ಸಣ್ಣ ನಿದ್ದೆ ತೆಗೆದರೆ ಶರೀರ ಚೇತರಿಸಿಕೊಳ್ಳಬೇಕು. ಆದರೆ 24/7 ಆಯಾಸ ತಪ್ಪುತ್ತಲೇ ಇಲ್ಲದೆಂದಾದರೆ ವಿಷಯ ಗಂಭೀರ ಎಂದರ್ಥ. ಆಹಾರದಲ್ಲಿರುವ ಪೋಷ ಕಾಂಶಗಳು ಶರೀರಕ್ಕೆ ಸರಿಯಾಗಿ ದೊರೆಯದಿದ್ದರೆ ಆಗುವ ಸಮಸ್ಯೆಗಳಲ್ಲಿ ಇದೂ ಒಂದು. ಮಾತ್ರವಲ್ಲ, ಹಗಲಿಗೆ ತೂಕಡಿಸುವಂತಾಗಿ, ರಾತ್ರಿ ನಿದ್ದೆ ಬರುತ್ತಿಲ್ಲವೇ? ಹೊಟ್ಟೆ , ಹೊಟ್ಟೆಗೆ ನೀಡುತ್ತಿರುವ ಆಹಾರ ಸೂಕ್ತವಾಗಿದೆಯೇ ಎಂದು ಯೋಚಿಸಬೇಕಾದ ವಿಷಯ ಖಂಡಿತಾ ಹೌದು.